ವಿವಾದದ ಮಧ್ಯೆಯೇ ದಾವಿವಿ ಕುಲಪತಿ ಅಧಿಕಾರ ಸ್ವೀಕಾರ
ಕ.ಪ್ರ.ವಾರ್ತೆ, ಬೆಂಗಳೂರು ಡಿ. 30
ದಾವಣಗೆರೆ ಕುಲಪತಿ ನೇಮಕ ವಿಚಾರದಲ್ಲಿ ವಿವಾದ ತಲೆದೋರಿದೆ. ಸರ್ಕಾರ ಶಿಫಾರಸು ಮಾಡಿದ ಹೆಸರು ಹೊರತು ಪಡಿಸಿ ಮತ್ತೊಂದು ಹೆಸರನ್ನು ರಾಜ್ಯಪಾಲರು ಕುಲಪತಿ ಹುದ್ದಗೆ ಆಯ್ಕೆಮಾಡಿದ್ದಾರೆ ಎಂಬ ಆರೋಪವೇ ವಿವಾದದ ಮೂಲ. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ನೇಮಕದಲ್ಲಿ ಶೋಧನಾ ಸಮಿತಿ ಅಧ್ಯಕ್ಷತೆವಹಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರೇ ಸ್ವತಃ ಕುಲಪತಿ ನೇಮಕದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಶೋಧನಾ ಸಮಿತಿ ಹುದ್ದೆಗೆ ಆಯ್ಕೆಮಾಡಿದ ಮೂರು ಹೆಸರುಗಳ ಪೈಕಿ ಒಂದು ಹೆಸರನ್ನು(ಪ್ರೊ.ಗೋಮತಿ ದೇವಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆಗೆ ಆಯ್ಕೆ ಮಾಡುವಂತೆ ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿ ಶಿಫಾರಸು ಮಾಡಿದ ಹೆಸರು ಲೆಕ್ಕಿಸದೆ ವಿವಿಗಳ ಕುಲಾಧಿಪತಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪ್ರೊ.ಬಿ.ಬಿ. ಕಲಿವಾಳ ಅವರನ್ನು ನೇಮಕಮಾಡಿ ಆದೇಶ ಹೊರಡಿಸಿದ್ದಾರೆ. ಇದು ಅನಂತಮೂರ್ತಿ ಅವರಲ್ಲಿ ಅಸಮಧಾನ ಮೂಡಲು ಕಾರಣವಾಗಿದೆ.
ರಾಜ್ಯಪಾಲರು ಮಾಡಿದ್ದು ತಪ್ಪೇ?: ಶೋಧನಾ ಸಮಿತಿ ಸೂಚಿಸಿದ ಅಥವಾ ಮುಖ್ಯಮಂತ್ರಿ ಶಿಫಾರಸು ಮಾಡಿದ ಹೆಸರನ್ನೇ ರಾಜ್ಯಾಪಾಲರು ಒಪ್ಪಿಕೊಳ್ಳಬೇಕೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡಿಬರುತ್ತದೆ. ಆದರೆ, ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ ಪ್ರಕಾರ ಮುಖ್ಯಮಂತ್ರಿ ಶಿಫಾರಸು ಮಾಡಿದ ವ್ಯಕ್ತಿಯನ್ನೇ ನೇಮಕಮಾಡಬೇಕು ಎಂದಿಲ್ಲ. ಬದಲಾಗಿ ಸಮಿತಿ ಸೂಚಿಸಿದ ಹೆಸರ ಪೈಕಿ ಒಬ್ಬರನ್ನು ನೇಮಕಮಾಡಬೇಕು ಎಂದಿದೆ. ಹೀಗಾಗಿ ರಾಜ್ಯಪಾಲರು ಸಮಿತಿಯಲ್ಲಿದ್ದ ಹೆಸರನ್ನೇ ಆಯ್ಕೆಮಾಡಿದ್ದಾರೆ. ಆದರೆ, ಈ ಮಧ್ಯೆ ಮುಖ್ಯಮಂತ್ರಿಗಳಿಗೆ ವಿಚಾರ ತಿಳಿಸಬೇಕಾಗಿತ್ತು ಎಂಬುವುದು ಅನಂತಮೂರ್ತಿ ಅವರ ವಾದ.
ಈ ಹಿಂದೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ನೇಮಕದಲ್ಲೂ ರಾಜ್ಯಪಾಲರು ಇದೇ ರೀತಿ ನಡೆದುಕೊಂಡಿದ್ದರು. ಶೋಧನಾ ಸಮಿತಿ ಶಿಫಾರಸು ಮಾಡಿದ ಹೆಸರ ಹೊರತು ಮತ್ತೊಬ್ಬರನ್ನು ನೇಮಕಮಾಡಿ ಟೀಕೆಗೆ ಗುರಿಯಾಗಿದ್ದರು ಎಂಬುವುದನ್ನು ಸ್ಮರಿಸಬಹುದು.
ಹುದ್ದೆ ಮೊದಲೇ ಫಿಕ್ಸ್ ಆಗಿತ್ತಾ?: ದಾವಣಗೆರೆ ವಿವಿ ಕುಲಪತಿ ಹುದ್ದೆಗೆ ಅನಂತಮೂರ್ತಿ ಅವರು ಬೆಂಗಳೂರು ವಿವಿ ಜನಾರ್ದನ, ಗೋಮತಿ ದೇವಿ ಹಾಗೂ ಕರ್ನಾಟಕ ವಿವಿ ಪ್ರೊ. ಬಿ. ಕಲಿವಾಳ ಹೆಸರು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು.
ಗೋಮತಿ ದೇವಿ ಅವರು ಬಡಕಟ್ಟು ಜನಾಂಗಕ್ಕೆ ಸೇರಿದವರು. ಅಕಾಡೆಮಿಕ್ನಲ್ಲಿ ಹೆಚ್ಚು ಸಂಶೋಧನೆ ನಡೆಸಿದ್ದಾರೆ. ಇವರನ್ನೇ ಹುದ್ದೆಗೆ ನೇಮಕ ಮಾಡುವಂತೆ ಅನಂತಮೂರ್ತಿ ಅವರು ಒಲವು ತೋರಿಸಿದ್ದರು. ಅನಂತಮೂರ್ತಿ ವಿದೇಶ ಪ್ರವಾಸಕ್ಕೆ ಹೋದ ನಂತರ ಶೋಧನಾ ಸಮಿತಿ ಸದಸ್ಯರು ಮತ್ತೊಂದು ಹೆಸರು ಸೂಚಿಸಲು ತೀರ್ಮಾನ ಮಾಡಿಕೊಂಡಿದ್ದರು. ಆದರೆ, ಇದರಿಂದ ಸರ್ಕಾರಕ್ಕೆ ಅನುಮಾನ ಮೂಡಬಹುದು ಎಂದು ಸುಮ್ಮನಾಗಿದ್ದಾರೆ ಎಂದು ಸ್ವತಃ ಅನಂತಮೂರ್ತಿ ಅವರೇ ಸುವರ್ಣ ಸುದ್ದಿವಾಹಿನಿಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ವಿವಿ ನೂತನ ಕುಲಪತಿಯಾಗಿ ಪ್ರೊ.ಬಿ.ಬಿ.ಕಳಿವಾಳ ಅವರನ್ನು ನೇಮಕಮಾಡಿರುವುದು
ಸ್ವಾಗತರ್ಹ.
-ಕೆ.ಎಂ.ಮುನಿಯಪ್ಪ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ
ಅನಂತಮೂರ್ತಿ ಅಸಮಾಧಾನ ನನಗೆ ಸಂಬಂಧವಿಲ್ಲ
ದಾವಣಗೆರೆ ಕುಲಪತಿ ವಿವಾದ ಮಧ್ಯೆಯೂ ರಾಜ್ಯಪಾಲರ ಆದೇಶ ಪ್ರತಿಯೊಂದಿಗೆ ಸೋಮವಾರ ಪ್ರೊ.ಬಿ.ಬಿ.ಕಲಿವಾಳ ಅವರು ಶಿವಗಂಗೋತ್ರಿಯಲ್ಲಿರುವ ವಿವಿ ಆಡಳಿತ ಕಚೇರಿಯಲ್ಲಿ ಅಧಿಕಾರವಹಿಸಿಕೊಂಡಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯಪಾಲರ ಸೂಚನೆಯಂತೆ ನಾನು ಅಧಿಕಾರವಹಿಸಿಕೊಂಡಿದ್ದೇನೆ. ಕಳೆದ ಏಳು ವರ್ಷದಿಂದ ನನ್ನ ಹೆಸರು ಕುಲಪತಿ ಹುದ್ದೆಗೆ ಸಂಬಂಧಿಸಿದಂತೆ ಚರ್ಚೆಯಲ್ಲಿತ್ತು. ನಾನು ಪಟ್ಟ ಪರಿಶ್ರಮಕ್ಕೆ ಫಲಸಿಕ್ಕಿದೆ. ಅನಂತಮೂರ್ತಿ ಅವರ ಅಸಮಾಧಾನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರು ಶೋಧನಾ ಸಮಿತಿ ಪಟ್ಟಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ನನ್ನನ್ನು ರಾಜ್ಯಪಾಲರು ಆಯ್ಕೆಮಾಡಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

