ಜಿ.ಎಸ್.ಶಿವರುದ್ರಪ್ಪ ಅಂತ್ಯಸಂಸ್ಕಾರಕ್ಕೆ ಸಿದ್ಧತೆ
ಬೆಂಗಳೂರು: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ಸರ್ವಸಿದ್ಧತೆ ಪೂರ್ಣಗೊಂಡಿದೆ.
ಜ್ಞಾನಭಾರತಿ ಸಮೀಪದ ಕರ್ನಾಟಕ ಕಲಾಗ್ರಾಮದಲ್ಲಿ ಗುರುವಾರ ಸಂಜೆ 5ಕ್ಕೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. ಈಗಾಗಲೇ ಹೇಳಿರುವಂತೆ ಅಂತ್ಯಕ್ರಿಯೆ ಯಾವುದೇ ವಿಧಿ-ವಿಧಾನಗಳಿರದೆ ತೀರ ಸರಳವಾಗಿ ನಡೆಯಲಿದೆ.
ಜಿಎಸ್ಎಸ್ ಜೀವಿತದಲ್ಲಿದ್ದಾಗ ಅಪೇಕ್ಷೆ ವ್ಯಕ್ತಪಡಿಸಿದಂತೆ ಯಾವುದೇ ಪೂಜೆ-ಪುನಸ್ಕಾರ ನಡೆಸದೆ ಅವರ ಪಾರ್ಥಿವ ಶರೀರವನ್ನು ದಹನಗೊಳಿಸಲಾಗುವುದು. ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿ ಯಾವುದೇ ಸ್ಮಾರಕ ಅಥವಾ ಸಮಾಧಿ ನಿರ್ಮಿಸುವ ಬದಲು ಗ್ರಂಥಾಲಯ ಅಥವಾ ಅಧ್ಯಯನ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಜಿಎಸ್ಎಸ್ ಅವರ ಕಿರಿಯ ಪುತ್ರ ಡಾ.ಶಿವಪ್ರಸಾದ್ ಅವರು ವಿದೇಶದಲ್ಲಿದ್ದ ಕಾರಣ ಅವರ ಬರುವಿಕೆವರೆಗೆ ಜಿಎಸ್ಎಸ್ ಪಾರ್ಥಿವ ಶರೀರವನ್ನು ಕೆ.ಆರ್.ರಸ್ತೆಯಲ್ಲಿರುವ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಬುಧವಾರ ಡಾ.ಶಿವಪ್ರಸಾದ್ ಅವರು ಇಂಗ್ಲಂಡ್ನಿಂದ ಸಂಸಾರ ಸಮೇತರಾಗಿ ನಗರಕ್ಕೆ ಆಗಮಿಸಿದ್ದು, ಗುರುವಾರ ಬೆಳಗ್ಗೆ 7ಕ್ಕೆ ಜಿಎಸ್ಎಸ್ ಪಾರ್ಥಿವ ಶರೀರವನ್ನು ಕಿಮ್ಸ್ನಿಂದ ಬನಶಂಕರಿಯಲ್ಲಿರುವ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಬೆಳಗ್ಗೆ 8 ರಿಂದ 8.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಪಾರ್ಥಿವ ಶರೀರವನ್ನು ಅಲ್ಲಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ತಂದು, ಪರಿಷತ್ತಿನಲ್ಲಿ 9.30 ರಿಂದ 10ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಪರಿಷತ್ತಿನಿಂದ ತೆರೆದ ವಾಹನದಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ತಂದು ಮಧ್ಯಾಹ್ನ 2ರ ವರೆಗೂ ಅಲ್ಲಿಯೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಮೈಸೂರು ರಸ್ತೆ ಮೂಲಕ ಜ್ಞಾನಭಾರತಿಯಲ್ಲಿರುವ ಕಲಾಗ್ರಾಮಕ್ಕೆ ತೆರೆದ ವಾಹನದಲ್ಲೇ ಸಾಗಿಸಿ, ಸಂಜೆ 5ರ ಸುಮಾರಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಪ್ರಕಾಶ್ ತಿಳಿಸಿದ್ದಾರೆ. ಅಂತಿಮ ಸಂಸ್ಕಾರ ಸಲುವಾಗಿ ಸರ್ವ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಕಲಾಗ್ರಾಮದಲ್ಲಿ ಸುಮಾರು 3 ಸಾವಿರ ಆಸನಗಳ ವ್ಯವಸ್ಥೆ ಜತೆಗೆ ಬಂದೋಬಸ್ತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ನಿಂದ ಪುತ್ರ ಆಗಮನ
ಜಿಎಸ್ಎಸ್ ಪುತ್ರ ವಿದೇಶದಲ್ಲಿರುವ ಡಾ.ಶಿವಪ್ರಸಾದ್ ಪತ್ನಿ-ಮಗಳ ಜತೆಗೆ ಬನಶಂಕರಿಯಲ್ಲಿರುವ ಸ್ವಗೃಹಕ್ಕೆ ಬುಧವಾರ ಆಗಮಿಸಿದ್ದಾರೆ. ತಂದೆಯೊಂದಿಗೆ ಕಳೆದಿದ್ದ ಕ್ಷಣಗಳನ್ನು ಸ್ಮರಿಸಿಕೊಂಡ ಅವರು ಜಿಎಸ್ಎಸ್ ಇಂಗ್ಲಂಡ್ಗೆ ಬಂದಿದ್ದಾಗ ಅವರ ಜತೆ ವರ್ಡ್ಸ್ ವರ್ತ್ ಸಮಾಧಿ ವೀಕ್ಷಿಸಿದ್ದು ಅದ್ಭುತ ಕ್ಷಣ ಎಂದರು. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕೂಡ ಜಿಎಸ್ಎಸ್ ಅವರ ಮನೆಗೆ ಬುಧವಾರ ಭೇಟಿ ನೀಡಿದ್ದು, ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಜತೆಗೆ, ಜಿಎಸ್ಎಸ್ ಸ್ಮಾರಕ ನಿರ್ಮಾಣ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸುವುದಾಗಿಯೂ ತಿಳಿಸಿದರು. ಇದಕ್ಕೂ ಮುನ್ನ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕಿಮ್ಸ್ ಆಸ್ಪತ್ರೆಗೆ ತೆರಳಿ ಜಿಎಸ್ಎಸ್ ಅವರ ಪಾರ್ಥಿವ ಶರೀರದ ದರ್ಶನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

