ಆಂಧ್ರ ಕನ್ನಡಿಗರಿಗೂ ಬೇಕಿದೆ 'ವಿಶೇಷ' ಸೌಲಭ್ಯ
ಕ.ಪ್ರ. ವಾರ್ತೆ ಬಳ್ಳಾರಿ ಜು.10
ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕನ್ನಡಿಗರಿಗೆ 371ನೇ (ಜೆ) ತಿದ್ದುಪಡಿಯ ವಿಶೇಷ ಸ್ಥಾನಮಾನದ ಸೌಲಭ್ಯಗಳು ಲಭಿಸಲಿವೆಯೇ ಎಂಬ ಆಶಯಯುಕ್ತ ಮಾತುಗಳು ಕೇಳಿಬರುತ್ತಿವೆ.
ಆಂಧ್ರದಲ್ಲಿನ ಕನ್ನಡಿಗರು ಭೌತಿಕವಾಗಿ ಆಂಧ್ರಪ್ರದೇಶದಲ್ಲಿದ್ದರೂ, ಭಾವಾನತ್ಮಕ, ಶೈಕ್ಷಣಿಕವಾಗಿ ಅವರು ಮೂಲತಃ ಕನ್ನಡಿಗರು. ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಮಕ್ಕಳು ಆಂಧ್ರದಲ್ಲೂ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಂಧ್ರ ಕನ್ನಡಿಗರಿಗೆ 371ರ ಸೌಲಭ್ಯ ನೀಡುವ ಕುರಿತು ಎಚ್.ಕೆ. ಪಾಟೀಲ್ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಹಾಗೂ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ.
ಕ್ಲಿಷ್ಟ ಪರಿಸ್ಥಿತಿಯಲ್ಲೂ ಆಂಧ್ರಪ್ರದೇಶದಲ್ಲಿರುವ ಕನ್ನಡಿಗರು ಮಾತ್ರ ಕನ್ನಡದ ಸಂಬಂಧ ಕಳೆದುಕೊಂಡಿಲ್ಲ. ಏನಿದ್ದರೂ ತಮ್ಮ ಮಕ್ಕಳು ಕನ್ನಡ ಕಲಿಯಬೇಕು ಎಂಬ ಮಹಾದಾಸೆಯಿಂದ ಆಂಧ್ರಪ್ರದೇಶದ ಸರ್ಕಾರಕ್ಕೆ ಸೆಡ್ಡು ಹೊಡೆದು ಕನ್ನಡ ಕಲಿಸುತ್ತಿರುವುದರಿಂದ, ಈ ಭಾಗದಷ್ಟೇ ಪ್ರಮಾಣದಲ್ಲಿ ಅಲ್ಲಿನ ಕನ್ನಡಿಗರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಅಲ್ಲಿನ ಕನ್ನಡ ವಿದ್ಯಾಭ್ಯಾಸ ಮಾಡಿರುವ ಮಕ್ಕಳಿಗೆ 371(ಜೆ) ಅಡಿ ಲಭ್ಯವಾಗಿರುವ ಸೌಲಭ್ಯ ಪಡೆಯುವಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಗಂಭೀರ ಚಿಂತನೆ ಮಾಡಬೇಕಾಗಿದೆ.
ಐದು ಜಿಲ್ಲೆಗಳಲ್ಲಿ ಕನ್ನಡ ಜೀವಂತ: ಆಂಧ್ರಪ್ರದೇಶದ ಅನಂತಪುರ, ಕರ್ನೂಲು, ಮೆಡಕ್, ಮೆಹಬೂಬನಗರ, ಹೈದ್ರಾಬಾದ್ ಜಿಲ್ಲೆಗಳಲ್ಲಿ ಬಹಳಷ್ಟು ಕನ್ನಡಿಗರಿದ್ದು, ಅವರ ಮಕ್ಕಳು ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶದ ಐದು ಜಿಲ್ಲೆಗಳಲ್ಲಿ 110 ಕನ್ನಡ ಶಾಲೆಗಳಿದ್ದು, ಸುಮಾರು 20 ಸಾವಿರಕ್ಕೂ ಹೆಚ್ಚು ಮಕ್ಕಳು ಕನ್ನಡ ಭಾಷೆಯಲ್ಲೇ ಕಲಿಯುತ್ತಿದ್ದಾರೆ. ಪ್ರತಿವರ್ಷ ಹಲವು ಸಮಸ್ಯೆಗಳ ಮಧ್ಯೆಯೂ ಕನ್ನಡ ಕಲಿಕೆಯಲ್ಲಿ ಹಿಂದೇಟು ಹಾಕಿಲ್ಲ. ರಾಜ್ಯದ ಕೆಲವು ಕನ್ನಡಿಗರು ಇಂಗ್ಲಿಷ್ ಕಲಿಕೆಯತ್ತ ಆಸಕ್ತಿ ತೋರಿ, ಕನ್ನಡದ ಬಗ್ಗೆ ನಿರ್ಲಕ್ಷ್ಯವಹಿಸಿರಬಹುದು, ಆದರೆ, ಆಂಧ್ರ ಕನ್ನಡಿಗರು ಮಾತ್ರ, ಆಂಧ್ರಪ್ರದೇಶದ ನಗರ ಪ್ರದೇಶಗಳಲ್ಲಿರುವ ಇಂಗ್ಲೀಷ್ ಮಾಧ್ಯಮ ಶಾಲೆಗಳ ಮೊರೆ ಹೋಗದೆ, ಕನ್ನಡಕ್ಕೆ ಜೋತು ಬಿದ್ದಿದ್ದಾರೆ. ಹೀಗಾಗಿ ಅವರಿಗೆ ಮನ್ನಣೆ ನೀಡಬೇಕಾಗಿರುವುದು ಅಗತ್ಯವಾಗಿದೆ.
ಉನ್ನತ ಶಿಕ್ಷಣ ಹೈಕದಲ್ಲಿ: ಆಂಧ್ರದಲ್ಲಿ ಕನ್ನಡ ಭಾಷೆಯಲ್ಲೇ ಶಿಕ್ಷಣ ಪಡೆದ ಬಹುತೇಕ ಮಕ್ಕಳು ತಮ್ಮ ಉನ್ನತ ವ್ಯಾಸಂಗ ಹಾಗೂ ಕಾಲೇಜು ಶಿಕ್ಷಣವನ್ನು ಬಳ್ಳಾರಿ, ರಾಯಚೂರು, ಗುಲ್ಬರ್ಗ, ಬೀದರ್ ಸೇರಿದಂತೆ ಹೈ-ಕ ಜಿಲ್ಲೆಗಳಲ್ಲಿ ಪಡೆಯುತ್ತಾರೆ. ಈ ಭಾಗದಲ್ಲಿ ಅವರ ಶಿಕ್ಷಣ ಪೂರೈಸುವುದರಿಂದ ಹೈ-ಕ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಸ್ಥಾನಮಾನದ ಸೌಲಭ್ಯ ಕಲ್ಪಿಸುವ ಕೂಗು ಕೇಳಿಬರುತ್ತಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಯೊಂದಿಗೆ ಗಡಿಭಾಗದ ಕನ್ನಡಿಗರಿಗೆ ಈ ಸೌಲಭ್ಯ ದೊರತಲ್ಲಿ ಆಂಧ್ರದಲ್ಲಿಯೂ ಕನ್ನಡದ ಅಭಿವೃದ್ಧಿಗೆ ಸಹಕರಿಸಿದಂತಾಗುತ್ತದೆ ಎಂಬ ಮಾತುಗಳಿವೆ.
ಕನ್ನಡಿಗರ ಭಾವನೆ ಬಲಿಷ್ಠಗೊಳಿಸಲು ಸಾಧ್ಯ: ಹತ್ತು ಹಲವು ಸಮಸ್ಯೆಗಳು, ತೊಂದರೆಗಳ ಮಧ್ಯೆಯೂ ಗಡಿಭಾಗದಲ್ಲಿ ಕನ್ನಡವನ್ನು ಜೀವಂತವಾಗಿ ಉಳಿಸಿಕೊಂಡು ಹೋಗುತ್ತಿರುವ ತಮಗೂ 371 (ಜೆ) ಸೌಲಭ್ಯ ಕಲ್ಪಿಸಿಕೊಡಬೇಕೆಂಬ ಮನವಿಯನ್ನು ಈಗಾಗಲೇ ಗಡಿನಾಡ ಕನ್ನಡಿಗರು ಎಚ್.ಕೆ. ಪಾಟೀಲ್ ನೇತೃತ್ವದ ಉಪಸಮಿತಿಗೆ ಸಲ್ಲಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಸಚಿವ ಸಂಪುಟದ ಉಪಸಮಿತಿಯು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ಇದರಿಂದಾಗಿ ಗಡಿಭಾಗದ ಕನ್ನಡವನ್ನು, ಕನ್ನಡಿಗರ ಭಾವನೆ ಬಲಿಷ್ಠಪಡಿಸಿದಂತಾಗುತ್ತದೆ.
ಗಡಿಭಾಗದಲ್ಲಿ ಓದುತ್ತಿರುವ ಮಕ್ಕಳು ಎಸ್ಸೆಸ್ಸೆಲ್ಸಿವರೆಗೆ ಆಂಧ್ರದಲ್ಲಿ ಕನ್ನಡ ಮಾಧ್ಯಮವನ್ನು ಓದಿ, ಉಳಿದ ಉನ್ನತ ಶಿಕ್ಷಣವನ್ನು ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾಡುತ್ತಿದ್ದಾರೆ ಮತ್ತು ನಾವುಗಳು ಈ ಜಿಲ್ಲೆಗಳಿಗೆ ಹೊಂದಿಕೊಂಡಿದ್ದೇವೆ. ಇನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹೈ-ಕದಂತೆ ಹಿಂದುಳಿದಿದ್ದು, ಇದರಿಂದಾಗಿ ನಮಗೂ 371ನೇ ಕಲಂನಡಿ ವಿಶೇಷ ಸ್ಥಾನಮಾನದ ಸೌಲಭ್ಯ ಕಲ್ಪಿಸಿಕೊಡಬೇಕು.
- ಎಂ. ಗಿರಿಜಾಪತಿ, ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

