ಸಾಮೂಹಿಕ ಅತ್ಯಾಚಾರ: ಪ್ರಮುಖ ಆರೋಪಿಗೆ ನ್ಯಾಯಾಂಗ ಬಂಧನ
ಕ.ಪ್ರ.ವಾರ್ತೆ, ಉಡುಪಿ, ಜು.11-
ಮಣಿಪಾಲದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಪೂಜಾರಿಯನ್ನು ಪೊಲೀಸರು ಕಾನೂನಾತ್ಮಕವಾಗಿ ಬಂಧನಕ್ಕೊಳಪಡಿಸಿದ್ದಾರೆ.
ಆತನನ್ನು ಗುರುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಜು.15ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಆತನ ಜೀವಕ್ಕೆ ಅಪಾಯ ಸಂಭವಿಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ.
ಜೂ.20ರಂದು ಮಧ್ಯರಾತ್ರಿ ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಅಪಹರಿಸಿ ಬರ್ಬರವಾಗಿ ಅತ್ಯಾಚಾರಗೈದ ಮೂವರು ಆರೋಪಿಗಳಲ್ಲಿ ಮೊದಲ ಆರೋಪಿ, ರೌಡಿ ಶೀಟರ್ ಈ ಯೋಗೀಶ್ ಪೂಜಾರಿ. ಜೂ.27ರಂದು ಮುಂಜಾನೆ ಈತನನ್ನು ಬಂಧಿಸಲು ಆತನ ಮನೆಗೆ ಹೋದಾಗ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿತ್ತು. ತಕ್ಷಣವೇ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಪೊಲೀಸರೇ ದಾಖಲಿಸಿದ್ದರು. ಮೊದಲ 3 ದಿನಗಳು ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟದಲ್ಲಿದ್ದ ಯೋಗೀಶ್, ವೈದ್ಯರ ತೀವ್ರ ಪ್ರಯತ್ನದ ನಂತರ ಇದೀಗ ಚೇತರಿಸಿಕೊಂಡಿದ್ದಾನೆ. ಆತ ಆಸ್ಪತ್ರೆಯಲ್ಲಿ ಪೊಲೀಸರ ಸುಪರ್ದಿಯಲ್ಲಿದ್ದರೂ ಆತನ ಆರೋಗ್ಯ ಸ್ಥಿತಿಯ ಕಾರಣ ಆತನನ್ನು ಕಾನೂನು ರೀತಿಯಲ್ಲಿ ಬಂಧಿಸಿ, 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವುದಕ್ಕೆ ಸಾಧ್ಯವಾಗಿರಲಿಲ್ಲ.
ಆಸ್ಪತ್ರೆಯಿಂದ ವಶಕ್ಕೆ: ಗುರುವಾರ ಬೆಳಗ್ಗೆ 8.30ಕ್ಕೆ ಪ್ರಕರಣದ ತನಿಖಾಧಿಕಾರಿ, ಮಣಿಪಾಲ ಠಾಣೆಯ ಉಪನಿರೀಕ್ಷಕ ಸದಾನಂದ ತಿಪ್ಪಣ್ಣನವರ್ ಅವರು ಯೋಗೀಶ್‌ನನ್ನು ಆಸ್ಪತ್ರೆಯಿಂದ ವಶಕ್ಕೆ ತೆಗೆದುಕೊಂಡು ಬಂಧಿಸಿದರು. ವಿಚಾರಣೆ, ಹೇಳಿಕೆಗಳ ನಂತರ ಸಂಜೆ 7 ಗಂಟೆಗೆ ಉಡುಪಿ ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಜ್ಯೋತಿ ಅವರ ಗೃಹದಲ್ಲಿ ಹಾಜರುಪಡಿಸಿದರು.
ಬೆಳಗ್ಗೆ ಯೋಗೀಶ್‌ನನ್ನು ಪೊಲೀಸರು ಓಂತಿಬೆಟ್ಟು ಎಂಬಲ್ಲಿ ಅತ್ಯಾಚಾರ ನಡೆದ ಸ್ಥಳಕ್ಕೆ ಕೆರೆದುಕೊಂಡು ಹೋಗಿ ಸ್ಥಳ ಗುರುತಿಸಿದರು. ನಂತರ ಸಂಜೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಕರ್ತವ್ಯದಲ್ಲಿದ್ದ ವೈದ್ಯ ಡಾ. ಅಮರನಾಥ್ ಯೋಗೀಶ್ ಸಂಪೂರ್ಣ ಚೇತರಿಸಿಕೊಂಡಿರುವುದಾಗಿ ಪ್ರಮಾಣಪತ್ರ ನೀಡಿದ್ದು, ಡಿಎನ್‌ಎ ಪರೀಕ್ಷೆಗೆ ಬೇಕಾದ ಮಾದರಿಗಳನ್ನು ಯೋಗೀಶ್ ದೇಹದಿಂದ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

