ಹೆಸರಿಗಷ್ಟೆ ವೇಳಾಪಟ್ಟಿ, ಕೆಲಸ ಮಾತ್ರ ಬೇಕಾಬಿಟ್ಟಿ!
ಕ.ಪ್ರ.ವಾರ್ತೆ, ಬೆಂಗಳೂರು, ಜು. 11-
ವೃತ್ತಿಪರ ಪದವಿ ಪ್ರವೇಶ ಬಯಸುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಜತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಚೆಲ್ಲಾಟ ಮುಂದುವರೆದಿದೆ.
ಪ್ರಸಕ್ತ ವರ್ಷದ ಕೌನ್ಸೆಲಿಂಗ್ ಆರಂಭದ ದಿನಗಳಿಂದಲೂ ವೇಳಾಪಟ್ಟಿ ಪ್ರಕಾರ ಯಾವುದೇ ಕಾರ್ಯ ನಡೆಯುತ್ತಿಲ್ಲ. ವಿದ್ಯಾರ್ಥಿಗಳಿಗೆ ಹೇಳುವುದು ಒಂದು ಸಮಯ, ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಕೆಲಸ ನಿರ್ವಹಿಸುವುದು ಬೇರೊಂದು ವೇಳಾಪಟ್ಟಿಯಲ್ಲಿ ಎಂಬಂತಾಗಿದೆ.
ಬುಧವಾರ ಬೆಳಗ್ಗೆ 10.30ಕ್ಕೆ ಪ್ರಕಟವಾಗಬೇಕಿದ್ದ ಸೀಟು ಹಂಚಿಕೆ ಮಧ್ಯಾಹ್ನ 3.30ಕ್ಕೆ ಪ್ರಕಟವಾಯಿತು. ಸೀಟು ಪ್ರಕಟವಾದ ಕೂಡಲೇ ಶುಲ್ಕ ಪಾವತಿಗೂ ಅವಕಾಶ ಮಾಡಿಕೋಡಬೇಕಿದ್ದ ಪ್ರಾಧಿಕಾರ, ಗುರುವಾರ ಮಧ್ಯಾಹ್ನದವರೆಗೆ ಯಾವುದೇ ಸೌಲಭ್ಯವನ್ನೇ ನೀಡಿಲ್ಲ. ಇನ್ನು ದಿನದ ಅಂತ್ಯದವರೆಗೂ ಶುಲ್ಕ ಪಾವತಿ ಬಗ್ಗೆ ಗೊಂದಲ ಹಾಗೆಯೇ ಮುಂದುವರೆದಿದೆ. ಇದರಿಂದ ವಿದ್ಯಾರ್ಥಿಗಳು ಪರೀಕ್ಷಾ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈಗಿನ ವೇಳಾಪಟ್ಟಿ ಪ್ರಕಾರ ಸೋಮವಾರ ಸಂಜೆ (ಜು.15) 5 ಗಂಟೆಯೊಳಗೆ ಶುಲ್ಕ ಪಾವತಿಸಿ ಸಂಬಂಧಪಟ್ಟ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಿದೆ. ವಿಚಿತ್ರವೆಂದರೆ ವಿದ್ಯಾರ್ಥಿಗಳಿಗೆ ಈಗ ಶುಲ್ಕ ಪಾವತಿಸಲು ಬಾಕಿ ಉಳಿದಿರುವ ಸಮಯ ಕೇವಲ ಒಂದೂವರೆ ದಿನ ಮಾತ್ರ. ಪ್ರಾಧಿಕಾರದ ಅಧಿಕಾರಿಗಳ ವಿಳಂಬದಿಂದ ವಿದ್ಯಾರ್ಥಿಗಳಿಗೆ ಈ ಅನಿರೀಕ್ಷಿತ ಆತಂಕ ಪ್ರಾರಂಭವಾಗಿದೆ.
ಶುಲ್ಕ ಪಾವತಿ ಪ್ರಕ್ರಿಯೆಗೆ ವಿಳಂಬ: ಪ್ರಾಧಿಕಾರದ ಹಿಂದಿನ ವೇಳಾಪಟ್ಟಿ ಪ್ರಕಾರ ಜು.10ರ ಮಧ್ಯಾಹ್ನದೊಳಗೆ ಶುಲ್ಕ ಪಾವತಿಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ, ಇಂಡಿಯನ್ ಬ್ಯಾಂಕ್ ಹಾಗೂ ಪ್ರಾಧಿಕಾರದ ಅಧಿಕಾರಿಗಳ ನಡುವಿನ ಗೊಂದಲದಿಂದ ಜು.11ರ ಸಂಜೆಯಾದರೂ ಪರಿಹಾರ ದೊರೆತಿಲ್ಲ.
ವಿಚಿತ್ರವೆಂದರೆ ಪ್ರಾಧಿಕಾರದಲ್ಲಿನ ಗೊಂದಲ ಅಥವಾ ಶುಲ್ಕ ಪಾವತಿ ಬಗೆಗೆ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಹಾಕಿಲ್ಲ. ಚಲನ್ ಮೂಲಕ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ ಬ್ಯಾಂಕ್ ನೀಡುವ ಯುಟಿಆರ್ ಸಂಖ್ಯೆಯನ್ನು ವೆಬ್ ಪೋರ್ಟಲ್ನಲ್ಲಿ ನಮೂದಿಸಲು ಅವಕಾಶ ನೀಡಲಾಗಿಲ್ಲ. ಇದರಿಂದ ಯಾವುದೇ ವಿದ್ಯಾರ್ಥಿ ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಪ್ರತಿ ಪಡೆಯಲು ವಿಳಂಬವಾಗುತ್ತಿದೆ.
ಅಂತಿಮ ಗಡುವು ವಿಸ್ತರಿಸಬೇಕು: ಸೋಮವಾರ ಸಂಜೆ 5 ಗಂಟೆಯೊಳಗೆ ವಿದ್ಯಾರ್ಥಿ ಪ್ರವೇಶ ಪಡೆಯಬೇಕೆಂದರೆ ಶನಿವಾರ ಮಧ್ಯಾಹ್ನ 12ಗಂಟೆಯೊಳಗೆ ಶುಲ್ಕ ಪಾವತಿಸಲೇಬೇಕು. ಇಲ್ಲವಾದಲ್ಲಿ ಪ್ರವೇಶ ಪತ್ರ ಪಡೆದು ಕಾಲೇಜಿಗೆ ವರದಿ ಮಾಡಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವು ಮತ್ತೊಮ್ಮೆ ತನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿ ಅಂತಿಮ ಗಡುವನ್ನು ವಿಸ್ತರಿಸಬೇಕು.
ಗೊಂದಲಕ್ಕೆ ಕಾರಣವಾದ ಇ-ಪೇಮೆಂಟ್: ಇದೇ ಮೊದಲ ಬಾರಿಗೆ ಆನ್ಲೈನ್ ಶುಲ್ಕ ಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಪ್ರಕ್ರಿಯೆಗಳನ್ನು ಗಮನಿಸಿದರೆ ಪ್ರಾಧಿಕಾರ, ಎನ್ಐಸಿ ಹಾಗೂ ಇಂಡಿಯನ್ ಬ್ಯಾಂಕ್ ಅಧಿಕಾರಿಗಳು ಈ ಸಂಬಂಧ ಪೂರ್ಣ ಪ್ರಮಾಣದ ತಯಾರಿನಡೆಸಿಲ್ಲ. ಕಳೆದ ವರ್ಷ ಡಿಡಿ ಮೂಲಕ ಶುಲ್ಕ ಪಾವತಿಯಿದ್ದರೂ ಈ ಪ್ರಮಾಣದ ಗೊಂದಲವಾಗಿರಲಿಲ್ಲ. ಮತ್ತೊಂದೆಡೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯ ಇ-ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಲಾಗುತ್ತಿಲ್ಲ. ಪ್ರಾರಂಭಿಕ ಹಂತದಲ್ಲಿ ಇಂಡಿಯನ್ ಬ್ಯಾಂಕ್ ಹೊರತುಪಡಿಸಿ. ಉಳಿದ ಯಾವ ಬ್ಯಾಂಕ್ಗಳಲ್ಲಿಯೂ ಶುಲ್ಕ ಪಾವತಿಸುವಂತಿಲ್ಲ ಎಂದು ಪ್ರಾಧಿಕಾರ ಹೇಳಿಕೊಂಡಿತ್ತು. ಈ ಸಂಬಂಧ ಮಾಧ್ಯಮಗಳು ವಿರೋಧ ವ್ಯಕ್ತಪಡಿಸಿದಾಗ ಅಂತಿಮ ಹಂತದಲ್ಲಿ ನಿಯಮ ಸಡಿಲಿಸಿತ್ತು. ಇವತ್ತಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿಯೂ ಕೇವಲ ಒಂದು ಬ್ಯಾಂಕ್ ಮೂಲಕ ವ್ಯವಹಾರ ಹಾಗೂ ಅದರ ಮೇಲಿನ ಪ್ರೀತಿಯ ಅಗತ್ಯವೇನಿದೆ ಎನ್ನುವುದು ತಿಳಿಯುತ್ತಿಲ್ಲ.
ವಿದ್ಯಾರ್ಥಿಗಳು ಏನು ಮಾಡಬೇಕು?
- ಇ-ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸುತ್ತಿದರೆ ನೇರವಾಗಿ ಶುಲ್ಕ ಪಾವತಿಸಿ, ಕೂಡಲೇ ಪ್ರವೇಶ ಪತ್ರದ ಪ್ರತಿ ದೊರೆಯುತ್ತದೆ.
- ಈ ಸೌಲಭ್ಯ ಹೊಂದಿರದ ವಿದ್ಯಾರ್ಥಿಗಳು ಇಂಡಿಯನ್ ಬ್ಯಾಂಕ್ ಶಾಖೆಯ ಮೂಲಕ ಶುಲ್ಕ ಪಾವತಿಸಬೇಕು. ಆದರೆ ಅದಕ್ಕೆ ಸಂಬಂಧಿಸಿದ ಚಲನ್ನ್ನು ವೆಬ್ ಪೋರ್ಟಲ್ನಿಂದಲೇ ಡೌನ್ಲೋಡ್ ಮಾಡಿಕೊಳ್ಳಬೇಕು.
- ಆ ಬಳಿಕ ಬ್ಯಾಂಕ್ನಿಂದ ಯುಟಿಆರ್ ಸಂಖ್ಯೆ ಪಡೆದು ವೆಬ್ ಪೋರ್ಟಲ್ನಲ್ಲಿ ದಾಖಲಿಸಬೇಕು.
- ಚಲನ್ ಮೂಲಕ ಶುಲ್ಕ ಪಡೆದಿದ್ದರೆ ಪ್ರವೇಶ ಪ್ರತಿ ಪಡೆಯಲು 24 ಗಂಟೆ ಕಾಯಬೇಕಾಗುತ್ತದೆ.
- ನಿಮಗೆ ದೊರೆತ ಸೀಟು ಇಷ್ಟವಾಗದಿದ್ದರೆ ಶುಲ್ಕ ಪಾವತಿಸಿ ಸೀಟನ್ನು ಕಾಯ್ದಿರಿಸಿಕೊಂಡು ಮುಂದಿನ ಹಂತದ ಕೌನ್ಸೆಲಿಂಗ್ಗೆ ಹೋಗಬಹುದು.
- ಆದೇಶ ಪ್ರತಿಯಲ್ಲಿ ನಿಮ್ಮ ದಾಖಲಾತಿ ಸಂಖ್ಯೆ ಹಾಗೂ ಹೆಸರು ಸಮರ್ಪಕವಾಗಿದೆಯೆ ಎಂದು ಪರೀಕ್ಷಿಸಿಕೊಳ್ಳಿ, ಇಲ್ಲವಾದಲ್ಲಿ ಕೂಡಲೆ ಪ್ರಾಧಿಕಾರಕ್ಕೆ ದೂರು ನೀಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

