ವಿಶೇಷ ಶಾಲೆಗಳಿಗೆ ಮರುಪಾವತಿ ಷರತ್ತಿನ ಅನುದಾನ
ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆ ಸರ್ಕಾರೇತರ ಸಂಸ್ಥೆಗಳ ವಿಶೇಷ ಶಾಲೆಗಳಿಗೆ ಇನ್ನು ಮರುಪಾವತಿ ಷರತ್ತು ಮೂಲಕ ಅನುದಾನ ನೀಡಲಿದೆ.
ಅನುದಾನ ನೀಡಿಕೆ ನಿಯಮದಲ್ಲಿ ಬದಲಾವಣೆಗೆ ಒಪ್ಪಿರುವ ಸರ್ಕಾರ, ಅಂಗವಿಕಲರ ವಿಶೇಷ ಶಾಲೆ ನಡೆಸುವ ಎನ್ಜಿಒ ಸಂಸ್ಥೆಗಳಿಗೆ ಅನುದಾನ ನೀಡುತ್ತಿದೆ. ಸರ್ಕಾರ ಅನುದಾನ ನೀಡುವುದು ಮರುಪಾವತಿ ಷರತ್ತಿನಲ್ಲಿ ಎಂಬುದು ಗಮನಿಸಬೇಕಾದ ಅಂಶ. ಈ ರೀತಿ ಅನುದಾನ ನೀಡಲು ನಿಯಮಾನುಸಾರ ಬರುವುದಿಲ್ಲ. ಆದರೆ ತನ್ನದೇ ಮಾನದಂಡ ಅನುಸರಿಸಿ ಈ ರೀತಿ ಅನುದಾನ ನೀಡಲಿದೆ.
ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಯ ಅಧಿಕೃತ ವಿವರ ಸರ್ಕಾರದಲ್ಲಿಲ್ಲ. ಸುಮಾರು 250 ವಿಶೇಷ ಶಾಲೆಗಳಿರಬಹುದು ಎಂಬುದು ಅಂದಾಜು. ಇದರಲ್ಲಿ 95 ಕೇಂದ್ರ ಅನುದಾನ ಶಾಲೆ ಇದೆ. ಖಾಸಗಿ ಪೋಷಣೆಯಲ್ಲಿ 200ಕ್ಕೂ ಅಧಿಕ ಶಾಲೆಗಳಿವೆ. ಈ ಶಾಲೆಗಳಿಗೆ ಸರ್ಕಾರಿ ಅನುದಾನದ ಬೇಡಿಕೆ ಕೊನೆಗೂ ಈಡೇರಿದೆ.
ಮರುಪಾವತಿ ಷರತ್ತು: ಖಾಸಗಿ ಸಂಸ್ಥೆಗಳು ನಡೆಸುವ ವಿಶೇಷ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬೇಕಾದರೆ ಅವನ್ನು ಶಿಕ್ಷಣ ಅನುದಾನ ಕೋಡ್ನ ಅಡಿ ದಾಖಲಿಸಬೇಕು. 1982ರಲ್ಲಿ ಈ ನಿಯಮ ಜಾರಿಗೊಂಡರೂ ಖಾಸಗಿ ಶಾಲೆಗಳು ನೋಂದಣಿ ಮಾಡುತ್ತಿರಲಿಲ್ಲ. ಹಾಗಾಗಿ ಸರ್ಕಾರಿ ಅನುದಾನವೂ ಸಿಗುತ್ತಿರಲಿಲ್ಲ. ರಾಜ್ಯ ಅಂಗವಿಕಲರ ಆಯುಕ್ತರ ಪ್ರಯತ್ನ ಮೇರೆಗೆ 3 ತಿಂಗಳಿಂದ ಕಡ್ಡಾಯವಾಗಿ ವಿಶೇಷ ಶಾಲೆಗಳ ನೋಂದಣಿಯಾಗುತ್ತಿದೆ.
ನೋಂದಣಿಯಾದ ಶಾಲೆಗಳಿಗೆ ಬೇಕಾದ ಅನುದಾನವನ್ನು ನೇರವಾಗಿ ನೀಡದೆ ವರ್ಷದಲ್ಲಿ ಖರ್ಚಾದ ಮೊತ್ತಕ್ಕೆ ಎನ್ಜಿಒಗಳು ಲೆಕ್ಕ ತೋರಿಸಬೇಕು. ಬಳಿಕ ಮರುಪಾವತಿ ರೂಪದಲ್ಲಿ ಅನುದಾನ ನೀಡುವ ಹೊಸ ಕ್ರಮವನ್ನು ಇಲಾಖೆ ಜಾರಿಮಾಡಿದೆ.
ವಿಶೇಷ ಶಾಲೆಗಳಲ್ಲಿ ಬ್ರೈಲ್ ಲಿಪಿ ಕಲಿಸಲು, ಕಿವುಡರಿಗೆ, ಬುದ್ಧಿಮಾಂದ್ಯರಿಗೆ ಕಲಿಸಲು ವಿಶೇಷ ಶಿಕ್ಷಕರಿದ್ದಾರೆ. ಇವರಿಗೆ ಪ್ರತಿ ತಿಂಗಳು ಎನ್ಜಿಒ ಸಂಸ್ಥೆ ಮುಖೇನ ಅನುದಾನ ಸಿಗುತ್ತದೆ. ಇದು ನಿಯಮಬಾಹಿರ ಕ್ರಮ, ಇದರ ಬದಲು ವಿಶೇಷ ಶಿಕ್ಷಕರನ್ನು ಕಾಯಂ ಮಾಡಿದರೆ ಸಮಸ್ಯೆಗೆ ಪೂರ್ಣ ಪರಿಹಾರ ಸಿಕ್ಕಂತಾಗುತ್ತದೆ ಎನ್ನುವುದು ಅಂಗವಿಕಲ ಇಲಾಖೆ ಆಯುಕ್ತ ರಾಜಣ್ಣ ಅಭಿಮತ.
ಶಿಕ್ಷಣ ಇಲಾಖೆಗೆ ಸೇರಿಸಿ: ವಿಶೇಷ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ಸೇರಿಸಬೇಕು. ಅಂಗವಿಕಲರನ್ನು ಶಿಕ್ಷಣದಲ್ಲಿ ಇತರರಂತೆ ಪರಿಗಣಿಸಬೇಕು. ಇದರಲ್ಲಿ ತಾರತಮ್ಯ ಮಾಡಬಾರದು ಎಂದು ಹೈ ಕೋರ್ಟ್ ಹೇಳಿದರೂ ಅದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲಿಸುತ್ತಿಲ್ಲ. ಶಿಕ್ಷಣ ಇಲಾಖೆಯಂತೆ ವಿಶೇಷ ಶಾಲೆಗೆ, ಶಿಕ್ಷಕರಿಗೆ ವೇತನ, ಸವಲತ್ತು ನೀಡಬೇಕು ಎಂದು ಆಯುಕ್ತ ರಾಜಣ್ಣ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 3 ಸಾವಿರ ವಿಶೇಷ ಶಿಕ್ಷಕರಿದ್ದು, 16 ಸಾವಿರ ವಿಶೇಷ ಮಕ್ಕಳಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಸರ್ಕಾರದ ಜತೆ ಮಾತುಕತೆ ನಡೆಸಿದಾಗ ಭರವಸೆ ಸಿಕ್ಕಿತ್ತು. ಈಗ 1982ರ ಕಾಯ್ದೆ ಪ್ರಕಾರ ಸರ್ಕಾರ ವಿಶೇಷ ಅನುದಾನ ನೀಡಲು ಕ್ರಮ ಕೈಗೊಂಡಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈಗಲೂ ನಮ್ಮ ವಿಶೇಷ ಶಾಲೆಗೆ ಚೈಲ್ಡ್ ಸೆಂಟರ್ ನಿಯಮದಡಿ ಅನುದಾನ ಬರುತ್ತಿದೆ.
- ವಸಂತ ಶೆಟ್ಟಿ, ಮಂಗಳೂರಿನ ಸಾನ್ನಿಧ್ಯ ವಸತಿ ಶಾಲೆ ಮುಖ್ಯಸ್ಥ
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

