ಬಿಎಸ್ವೈ ಸೇರ್ಪಡೆಗೆ ದಿನಾಂಕ ನಿಗದಿ ಬಾಕಿ!

ಬೆಂಗಳೂರು/ಶಿವಮೊಗ್ಗ: ಕೊನೆಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸೇರುವುದು ಖಚಿತವಾಗಿದೆ. ಯಾವುದೇ ಷರತ್ತುಗಳಿಲ್ಲದೆ ಮಾತೃಪಕ್ಷಕ್ಕೆ ಮರಳಲು ಯಡಿಯೂರಪ್ಪ ಅವರೂ ಒಪ್ಪಿದ್ದಾರೆ. ಹೀಗಾಗಿ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಧಾರ ಕೈಗೊಂಡು ದಿನಾಂಕ ನಿಗದಿಪಡಿಸುವುದೊಂದೇ ಬಾಕಿ ಉಳಿದಿದೆ.
ಆದರೆ, ಡಿ. 27ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಂದರ್ಭದಲ್ಲಿ ಮರಳಿ ಬಿಜೆಪಿ ಸೇರುವುದೇ ಅಥವಾ ಧನುರ್ಮಾಸ ಮುಗಿದ ಬಳಿಕ (ಸಂಕ್ರಾಂತಿ ಬಳಿಕ) ಬಿಜೆಪಿ ಸೇರಬೇಕೋ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಒಂದು ವೇಳೆ ಯಡಿಯೂರಪ್ಪ ಅವರು ಡಿ. 27ರಂದೇ ಬಿಜೆಪಿಗೆ ಸೇರಿಕೊಳ್ಳುವುದಾದರೆ ಬುಧವಾರ ಸಂಜೆಯೊಳಗೆ ತುರ್ತು ಸಂಸದೀಯ ಮಂಡಳಿ ಸಭೆ ಕರೆದು ಅಧಿಕೃತ ನಿರ್ಧಾರ ಕೈಗೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೂ ಭರವಸೆ ನೀಡಿದ್ದಾರೆ.
ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ವಿಚಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಯಡಿಯೂರಪ್ಪ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪರಸ್ಪರ ಇದ್ದ ಅನುಮಾನ, ಅಸಮಾಧಾನಗಳು ಬಗೆಹರಿದಿವೆ ಎಂದು ಮೂಲಗಳು ತಿಳಿಸಿವೆ. ಮಾತುಕತೆ ಬಳಿಕ ಉಭಯ ನಾಯಕರು ಹಸನ್ಮುಖಿಯಾಗಿ ಹೊಬಂದಿದ್ದು ಈ ಮಾತುಗಳಿಗೆ ಪುಷ್ಠಿ ನೀಡಿದೆ.
ಆರ್ಎಸ್ಎಸ್ ಅಖಿಲ ಭಾರತ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರ ತಾಯಿ ವಾರದ ಹಿಂದೆ ದೈವಾಧೀನರಾದ ಹಿನ್ನೆಲೆಯಲ್ಲಿ ಸಾಂತ್ವನ ಹೇಳಲು ರಾಜನಾಥಸಿಂಗ್ ಸೋಮವಾರ ಸೊರಬಕ್ಕೆ ಆಗಮಿಸಿದ್ದರು. ಮಧ್ಯಾಹ್ನ ಇಲ್ಲಿನ ಚಾಮರಾಜ ಪೇಟೆಯ ಪದ್ಮನಾಭ ನಡಹಳ್ಳಿಯವರ ಮನೆಯಲ್ಲಿ ರಾಜನಾಥಸಿಂಗ್ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಏಕಾಏಕಿ ಅಲ್ಲಿಗೆ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ರಾಘವೇಂದ್ರ ಆಗಮಿಸಿದರು. ಈ ವೇಳೆ ರಾಜನಾಥ್ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಮುಖಂಡರಾದ ಧರ್ಮೇಂದ್ರ ಪ್ರಧಾನ್, ಅನಂತ ಕುಮಾರ್, ಪ್ರಹ್ಲಾದ್ ಜೋಷಿ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ರಾಜ್ಯ ಪದಾಧಿಕಾರಿಗಳು ಇದ್ದರು.
ಮಧ್ಯಾಹ್ನ 2.25ಕ್ಕೆ ಬಿಎಸ್ವೈ ಅಲ್ಲಿಗೆ ಆಗಮಿಸುತ್ತಿದ್ದಂತೆ ಇಡೀ ಮನೆಯ ಅಂಗಳದಲ್ಲಿ ಸಂಚಲನ. ಪಕ್ಷದ ಬಹುತೇಕ ಮುಖಂಡರು ಬಿಎಸ್ವೈ ಆಗಮನ ನಿರೀಕ್ಷಿಸಿರಲಿಲ್ಲ. ತಲೆ ತಗ್ಗಿಸಿಕೊಂಡೇ ಮನೆಯೊಳಗೆ ಅಡಿ ಇಟ್ಟ ಬಿಎಸ್ವೈ ಅವರನ್ನು ರಾಜನಾಥಸಿಂಗ್ ಸ್ವಾಗತಿಸಿದರು. ನಂತರ ಇಬ್ಬರೂ ಮಾತುಕತೆಗಾಗಿ ಕೊಠಡಿಯೊಳಗೆ ತೆರಳಿದರು. ಐದು ನಿಮಿಷದ ತರುವಾಯ ಅನಂತ ಕುಮಾರ್ ಅವರನ್ನೂ ಕೊಠಡಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು. ಸುಮಾರು 10 ನಿಮಿಷದ ಮಾತುಕತೆ ನಂತರ ಹಸನ್ಮುಖಿಯಾಗಿ ಹೊರಬಂದ ಯಡಿಯೂರಪ್ಪ ನಿರಾಳರಾಗಿ ಕಂಡುಬಂದರು.
ಪ್ರಧಾನ್ ಸೂತ್ರ: ಸಭೆಯ ನಂತರ ಮಧ್ಯಾಹ್ನ 2.50ರ ವೇಳೆ ರಾಜನಾಥ್ ಸಿಂಗ್ ಅವರಿಗೆ ಬೀಳ್ಕೊಡುಗೆ ನೀಡಲು ಎಲ್ಲರೂ ಮುಂದಾದರು. ಬಿಎಸ್ವೈ ಕೂಡ ಅವರೊಟ್ಟಿಗೆ ಹೆಜ್ಜೆಹಾಕಿ ಮನೆಯ ಮುಖ್ಯ ದ್ವಾರಕ್ಕೆ ಬರುತ್ತಿದ್ದಂತೆಯೇ ಧರ್ಮೇಂದ್ರ ಪ್ರಧಾನ್ ಬಿಎಸ್ವೈಗೆ ಸನ್ನೆ ಮಾಡಿ, ಮನೆಯಿಂದ ಹೊರಹೋಗದಂತೆ ಸೂಚಿಸಿದರು. ಅದನ್ನು ಪಾಲಿಸಿದ ಬಿಎಸ್ವೈ ಹೆಜ್ಜೆ ಹಿಂದಿಟ್ಟರು. ರಾಜನಾಥ್ ಹಾಗೂ ಬಿಎಸ್ವೈ ಅವರನ್ನು ಒಟ್ಟಾಗಿ ಸೆರೆ ಹಿಡಿಯಲು ಕಾದಿದ್ದ ಕ್ಯಾಮೆರಾಗಳಿಗೆ ನಿರಾಸೆ ಕಾದಿತ್ತು. ರಾಜನಾಥ್ ಒಬ್ಬರೇ ಕಾಣಿಸಿಕೊಂಡರಲ್ಲದೆ ಸಭೆಯ ಕುರಿತು ಮಾತನಾಡಲು ಬಿಲ್ಕುಲ್ ಒಪ್ಪಲಿಲ್ಲ.
ಹಸನ್ಮುಖಿ ಬಿಎಸ್ವೈ: ರಾಜನಾಥ್ ಅವರನ್ನು ಬೀಳ್ಕೊಟ್ಟ ನಂತರ ಊಟಕ್ಕೆ ಕುಳಿತ ಬಿಎಸ್ವೈ ಮುಖದಲ್ಲಿ ಆನಂದ ಇಮ್ಮಡಿಸಿತ್ತು. ಸಾಕಷ್ಟು ನಿರಾಳರಂತೆ ಕಂಡುಬಂದ ಅವರು, ಪುತ್ರ ರಾಘವೇಂದ್ರ, ಗುರುಮೂರ್ತಿಯವರೊಂದಿಗೆ ಊಟ ಮುಗಿಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ವಿವಿಧ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತಿಗಿಳಿದರು. ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆಯವರೊಂದಿಗೂ ಖುಷಿಯಲ್ಲಿ ಮಾತನಾಡಿದರು. ಇಷ್ಟೆಲ್ಲಾ ಬೆಳವಣಿಗೆ ನಡೆದರೂ ಬಿಎಸ್ವೈ ಮಾತ್ರ ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಕೋರ್ ಕಮಿಟಿ ಸಭೆ: ಒಂದು ವೇಳೆ ಡಿ. 27ರಂದೇ ಯಡಿಯೂರಪ್ಪ ಅವರು ಬಿಜೆಪಿ ಸೇರುವುದಾದರೆ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಲು ಕೆಲವು ತೀರ್ಮಾನಗಳನ್ನು ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಸೋಮವಾರ ರಾತ್ರಿಯೇ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡು ಸಂಸದೀಯ ಮಂಡಳಿಗೆ ಪ್ರಸ್ತಾವ ಕಳುಹಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


