ಪ್ರಧಾನ ಸುದ್ದಿ

ಮುಳುಗಡೆ ಭೀತಿ

ಮುಳುಗಡೆ ಭೀತಿ
Published On :

ಕನ್ನಡಪ್ರಭ ವಾರ್ತೆ,  ಬೆಂಗಳೂರು,  ಜು.22-
ಮಹಾರಾಷ್ಟ್ರ ಹಾಗೂ ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದರಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ 39, ಜಮಖಂಡಿ ತಾಲೂಕಿನ 27 ಗ್ರಾಮಗಳು ಸೇರಿದಂತೆ 66 ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.
ವರದಾ, ದಂಡಾವತಿ, ಲಕ್ಷ್ಮಣತೀರ್ಥ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತೀರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕೊಡಗು ಜಿಲ್ಲೆಯಲ್ಲಿ ಮಂಗಳವಾರವೂ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.
ಮಹಾರಾಷ್ಟ್ರದ ಕೋಯ್ನಾ, ನೌಜಾ ಸೇರಿದಂತೆ ಕೊಂಕಣ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಕೃಷ್ಣಾ ನದಿಗೆ 1.25 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರು, ಮಾಂಜರಿ, ಬೋರಗಾಂವ, ಅಕ್ಕೋಳ, ಕಾರದಗಾ, ಅಥಣಿ ತಾಲೂಕಿನ ಸಪ್ತಸಾಗರ, ತೀರ್ಥ, ರಾಯಬಾಗ ತಾಲೂಕಿನ ಶಿರಗೂರ, ಗುಂಡವಾಡ, ಸಿದ್ದಾಪುರ ಸೇರಿದಂತೆ 39 ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಹಿಪ್ಪರಗಿ ಬ್ಯಾರೇಜ್‌ನಿಂದ 118350 ಕ್ಯುಸೆಕ್ ನೀರನ್ನು ಹೊರ ಬಿಡುತ್ತಿರುವುದರಿಂದ ಜಮಖಂಡಿ ತಾಲೂಕಿನ 27 ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ವರದಿ ಆಧರಿಸಿ ಉಭಯ ಜಿಲ್ಲೆಗಳಲ್ಲಿ ಗಂಜಿ ಕೇಂದ್ರ ಸೇರಿ ಇನ್ನಿತರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಕೃಷ್ಣಾ ನದಿಯ ರಭಸಕ್ಕೆ ಕಳೆದೆರಡು ದಿನಗಳಿಂದ ಮುಳುಗಡೆಯಾಗಿದ್ದ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.   
ರಾಯಬಾಗ ತಾಲೂಕಿನ ಉಗಾರ-ಕುಡಚಿ ಸೇತುವೆ ಕೂಡ ಮುಳುಗಡೆಯಾಗುವ ಸಾಧ್ಯತೆ ಇದೆ. ಆಲಮಟ್ಟಿ ಜಲಾಶಯದಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹ ಮಾಡಿದರೆ ಅದರ ಹಿನ್ನೀರಿನಿಂದ ಅಥಣಿ, ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿನ ಕೆಲವು ಗ್ರಾಮಗಳು ಮುಳುಗಡೆಯಾಗುವ ಆತಂಕ ಎದುರಾಗಿದೆ. ದೂಧಗಂಗಾ, ಘಟಪ್ರಭಾ, ಮಲಪ್ರಭಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಗೋಕಾಕ್ ಫಾಲ್ಸ್ ಸೇರಿದಂತೆ ಇತರೆ ಸಣ್ಣ ಪುಟ್ಟ ಜಲಪಾತಗಳು ಸಹ ಭೋರ್ಗರೆಯುತ್ತಿವೆ.

ಉಕ್ಕಿ ಹರಿಯುತ್ತಿರುವ ನದಿಗಳು: ಲಕ್ಷ್ಮಣತೀರ್ಥ, ವರದಾ ಹಾಗೂ ದಂಡಾವತಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಲಕ್ಷ್ಮಣತೀರ್ಥ ನದಿ ರಭಸಕ್ಕೆ ಹುಣಸೂರು ತಾಲೂಕಿನ ಹನಗೋಡು ಅಣೆಕಟ್ಟೆ ಮುಳುಗಡೆಯಾಗಿದ್ದು, ಹನಗೋಡು ಜಲಾಶಯದಿಂದ 6420 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಸೊರಬ ತಾಲೂಕಿನಲ್ಲಿ ವರದಾ, ದಂಡಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ತೀರ ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ನೂರಾರು ಎಕರೆ ಭೂಮಿ ಜಲಾವೃತವಾಗಿದೆ. ಜಡೆ ಹೋಬಳಿ ಕೋಟೆಕೊಪ್ಪ ಹೊಸಳ್ಳಿ ನಡುವಿನ ರಸ್ತೆಯಲ್ಲಿ ಕೆರೆಯ ಏರಿ ಕುಸಿದು ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ ಬಳಿಯ ಎರಡನೇ ಮೊಣ್ಣಂಗೇರಿ ಬಳಿ ಸುಮಾರು 5 ಕಿ.ಮೀ. ದೂರದವರೆಗೆ 1 ಇಂಚಿನಷ್ಟು ರಸ್ತೆ ಬಿರುಕು ಬಿಟ್ಟಿದೆ. ಚಿಕ್ಕಮಗಳೂರಿನಲ್ಲಿ ಮಳೆ ಕಡಿಮೆಯಾಗಿದ್ದು ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ತಗ್ಗಿದೆ.

ಟಿಬಿ ಡ್ಯಾಂ ಭರ್ತಿ: ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ತುಂತಭದ್ರಾ ಜಲಾಶಯ ಭರ್ತಿಯಾಗಿದೆ. 1631.83 ಅಡಿ ನೀರು ಸಂಗ್ರಹವಾಗಿದ್ದರಿಂದ ಸೋಮವಾರ 10 ಗೇಟ್‌ಗಳನ್ನು 1 ಅಡಿ ಎತ್ತರಿಸಿ 15000 ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 42 ದಿನಗಳ ಮುಂಚೆಯೇ ಜಲಾಶಯ ಭರ್ತಿಯಾಗಿದೆ. ಕೆಆರ್‌ಎಸ್ ಜಲಾಶಯದಲ್ಲಿ 122.50 ಅಡಿ ನೀರು ಸಂಗ್ರಹವಾಗಿದ್ದು ಭರ್ತಿಗೆ 2 ಅಡಿ ಮಾತ್ರ ಬಾಕಿ ಇದೆ. ನದಿಗೆ ಹೆಚ್ಚುವರಿ ನೀರು ಹರಿಸಲು ಜಲಸಂಪನ್ಮೂಲ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಹಾಸನ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಹೇಮಾವತಿ, ಯಗಚಿ, ವಾಟೆ ಹೊಳೆಗೆ ಒಳ ಹರಿವು ಹೆಚ್ಚಳವಾಗಿದೆ.

ಇಂದೂ ಶಾಲಾ-ಕಾಲೇಜಿಗೆ ರಜೆ: ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದರಿಂದ ಮಂಗಳವಾರವೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ಭೂ ಕುಸಿತ ಉಂಟಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದೆ. ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಕೆರೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಮಕ್ಕಂದೂರಿನಲ್ಲಿ ಮನೆ ಹಾಗೂ ಬರೆ ಕುಸಿತ ಉಂಟಾಗಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.