ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು!

ಕನ್ನಡಪ್ರಭ ವಾರ್ತೆ, ರಾಮನಗರ, ಜು.22-
ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕಾದ ಶಿಕ್ಷಕರೇ ಅವರ ಕೈಗೆ ಪೊರಕೆ ಕೊಟ್ಟು ಶೌಚಾಲಯ ಶುಚಿಗೊಳಿಸಿದ್ದಾರೆ. ಇಂಥ ಅಮಾನವೀಯ ಘಟನೆ ರಾಮನಗರದ ಕೊತ್ತೀಪುರದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮಕ್ಕಳೇ ಶೌಚಾಲಯವನ್ನು ಸ್ವಚ್ಛಗೊಳಿಸುವುದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು 'ಕನ್ನಡಪ್ರಭ'ಕ್ಕೆ ನೀಡಿದ್ದಾರೆ.
ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿ ತರಲು, ಪಾತ್ರೆ ತರಲು ಮತ್ತು ಶುಚಿಗೊಳಿಸಲು ಮಕ್ಕಳ ಬಳಕೆ ಬಹುತೇಕ ಕಡೆ ಇದ್ದದ್ದೇ. ಆದರೆ, ಕೊತ್ತೀಪುರ ಶಾಲೆಯಲ್ಲಿ ಮಕ್ಕಳನ್ನು ಶೌಚಾಲಯ ಶುಚಿಗೊಳಿಸಲು ಬಳಸಿಕೊಳ್ಳುವ ಮೂಲಕ ಶಿಕ್ಷಕರು ಶೋಷಣೆಗೆ ಒಳಪಡಿಸಿದ್ದಲ್ಲದೆ ಅವರ ಹಕ್ಕುಗಳಿಗೆ ಚ್ಯುತಿ ತಂದಿದ್ದಾರೆ.
ನಿರಂತರ ಶೋಷಣೆ: ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಸರ್ಕಾರ ಹಣದ ಹೊಳೆಯನ್ನೇ ಹರಿಸುತ್ತಿದೆ. ಇಷ್ಟಾಗಿಯೂ ಚಿಲ್ಲರೆ ದುಡ್ಡು ಜೇಬಿಗಿಳಿಸಲು ಶಿಕ್ಷಕರು ಮಕ್ಕಳನ್ನು ಶೋಷಿಸುತ್ತಿದ್ದಾರೆ. ಶಾಲೆ ಶೌಚಾಲಯ ನಿರ್ವಹಣೆಗೆಂದೇ ವಾರ್ಷಿಕ ಅನುದಾನ ಮೀಸಲಾಗಿರುತ್ತದೆ.
ಶೌಚಾಲಯಕ್ಕೆ ಮಕ್ಕಳು ಬರಿಗಾಲಲ್ಲಿ ಹೋಗಬಾರದೆಂದು ಚಪ್ಪಲಿ ಖರೀದಿಸಲೂ ಹಣ ನೀಡುತ್ತಿದೆ. ಶೌಚಾಲಯದಲ್ಲಿ ಕನ್ನಡಿ, ಬಾಚಣಿಗೆ ಇಡುವುದೂ ಕಡ್ಡಾಯವಾಗಿದ್ದರೂ ಅದು ಯಾವುದೂ ಈ ಶಾಲೆಯಲ್ಲಿ ಪಾಲನೆಯಾಗುತ್ತಿಲ್ಲ.
ಸರ್ಕಾರ ನೀಡಿದ ಹಣ ಕೊಟ್ಟು ಕೂಲಿಯಾಳು ನೇಮಿಸಿಕೊಂಡರೆ, ಅವರೇ ಶೌಚಾಲಯ ಶುಚಿಗೊಳಿಸುತ್ತಾರೆ. ಆದರೆ, ಹಣದಾಸೆಗೆ ಬಿದ್ದ ಶಿಕ್ಷಕರು ಮಕ್ಕಳನ್ನೇ ಕೂಲಿಗಳಂತೆ ದುಡಿಮೆಗೆ ಹಚ್ಚುತ್ತಿದ್ದಾರೆ. ಬಡ ಮಕ್ಕಳು ಶಿಕ್ಷಕರಿಗೆ ಹೆದರಿ ಇಷ್ಟವಿಲ್ಲದಿದ್ದರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ.
ಬರಿಗಾಲಲ್ಲೇ ಕೆಲಸ: ಶಿಕ್ಷಕರ ಬಲವಂತಕ್ಕೆ ಕಟ್ಟುಬಿದ್ದು ಶೌಚಾಲಯ ಶುಚಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದ ಎಲ್ಲ 5 ಮಕ್ಕಳೂ ಬರಿಗಾಲಲ್ಲೇ ಇದ್ದರು. ಮೊದಲೇ ಅನೈರ್ಮಲ್ಯ ತಾಂಡವವಾಡುತ್ತಿದ್ದ ಶೌಚಾಲಯದಲ್ಲಿ ಕೆಲಸ ಮಾಡುವಾಗ ಕೈಗವಚ, ಮುಖಕ್ಕೆ ಮಾಸ್ಕ್ ಕೇಳುವಂತೆಯೇ ಇಲ್ಲ. ಪೌರ ಕಾರ್ಮಿಕರಿಗೆ ಬೂಟು, ಕೈಗವಚ, ಮಾಸ್ಕ್ ಸಹಿತ ಸಾಕಷ್ಟು ವ್ಯವಸ್ಥೆ ಇರುತ್ತದೆ. ಹೇಳಿ ಕೇಳಿ ಈಗ ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಕಡೇ ಪಕ್ಷ ಪಾದರಕ್ಷೆ ವ್ಯವಸ್ಥೆಯನ್ನೂ ಮಾಡದೆ ಶೌಚಾಲಯ ಸ್ವಚ್ಛಗೊಳಿಸುವಂತೆ ಆದೇಶ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿದೆ ಗುಂಪುಗಾರಿಕೆ: ಕೊತ್ತೀಪುರ ಶಾಲೆಯಲ್ಲಿ 175 ಮಕ್ಕಳಿದ್ದಾರೆ. ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಅಧಿಕ. ಇಂತಹ ಕಡೆ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಕಲಿಸುವುದಕ್ಕಿಂತಲೂ ಗುಂಪುಗಾರಿಕೆಗೇ ಹೆಚ್ಚು ಒತ್ತು ನೀಡುತ್ತಿದ್ದಾರೆ. ಮುಖ್ಯ ಶಿಕ್ಷಕರಿಗೆ ಸಹೋದ್ಯೋಗಿಗಳ ಮೇಲೆ ನಿಯಂತ್ರಣವೇ ಇಲ್ಲ. ಶೌಚಾಲಯ ಸ್ವಚ್ಛತೆ, ಇತರೆ ಕೆಲಸ ಮಾಡುವಂತೆ ಹೇರಿದ ಬಲವಂತಕ್ಕೆ ಅಕ್ಷರ ದಾಸೋಹ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ, ಮಕ್ಕಳೇ ಎಲ್ಲಾ ಕೆಲಸ ಮಾಡಿಕೊಂಡು, ಓದುವ ದಯನೀಯ ಸ್ಥಿತಿ ಇದೆ.
ಇದೆಲ್ಲವನ್ನೂ ಪ್ರಶ್ನಿಸಿ, ನಿಯಂತ್ರಿಸಬೇಕಾದ ಶಾಲಾಭಿವೃದ್ಧಿ ಸಮಿತಿಯೂ ನಿರ್ಲಿಪ್ತವಾಗಿದೆ. ಇಲ್ಲಿನ ಶಿಕ್ಷಕಿಯೊಬ್ಬರ ಪತಿಯೇ ಸಮಿತಿ ಅಧ್ಯಕ್ಷ. ಈ ಹುದ್ದೆಗೆಂದೇ ಬೇರೊಂದು ಬಡಾವಣೆ ಶಾಲೆಯಲ್ಲಿದ್ದ ಮಕ್ಕಳನ್ನು ಇಲ್ಲಿಗೆ ತಂದು ಸೇರಿಸಿದ್ದಾರೆ. ಹೀಗಾಗಿ ಕುರಿ ಕಾಯಲು ತೋಳ ನೇಮಿಸಿದಂತಾಗಿದೆ.
ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ರಾಮನಗರದ ರಾಮದುರ್ಗ ಶಾಲೆಯಲ್ಲಿ ಅಕ್ಷರ ದಾಸೋಹ ಕೊಠಡಿ ನಿರ್ಮಾಣ ಕೆಲಸಕ್ಕೆ ಕೋಲು ಹಿಡಿದ ಶಿಕ್ಷಕರೊಬ್ಬರು ಮಕ್ಕಳಿಂದಲೇ ಜಲ್ಲಿ ಹೊರಿಸಿದ ಪ್ರಕರಣವನ್ನು ಈಚೆಗೆ 'ಕನ್ನಡಪ್ರಭ' ಬಯಲು ಮಾಡಿತ್ತು. ಇಷ್ಟಾಗಿಯೂ ಈ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಂಬಂಧಿಸಿದ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವ ಗೋಜಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಲಿಲ್ಲ. ಕಡೇ ಪಕ್ಷ ನೋಟಿಸ್ ಕೂಡ ಜಾರಿ ಮಾಡಿಲ್ಲ.
- ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


