ವಿಷಪೂರಿತ ಆಹಾರ ಸೇವನೆ ; 37 ವಿದ್ಯಾರ್ಥಿಗಳು ಅಸ್ವಸ್ಥ

ಕನ್ನಡಪ್ರಭ ವಾರ್ತೆ ಅಥಣಿ ಜು.19
ಉಪಾಹಾರ ಸೇವಿಸಿದ 37 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮರಗುಂಡಿ ಗ್ರಾಮದ ಮೊರಾರ್ಜಿ ಮತ್ತು ಚನ್ನಮ್ಮ ವಸತಿ ಶಾಲೆಯಲ್ಲಿ ಶುಕ್ರವಾರ ನಡೆದಿದೆ. ಅಸ್ವಸ್ಥಗೊಂಡವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ದಿನ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲು ವೈದ್ಯರಿಗೆ ಸೂಚಿಸಲಾಗಿದೆ. ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಉಪಾಹಾರಕ್ಕೆ ಚಿತ್ರಾನ್ನ ನೀಡಲಾಗಿತ್ತು. ಅದನ್ನು ಸೇವಿಸುತ್ತಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡು, ವಾಂತಿ ಭೇದಿ ಆರಂಭವಾಯಿತು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಚನಾ ತಂಗಡಿ, ಸಿದ್ದು ಗುದಣಿ ಹೇಳಿದರು. ಅನ್ನ ಸರಿಯಾಗಿ ಬೆಂದಿರಲಿಲ್ಲ. ಅದರ ಜೊತೆ ನಿನ್ನೆ ಉಳಿದ, ಹಳಸಿದ ಅನ್ನವನ್ನೂ ಸೇರಿಸಲಾಗಿತ್ತು. ಇದರಿಂದ ಈ ಅನಾಹುತ ಸಂಭವಿಸಿದೆ ಎಂದು ಕೆಲವು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ಆಗಮಿಸಿದ ಪೋಷಕರು, ತಮ್ಮ ಮಕ್ಕಳನ್ನು ಜತೆಗೆ ಕರೆದೊಯ್ದರು.
ವ್ಯತ್ಯಾಸವಾಗಿಲ್ಲ: ಆಹಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳಪೆ, ವಿಷಪೂರಿತ ಆಹಾರವೂ ಇರಲಿಲ್ಲ. ಕಳೆದೆರಡು ದಿನಗಳಿಂದ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಪೋಪಹಾರ ಸೇವಿಸಿದ ಬಳಿಕ ಅವರು ವಾಂತಿ ಮಾಡಿಕೊಂಡರು. ಅದನ್ನು ನೋಡಿದ ಉಳಿದ ವಿದ್ಯಾರ್ಥಿಗಳೂ ಅಸ್ವಸ್ಥರಾದರು ಎಂದು ಶಾಲೆಯ ಪ್ರಭಾರಿ ಪ್ರಾಚಾರ್ಯ ಶಶಿಕಾಂತ ಶಿವನೂರ, ವಾರ್ಡನ್ ಪ್ರಕಾಶ ಕಾಂಬಳೆ ಸಮಜಾಯಿಶಿ ನೀಡಿದರು. ಆದರೂ ವಿದ್ಯಾರ್ಥಿಗಳು, ಪಾಲಕರು ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಹಾರದಲ್ಲಿ ವ್ಯತ್ಯಾಸವಾಗಿದೆ ಎಂದೇ ಆರೋಪಿಸಿದರು. ಮೇಲ್ನೋಟಕ್ಕೆ ಆಹಾರದಲ್ಲಿಯೇ ವ್ಯತ್ಯಾಸವಾಗಿರುವುದು ಕಂಡು ಬರುತ್ತಿದೆ. ಕಲಬೆರಕೆ ಅಥವಾ ಅಶುದ್ಧ ಆಹಾರ ಸೇವಿಸಿರುವುದು ಕಾಣುತ್ತಿದೆ. ಈ ಕುರಿತು ಸಂಪೂರ್ಣವಾದ ಪರಿಶೀಲನೆ, ತನಿಖೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ವೈದ್ಯೆ ಡಾ. ಪುಷ್ಪಲತಾ ಸುಣ್ಮದಕಲ್ಲ ಸ್ಪಷ್ಟಪಡಿಸಿದ್ದಾರೆ.
ಪ್ರಾಚಾರ್ಯರ ತರಾಟೆ: ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ವಿ.ವಿ. ಕುಲಕರ್ಣಿ, ಶಾಲೆಯ ಪ್ರಭಾರಿ ಪ್ರಾಚಾರ್ಯ ಶಶಿಕಾಂತ ಶಿವನೂರ ಹಾಗೂ ವಾರ್ಡನ್ ಅವರನ್ನು ತರಾಟೆಗೆ ತೆಗೆದುಕೊಂಡು, ಎಚ್ಚರಿಕೆಯಿಂದ, ಆಹಾರವನ್ನು ಪರಿಶೀಲಿಸಿ, ಮಕ್ಕಳಿಗೆ ನೀಡಲು ಸೂಚಿಸಿದರು. ಮಕ್ಕಳ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂದು ತರಾಟೆಗೆ ತೆಗೆದುಕೊಂಡರು. ಶಾಲೆಯ ಆವರಣದಲ್ಲಿ 108 ಆ್ಯಂಬುಲೆನ್ಸ್ ಅನ್ನು ತಾತ್ಕಾಲಿಕವಾಗಿ ಇಡಲಾಗಿದ್ದು, ಅಗತ್ಯ ಔಷಧ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಗುಣಮುಖರಾಗುವ ತನಕ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದಾರೆ.
ಇದು ವಿಷಪೂರಿತ ಆಹಾರ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪ್ರಂೋಗಾಲಂುದಲ್ಲಿ ಪರೀಕ್ಷಿಸಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
- ಡಾ. ಜಗದೀಶ ನುಚ್ಚಿನ, ಜಿಲ್ಲಾ ಆಹಾರ ಪರಿವೀಕ್ಷಕ ವೈದ್ಯ
ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಒಳ್ಳೆಂು ಆಹಾರ ಸಿಗುತ್ತಿಲ್ಲ. ಮಕ್ಕಳು, ಪಾಲಕರೊಂದಿಗೆ ಸಿಬ್ಬಂದಿ ಸರಿಂಾಗಿ ವರ್ತಿಸುತ್ತಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ.
- ಮಹಾದೇವ ಕೆಂಚಪ್ಪ ಹಲ್ಯಾಳ, ಪಾಲಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


