ಜಿಎಸ್ಎಸ್ ಪಂಚಭೂತಗಳಲ್ಲಿ ಲೀನ
ಬೆಂಗಳೂರು: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಪಾರ್ಥಿವ ಶರೀರದ ಕರ್ನಾಟಕ ಕಲಾಗ್ರಾಮದಲ್ಲಿ ಗುರುವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಯಾವುದೇ ಧಾರ್ಮಿಕ ವಿಧಿ-ವಿಧಾನವಿಲ್ಲದೆ ಸರಳವಾಗಿ ನೆರವೇರಿತು.
ದಶಕಗಳ ಕಾಲ ಸಾಹಿತ್ಯದ ಹಣತೆಯಾಗಿ ಬೆಳಗಿದ ಜೀವ, ಡಿ. 23ರಂದು ಕಾಣದ ಕಡಲಿಗೆ ಹಂಬಲಿಸಿದ ಮನ ಹಿರಿಯ ಪುತ್ರ ಜಯದೇವ ಅವರ ಅಗ್ನಿಸ್ಪರ್ಶದ ಮುಖೇನ ಗುರುವಾರ ಸಂಜೆ 5ಕ್ಕೆ ಕಲಾಗ್ರಾಮದಲ್ಲಿ ಪಂಚಭೂತಗಳಲ್ಲಿ ಲೀನವಾಯಿತು. ಎದೆ ತುಂಬಿ ಹಾಡಿದೆನು ಅಂದು ನಾನು ಎಂಬ ಹಾಡಿನೊಂದಿಗೆ ಕವಿಗೆ ಅಂತಿಮ ಗೀತನಮನ ಸಲ್ಲಿಕೆಯಾಗುತ್ತಿದ್ದಂತೆ ಜಿಎಸ್ಎಸ್ ಪಾರ್ಥಿವ ಶರೀರ ಹಾಗೆ ಪಂಚಭೂತಗಳಲ್ಲಿ ಲೀನವಾಗುತ್ತಿರುವುದನ್ನು ನೋಡುತ್ತಿದ್ದ ಅವರ ಪತ್ನಿಯರಾದ ರುದ್ರಾಣಿ, ಪದ್ಮಾವತಿ ಮತ್ತು ಆಪ್ತಬಂಧುಗಳ ಕಣ್ಣಾಲಿಗಳು ಆರ್ದ್ರವಾಗಿ ತುಂಬಿಕೊಂಡವು.
ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಸೋಮಣ್ಣ, ಆರ್.ಅಶೋಕ ಸೇರಿದಂತೆ ವಿವಿಧ ಪಕ್ಷಗಳ ಗಣ್ಯರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಪ್ರಕಾಶ್, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಹಿರಿಯ ಪೊಲೀಸ್ ಅಧಿಕಾರಿಗಳು, ಕವಿಗಳಾದ ಚೆನ್ನವೀರಕಣವಿ, ಎಚ್.ಎಸ್. ವೆಂಕಟೇಶಮೂರ್ತಿ, ಎಂ.ಎನ್.ವ್ಯಾಸರಾವ್, ಡಾ.ಸಿದ್ದಲಿಂಗಯ್ಯ, ಸಾಹಿತಿಗಳಾದ ಶೂದ್ರ ಶ್ರೀನಿವಾಸ್, ಹಂಪನಾ, ಸಿದ್ದಲಿಂಗಯ್ಯ, ನರಹಳ್ಳಿ ಬಾಲಸುಬ್ರಹ್ಮಣ್ಯ, ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡಟ, ಜಿಎಸ್ಎಸ್ ಸಾಹಿತ್ಯಾಭಿಮಾನಿಗಳ ದಂಡು ಇಂಥದೊಂದು ಭಾವಪೂರ್ಣ ವಿದಾಯಕ್ಕೆ ಸಾಕ್ಷಿಯಾಯಿತು. ಸರಿಯಾಗಿ 4.20ಕ್ಕೆ ಕಲಾಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4.30ರ ಸುಮಾರಿಗೆ ಜಿಎಸ್ಎಸ್ ಪಾರ್ಥಿವ ಶರೀರಕ್ಕೆ ಹಾರ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ವಾದ್ಯಗೊಷ್ಠಿ ವಾದನ, ಕುಶಾಲ ತೋಪು ಮೂಲಕ ಗುಂಡು ಸಿಡಿಸುವುದು ಸೇರಿದಂತೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಎದೆ ತುಂಬಿ ಹಾಡಿದೆನು ಎಂಬ ಹಾಡು ಬರೆದ ಕವಿಯ ಅಂತಿಮ ಕ್ಷಣದ ನೆನಪುಗಳಿಂದ ಕೂಡಿದ ಭಾರವಾದ ಹೃದಯ ಹೊತ್ತು ಸಾರ್ವಜನಿಕರು ಮರಳತೊಡಗಿದರು. ಜಿಎಸ್ಎಸ್ ಬರೆದ ಸಾಲುಗಳು ರಿಂಗಣಿಸುತ್ತಲೇ ಇದ್ದವು.
ಗಾನ ನಮನ
ರವೀಂದ್ರ ಕಲಾಕ್ಷೇತ್ರ ಹಾಗೂ ಕಲಾಗ್ರಾಮಗಳೆರಡರಲ್ಲೂ ಜಿಎಸ್ಎಸ್ ಅವರಿಗೆ ಅವರವೂ ಸೇರಿದಂತೆ ಹಲವು ಭಾವಗೀತೆಗಳನ್ನು ಖ್ಯಾತ ಗಾಯಕರಿಂದ ಹಾಡಿಸುವ ಮೂಲಕ ಗೀತನಮನ ಸಲ್ಲಿಸಲಾಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ರಮೇಶ್ಚಂದ್ರ ಮುಂತಾದವರು ಹಾಗೂ ಕಲಾಗ್ರಾಮದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ, ಶ್ರೀನಿವಾಸ ಉಡುಪ ತಂಡದಿಂದ ಸುಶ್ರಾವ್ಯ ಗೀತನಮನ ನಡೆಯಿತು. ಜತೆಗೆ, ರಾಷ್ಟ್ರಗೀತೆ, ನಾಡಗೀತೆಗಳ ಮೂಲಕವೂ ಜಿಎಸ್ಎಸ್ಗೆ ಗೌರವ ಸಲ್ಲಿಸಲಾಯಿತು.
ಅಂಧರಿಂದಲೂ ದರ್ಶನ: ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿದ್ದ ಜಿಎಸ್ಎಸ್ ಪಾರ್ಥಿವ ಶರೀರದ ದರ್ಶನ ಪಡೆಯಲು ಜನಪ್ರತಿನಿಧಿಗಳು, ಸಾಹಿತಿಗಳು, ಕವಿಗಳು, ಕಲಾವಿದರು ಮುಂತಾದ ಗಣ್ಯರು, ಸಾಹಿತ್ಯಾಸಕ್ತರು ಮಾತ್ರವಲ್ಲದೇ ಶ್ರೀಸಾಮಾನ್ಯರೂ ಇದ್ದರು. ಅದರಲ್ಲೂ ಅಂಧ ವಿದ್ಯಾರ್ಥಿಗಳು, ಪೌರ ಕಾರ್ಮಿಕರು ಕೂಡ ಬಂದು ಜಿಎಸ್ಎಸ್ ಅಂತಿಮ ದರ್ಶನ ಪಡೆದದ್ದು ಅವರಿಗಿದ್ದ ಜನಪ್ರಿಯತೆಯ ವ್ಯಾಪ್ತಿಗೆ ಪ್ರತೀಕವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

