ಪ್ರಧಾನ ಸುದ್ದಿ

ಮೇಲ್ಮನೆಯಲ್ಲೂ ಭೂ ಗೋವಿಂದ

ಮೇಲ್ಮನೆಯಲ್ಲೂ ಭೂ ಗೋವಿಂದ
Published On :

ವಿಧಾನಪರಿಷತ್: ಸರ್ಕಾರಿ ಭೂಮಿ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷರ ವಿರುದ್ಧದ ಹಕ್ಕುಚ್ಯುತಿ ನಿರ್ಣಯ ಕುರಿತ ಚರ್ಚೆ ಒತ್ತಟ್ಟಿಗಿರಲಿ. ಆದರೆ ಯಾವುದೇ ಕಾರಣಕ್ಕೂ ಕಾರ್ಯಪಡೆ ವರದಿ ಭೂಗತ ಆಗಬಾರದು ಎಂದು ಜೆಡಿಎಸ್ ಶಾಸಕರು ವಿಧಾನಪರಿಷತ್‌ನಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ಪ್ರಕರಣದಲ್ಲಿ ಎಷ್ಟೇ ದೊಡ್ಡವರಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಉನ್ನತಾಧಿಕಾರ ಸಮಿತಿ ಮಾಡಿದರೆ ಯಾವುದೇ ಪ್ರಯೋಜನ ಇಲ್ಲ. ಒತ್ತುವರಿದಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಒತ್ತಾಯಿಸಿದರು.
'ಕನ್ನಡಪ್ರಭ'ದಲ್ಲಿ ಪ್ರಕಟವಾದ ಒತ್ತು'ವರಿ' ಸರಣಿ ಲೇಖನದ ವಿಚಾರ ಮೇಲ್ಮನೆಯಲ್ಲೂ ಬುಧವಾರ ಪ್ರತಿಧ್ವನಿಸಿ ಸದಸ್ಯರು ಪಕ್ಷಭೇದ ಮರೆತು ಒತ್ತುವರಿ ತೆರಿವಿಗೆ ಆಗ್ರಹಿಸಿದರು. ಆದರೆ, ಕಾರ್ಯಪಡೆ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಸಂದರ್ಶನದಲ್ಲಿ ಶಾಸಕರ ಹೆಸರು ಹೇಳಿರುವುದು ಸರಿಯಲ್ಲ ಬಿಜೆಪಿಯ ಡಿ.ವಿ. ಸದಾನಂದಗೌಡ ಹೇಳಿದರು. ಅಲ್ಲದೆ, ಅವರ ಮೇಲೆ ಹಕ್ಕುಚ್ಯುತಿಯ ಪ್ರಸ್ತಾಪವನ್ನೂ ಮಾಡಿದ್ದಾರೆ.

ಹೆಸರು ಹೇಳಬಾರದಿತ್ತು: ಕಾರ್ಯಪಡೆ ಅಧ್ಯಕ್ಷರು ಶಾಸಕರ ಹೆಸರು ಹೇಳಬಾರದಿತ್ತು. ಆದರೆ, ಅವರ ನೀಡಿರುವ ವರದಿ ಮಾತ್ರ ಭೂಗತ ಆಗಬಾರದು. ಭೂ ಒತ್ತುವರಿಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿವೆ. ಆದ್ದರಿಂದ ಕಾರ್ಯಪಡೆಯನ್ನು ರದ್ದು ಮಾಡಬಾರದು. ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ಮಾಡಿದರೆ ಉಪಯೋಗವಿಲ್ಲ. ಅದಕ್ಕೊಬ್ಬ ಐಎಎಸ್ ಅಧಿಕಾರಿಯನ್ನೇ ನೇಮಕ ಮಾಡಬೇಕು. ಅವರಿಗೆ ಒತ್ತುವರಿ ತೆರವೊಂದೇ ಕಾರ್ಯ ಆಗಬೇಕು ಎಂದು ಜೆಡಿಎಸ್‌ನ ಎಂ.ಸಿ. ನಾಣಯ್ಯ ಆಗ್ರಹಿಸಿದರು.               
ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಸವರಾಜ ಹೊರಟ್ಟಿ, ನಾನು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಸೂಕ್ತ ಉತ್ತರವೇ ನೀಡಿಲ್ಲ. ಒತ್ತುವರಿದಾರರ ಹೆಸರನ್ನು ಸಿಡಿಯಲ್ಲಿ ನೀಡಿದೆ. ಅದರಲ್ಲಿರುವ 25 ಸಾವಿರ ಪುಟ ಓದುವುದು ಹೇಗೆ? ಸರ್ಕಾರಿ ಭೂಮಿ ಒತ್ತುವರಿ ತೆರಿವಿನ ನಿರ್ದಾಕ್ಷಿಣ್ಯ ಕ್ರಮ ಯಾವಾಗ ಕೈಗೊಳ್ಳುತ್ತೀರಿ?
ಆಂಧ್ರದಲ್ಲಿ ರಚನೆಯಾಗಿರುವ ಹಾಗೂ ಸಮಿತಿ- ಕಾರ್ಯಪಡೆಗಳೂ ಸಲಹೆ ಮಾಡಿರುವ ಕಾನೂನು ಜಾರಿಗೆ ತಂದು ವಿಶೇಷ ನ್ಯಾಯಾಲಯ ಸ್ಥಾಪನೆ ಯಾವಾಗ ಆಗುತ್ತದೆ? ನನಗೆ ಸರ್ಕಾರದಿಂದ ಸ್ಪಷ್ಟ ಉತ್ತರ ಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಸಿದಂತೆ ಹಾಗೂ ಸಚಿವ ಸಂಪುಟದಲ್ಲಿ ಗಂಭೀರವಾಗಿ ಚರ್ಚಿಸಿ ನಿರ್ಧರಿಸಿರುವಂತೆ ವಿ. ಬಾಲಸುಬ್ರಮಣಿಯನ್ ವರದಿ ಅನುಷ್ಠಾನದಲ್ಲಿ ಬದಲಾವಣೆ ಇಲ್ಲ. ಸರ್ಕಾರ ಅದಕ್ಕೆ ಬದ್ಧವಾಗಿದೆ. ಹೈಕೋರ್ಟ್ ಕೂಡ ಸೂಚನೆ ನೀಡಿದೆ. ಅದರಂತೆ ಕಾರ್ಯನಿರ್ವಹಿಸುತ್ತೇವೆ. ಪೂರ್ಣಕಾಲದ ಐಎಎಸ್ ಅಧಿಕಾರಿ ನೇಮಕದ ಬಗ್ಗೆಯೂ ಆಲೋಚಿಸಲಾಗುತ್ತದೆ ಎಂದರು.

ಯಾವ ಎಸ್ಟೇಟ್ ಪರವೂ ನಾನಿಲ್ಲ
ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗಲೇ ಬೇಕು. ನಾನು ಕಾಫಿ ಎಸ್ಟೇಟ್‌ನವರ ಪರವಾಗಿ ಲಾಬಿ ಮಾಡಿದೆ ಎಂಬ ಅರ್ಥ ಬರುವಂತೆ ವಿ. ಬಾಲಸುಬ್ರಮಣಿಯನ್ ಹೇಳಿದ್ದಾರೆ. ಆದರೆ ನಾನು ಕಾಫಿ ಎಸ್ಟೇಟ್, ರಿಯಲ್ ಎಸ್ಟೇಟ್ ಸೇರಿದಂತೆ ಯಾವ ಎಸ್ಟೇಟ್ ಪರವೂ ಇಲ್ಲ. ಅವರೊಂದಿಗೆ ನನ್ನ ಹೆಸರು ಹೇಳಿದ್ದಾರೆ. ಇದು ಹಕ್ಕುಚ್ಯುತಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.              
ಸರ್ಕಾರ ರಚಿಸಿದ ಕಾರ್ಯಪಡೆಯ ಅಧ್ಯಕ್ಷರಾಗಿ ವಿ. ಬಾಲಸುಬ್ರಮಣಿಯನ್ ವರದಿ ನೀಡಬೇಕು. ಅದನ್ನು ಬಿಟ್ಟು ಟೀಕೆ ಮಾಡಬಾರದು. ಸತ್ಯ ಹರಿಶ್ಚಂದ್ರನಂತೆ ಬಾಲಸುಬ್ರಮಣಿಯನ್ ಮಾತನಾಡಿದ್ದಾರೆ. ಭೂ ಒತ್ತುವರಿದಾರರ ಬಗ್ಗೆ ನನಗೆ ಸಹಾನುಭೂತಿ ಇಲ್ಲ. ಆದರೆ, ನನ್ನ ಹೆಸರು ಪ್ರಸ್ತಾಪಿಸಿರುವುದು ಸರಿಯಲ್ಲ. ಇದು ಶಾಸಕರೊಬ್ಬರ ಹಕ್ಕುಚ್ಯುತಿ ಆಗುತ್ತದೆ ಇಂತಹ ಅಧಿಕಾರಿಗಳಿಗೆ ನೋಟೀಸ್ ನೀಡಿ ಎಂದು ಸಭಾಪತಿಯವರನ್ನು ಆಗ್ರಹಿಸಿದರು. 'ಮೊದಲು ನೋಟೀಸ್ ನೀಡಿ, ನಂತರ ನೋಡೋಣ' ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ನುಡಿದರು.

11.02 ಲಕ್ಷ ಎಕರೆ ಒತ್ತುವರಿ: ಶ್ರೀನಿವಾಸ್ ಪ್ರಸಾದ್
ಸರ್ಕಾರಿ ಭೂಮಿ ಒತ್ತುವರಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎ.ಟಿ. ರಾಮಸ್ವಾಮಿ ಹಾಗೂ ವಿ. ಬಾಲಸುಬ್ರಮಣಿಯನ್ ವರದಿಯತೆ ಒತ್ತುವರಿ ತೆರವುಗೊಳಿಸಲು ಮುಖ್ಯ ಕಾರ್ಯದಶಿಂಗಳ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರಸ್ಥ ಸಮಿತಿ ರಚನೆ ಮಾಡಲಾಗಿದೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಈ ಉನ್ನತಾಧಿಕಾರಸ್ಥ ಸಮಿತಿಯಲ್ಲಿ 15 ನಾನಾ ಇಲಾಖೆಯ ಮುಖ್ಯಸ್ಥರಿರುತ್ತಾರೆ. ರಾಜ್ಯದಲ್ಲಿ 11,02,584 ಎಕರೆ ಕಂದಾಯ ಜಮೀನು ಒತ್ತುವರಿಯಾಗಿದೆ. ಇದರಲ್ಲಿ ಮೇ ಅಂತ್ಯಕ್ಕೆ 60,099 ಎಕರೆ ತೆರವುಗೊಳಿಸಲಾಗಿದ್ದು, 10,42,485 ಎಕರೆ ಒತ್ತುವರಿ ಬಾಕಿ ಉಳಿದಿದೆ. ಬೆಂಗಳೂರು ವಿಭಾಗದಲ್ಲಿ 3,01,800, ಮೈಸೂರು ವಿಭಾಗದಲ್ಲಿ 5,93,843, ಬೆಳಗಾವಿ ವಿಭಾಗದಲ್ಲಿ 41,236 ಹಾಗೂ ಗುಲ್ಬರ್ಗಾ ವಿಭಾಗದಲ್ಲಿ 1,05,606 ಎಕರೆ ಒತ್ತುವರಿ ಬಾಕಿ ಉಳಿದಿದೆ ಎಂದು ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಅಂಕಿ- ಅಂಶ ಸಮೇತ ಉತ್ತರ ನೀಡಿದರು. ಎ.ಟಿ. ರಾಮಸ್ವಾಮಿ ಅವರ ಜಂಟಿ ಸದನ ಸಮಿತಿ ಎರಡು ಮಧ್ಯಂತರ ವರದಿ ಸಲ್ಲಿಸಿದೆ. ವಿ. ಬಾಲಸುಬ್ರಮಣಿಯನ್ ಅಧ್ಯಕ್ಷತೆಯ ಕಾರ್ಯಪಡೆ 2011ರ ಜೂನ್ 4ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವಿ. ಬಾಲಸುಬ್ರಮಣಿಯನ್ ಕಾರ್ಯಪಡೆ ಮರುಸ್ಥಾಪನೆ ಕುರಿತಂತೆ ಹೈಕೋರ್ಟ್ ಕೂಡ ನೋಟಿಸ್ ನೀಡಿದೆ. ಸಚಿವ ಸಂಪುಟದಲ್ಲಿ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಓದುಗರ ಅನಿಸಿಕೆ

ಸತ್ಯ ಹೇಳೋದು ಹಕ್ಕುಚ್ಯುತಿಯಾದರೆ, ಜನರ ಗತಿಯೇನು?
ಸತ್ಯವನ್ನು ಹತ್ತಿಕ್ಕುವ, ಸತ್ಯ ಹೇಳುವವರನ್ನು ಬೆದರಿಸುವ ಪ್ರವೃತ್ತಿ ಹೊಸದೇನಲ್ಲ. ಆದರೆ ನಮ್ಮ ರಾಜಕಾರಣಿಗಳು ಇಷ್ಟು ನೇರವಾಗಿ ಅದನ್ನು ಮಾಡುತ್ತಾರೆ ಎಂದು ಭಾವಿಸಿರಲಿಲ್ಲ. ಸರ್ಕಾರಿ ಭೂಮಿ ಒತ್ತುವರಿ ಕುರಿತು ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ನಮ್ಮ ಜನಪ್ರತಿನಿಧಿಗಳು ಒತ್ತಾಯಿಸಿದ್ದು ಅಚ್ಚರಿ ಹಾಗೂ ಆಘಾತ ಉಂಟುಮಾಡಿದೆ.
ಬಾಲಸುಬ್ರಮಣಿಯನ್ ಅವರು ದಾಖಲೆಗಳಿಲ್ಲದೇ 'ಕನ್ನಡಪ್ರಭ'ಕ್ಕೆ ಸಂದರ್ಶನ ನೀಡಲು ಸಾಧ್ಯವಿಲ್ಲ. ವಿಧಾನಸಭೆ ಸದಸ್ಯರ ಹಕ್ಕುಗಳು ಮತ್ತು ವರ್ತನೆ ಬಗ್ಗೆ ಅವರಿಗೂ ಅರಿವಿದೆ. ಏಕೆಂದರೆ ಅವರು ಅಧಿಕಾರಿಯಾಗಿದ್ದವರು. ಸರ್ಕಾರವೇ ನೇಮಿಸಿದ ಕಾರ್ಯಪಡೆ ಅಧ್ಯಕ್ಷರಾಗಿ ಅವರು ಭೂ ಒತ್ತುವರಿಯನ್ನು ಅಧ್ಯಯನ ಮಾಡಿದ್ದಾರೆ. ಸ್ಥಳವೀಕ್ಷಣೆ ನಡೆಸಿ, ವರದಿ ಸಿದ್ಧಪಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅವರು ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ಕೆಲವು ಶಾಸಕರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಅದಕ್ಕೇ ಅವರ ಮೇಲೆ ಹಕ್ಕುಚ್ಯುತಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಲು ಒತ್ತಾಯಿಸಿದ್ದಾರೆ.
ನನ್ನ ಪ್ರಶ್ನೆ ಏನೆಂದರೆ, ವರದಿಯಲ್ಲಿ ಇದ್ದುದನ್ನು ಹೇಳಿದ್ದಕ್ಕೆ ಬಾಲಸುಬ್ರಮಣಿಯನ್ ಅವರ ಮೇಲೆ ಹಕ್ಕುಚ್ಯುತಿ ಮಂಡಿಸುವುದಾದರೆ, 2 ವರ್ಷ ಅವರ ವರದಿಯನ್ನು ಜನರಿಂದ ಮುಚ್ಚಿಟ್ಟಿದ್ದು, ಜಾರಿ ಮಾಡದೇ ಇರುವುದು ಜನರ ಹಕ್ಕಿಗೆ ಚ್ಯುತಿ ತಂದಂತಾಗಲಿಲ್ಲವೇ? ಅಷ್ಟು ದೊಡ್ಡ ಪ್ರಮಾಣದ ಭೂ ಒತ್ತುವರಿ ಮಾಡಿದವರ ಜತೆಗೆ, ಇಷ್ಟು ದಿನ ಆ ವರದಿಯನ್ನು ಮುಚ್ಚಿಟ್ಟವರು ಕೂಡ ಈ ಅಕ್ರಮದಲ್ಲಿ ಭಾಗಿಯಾದಂತಾಗಲಿಲ್ಲವೇ? ಇದರ ಬಗ್ಗೆ ಮಾತನಾಡುವವರು ಯಾರೂ ಇಲ್ಲವೇ? ಇದರ ಬಗ್ಗೆ ನಮ್ಮನ್ನಾಳುವವರಿಗೆ ಕೊಂಚವೂ ಕಾಳಜಿ ಇಲ್ಲವೇ?
ಬಜೆಟ್‌ನ 5-6 ಪಟ್ಟು ಹೆಚ್ಚು ಮೌಲ್ಯದ ಭೂಮಿ ಒತ್ತುವರಿಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ಭೂಮಿ ಒತ್ತುವರಿ ಮಾಡಿದ್ದು ಗಮನಕ್ಕೆ ಬಂದರೂ ಅದನ್ನು ತೆರವು ಮಾಡದೇ ಇರುವ ಸರ್ಕಾರಗಳು ರಾಜ್ಯದ ಜನರಿಗೆ ದ್ರೋಹ ಮಾಡಿದಂತಾಗಲಿಲ್ಲವೇ? ಇದನ್ನು ಯಾರೂ ಪ್ರಶ್ನಿಸುವಂತೆಯೇ ಇಲ್ಲವೇ?           
ಪ್ರಮುಖ ರಾಜಕಾರಣಿಗಳ ಹೆಸರು ಕೇಳಿಬಂದಿರುವಾಗ ಅದರ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ಸದಸ್ಯರು ಭೂ ಒತ್ತುವರಿ ಮಾಡಿಲ್ಲ ಅಂತಾದರೆ ತನಿಖೆ ಎದುರಿಸಲು ಏನು ಭಯ? ಒತ್ತುವರಿಯಾದ ಭೂಮಿ ವಶಪಡಿಸಿಕೊಳ್ಳಲು ಸರ್ಕಾರಕ್ಕೇಕೆ ಹಿಂಜರಿಕೆ? ಸರ್ಕಾರವನ್ನು ತಡೆಯುತ್ತಿರುವ ಪ್ರಭಾವಿಗಳು ಯಾರು? ಇದಕ್ಕೆಲ್ಲ ಜನ ಉತ್ತರ ಬಯಸುವುದು ತಪ್ಪೇ? ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂಬುದು ಬಾಲಸುಬ್ರಮಣಿಯನ್ ಅವರ ಮೇಲಿನ ಹಕ್ಕುಚ್ಯುತಿಗಿಂತ ಹೆಚ್ಚು ಪ್ರಮುಖ ಎಂದು ಅನಿಸುವುದಿಲ್ಲವೇ? ತನಿಖೆ ನಡೆಯಲಿ, ತನಿಖೆಯ ವರದಿ ಬಾಲಸುಬ್ರಮಣಿಯನ್ ಅವರು ಹೇಳಿದ್ದಕ್ಕೆ ವ್ಯತಿರಿಕ್ತವಾಗಿ ಬಂದರೆ ಆಗ ಹಕ್ಕುಚ್ಯುತಿ ಕುರಿತು ಚಿಂತಿಸಲಿ.
ವಿಧಾನಪರಿಷತ್ ಸದಸ್ಯರಾದ ಎಂ.ಸಿ. ನಾಣಯ್ಯ ಅವರು ಒಮ್ಮೆ ಸದನದಲ್ಲಿಯೇ ಮಾತನಾಡುವ ಸಂದರ್ಭದಲ್ಲಿ ಹೇಳಿದ್ದರು. ಅದನ್ನು ಈಗ ಮತ್ತೆ ನೆನಪು ಮಾಡಿಕೊಳ್ಳುವ ಅಗತ್ಯವಿದೆ. ಅವರು ಮಾತನಾಡುತ್ತ, 'ನಮ್ಮ ಬಗ್ಗೆ ಏನಾದರೂ ಅಂದರೆ, ಬರೆದರೆ ನಾವು ಹಕ್ಕುಚ್ಯುತಿ ಮಂಡಿಸುತ್ತೇವೆ. ಅದೇ ನಾವು ಜನರಿಗೆ ಭರವಸೆ ಕೊಡುತ್ತೇವೆ. ಅದನ್ನು ಈಡೇರಿಸದೇ ಇದ್ದರೆ ಆಗ ಜನರ ಹಕ್ಕಿಗೆ ಚ್ಯುತಿ ಬಂದಂತಾಗಲಿಲ್ಲವೇ? ಆಗ ನಮಗೇನು ಶಿಕ್ಷೆ? ಬೇರೆಯವರ ಹಕ್ಕಿಗೆ ಚ್ಯುತಿಬಂದರೆ ನಮಗೆ ಲೆಕ್ಕಕ್ಕಿಲ್ಲ. ಆದರೆ ನಮ್ಮ ಹಕ್ಕನ್ನು ಮಾತ್ರ ಯಾರೂ ಪ್ರಶ್ನಿಸುವಂತಿಲ್ಲ. ಈ ಧೋರಣೆ ಸರಿಯಲ್ಲ ಎಂದು ಅನಿಸುವುದಿಲ್ಲವೇ?' ಎಂದು ಸದನವನ್ನು ಪ್ರಶ್ನಿಸಿದ್ದರು.
ಅವರ ಮಾತು ಎಷ್ಟು ಸತ್ಯ ಎಂದು ಈಗ ಅರಿವಾಗುತ್ತಿದೆ. ಸದನದ ಸದಸ್ಯರಾದವರಿಗೆ ಕೆಲವು ಹಕ್ಕುಗಳಿರುತ್ತವೆ. ಅದಕ್ಕೆ ಚ್ಯುತಿಬಂದ ಸಂದರ್ಭದಲ್ಲಿ, ಅದರಲ್ಲೂ ವಿಶೇಷವಾಗಿ ನಿಜವಾಗಿಯೂ ಗಂಭೀರವಾದ ಸಂಗತಿಯಾಗಿದ್ದಲ್ಲಿ, ಸಂಪೂರ್ಣ ಸುಳ್ಳಾಗಿದ್ದಲ್ಲಿ, ದುರುದ್ದೇಶದಿಂದ ಕೂಡಿದ್ದಲ್ಲಿ ಅಂತಹ ವ್ಯಕ್ತಿಯ ವಿರುದ್ಧ ಹಕ್ಕುಚ್ಯುತಿ ಮಂಡಿಸಬಹುದು. ಆದರೆ ಬಾಲಸುಬ್ರಮಣಿಯನ್ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ಮತ್ತು ಅದರಲ್ಲಿರುವ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಅವರು ಮಾಡಿರುವ ಆರೋಪದ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸುವ ಬದಲು, ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಹೊರಟಿದ್ದಾರೆ.
 ಒಂದರ್ಥದಲ್ಲಿ ಹಕ್ಕುಚ್ಯುತಿ ಬ್ರಹ್ಮಾಸ್ತ್ರದ ಮೂಲಕ ಸಂಗತಿಗಳನ್ನು ಬಹಿರಂಗಪಡಿಸುವವರನ್ನು ಬೆದರಿಸಲು ಯತ್ನಿಸಲಾಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಜನರಲ್ಲಿ ಈ ರೀತಿಯ ಭಾವನೆ ಬಾರದಂತೆ ವರ್ತಿಸಬೇಕಾದ್ದು ಕೂಡ ನಮ್ಮ ಜನಪ್ರತಿನಿಧಿಗಳ ಹಕ್ಕಲ್ಲವೇ?
ಜನ ಮತ ಹಾಕಿ ಗೆಲ್ಲಿಸಿದ ತಕ್ಷಣ ತಾವು ಮಾಡಿದ ಅಕ್ರಮಗಳಿಗೆಲ್ಲ ಜನರ ಸಮ್ಮತಿಯಿದೆ ಎಂದು ರಾಜಕಾರಣಿಗಳು ವಾದಿಸುವುದನ್ನು ಇತ್ತೀಚೆಗೆ ಕಲಿತಿದ್ದಾರೆ. ತಮ್ಮ ತಪ್ಪುಗಳಿಗೆ ಜನರ ಒಪ್ಪುಗೆ ಇದೆ ಎಂದು ಬಿಂಬಿಸಲು ಹೊರಡುತ್ತಾರೆ. ಹಾಗಾದರೆ ರಾಜಕಾರಣಿಗಳನ್ನು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗಿಟ್ಟು, ಚುನಾವಣೆಯೇ ಎಲ್ಲದಕ್ಕೂ ಮಾನದಂಡ ಎಂದು ಕಾನೂನು ರೂಪಿಸಿಕೊಳ್ಳಲಿ. ಆಗ ನಾವು ಅಸಹಾಯಕ ಜನ ಅದನ್ನೇ ಒಪ್ಪಿಕೊಂಡು ಚುನಾವಣೆಯಲ್ಲೇ ತೀರ್ಪು ನೀಡಲಾದರೂ ಯತ್ನಿಸಬಹುದು.
- ರಾಮಕೃಷ್ಣ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.