ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತ್ತಿರುವ ಮೆಕ್ಡೊನಾಲ್ಡ್ಸ್

ಲಂಡನ್: ಮೆಕ್ಡೊನಾಲ್ಡ್ಸ್ಗೆ ಹೋಗಿ ಫಾಸ್ಟ್ಫುಡ್ ತಿನ್ನಲೇಬೇಡಿ... ಏಕೆಂದರೆ, ಈ ಕಂಪನಿಯೇ ತನ್ನ ನೌಕರರಿಗೆ ಫಾಸ್ಟ್ಫುಡ್ ತಿಂದರೆ ಆರೋಗ್ಯ ಹಾಳು ಎಂಬ ಸಲಹೆ ಕೊಟ್ಟಿದೆ. ಫಾಸ್ಟ್ಫುಡ್ ಬದಲಿಗೆ ಸಲಾಡ್, ತರಕಾರಿ ತಿನ್ನಿ ಎಂದೂ ಹೇಳಿದೆ. ತನ್ನ ನೌಕರರಿಗೆ ಮಾತ್ರ ಸಲಾಡ್ ಮತ್ತು ತರಕಾರಿ ತಿನ್ನಿ ಎಂದು ಹೇಳಿ, ಜನರಿಗೆ ಮಾತ್ರ ಅನಾರೋಗ್ಯಕರ ಫಾಸ್ಟ್ಫುಡ್ ತಿನ್ನಿ ಎಂದು ಮಾರಾಟ ಮಾಡುವುದು ಯಾವ ನ್ಯಾಯ ಹೇಳಿ?
ಈ ಮಾತನ್ನು ವೈದ್ಯರು ಹೇಳಿದ್ದರೆ ತೊಂದರೆ ಇಲ್ಲ ಎನ್ನಬಹುದಿತ್ತು. ಏಕೆಂದರೆ ಅದೆಷ್ಟೋ ಬಾರಿ ವೈದ್ಯರ ಮಾತನ್ನು ಮೀರಿ ನಾವು ಫಾಸ್ಟ್ಫುಡ್ ತಿಂದಿದ್ದೇವೆ. ಆದರೆ ಸ್ವತಃ ಫಾಸ್ಟ್ಫುಡ್ ತಯಾರಕ ಸಂಸ್ಥೆಯೇ ಹೇಳಿದರೆ ಹೇಗಾಗಬೇಡ ಅಲ್ಲವೇ? ಫಾಸ್ಟ್ಫುಡ್ ತಿಂದರೆ ಆರೋಗ್ಯ ಹಾಳು ಎಂದಾದ ಮೇಲೆ, ತಿಂದ ಮೇಲೆ ನಮ್ಮ ಆರೋಗ್ಯ ಕೆಡುವುದು ಕೂಡ ಗ್ಯಾರಂಟಿ ಅಲ್ಲವೇ?
ಅಲ್ಲದೆ ಆರೋಗ್ಯ ಹಾಳು ಮಾಡುವ ಫಾಸ್ಟ್ಫುಡ್ ಮಾರಾಟ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಯೂ ಜನರ ಕಡೆಯಿಂದ ವಿಡಂಬನಾತ್ಮಕವಾಗಿ ಕೇಳಿಬರುತ್ತಿದೆ. ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿರುವುದು ಮೆಕ್ಡೊನಾಲ್ಡ್ಸ್ನ ಮೆಕ್ರಿಸೋರ್ಸ್ಲೈನ್ ಎಂಬ ವೆಬ್ಸೈಟ್. ಇದು ಫಾಸ್ಟ್ಫುಡ್ ಟಿಪ್ಸ್ ಕೊಡುವ ವೇಳೆ ಇಂಥದೊಂದು ಎಡವಟ್ಟು ಮಾಡಿದೆ. ಜಗತ್ತಿನಾದ್ಯಂತ ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಮೆಕ್ರಿಸೋರ್ಸ್ನ ಈ ವರದಿಯನ್ನೇ ತೆಗೆದು ಹಾಕಿರುವ ಮೆಕ್ಡೊನಾಲ್ಡ್ಸ್ ಸಂಸ್ಥೆ 'ವಿ ವಿಲ್ ಬಿ ಬ್ಯಾಕ್ ಸೂನ್' ಎಂಬ ಹೇಳಿಕೆ ಹಾಕಿದೆ.
'ಅನಾರೋಗ್ಯಕರ ಆಯ್ಕೆ' ಮತ್ತು 'ಆರೋಗ್ಯಕರ ಆಯ್ಕೆ' ಎಂಬ ವಿಷಯದಡಿ ಗ್ರಾಫಿಕ್ನೊಂದಿಗೆ ಮೆಕ್ರಿಸೋರ್ಸ್ ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ವಿವರಿಸಿದೆ. ಫ್ಯಾಟ್ ಇರುವ ಆಹಾರವನ್ನು ತಿಂದರೆ ದಪ್ಪ ಆಗಬಹುದು. ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಇದರ ಬದಲಾಗಿ ತರಕಾರಿ ತಿನ್ನಬಹುದು ಎಂದು ಅದು ಹೇಳಿದೆ. ಹಮ್ ಬರ್ಗರ್, ಫ್ರೈಸ್ ಮತ್ತು ಸೋಡಾಗಳಲ್ಲಿ ಹೆಚ್ಚಿನ ಫ್ಯಾಟ್ ಅಂಶ ಇರುತ್ತದೆ. ಇದರ ಜೊತೆಗೆ ಚೀಸ್, ಬೇಕನ್ ಮತ್ತು ಮೆಯಾನೈಸ್ ಅನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಿ ಎಂದೂ ಹೇಳಿದೆ. ಇದು ತೂಕ ಹೆಚ್ಚು ಮಾಡುತ್ತದೆ ಎಂದು ಮೆಕ್ರಿಸೋರ್ಸ್ನಲ್ಲಿ ನಮೂದಿಸಿದೆ.
ಕಂಪನಿಯ ಸ್ಪಷ್ಟನೆ
ಇಷ್ಟೆಲ್ಲಾ ಆದ ಮೇಲೆ ಮೆಕ್ಡೊನಾಲ್ಡ್ಸ್ ಕಂಪನಿ ಸ್ಪಷ್ಟನೆಯೊಂದನ್ನೂ ನೀಡಿದೆ. ಮೆಕ್ರಿಸೋರ್ಸ್ಲೈನ್ನ ಟಿಪ್ಸ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಲ್ಲದೆ ವೆಬ್ಸೈಟ್ನ ಕೆಲವೊಂದು ಭಾಗವನ್ನು ಬಿಟ್ಟು, ಕೇವಲ ಒಂದಷ್ಟು ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ನಮ್ಮ ನೌಕರರಿಗೆ ನಾವು ಕೆಲವೊಂದು ಆರೋಗ್ಯಕರ ಸಲಹೆಗಳನ್ನು ನೀಡುತ್ತೇವೆ. ಅದರಲ್ಲಿ ಈ ಅಂಶಗಳು ಇವೆ. ಅಲ್ಲದೆ ಏನನ್ನು ತಿನ್ನಬೇಕು, ಯಾವುದು ಒಳ್ಳೆಯದು ಎಂಬ ಬಗ್ಗೆಯೂ ನಮ್ಮ ನೌಕರರಿಗಲ್ಲದೇ, ಗ್ರಾಹಕರಿಗೂ ಮಾಹಿತಿ ನೀಡುತ್ತೇವೆ ಎಂದು ಹೇಳಿದೆ.
ಫಾಸ್ಟ್ ಫುಡ್ ನೇಷನ್
ಅಮೆರಿಕದಲ್ಲಿನ ಆಹಾರ ಪದ್ಧತಿ ಕುರಿತಂತೆ ಎರಿಕ್ ಶ್ಲಾಸರ್ ಎಂಬುವರು ಫಾಸ್ಟ್ ಫುಡ್ ನೇಷನ್ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಅಮೆರಿಕದ ಫಾಸ್ಟ್ ಫುಡ್ ಇಂಡಸ್ಟ್ರಿ ಕುರಿತಂತೆ ಬರೆಯಲಾಗಿದೆ. ಆಹಾರದಲ್ಲಿ ರಾಸಾಯನಿಕಗಳ ಬಳಕೆ, ಹಸು ಮತ್ತು ಕೋಳಿಗಳನ್ನು ಬಳಸಿಕೊಂಡು ಆಹಾರ ತಯಾರಿಸುವ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ. ಕಾರ್ಲ್ ಎನ್ ಕಾರ್ಚರ್ ಮತ್ತು ಮೆಕ್ಡೊನಾಲ್ಡ್ಸ್ ಸಹೋದರರ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಇವರು ನಡೆಸುತ್ತಿರುವ ಫಾಸ್ಟ್ಫುಡ್ ಇಂಡಸ್ಟ್ರಿ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ಕಂಪನಿಗಳು ಕಡಿಮೆ ವೇತನ ನೀಡಿ ಕಾರ್ಮಿಕರನ್ನು ಶೋಷಿಸುತ್ತಿರುವ ಬಗ್ಗೆಯೂ ಶ್ಲಾಸರ್ ಬೆಳಕು ಚೆಲ್ಲಿದ್ದಾರೆ.
ಫಾಸ್ಟ್ಫುಡ್ನಲ್ಲಿ ಹೆಚ್ಚು ಕ್ಯಾಲೋರಿ ಮತ್ತು ಸಕ್ಕರೆ ಪ್ರಮಾಣ ಇರುವುದರಿಂದ ಸ್ಥೂಲಕಾಯದ ಸಮಸ್ಯೆ ಎದುರಾಗುತ್ತದೆ. ಸಣ್ಣ ಪ್ರಮಾಣದ ಫಾಸ್ಟ್ಫುಡ್ ಕೂಡ ನಿಮಗೆ ಬೊಜ್ಜು ಸಮಸ್ಯೆ ತಂದೊಡ್ಡಬಹುದು.
ಹೃದಯ ಸಂಬಂಧಿ ಕಾಯಿಲೆ
ವಾರಕ್ಕೆ 3 ಅಥವಾ 4ಕ್ಕಿಂತ ಹೆಚ್ಚು ಬಾರಿ ಫಾಸ್ಟ್ಫುಡ್ ತಿನ್ನುವವರಿಗೆ ಹೃದಯ ಸಂಬಂಧಿ ಕಾಯಿಲೆ ಬರುವ ಸಂಬಂಧ ಶೇ.80 ರಷ್ಟು ಇರುತ್ತದೆ. ಫಾಸ್ಟ್ಫುಡ್ನಲ್ಲಿ ಕರಗಿಸಲಾಗದ ಅಂಶಗಳು ಇರುವ ಕಾರಣದಿಂದಾಗಿ ಹೃದಯಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಟೈಪ್ 2 ಡಯಾಬಿಟೀಸ್
ಆಗಾಗ ಫಾಸ್ಟ್ಫುಡ್ ಸೇವಿಸುತ್ತಿದ್ದರೆ ಬೊಜ್ಜು ಬೆಳೆಯುತ್ತದೆ. ಇದರಿಂದಾಗಿ ಟೈಪ್ 2 ಡಯಬಿಟೀಸ್ ಬರುವ ಸಾಧ್ಯತೆಗಳು ಹೆಚ್ಚಿವೆ.
ಪೌಷ್ಟಿಕಾಂಶಗಳ ಕೊರತೆ
ಫಾಸ್ಟ್ಫುಡ್ಗಳಲ್ಲಿ ಸರಿಯಾದ ರೀತಿಯ ಪೌಷ್ಟಿಕಾಂಶಗಳು ಇರುವುದಿಲ್ಲ. ಪೌಷ್ಟಿಕಾಂಶಗಳಿಗಿಂತ ಹೆಚ್ಚಾಗಿ ದೇಹಕ್ಕೆ ಅಡ್ಡ ಪರಿಣಾಮ ಬೀರುವ ಅಂಶಗಳೇ ಹೆಚ್ಚಾಗಿರುತ್ತವೆ. ಹೀಗಾಗಿ ಫಾಸ್ಟ್ಫುಡ್ಗಳು ನಮಗೆ ಪೌಷ್ಟಿಕಾಂಶ ನೀಡುವುದಿಲ್ಲ.
ಒತ್ತಡ
ಕೆಲವೊಂದು ಆಹಾರ ಮತ್ತು ಪಾನೀಯಗಳು ಒತ್ತಡಕ್ಕೆ ನೇರವಾಗಿ ಕಾರಣವಾಗುತ್ತವೆ. ಇಂಥ ಪದಾರ್ಥಗಳಿಗೆ ಸ್ಯೂಡೋಸ್ಟ್ರೇಸ್ಸರ್ಗಳು ಎಂದು ಕರೆಯುತ್ತಾರೆ. ಕೆಫಿನ್ ಪದಾರ್ಥ ಒಳಗೊಂಡಿರುವ ಕಾಫಿ, ಟೀ, ಕೋಲಾಗಳು ಮತ್ತು ಚಾಕೋಲೇಟ್ಗಳು ಒತ್ತಡ ಹೆಚ್ಚಿಸುತ್ತವೆ. ವೈಟ್ ಫ್ಲೋರ್, ಉಪ್ಪು, ಕರಗಿಸಲಾರದ ಪದಾರ್ಥಗಳು, ಸಂಸ್ಕರಿತ ಆಹಾರಗಳು ಸಿಂಥೆಟಿಕ್ ಆಹಾರ ವರ್ಗಕ್ಕೆ ಸೇರುತ್ತವೆ. ಇವು ಒತ್ತಡಕ್ಕೆ ಕಾರಣವಾಗುತ್ತವೆ.
ಅಪಾಯಕಾರಿ ರಾಸಾಯನಿಕಗಳು
ಕ್ಯಾರಮಲ್ ಕಲರಿಂಗ್
ಕ್ಯಾರಮಲ್ ಎಂದರೆ ಸುಟ್ಟಸಕ್ಕರೆ. ಫಾಸ್ಟ್ಫುಡ್ನಲ್ಲಿ ಸಕ್ಕರೆಗೆ ಬದಲಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಇದನ್ನು ತಿಂದರೆ ಥೈರಾಯ್ಡ್, ಲಿವರ್ ಮತ್ತು ಲಂಗ್ ಕ್ಯಾನ್ಸರ್ ಬರಬಹುದು.
ಬಳಕೆ - ಟೆಕೋ ಬೆಲ್ ಮೀಟ್ ಫಿಲ್ಲಿಂಗ್, ವೆಂಡೀಸ್ ಸ್ವೀಟ್ ಮತ್ತು ಸೋರ್ ಸೌಸ್, ಚೆಕ್ ಫಿಲ್ ಎಸ್ ಐಸ್ ಡ್ರೀಮ್ಸ್, ಸೋಡಾ.
ಬದಲಿ ಬಳಕೆ - ಪ್ರಾಣಿ ಆಹಾರ.
ಯೆಲ್ಲೋ ಡೈ
ಫಾಸ್ಟ್ಫುಡ್ ಮತ್ತು ಪಾನೀಯಗಳನ್ನು ಸುಂದರವಾಗಿ ಕಾಣುವಂತೆ ಮಾಡುವ ಸಲುವಾಗಿ ಬಣ್ಣ ಬೆರೆಸಲಾಗಿರುತ್ತದೆ. ಇದಕ್ಕೆ ಯೆಲ್ಲೋ ಡೈ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಮಕ್ಕಳ ವರ್ತನೆಗಳಲ್ಲಿ ಬದಲಾವಣೆಯಾಗಬಹುದು ಮತ್ತು ಕ್ಯಾನ್ಸರ್ ಕೂಡ ಬರಬಹುದು ಎಂದು ವೈದ್ಯರು ಹೇಳಿದ್ದಾರೆ. ಬ್ರಿಟನ್ನ ಅದೆಷ್ಟೋ ಕಂಪನಿಗಳು ಇದನ್ನು ಆಹಾರದಲ್ಲಿ ಬಳಸಬಾರದು ಎಂದು ಕಟ್ಟುನಿಟ್ಟಾಗಿ ರೂಢಿ ಮಾಡಿಕೊಂಡಿವೆ.
ಬಳಕೆ - ಬರ್ಗರ್ ಕಿಂಗ್ ಕಿನ್ನಾಮನ್ ರೋಲ್ಸ್, ವೆಂಡೀಸ್ ಹನಿ ಮಸ್ಟರ್ಡ್ ಸೌಸ್, ಚಿಕ್ ಫಿಲ್ ಎ ಸ್ಪೈಸಿ ಚಿಕನ್ ಸ್ಯಾಂಡ್ವಿಚ್
ಬದಲಿ ಬಳಕೆ - ಸೋಪ್, ನೈಲ್ ಪಾಲಿಶ್, ಟೆಂಪರೆರಿ ಟ್ಯಾಟೂಸ್
ಸೋಡಿಯಂ ನೈಟ್ರೇಟ್
ಹಾಟ್ ಡಾಗ್ಸ್, ಬೇಕಾನ್, ಹಮ್ನ ರುಚಿಗಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಕಾಲೋರೆಕ್ಟಿಕಲ್ ಕ್ಯಾನ್ಸರ್ ಮತ್ತು ಮಕ್ಕಳ ಉಸಿರಾಟದಲ್ಲಿತೊಂದರೆಯಾಗುತ್ತದೆ. ಇದಷ್ಟೇ ಅಲ್ಲ ಹೃದಯ ಸಂಬಂಧಿ ಕಾಯಿಲೆ ಕೂಡ ಬರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬಳಕೆ - ಮೆಕ್ಡೋನಾಲ್ಡ್ ಎಗ್ ಮೆಕ್ಮಫಿನ್, ವೆಂಡೀಸ್ ಜೂನಿಯರ್ ಬೇಕನ್ ಚೀಸ್ ಬರ್ಗರ್, ಎಗ್, ಚೀಸ್ ಬಾಗೆಲ್ ಬದಲಿ ಬಳಕೆ - ಫಾರ್ಮಾಸ್ಯೂಟಿಕಲ್, ಡೈಸ್, ಪೆಸ್ಟಿಸೈಡ್ಸ್
ಎಂಎಸ್ಜಿ
ಮೋನೋಸೋಡಿಯಂ ಗ್ಲುಟೋಮೇಟ್, ಇದನ್ನು ಕೂಡ ಫಾಸ್ಟ್ಫುಡ್ನಲ್ಲಿ ರುಚಿ ಬರಲು ಬಳಕೆ ಮಾಡಲಾಗುತ್ತದೆ. ಇದರಿಂದ ತಲೆನೋವು, ನೌಸಿಯಾ, ವೀಕ್ನೆಸ್ ಮತ್ತು ಎದೆನೋವು ಬರುತ್ತದೆ.
ಬಳಕೆ - ಚಿಕನ್ ಸ್ಯಾಂಡ್ವಿಚ್, ಕೆಎಫ್ಸಿ ಚಿಕನ್ ಸ್ಟ್ರಿಪ್ಸ್
ಬದಲಿ ಬಳಕೆ - ಫರ್ಟಿಲೈಸರ್
ಫೆದರ್ಸ್ ಆ್ಯಂಡ್ ಹೇರ್
ಎಲ್ - ಸೈಸ್ಟೈನ್ ರೀತಿ ಕಾಣುವ ಇದು ಪಕ್ಷಿಗಳ ರೆಕ್ಕೆ ಪುಕ್ಕ ಮತ್ತು ಮನುಷ್ಯನ ಕೂದಲಿಂದ ಮಾಡಲಾಗಿರುತ್ತದೆ. ಬೇಕರಿ ವಸ್ತುಗಳು ಚೆನ್ನಾಗಿ ಕಾಣಲು ಇದನ್ನು ಬಳಕೆ ಮಾಡಲಾಗುತ್ತದೆ. ಇದರಿಂದ ಯಾವುದೇ ಹಾನಿಯಿಲ್ಲ.
ಬಳಕೆ - ಮೆಕ್ಡೋನಾಲ್ಡ್ ಆ್ಯಪಲ್ ಪೈ ಮತ್ತು ಕೆಎಫ್ಸಿ ಚಂಕಿ ಚಿಕನ್ ಪಾಟ್ ಪೈ
ಬದಲಿ ಬಳಕೆ - ಫಾರ್ಮಾಸಿಟಿಕಲ್, ಹೇರ್ ಪರ್ಮ್ ಸೆಲ್ಯೂಶನ್, ಸಿಗರೇಟ್.
ರುಚಿ ಹೆಚ್ಚಿಸುವ ರಾಸಾಯನಿಕ ಪದಾರ್ಥ
ಸೋಡಿಯಂ ಫಾಸ್ಫೇಟ್
ಫಾಸ್ಟ್ಫುಡ್ ಕಾಫಿ ಮತ್ತು ಸೋಪು
ಟೈಟಾನಿಯಂ ಡೈಆಕ್ಸೈಡ್
ಹುಲ್ಲುಗಾವಲು, ಸನ್ಸ್ಕ್ರೀನ್ನಲ್ಲಿ ಇರುತ್ತದೆ
ಡೈಮಿಥೈಲ್ಪೋಲಿಸಿಲಾಕ್ಸೇನ್
ಮ್ಯಾಕ್ನೋಗ್ಗೇಟ್ಸ್, ಸಿಲಿಕಾನ್ ಕಾಲ್ಕ್
ಅಜೋಡಿಕಾರ್ಬನಾಮೈಡ್
ರಸ್ತೆ ಬದಿಯ ಆಹಾರದವಸ್ತುಗಳಲ್ಲಿದ್ದು, ಇದರಿಂದ ಅಸ್ತಮಾ ಬರಬಹುದು.
ಕಂಪನಿ ಬಗ್ಗೆ...
- 1420 ಶತಕೋಟಿ - ಒಟ್ಟಾರೆ ಆದಾಯ, ಇದು ಕೆಎಫ್ಸಿ, ವೆಂಡಿ ಆ್ಯಂಡ್ ಆರ್ಬಿ ಮತ್ತು ಬರ್ಗರ್ ಕಿಂಗ್ನ ಆದಾಯಕ್ಕಿಂತಲೂ ಹೆಚ್ಚು.
- 4 ಲಕ್ಷ- ಕೆಲಸಗಾರರ ಸಂಖ್ಯೆ
- 13,000 -ಅಮೆರಿಕದಲ್ಲಿರುವ ಅಂಗಡಿಗಳ ಸಂಖ್ಯೆ
- 37ರ್ -ಭಾರತೀಯರು ವಾರಕ್ಕೊಮ್ಮೆ ಮೆಕ್ಡೊನಾಲ್ಡ್ಸ್ಗೆ ಹೋಗ್ತಾರೆ
- 126-ದೇಶಗಳಲ್ಲಿ ಕಾರ್ಯಾಚರಣೆ
- ಕಾರ್ಟ್ಸ್ ಜ್ಯೂನಿಯರ್ ಡಬಲ್ ಸಿಕ್ಸ್ ಡಾಲರ್ ಬರ್ಗರ್ 1520
- ನಾಥನ್ಸ್ ಫಿಶ್ ಎನ್ ಚಿಪ್ಸ್ 1537
- ವೈಟ್ ಕ್ಯಾಸಲ್ ಚಾಕೋಲೇಟ್ ಶೇಕ್ 1680
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


