ಪ್ರಧಾನ ಸುದ್ದಿ

ಅಮೆರಿಕದಲ್ಲಿ ಅರಳಲಿದೆ ಶ್ವೇತಾ ಕುಸುಮ ಬಾಲೆ

Published On :

ಮುಂಬೈ: ಇದು ನಿಜಕ್ಕೂ ಅಚ್ಚರಿಯೂ ಹೌದು. ಅದೃಷ್ಟವೂ ಹೌದು.  ಕೆಂಪು ದೀಪ ಪ್ರದೇಶದಲ್ಲಿ ಹುಟ್ಟಿ ಬೆಳೆದ ಯುವತಿಯೊಬ್ಬಳಿಗೆ ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಅವಕಾಶ ಸಿಕ್ಕಿದರೆ ಹೇಗಿರುತ್ತದೆ? ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಶ್ವೇತಾ ಕಟ್ಟಿಗೆ ಇಂಥ ಅದೃಷ್ಟ ಪ್ರಾಪ್ತಿಯಾಗಿದೆ. ವೇಶ್ಯಾ ಗೃಹದಲ್ಲಿ ಹುಟ್ಟಿ ಬೆಳೆದ ಈಕೆಯ ಬಾಲ್ಯ ಅತ್ಯಂತ ಕಠಿಣ ಪರಿಸ್ಥಿತಿಯಿಂದ ಕೂಡಿದ್ದಾಗಿತ್ತು. ಇದರ ಹೊರತಾಗಿಯೂ ಆಕೆ ತನ್ನದೇ ಪರಿಸ್ಥಿತಿಯಲ್ಲಿ ಬೆಳೆದ ಮಕ್ಕಳಿಗಾಗಿ ಹೋರಾಟ ನಡೆಸಿದ್ದಾಳೆ. ಅದಕ್ಕಾಗಿಯೇ ಅಮೆರಿಕದ 'ನ್ಯೂಸ್‌ವೀಕ್‌' ನಿಯತಕಾಲಿಕ ಆಕೆಯನ್ನು ಸಂದರ್ಶಿಸ್ಸಿತ್ತು. ಮಲಾಲಾ ಯೂಸುಫ್‌ಜಾಯ್ ಜತೆ ಶ್ವೇತಾಳ ಸಂದರ್ಶನವೂ ಪ್ರಕಟವಾಗಿತ್ತು.  
ಕಠಿಣದ ದಿನಗಳು: ವಾಣಿಜ್ಯ ನಗರಿಯ ವೇಶ್ಯಾಗೃಹವೊಂದರಲ್ಲಿ ಹುಟ್ಟಿ ಬೆಳೆದ ಶ್ವೇತಾ ಕಟ್ಟಿಯ ಬಾಲ್ಯ ಇತರ ಸಾಮಾನ್ಯ ಬಾಲಕಿಯರಂತೆ ಇರಲೇ ಇಲ್ಲ. ಮಲ ತಂದೆ ಮತ್ತು ಭಾವನ ಲೈಂಗಿಕ ಕಿರುಕುಳ ಅವಳನ್ನು ಹಿಂಡಿ ಹಿಪ್ಪೆ ಮಾಡಿತ್ತು.  

12 ವರ್ಷದ ಬಾಲಕಿಯಾಗಿದ್ದಾಗ ಈ ಘಟನೆ ನಡೆದಿತ್ತು. ಆದರೆ, ಅದನ್ನು ಮತ್ತೊಬ್ಬರ ಜತೆ ಹೇಳಲು ತನಗೆ ಹೆದರಿಕೆಯಾಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ವೇಶ್ಯಾ ಗೃಹವೊಂದರಲ್ಲಿ ಕಸಗುಡಿಸುವ ಕೆಲಸ ಮಾಡುವ ತಮ್ಮ ತಾಯಿ ಕೂಡ ಈ ಕ್ರೌರ್ಯ ಸಹಿಸಿಕೊಂಡಿದ್ದರು ಎಂದು ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಹೇಳಲೇ ಬೇಕಾಯಿತು: ಸಹನೆಯ ಕಟ್ಟೆ ಮೀರಿ ದೌರ್ಜನ್ಯ ಮುಂದುವರಿದಾಗ 'ಅಪ್ನೇ ಆಪ್‌' ಎಂಬ ಸಂಘಟನೆ ನಡೆಸುತ್ತಿದ್ದ ತರಗತಿಯ ಟೀಚರ್‌ಗೆ ಶ್ವೇತಾ ಮಾಹಿತಿ ನೀಡಿದರು. ಸದ್ಯ ಅವರು ಆಶ್ರಯ ಪಡೆದಿರುವ 'ಕ್ರಾಂತಿ' ಎಂಬ ಎನ್‌ಜಿಓ ಅವರ ನೆರವಿಗೆ ಬಂತು. ಕಿರುಕುಳದಿಂದ ಹೊರಬರಲು ಸಂಘಟನೆ ಹಲವಾರು ಬಾರಿ ಆಪ್ತಸಲಹೆ ನಡೆಸಲಾಯಿತು. ಅಂತಿಮವಾಗಿ ಕಿರುಕುಳದ ವಿರುದ್ಧ ಸಿಡಿದೆದ್ದ ಅವರು, ತನ್ನ ಮಲತಂದೆ ಮತ್ತು ಭಾವನಿಗೆ ಕಿರುಕುಳ ನೀಡಿದರೆ ಸಹಿಸಲು ಸಾಧ್ಯವಿಲ್ಲ ಎಂದರು.
ಮನಃಶಾಸ್ತ್ರದಲ್ಲಿ ಪದವಿ: ಇದೀಗ ನ್ಯೂಯಾರ್ಕ್‌ನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಪಡೆಯಲು ವಿದ್ಯಾರ್ಥಿ ವೇತನ ಪಡೆದಿರುವ ಶ್ವೇತಾಕಟ್ಟಿ ಮುಂದಿನ ತಿಂಗಳ 1ನೇ ತಾರೀಕಿನಂದು ಮುಂಬೈನಿಂದ ವಿಮಾನ ಏರಲಿದ್ದಾರೆ. ವಿದ್ಯಾಭ್ಯಾಸ ಮುಗಿದ ಬಳಿಕ ಮುಂಬೈಗೆ ಹಿಂತಿರುಗಿ ವೇಶ್ಯಾವಾಟಿಕೆಗಳಲ್ಲಿ ಇರುವವರಿಗೆ ನೆರವಾಗುವುದೇ ತಮ್ಮ ಉದ್ದೇಶ ಎಂದರು. ತಮ್ಮ ಸಾಧನೆಗೆ ತಾಯಿಯೇ ಕಾರಣ. ಅವರ ಸಲಹೆ, ನೆರವು ಇಲ್ಲದೇ ಇರುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಶ್ವೇತಾ ಅವರ ವಿನಮ್ರ ನುಡಿ. ತನ್ನ ಹಿನ್ನೆಲೆಯಿಂದಾಗಿ ಪಾಸ್‌ಪೋರ್ಟ್ ಪಡೆಯಲು ಕೂಡ ಕಷ್ಟವಾಗಿತ್ತು ಎಂದು ಅವರು ಹೇಳಿದ್ದಾರೆ.

ವಿದ್ಯಾಭ್ಯಾಸವೋ, ವೃತ್ತಿಯೋ?
ತಾವು ಇದ್ದ ಪರಿಸರದಲ್ಲಿ ರಾಧಾ ಎಂಬುವರು ತಮಗೆ ಆತ್ಮೀಯರಾಗಿದ್ದರು. ಅವರು ವಿದ್ಯೆ ಕಲಿತು ಉತ್ತಮ ವ್ಯಕ್ತಿಯಾಗುವಂತೆ ಅಥವಾ 'ವೃತ್ತಿ' ಮುಂದುವರಿಸುವಂತೆ ಸಲಹೆ ನೀಡಿದ್ದರು. ಆದರೆ ತಾನು ವಿದ್ಯೆ ಕಲಿತು ಉತ್ತಮ ದಾರಿ ಕಂಡುಕೊಳ್ಳಲು ನಿಶ್ಚಯಿಸಿದ್ದಾಗಿ ಶ್ವೇತಾ ಕಟ್ಟಿ ತಿಳಿಸಿದರು. 'ಕ್ರಾಂತಿ' ಸಂಘಟನೆಯಲ್ಲಿರುವಾಗಲೇ ತನ್ನಂತೆಯೇ ಇರುವವರಿಗಾಗಿಯೇ ಹೋರಾಟ ಆರಂಭಿಸಿದರು. ಜತೆಗೆ ಬಿಕಾಂನಲ್ಲಿ ಪದವಿ ಪಡೆದರು.

ನನಗೆ ತುಂಬಾ ಸಂತೋಷವಾಗುತ್ತಿದೆ. ಕಷ್ಟದ ದಿನಗಳು ಮುಗಿದು ಹೊಸ ದಿನಗಳು ಆರಂಭವಾಗಿದೆ. ವಿದ್ಯಾಭ್ಯಾಸದ ಬಳಿಕ ಸ್ವದೇಶಕ್ಕೆ ಬಂದು ಕೆಂಪು ದೀಪ ಪ್ರದೇಶಗಳಲ್ಲಿ ಕೌನ್ಸೆಲಿಂಗ್ ಕೇಂದ್ರಗಳನ್ನು ಆರಂಭಿಸುವೆ.
-ಶ್ವೇತಾ ಕಟ್ಟಿ

 ಕರ್ನಾಟಕದ ನಂಟು ಹೇಗೆ?
ಶ್ವೇತಾ ಅವರ ಕುಟುಂಬದ ಸದಸ್ಯರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದಲ್ಲಿದ್ದಾರೆ. ಅವರ ಅಜ್ಜ (ತಾಯಿಯ ತಂದೆ) ದಶಕಗಳ ಹಿಂದೆಯೇ ಮುಂಬೈಗೆ ಹೋಗಿ, ಅಲ್ಲಿಯೇ ಬದುಕು ಕಟ್ಟಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.