ಪ್ರಧಾನ ಸುದ್ದಿ

ಶಿಕ್ಷಕರ ಸಂಶೋಧನಾ ಅಧ್ಯಯನಕ್ಕೆ ಕೋರ್ಸ್‌ವರ್ಕ್ ಅಡ್ಡಿ!

Published On :

 ಕ.ಪ್ರ.ವಾರ್ತೆ  ಧಾರವಾಢ  ಜು.13
ಪಿಎಚ್‌ಡಿಯ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿವಿಯ ಧನ ಸಹಾಯ ಆಯೋಗ(ಯುಜಿಸಿ) ಜಾರಿಗೆ ತಂದ ಕಡ್ಡಾಯ ಕೋರ್ಸ್‌ವರ್ಕ್ ವ್ಯವಸ್ಥೆಯು ಈಗಾಗಲೇ ಸೇವೆಯಲ್ಲಿರುವ ರಾಜ್ಯದ ಸಾವಿರಾರು ಶಿಕ್ಷಕರ ಉನ್ನತ ವ್ಯಾಸಂಗಕ್ಕೆ ಮಾರಕವಾಗಿ ಪರಿಣಮಿಸಿದೆ.
ರಾಜ್ಯದ ಹಲವು ವಿವಿಗಳಲ್ಲಿ ಸಂಶೋಧನಾಸಕ್ತ ಶಿಕ್ಷಕರು ಪಿಎಚ್‌ಡಿ ಅಧ್ಯಯನಕ್ಕಾಗಿ ಬಾಹ್ಯ ಅಭ್ಯರ್ಥಿಯಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, 16 ವಾರಗಳ ಕೋರ್ಸ್‌ವರ್ಕ್ ಕಡ್ಡಾಯವಾಗಿರುವುದರಿಂದ ಸೇವೆಯಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಿಂದ ನಿಯೋಜನೆ ಇಲ್ಲದೇ ಈ ಶಿಕ್ಷಕರು ಕೋರ್ಸ್‌ವರ್ಕ್ ಪೂರೈಸುವುದು ಕಷ್ಟವಾಗಿದೆ. ಅಲ್ಲದೇ, ವಿವಿಗಳು ಕೂಡಾ ಶಿಕ್ಷಕರ ಅನುಕೂಲ ಸಮಯದಲ್ಲಿ ಕೋರ್ಸ್‌ವರ್ಕ್ ನಡೆಸಲು ಹಿಂದೇಟು ಹಾಕುತ್ತಿರುವುದು ಶಿಕ್ಷಕರ ಪಿಎಚ್‌ಡಿ ಕನಸು ಕನಸಾಗಿಯೇ ಉಳಿಯುವಂತಾಗಿದೆ.
ಕೋರ್ಸ್‌ವರ್ಕ್ ವ್ಯವಸ್ಥೆ ಜಾರಿಗೆ ತರುವಾಗ ಯುಜಿಸಿಯು ಶಿಕ್ಷಕರನ್ನು ನಿಯೋಜಿಸುವ (ಜಜಠ್ಡಡಿಛಡ್ಝ್ಟಿಟಿ) ಕುರಿತು ಸ್ಪಷ್ಟ ನಿಯಮಗಳನ್ನು ತಿಳಿಸದ ಕಾರಣ ಈಗ ಸಮಸ್ಯೆಯಾಗಿದೆ. ಈ ಹಿಂದೆ ಹಲವು ಬಾರಿ ಪ್ರಸ್ತಾಪಿಸಿದರೂ ಆಗಿನ ಉನ್ನತ ಶಿಕ್ಷಣ ಸಚಿವ ದಿ. ಡಾ.ವಿ.ಎಸ್. ಆಚಾರ್ಯ ಹಾಗೂ ಸಿ.ಟಿ.ರವಿ ಗಮನ ಹರಿಸಲಿಲ್ಲ. ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಅಲ್ಲದೇ, ಅಂದಿನ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಕಮಲಮ್ಮ ಶಿಕ್ಷಕರು ನಿಯೋಜನೆ ಪಡೆಯಲು ಅನುಕೂಲ ಮಾಡುವ ಭರವಸೆ ನೀಡಿದ್ದರು. ನಿವೃತ್ತರಾದ ಕಾರಣ ಸಮಸ್ಯೆ ಹಾಗೇ ಉಳಿದುಕೊಂಡಿದೆ. ಅತ್ತ ಸಂಶೋಧನೆಗೆ ನಿಯೋಜನೆ ನೀಡದ ಸರ್ಕಾರ, ಇತ್ತ ಸಹಕರಿಸದ ವಿವಿಗಳ ಮಧ್ಯೆ ಶಿಕ್ಷಕರು ಬಲಿಪಶುಗಳಾಗುತ್ತಿದ್ದಾರೆ. ರಾಜ್ಯ ಸರ್ಕಾರಿ ಕಾಲೇಜುಗಳ ಶಿಕ್ಷಕರ ಸಂಘವು ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರದಿರುವುದು ಸಹ ಬೇಸರ ತಂದಿದೆ ಎಂದು ಕವಿವಿಯಲ್ಲಿ ಸಂಶೋಧನೆಗೆ ಹೆಸರು ನೋಂದಾಯಿಸಿದ ಸರ್ಕಾರಿ ಪದವಿ ಕಾಲೇಜಿನ ಶಿಕ್ಷಕರೊಬ್ಬರು ಪತ್ರಿಕೆಯೊಂದಿಗೆ ನೋವು ಹೇಳಿಕೊಂಡರು.
ಲಾಭವೇನು?: ಶಿಕ್ಷಕರು ಪಿಎಚ್‌ಡಿ ಪಡೆಯುವುದರಿಂದ ಅವರಿಗೆ ಮೂರು ನಾನ್ ಕಾಂಪೌಂಡೇಬಲ್ ವೇತನ ಮುಂಬಡ್ತಿ ಬಿಟ್ಟರೆ ಹೇಳಿಕೊಳ್ಳುವ ವೈಯಕ್ತಿಕ ಲಾಭಗಳೇನೂ ಇಲ್ಲ. ಆದರೆ, ತಮ್ಮ ತಮ್ಮ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿ ಹಾಗೂ ಗುಣಮಟ್ಟ ಹೆಚ್ಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಬಹುದು. ಡಾಕ್ಟರೇಟ್ ಪದವಿ ಪಡೆದಿರುವ ಹೆಚ್ಚು ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಕಾಲೇಜುಗಳು ನ್ಯಾಕ್‌ನಿಂದ ನಿರಾಯಾಸವಾಗಿ ಹೆಚ್ಚಿನ ಅಂಕ ಪಡೆದು, ಹೆಚ್ಚಿನ ಅನುದಾನ ಪಡೆಯಬಹುದು. ಪ್ರಾಚಾರ್ಯ ಹಾಗೂ ಪ್ರಾಧ್ಯಾಪಕ ಪದೋನ್ನತಿಗೂ ಪಿಎಚ್‌ಡಿ ಬೇಕು.
ಶಿಕ್ಷಣ ಸಚಿವರು ಗಮನಿಸುವವರೇ?: ಪಿಎಚ್‌ಡಿಗೆ ಕೋರ್ಸ್‌ವರ್ಕ್ ಅಡಚಣೆಯನ್ನು ನಿವಾರಿಸುವಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸದಿರುವುದು ಶಿಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಪ್ರಾಮಾಣಿಕ ಪ್ರಯತ್ನದಿಂದ ಸಂಶೋಧನೆ ಮಾಡಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿಕೊಂಡು ವಿದ್ಯಾರ್ಥಿಗಳ ಹಾಗೂ ಇಲಾಖೆ ಏಳ್ಗೆಗೆ ಶ್ರಮಿಸಲು ಮುಂದಾಗಿರುವ ಉತ್ಸಾಹಿ ಶಿಕ್ಷಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಈ ಬಗ್ಗೆ ಗಮನ ವಹಿಸುತ್ತಾರಾ?
ಏನಿದು ಕೋರ್ಸ್‌ವರ್ಕ್?
ಪದವಿ ಹಾಗೂ ವಿವಿ ಮಟ್ಟದಲ್ಲಿ ಶಿಕ್ಷಕರಾಗಲು ರಾಷ್ಟ್ರೀಯ ಅರ್ಹತಾ(ನೆಟ್) ಪರೀಕ್ಷೆಯಿಂದ ಪಿಎಚ್‌ಡಿ ಪದವೀಧರರಿಗೆ ವಿನಾಯ್ತಿ ನೀಡುವುದೇ ತಡ ಪಿಎಚ್‌ಡಿಗೆ ಬಲು ಬೇಡಿಕೆ ಬಂತು. ಇದರಿಂದ ಸಂಶೋಧನಾ ಗುಣಮಟ್ಟ ಏಕಾಏಕಿ ಕುಸಿಯಿತು. ಈ ಹಿನ್ನೆಲೆಯಲ್ಲಿ ಯುಜಿಸಿಯು 2009ರಿಂದ ಪಿಎಚ್‌ಡಿ ಅಥವಾ ಎಂಫಿಲ್ ಅಧ್ಯಯನಕ್ಕೆ ಕೋರ್ಸ್‌ವರ್ಕ್ ಕಡ್ಡಾಯ ಮಾಡಿತು. ಈ ನಿಯಮದ ಅನ್ವಯ ಸಂಶೋಧನೆಯನ್ನು ಬಾಹ್ಯವಾಗಿ ಅಥವಾ ನಿಯಮಿತವಾಗಿ ಕೈಗೊಳ್ಳುವ ಅಭ್ಯರ್ಥಿ 16 ವಾರಗಳ ಕಾಲ ಕಡ್ಡಾಯವಾಗಿ ಪೂರ್ವ ಸಂಶೋಧನಾ ಕಾರ್ಯವನ್ನು ವಿವಿಯಲ್ಲಿದ್ದು ಪೂರೈಸಬೇಕು. ಈ ವೇಳೆ ಸಂಶೋಧನಾ ವಿಧಾನಗಳು, ಪರಿಸರ ಅಧ್ಯಯನ ಮತ್ತು ಕಂಪ್ಯೂಟರ್ ಜ್ಞಾನ ಹಾಗೂ ಸಂಶೋಧನಾ ವಿಷಯದ ಕುರಿತು ಮೂರು ಪತ್ರಿಕೆಗಳಿಗೆ ಸಂಬಂಧಿಸಿದಂತೆ ತರಗತಿಗಳು ನಡೆಯುತ್ತವೆ. ಶೇ. 75ರಷ್ಟು ಹಾಜರಾತಿ ಕಡ್ಡಾಯ. ಕೋರ್ಸ್‌ವರ್ಕ್ ಅಂತಿಮ ಹಂತದಲ್ಲಿ ಇರುವ ಪರೀಕ್ಷೆ ಉತ್ತೀರ್ಣವಾಗುವುದು ಸಹ ಕಡ್ಡಾಯ. ಕೋರ್ಸ್‌ವರ್ಕ್‌ನ್ನು ಈ ರೀತಿ ಯಶಸ್ವಿಯಾಗಿ ಪೂರೈಸಿದ ಬಳಿಕವಷ್ಟೇ ನಿಜವಾದ ಸಂಶೋಧನಾ ಅಧ್ಯಯನ ಆರಂಭವಾಗುತ್ತದೆ.
ಪಿಎಚ್‌ಡಿ ಕೈಗೊಳ್ಳುವವರು ಶಿಕ್ಷಕರೇ ಇರಲಿ, ವಿದ್ಯಾರ್ಥಿಗಳೇ ಇರಲಿ ಯುಜಿಸಿ ನಿಯಮಾವಳಿ ಪ್ರಕಾರ 16 ವಾರ ಕೋರ್ಸ್‌ವರ್ಕ್ ಕಡ್ಡಾಯ. ಶಿಕ್ಷಕರ ಹಿತದೃಷ್ಟಿಯಿಂದ ಶನಿವಾರ ಹಾಗೂ ಭಾನುವಾರ ಕೋರ್ಸ್‌ವರ್ಕ್ ಮುಗಿಸಬೇಕೆಂದರೆ ವಿವಿಯ ಪ್ರಾಧ್ಯಾಪಕರು ರಜಾ ದಿನಗಳಲ್ಲಿ ಲಭ್ಯವಾಗೋದಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಶಿಕ್ಷಕರಿರುವ ಸಂಶೋಧನಾ ವಿದ್ಯಾರ್ಥಿಗಳು ಸರ್ಕಾರದ ಆದೇಶದೊಂದಿಗೆ ನಿಯೋಜನೆ ಪಡೆದುಕೊಂಡೇ ಬರಬೇಕು. ಇಲ್ಲದಿದ್ದರೆ ಅವರ ಪದವಿ ಸಿಂಧುವಾಗುವುದಿಲ್ಲ.
- ಡಾ. ಎಚ್.ಬಿ. ವಾಲೀಕಾರ, ಕರ್ನಾಟಕ ವಿವಿ ಕುಲಪತಿ

ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.