ಪ್ರಧಾನ ಸುದ್ದಿ

ಗ್ರಾಮ ಲೆಕ್ಕಿಗರ ಲೆಕ್ಕಕ್ಕೆ ಬೋಗಸ್ ಅಂಕಪಟ್ಟಿ

Published On :

ಬೆಂಗಳೂರು: ರಾಜ್ಯದ ಗ್ರಾಮ ಲೆಕ್ಕಾಧಿಕಾರಿಗಳ ಪರೀಕ್ಷೆಯಲ್ಲಿ ನಕಲಿ ದಾಖಲೆಗಳು ಜಮಾ ಆಗಿವೆ!
ದ್ವಿತೀಯ ಪಿಯುಸಿ ಅಂಕಪಟ್ಟಿಗಳ ನಕಲು ಪ್ರತಿ ಜಾಲ ಪ್ರಸಕ್ತ ವರ್ಷದ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ ಪ್ರಕ್ರಿಯೆಯಲ್ಲಿ ಭಾರಿ ಸದ್ದು ಮಾಡಿದೆ.
ಕೇವಲ ಒಂದು ತಿಂಗಳಲ್ಲಿ 21 ನಕಲಿ ಅಂಕಪಟ್ಟಿಗಳು ಪತ್ತೆಯಾಗಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಇನ್ನು 40ಕ್ಕೂ ಅಧಿಕ ನಕಲು ಅಂಕಪಟ್ಟಿಗಳು ದೊರೆತಿವೆ. 2012 ಮತ್ತು 2013ನೇ ಸಾಲಿನಲ್ಲಿ ಒಂದು ಸಾವಿರಕ್ಕೂ ಅಧಿಕ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಮತ್ತಷ್ಟು ಅಕ್ರಮಗಳು ಬಹಿರಂಗವಾಗುವ ನಿರೀಕ್ಷೆಯಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ ಕಳೆದ ಎರಡು ವರ್ಷಗಳಿಂದ ನಕಲು ಅಂಕಪಟ್ಟಿಗಳ ದೂರುಗಳು ಇಲಾಖೆಯಲ್ಲಿ ಹೆಚ್ಚಾಗಿವೆ. ಮೊದಲೆಲ್ಲ ವರ್ಷಕ್ಕೆ ಇಂತಹ 5-6 ದೂರುಗಳು ಬರುತ್ತಿದ್ದರೇ ಈಗ ಪ್ರತಿ ತಿಂಗಳು ಇದೇ ಪ್ರಮಾಣದ ನಕಲಿ ಅಂಕಪಟ್ಟಿಯ ಅಸಲಿತನ ಪರೀಕ್ಷಿಸಲು ದೂರುಗಳು ಬರುತ್ತಿವೆ.
ಈ ನಕಲಿಗಳ ಹಾವಳಿಯಿಂದ ಅರ್ಹ ಅಭ್ಯರ್ಥಿಗಳು ಸರ್ಕಾರಿ ಕೆಲಸದಿಂದ ವಂಚಿತರಾಗುತ್ತಿದ್ದಾರೆ. ವಿಚಿತ್ರವೆಂದರೆ ಅರ್ಜಿ ಸಲ್ಲಿಸುವಾಗ ಪ್ರಮಾಣಪತ್ರವನ್ನು ಜಿಲ್ಲಾಡಳಿತ ಪಡೆದಿಲ್ಲ. ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಪ್ರಥಮ ತಿಂಗಳ ಸಂಬಳ ನೀಡುವ ಮುಂಚೆ ಪರಿಶೀಲನೆ ನಡೆಸುವಾಗ ಈ ಅಕ್ರಮಗಳು ಬಯಲಿಗೆ ಬಂದಿವೆ.   

ನಕಲಿ 'ಕಲಾ'ವಿದ: ಆತ ಪಡೆದ ಅಂಕ 264, ಆದರೆ ಅಂಕಪಟ್ಟಿಯಲ್ಲಿ ಬರೋಬ್ಬರಿ 572 !
ಮಂಜುನಾಥ್ ವಿ ಎಂಬ ವ್ಯಕ್ತಿ ಚಿಕ್ಕಮಗಳೂರಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಆಯ್ಕೆಯಾಗಿದ್ದಾನೆ. ಆಯ್ಕೆ ಪ್ರಕ್ರಿಯೆ ಬಳಿಕ ಮೊದಲ ತಿಂಗಳ ಸಂಬಳ ನೀಡುವ ಮುಂಚೆ ನಿಯಮಗಳ ಪ್ರಕಾರ ಅಭ್ಯರ್ಥಿಯ ಅಂಕಪಟ್ಟಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯಿಂದ ದೃಢಪಡಿಸಿಕೊಳ್ಳಲಾಗುತ್ತದೆ. ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಓದಿರುವ ಮಂಜುನಾಥ್, ತಾನು ವಿಜ್ಞಾನ ವಿಭಾಗದಲ್ಲಿ ಓದಿ 600ಕ್ಕೆ 572 ಅಂಕ ಪಡೆದಿರುವ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಮಾಣಪತ್ರ ಸಲ್ಲಿಸಿದ್ದಾನೆ.
ಈತ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಕನ್ನಡ 97, ಇಂಗ್ಲಿಷ್ 94, ಭೌತಶಾಸ್ತ್ರ 95, ರಸಾಯನಶಾಸ್ತ್ರ 96, ಗಣಿತ 96 ಹಾಗೂ ಜೀವಶಾಸ್ತ್ರದಲ್ಲಿ 94 ಅಂಕ ಪಡೆದಿದ್ದಾನೆ. ಆದರೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ ಮಂಜುನಾಥ್ ಓದಿರುವುದು ಕಲಾ ವಿಭಾಗದಲ್ಲಿ ಹಾಗೂ ಗಳಿಸಿದ್ದು ಕೇವಲ 264 ಅಂಕ. ಮಂಜುನಾಥನ ದಾಖಲಾತಿ ಸಂಖ್ಯೆ 282099.ಒಂದೆಡೆ ಅಂಕಪಟ್ಟಿಯಲ್ಲಿ ಎಲ್ಲ ವಿಷಯಗಳಿಗೂ 90ಕ್ಕೂ ಅಧಿಕ ಅಂಕವನ್ನು ಹಾಕಿದ್ದರೆ, ಮತ್ತೊಂದೆಡೆ ಕಾಲೇಜು ಕೋಡ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದಾನೆ. ಆದರೆ 1997ರ ಏಪ್ರಿಲ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಆತ ಪಡೆದ ಅಂಕಗಳು ಹೀಗಿವೆ. ಕನ್ನಡ 56, ಇಂಗ್ಲಿಷ್ 30, ಇತಿಹಾಸ 46, ಸಮಾಜಶಾಸ್ತ್ರ57, ಅರ್ಥಶಾಸ್ತ್ರ 45 ಹಾಗೂ ರಾಜ್ಯಶಾಸ್ತ್ರದಲ್ಲಿ 30.
ಇನ್ನು ಉಡುಪಿ ಜಿಲ್ಲೆಯಲ್ಲಿ ಜಯಲಕ್ಷ್ಮಿ ಎಸ್ (ದಾ.ಸಂ- 479307) ಎಂಬುವವರು ಗ್ರಾಮ ಲೆಕ್ಕಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಈಕೆ ಪಡೆದ ಅಂಕ ಕ್ರಮವಾಗಿ 79, 44, 46, 48, 60 ಹಾಗೂ 64. ಆದರೆ ಈಕೆ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ನಕಲಿ ಪ್ರಮಾಣಪತ್ರದಲ್ಲಿ ಕ್ರಮವಾಗಿ 97, 94, 97, 96, 95 ಹಾಗೂ 96 ಅಂಕಗಳು ಎಂದು ದಾಖಲಾಗಿದೆ. ಇದೇ ರೀತಿ ಉಡುಪಿಯಿಂದ 8, ಚಿಕ್ಕಬಳ್ಳಾಪುರ 7, ಬೆಳಗಾವಿ 4 ಹಾಗೂ ಚಿಕ್ಕಮಗಳೂರು, ಹಾಸನದಿಂದ ತಲಾ 1 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಈಗಾಗಲೇ ಎಲ್ಲ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಆದರೆ ನಕಲಿ ಅಂಕಪಟ್ಟಿಯ ಜಾಲ ಮಾತ್ರ ಪತ್ತೆಯಾಗಿಲ್ಲ.
ಇಲಾಖೆ ಎಚ್ಚೆತ್ತುಕೊಳ್ಳಲಿ...: ಪದವಿಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ ಈ ನಕಲು ಪ್ರಮಾಣಪತ್ರ ಈ ವರ್ಷ ಹೊಸತಲ್ಲ. ಪ್ರತಿ ವರ್ಷ ಇಂತಹ ದೂರುಗಳು ಇಲಾಖೆಗೆ ಬರುತ್ತಿವೆ. ಆದರೆ ಕಳೆದ 2 ವರ್ಷದಿಂದ ದೂರಿನ ಪ್ರಮಾಣ ಹೆಚ್ಚುತ್ತಿದೆ. ಇದರರ್ಥ ರಾಜ್ಯದಲ್ಲಿ ಮತ್ತೆ ನಕಲಿ ಪ್ರಮಾಣಪತ್ರಗಳ ಜಾಲ ಹೆಚ್ಚಾಗಿದೆ. 5ರಿಂದ !10 ಸಾವಿರ ಮೊತ್ತಕ್ಕೆ ಇಲಾಖೆಯ ಮೂಲಕ ಪ್ರಮಾಣಪತ್ರ ತಯಾರಿಸಿಕೊಡುತ್ತೇವೆ ಎಂದು ವಂಚಕರು ಹೇಳುತ್ತಿದ್ದಾರೆ. ಆದರೆ ಈ ಪ್ರಮಾಣಪತ್ರಗಳು ಇಲಾಖೆಯ ದಾಖಲೆ ಪಟ್ಟಿಯ ಬದಲು ವಂಚಕರ ಕಂಪ್ಯೂಟರ್‌ನಲ್ಲಿನ ಫೋಟೋಶಾಪ್‌ನಲ್ಲಿ ಮಾತ್ರ ಬದಲಾಗುತ್ತಿದೆ. ಈಗ ಪ್ರಮಾಣಪತ್ರ ಮುದ್ರಣದ ತಂತ್ರಜ್ಞಾನ ಬದಲಿಸಿ, ಹಾಲೋಗ್ರಾಮ್, 3ಡಿ ಆಕೃತಿ ಹಾಗೂ ಬಾರ್ ಕೋಡ್‌ಗಳನ್ನು ಬಳಸಲಾಗುತ್ತಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ಇನ್ನು ಗಮನನೀಡಿಲ್ಲ.

ಪರಿಶೀಲನೆ ಇಲ್ಲ
ಅರ್ಜಿ ಸಲ್ಲಿಕೆಯ ಪ್ರಾಥಮಿಕ ಹಂತ ಅಥವಾ ಆಯ್ಕೆ ಪಟ್ಟಿ ಪ್ರಕಟಕ್ಕೂ ಮುಂಚೆ ಅಭ್ಯರ್ಥಿಗಳ ಅಂಕಪಟ್ಟಿ ಪರಿಶೀಲನೆ ಮಾಡುತ್ತಿಲ್ಲ. ಇದರಿಂದ ಆಯ್ಕೆ ಪಟ್ಟಿಯಲ್ಲಿ ಈ ನಕಲಿಗಳ ಹೆಸರು ಕೂಡ ಸೇರುತ್ತದೆ. ಪರಿಶೀಲನೆ ಬಳಿಕ ಅಕ್ರಮ ಪತ್ತೆಯಾದರೆ ತೆರವಾದ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆಸಲು ಮತ್ತೆ ಸರ್ಕಾರದ ಅನುಮತಿ ಕೇಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾರಂಭಿಕ ಹಂತದಲ್ಲಿಯೇ ಪರಿಶೀಲನೆ ಮಾಡುವ ಅಗತ್ಯವಿದೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.