ಬೆಂಗಳೂರು ಬೆಳಿಯಲ್ಲ ನೋಡಾ...
ವಿಧಾನಪರಿಷತ್: ಬೆಂಗಳೂರಿನ ಯದ್ವಾ- ತದ್ವಾ ಬೆಳವಣಿಗೆಗೆ ನಿಯಂತ್ರಣ ಹೇರುತ್ತೇವೆ!
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ನಲ್ಲಿ ಗುರುವಾರ ಈ ಹೇಳಿಕೆ ನೀಡಿದ್ದಾರೆ.
ಲಂಗು ಲಗಾಮಿಲ್ಲದೇ ಬೆಂಗಳೂರು ನಗರ ಬೆಳೆಯುತ್ತಿದೆ. ವಿದ್ಯುತ್, ನೀರು ಹಾಗೂ ಇತರ ಮೂಲಸೌಕರ್ಯ ಒದಗಿಸುವುದು ಸವಾಲಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೀರು ಸೌಲಭ್ಯವಿಲ್ಲದ ಅಪಾರ್ಟ್ಮೆಂಟ್ಗಳ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ. ಇದಲ್ಲದೇ ಬಿಎಂಆರ್ಡಿಎ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಜೆಡಿಎಸ್ ಸದಸ್ಯ ಎಂ. ಶ್ರೀನಿವಾಸ್ ಮತ್ತು ಬಿಜೆಪಿಯ ಭಾನುಪ್ರಕಾಶ್ ಅವರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು.
ಕಳೆದ 1991ರಿಂದ ತಾತ್ಕಾಲಿಕ ಯೋಜನೆಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಸಿಡಿಪಿಯನ್ನು ರೂಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇದೇ ಕಾರಣದಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಪ್ರಮಾಣದ ಭೂ ಪರಿವರ್ತನೆಯಾಯಿತು. ಭೂ ಪರಿವರ್ತನೆ ಮಾಡುವ ಉದ್ದೇಶದಿಂದಲೇ ಸಿಡಿಪಿಯನ್ನು ರೂಪಿಸಿಲ್ಲ ಎಂಬ ಸಂಶಯವಿದೆ. ಆದರೆ ನನ್ನ ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಯಾವುದೆ ಕಾರಣಕ್ಕೂ ಭೂ ಪರಿವರ್ತನೆಗೆ ಅವಕಾಶವಿಲ್ಲ. ಇಂತಹ ಕಠಿಣ ಕ್ರಮದಿಂದ ಮಾತ್ರ ಬೆಂಗಳೂರಿನ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ದೆಹಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಆದೇಶಿಸಿದಂತೆ ಯಾವುದೆ ಹೊಸ ಅಪಾರ್ಟ್ಮೆಂಟ್ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಅವಕಾಶ ನೀಡಬಾರದು. ಯಾವುದೆ ಮೂಲಭೂತ ಸೌಕರ್ಯವಿರದಿದ್ದರೂ ಅಪಾರ್ಟ್ಮೆಂಟ್ಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬೆಂಗಳೂರಿನ ಸಂಚಾರ ವ್ಯವಸ್ಥೆ ನಿಯಂತ್ರಿಸಲಾಗದಷ್ಟು ಹದಗೆಡುತ್ತಿದೆ. ಇತರ ಮೂಲಭೂತ ಸೌಕರ್ಯ ಒದಗಿಸುವುದು ಕಷ್ಟವಾಗಿದೆ ಎಂದು ಜೆಡಿಎಸ್ನ ಎಂ.ಸಿ.ನಾಣಯ್ಯ ಸರ್ಕಾರದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾಣಯ್ಯ ಅವರ ಅಭಿಪ್ರಾಯಕ್ಕೆ ಸಹಮತವಿದೆ. ಅಪಾರ್ಟ್ಮೆಂಟ್ಗಳ ನಿಯಂತ್ರಣ ಹಾಗೂ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿ ನಗರಾಭಿವೃದ್ಧಿ ಯೋಜನೆ ರೂಪಿಸಲಾಗುವುದು. ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಕೆಯಾಗಿದ್ದ ಸಿಡಿಪಿಯನ್ನು ಹಿಂತಿರುಗಿಸಿ ಇವೆಲ್ಲ ಅಂಶಗಳನ್ನು ಸೇರಿಸಿ ಕಳುಹಿಸುವಂತೆಅಧಿಕಾರಗಳಿಗೆ ಸೂಚಿಸಲಾಗಿದೆ. ಸಧ್ಯದಲ್ಲಿಯೇ ಈ ಕುರಿತಂತೆ ಸಮಗ್ರ ನಿಯಮ ರೂಪಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಮಸ್ಯೆಗೆ ಯಾರು ಕಾರಣ?: ಈ ಸಮಸ್ಯೆಗೆ ಯಾರು ಕಾರಣ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರತಿಪಕ್ಷ ಸದಸ್ಯರನ್ನು ಕೆಣಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡ, ನಾವು ಕೆಲಸ ಮಾಡಿಲ್ಲ ಎಂದು ನಿಮ್ಮನ್ನು ಆಡಳಿತ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ನೀವು ಮತ್ತೆ ಅದೇ ಹೇಳಿಕೆ ನೀಡಿದರೆ ಹೇಗೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ಹಿಂದಿನ ಸರ್ಕಾರ ಭೂ ಪರಿವರ್ತನೆ ಮಾಡದೆ ನಗರದ ಸಮಸ್ಯೆಗಳನ್ನು ಇನ್ನಷ್ಟು ಜಟಿಲಗೊಳಿಸಿತು. ನಮ್ಮ ಸರ್ಕಾರ ಮತ್ತದೇ ಕಾರ್ಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
3 ವರ್ಷದಲ್ಲಿ 2553 ಅಪಾರ್ಟ್ಮೆಂಟ್
ಕಳೆದ 3 ವರ್ಷಗಳಲ್ಲಿ 2553 ಅಪಾರ್ಟ್ಮೆಂಟ್ಗಳ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಮಳೆ ನೀರು ಕೊಯ್ಲನ್ನು ಸಮರ್ಪಕವಾಗಿ ಅಳವಡಿಸದಿರುವುದು ಗಮನಕ್ಕೆ ಬಂದಿದೆ. ಮತ್ತೊಂದೆಡೆ ಕುಡಿಯುವ ನೀರಿನ ಸೌಲಭ್ಯವೂ ದೊರೆತಿಲ್ಲ. ರಾಜ್ಯ ಸರ್ಕಾರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಕಠಿಣ ನಿಯಮ ರೂಪಿಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ಹೇಳಿದರು.
ಬಡಾವಣೆ ಅಭಿವೃದ್ಧಿ
ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕಾಗಿ 4813 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡು ಅಂತಿಮ ಹಂತದಲ್ಲಿ ಹಿಂದಿನ ಸರ್ಕಾರ 770 ಎಕರೆಯನ್ನು ಡಿನೋಟಿಫೈ ಮಾಡಿದೆ. 1679 ಎಕರೆ ಭೂಮಿಯ ಸ್ವಾಧೀನಕ್ಕೆ ರೈತರಿಗೆ 401 ಕೋಟಿ ಪರಿಹಾರ ಹಣ ನೀಡಲಾಗಿದೆ. ಇನ್ನುಳಿದ ಕಂತುಗಳನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಲಾಗುವುದು. ಇದಲ್ಲದೇ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಕಾಯಕಲ್ಪ ಒದಗಿಸಿ ತ್ವರಿತವಾಗಿ ನಿವೇಶನ ಹಂಚಲಾಗುವುದು ಎಂದು ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಮುಖ್ಯಮಂತ್ರಿ ತಿಳಿಸಿದರು.
ಜಿ- ಕೆಟಗರಿ ವರದಿ ಆಧರಿಸಿ ಕ್ರಮ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಜಿ-ಕೆಟಗೆರಿಯಲ್ಲಿ 906 ನಿವೇಶನಗಳನ್ನು ಹಂಚಲಾಗಿದೆ ಎಂದು ಗೋ.ಮಧುಸೂದನ್ ಅವರ ಚುಕ್ಕೆರಹಿತ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಎಸ್.ಎಂ. ಕೃಷ್ಣ ಆಡಳಿತಾವಧಿಯಲ್ಲಿ 334, ಧರ್ಮಸಿಂಗ್ ಸಿಎಂ ಆಗಿದ್ದಾಗ 76, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 286 ಹಾಗೂ ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ 210 ನಿವೇಶನಗಳನ್ನು ಜಿ- ಕೆಟಗೆರಿ ಅಡಿಯಲ್ಲಿ ಹಂಚಲಾಗಿದೆ. ಆದರೆ ಸುಳ್ಳು ಮಾಹಿತಿ ನೀಡಿ ನಿವೇಶನ ಪಡೆದಿದ್ದಾರೆ, ಹಂಚಿಕೆಯಲ್ಲಿ ನಿಯಮ ಪಾಲಿಸಿಲ್ಲ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ನ್ಯಾಯಮೂರ್ತಿ ಜಿ. ಪದ್ಮರಾಜ್ ಅವರ ಅಧ್ಯಕ್ಷತೆಯಲ್ಲಿ ವಿಚಾರಣೆ ಆಯೋಗ ರಚಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

