ಪ್ರವಾಹ, ಬೆಳೆಹಾನಿ

ಕನ್ನಡಪ್ರಭ ವಾರ್ತೆ ಬೆಂಗಳೂರು ಜು.21
ರಾಜ್ಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮುಂಗಾರು ಮಳೆಯ ಅಬ್ಬರಕ್ಕೆ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ತೀರ ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಕೃಷ್ಣಾ, ಡೋಣಿ ನದಿ ಸಂಗಮದಲ್ಲಿ ಮೀನುಗಾರನೊಬ್ಬ ಜಲಸಮಾಧಿಯಾಗಿದ್ದಾನೆ. ವಿವಿಧೆಡೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ.
ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ತಟದ ಹೊನ್ನಾಳಿ, ಹರಿಹರ ಹಾಗೂ ಹರಪನಹಳ್ಳಿ ತಾಲೂಕಿನ ಹಲವಾರು ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದೆ. ಹೊನ್ನಾಳಿ ಪಟ್ಟಣದ ಬಂಬೂ ಬಜಾರ್, ಬಾಲರಾಜ ಘಾಟ್ ಬಡಾವಣೆ, ಹರಿಹರ ತಾಲೂಕಿನ ಉಕ್ಕಡಗಾತ್ರಿ, ಸಾರಥಿ, ಚಿಕ್ಕಬಿದರೆ, ಪಾಳ್ಯ, ದೀಟೂರು, ಹರಪನಹಳ್ಳಿ ತಾಲೂಕಿನ ಹಲುವಾಗಲು, ಗರ್ಭಗುಡಿ, ತಾವರಗೊಂದಿ. ನಿಟ್ಟೂರು, ನಿಟ್ಟೂರು ಬಸ್ಸಾಪುರ, ನಂದ್ಯಾಲ ಸೇರಿದಂತೆ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಉಕ್ಕಡಗಾತ್ರಿ, ಸಾರಥಿ, ಚಿಕ್ಕಬಿದರೆ, ದಾವಣಗೆರೆ- ನಂದಿಗುಡಿ, ಹರಪನಹಳ್ಳಿ ತಾಲೂಕಿನ ಗರ್ಭಗುಡಿ- ಹಲವಾಗಲು ನಡುವಿನ ಸಂಪರ್ಕ ಕಡಿತಗೊಂಡಿದೆ. ಗರ್ಭಗುಡಿ ಗ್ರಾಮದ ಜನತೆ ಸಂಪರ್ಕಕ್ಕೆ ದೋಣಿ ಬಳಕೆ ಮಾಡುತ್ತಿದ್ದಾರೆ. ತುಂಗಾ ಅಣೆಕಟ್ಟೆಯಿಂದ ಹೆಚ್ಚಿನ ನೀರು ಬಿಡುತ್ತಿರುವುದು ಹಾಗೂ ದಾವಣಗೆರೆ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.
ವಿದ್ಯುತ್ ವ್ಯತ್ಯಯ: ಚಿಕ್ಕಮಗಳೂರು ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು, ಸಣ್ಣ ಪುಟ್ಟ ಜಲಪಾತಗಳು ಕೂಡ ಮೈದುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹಲವೆಡೆ ಸಂಪರ್ಕ ಕಡಿತಗೊಂಡಿದೆ.
ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಕೊಪ್ಪ, ಶೃಂಗೇರಿ, ಚಿಕ್ಕಮಗಳೂರಿನಲ್ಲಿ ಕರೆಂಟ್ ಇಲ್ಲದೇ ಪರದಾಡುವಂತಾಗಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಬಸ್ತಿಕೊಪ್ಪ ಗ್ರಾಮ ಸಂಪರ್ಕ ಕಡಿದುಕೊಂಡಿದೆ.
ಕೊಡಗು ಜಿಲ್ಲೆಯಲ್ಲಿ ಇಂದು ರಜೆ: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಒಳಹರಿವು ಹೆಚ್ಚಾಗಿದ್ದು ಜಲಾಶಯ ಭರ್ತಿಗೆ ಕೇವಲ 4 ಅಡಿ ಬಾಕಿ ಇದೆ. 124.80 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಭಾನುವಾರ 120 ಅಡಿ ನೀರು ಸಂಗ್ರಹವಾಗಿದೆ. ಭಾಗಮಂಡಲ, ತಲಕಾವೇರಿ, ಮಡಿಕೇರಿ ಸುತ್ತಮುತ್ತ ಮಳೆ ಜೋರಾಗಿದ್ದರಿಂದ ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. 13 ಗಂಟೆಗಳ ಬಳಿಕ ಕುಮಾರಧಾರ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆವರೆಗೂ ಬೆಂಗಳೂರು, ಹಾಸನ, ಮಂಗಳೂರು, ಧರ್ಮಸ್ಥಳಗಳಿಂದ ಕುಕ್ಕೆಗೆ ಆಗಮಿಸಿದ್ದ ಭಕ್ತರು ಅನ್ನ, ನೀರು ಇಲ್ಲದೆ ಪರದಾಡಿದರು. ಮಂಗಳೂರಿನಲ್ಲಿ ಮಳೆ ಅಬ್ಬರಕ್ಕೆ ನೇತ್ರಾವತಿ, ಪಲ್ಗುಣಿ ನದಿಗಳು ಉಕ್ಕಿ ಹರಿಯುತ್ತಿದ್ದು ತೀರ ಪ್ರದೇಶದಲ್ಲಿ ನೆರೆ ಭೀತಿ ಎದುರಾಗಿದೆ. ಉಡುಪಿ ತಾಲೂಕಿನ ತೆಂಕಗ್ರಾಮದಲ್ಲಿ ಕಡಲ್ಕೊರೆತದಿಂದ 49 ತೆಂಗಿನ ಮರಗಳು ಕೊಚ್ಚಿ ಹೋಗಿವೆ.
ಮೀನುಗಾರ ಜಲಸಮಾಧಿ: ಬಿಜಾಪುರ ಜಿಲ್ಲೆ ಆಲಮಟ್ಟಿಯ ಲಾಲ್‌ಬಹಾದ್ದುರ್ ಶಾಸ್ತ್ರಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ಡ್ಯಾಂ ಭರ್ತಿಗೆ 1 ಮೀಟರ್ ಬಾಕಿ ಇದೆ. ಹೀಗಾಗಿ 23 ಕ್ರೇಸ್ಟ್ ಗೇಟ್‌ಗಳ ಮೂಲಕ 1,29,000 ಕ್ಯುಸೆಕ್ ನೀರು ಹರಿಯಬಿಡಲಾಗುತ್ತಿದೆ. ಇದರಿಂದ ಮಳೆ ಇಲ್ಲದಿದ್ದರೂ ಯಾದಗಿರಿ ಜಿಲ್ಲೆ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿದ್ದರಿಂದ 1.30 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದಲ್ಲಿ ನೆರೆ ಭೀತಿ ಎದುರಾಗಿದೆ. ಕೃಷ್ಣಾ, ಡೋಣಿ ನದಿ ಸಂಗಮದಲ್ಲಿ ಮೀನುಗಾರ ಸೋಮಲಪ್ಪ ಕಮಲಪ್ಪ ಜುಮಾಲಪುರ ಎಂಬಾತ ಜಲಾಸಮಾಧಿಯಾಗಿದ್ದಾನೆ. ಮುನಿರಾಬಾದ್ ವ್ಯಾಪ್ತಿಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಗೆ 3 ಅಡಿ ಮಾತ್ರ ಬಾಕಿ ಇದೆ. ಚಾಮರಾಜನಗರ, ಮೈಸೂರು, ಮಂಡ್, ಧಾರವಾಡ, ಉತ್ತರ ಕನ್ನಡ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ತಗ್ಗದ ಪ್ರವಾಹ
ಮಹಾರಾಷ್ಟ್ರದ ಕೊಯ್ನಾ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಇನ್ನೂ ತಗ್ಗಿಲ್ಲ.
ರಾಜಾಪುರ ಬ್ಯಾರೇಜ್‌ನಿಂದ 1,06,044 ಕ್ಯುಸೆಕ್ ನೀರು ಹರಿದು ಬರುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣಾ ನದಿಯ ಪ್ರವಾಹದಲ್ಲಿ ಭಾನುವಾರ ಮತ್ತೆ 2 ಅಡಿ ನೀರು ಏರಿಕೆಯಾಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಶನಿವಾರ ಮುಳಗಿದ್ದ 8 ಸೇತುವೆಗಳ ಮೇಲೆ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿದ್ದರಿಂದ ಚಿಕ್ಕೋಡಿ ತಾಲೂಕಿನ ಸದಲಗಾ-ಬೋರಗಾಂವ, ಜತ್ರಾಟ-ಭೀವಶಿ, ಕಲ್ಲೋಳ-ಂುಡೂರು, ಅಕ್ಕೋಳ-ಸಿದ್ನಾಳ, ಕಾರದಗಾ-ಭೋಜ, ಭೋಜವಾಡಿ-ಕುನ್ನರ ಮತ್ತು ಮಲಿಕವಾಡ-ದತ್ತವಾಡ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ಖಾನಾಪುರ ತಾಲೂಕಿನಲ್ಲಿ ಮಳೆ ಸುರಿಯುತ್ತಿರುವುದರಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು ನೇರ್ಸಾ, ಗವಾಳಿ, ಕೊಂಗಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮುಂಜಾಗ್ರತಾ ಕ್ರಮವಾಗಿ ತೀರ ಪ್ರದೇಶದ ಜನರ ರಕ್ಷಣೆಗೆ 60 ಬೋಟ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಜಯರಾಂ ತಿಳಿಸಿದ್ದಾರೆ. ಕೃಷ್ಣಾ ನದಿಯ ಉಪ ನದಿಗಳಾದ ದೂಧ್‌ಗಂಗಾ, ವೇದಗಂಗಾ, ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


