ಸೀಟ್ ಬ್ಲಾಕಿಂಗ್ ಬಲು ನೀಟ್...

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.29-
ರಾಜಸ್ಥಾನದ ಕೋಟಾ ಹಾಗೂ ದೆಹಲಿಯಲ್ಲಿ ಸೀಟ್ ಬ್ಲಾಕರ್ಸ್ಗಳಿಗೆ ನಡೆಯುತ್ತಿದೆ ಕೋಚಿಂಗ್, ರಾಜ್ಯದಲ್ಲಿ 8 ಏಜೆಂಟರು ಮತ್ತು 600ಕ್ಕೂ ಅಧಿಕ ಬ್ಲಾಕರ್ಸ್ಗಳ ಮೂಲಕ ಕಳೆದ 7 ವರ್ಷಗಳಿಂದ ಸುಮಾರು 10 ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುತ್ತಿದೆ ಬ್ಲಾಕಿಂಗ್ ವ್ಯವಹಾರ, ಇದಕ್ಕೆ ಪ್ರತಿಯಾಗಿ ಪ್ರತಿ ವರ್ಷ ದಾಖಲಾಗುತ್ತದೆ ಒಂದಿಷ್ಟು ಎಫ್ಐಆರ್, ಅದಕ್ಕೆ ಸಿಗುತ್ತದೆ ನಿರೀಕ್ಷಣಾ ಜಾಮೀನು, ಬಳಿಕ ಪ್ರಕರಣಗಳಿಗೆ ತಿಲಾಂಜಲಿ...
ಸೀಟ್ ಬ್ಲಾಕಿಂಗ್ ಎಂಬ ದಂಧೆ ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ದೂರದಲ್ಲಿ ಎಲ್ಲೋ ಇರುವ ಕಾಣದ ಕೈಗಳು ಈ ದಂಧೆಯನ್ನು ನಿಯಂತ್ರಿಸುತ್ತವೆ.
ಬಿಹಾರದ ಯುವ ಕಾಂಗ್ರೆಸ್ ನಾಯಕ ಹಾಗೂ ಬಿಕ್ರಮ್ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಂಜೀವ್ ಸಿಂಗ್ ಹಾಗೂ ಇತರ ಏಳು ಮಂದಿಯ ಪಾತ್ರ ಇದರಲ್ಲಿ ಪ್ರಮುಖವಾಗಿದೆ. ಕಾಮೆಡ್-ಕೆ ಪರೀಕ್ಷೆಯಲ್ಲಿ ಪ್ರತಿವರ್ಷ 600ಕ್ಕೂ ಅಧಿಕ ಬ್ಲಾಕರ್ಸ್ಗಳು ಇದಕ್ಕಾಗಿ ಪಾಲ್ಗೊಳ್ಳುತ್ತಿದ್ದಾರೆ.
ಸುಮಾರು 350ಕ್ಕೂ ಅಧಿಕ ಸೀಟುಗಳನ್ನು ಬ್ಲಾಕ್ ಮಾಡಿ 250 ಕೋಟಿಗೂ ಅಧಿಕ ಹಣವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಲೂಟಿ ಮಾಡುತ್ತಿವೆ. ಆದರೆ ಕೆಲ ವಿದ್ಯಾರ್ಥಿಗಳು ಹಾಗೂ ಏಜೆಂಟರ ವಿರುದ್ಧ ಎಫ್ಐಆರ್ ದಾಖಲಿಸಿ ಪ್ರಕರಣ ಮುಚ್ಚಿ ಹಾಕುವ ಕೆಲಸವಾಗುತ್ತಿದೆ. ಸರ್ಕಾರಕ್ಕೆ ಈ ವಿಚಾರ ಗೊತ್ತಿದ್ದೂ ಸುಮ್ಮನಿದೆ. ಏಕೆಂದರೆ ಹಗರಣದ ರೂವಾರಿಗಳಾದ ಕೆಲ ರಾಜಕೀಯ ಪಕ್ಷದ ಪ್ರಭಾವಿ ಮುಖಂಡರು ಹಾಗೂ ಧಾರ್ಮಿಕ ಸಂಸ್ಥೆಗಳ ಬುಡಕ್ಕೆ ಕೈಹಾಕಲು ಹೆದರಿಕೆ.
ಸೀಟ್ ಬ್ಲಾಕಿಂಗ್ ಹೊಸತಲ್ಲ. 2006ರಿಂದಲೂ ಬಿಹಾರ, ಉತ್ತರ ಪ್ರದೇಶ ಹಾಗೂ ದೆಹಲಿಯ ವಿದ್ಯಾರ್ಥಿಗಳ ಮೂಲಕ ದಂಧೆ ನಡೆಯುತ್ತಿದೆ. ಆದರೆ ಈ ಪಿಡುಗನ್ನು ಹೋಗಲಾಡಿಸುವ ಸಣ್ಣ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿಲ್ಲ. ಏಕೆಂದರೆ ಈ ಸೀಟ್ ಬ್ಲಾಕಿಂಗ್ಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಕಾಲೇಜುಗಳೇ ಸೇರಿಕೊಂಡಿವೆ.
ಹೇಗೆ ನಡೆಯುತ್ತಿದೆ?: ಪ್ರತಿ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಗೆ ಮುಂಚೆ ರಾಜ್ಯದ 8 ಏಜೆಂಟ್ ಅಥವಾ ಬ್ರೋಕರ್ಗಳು ವೈದ್ಯ ಕಾಲೇಜುಗಳಿಂದ ದೊಡ್ಡ ಪ್ರಮಾಣ ಹಣ ಪಡೆದು ಉತ್ತರ ಭಾರತಕ್ಕೆ ಹೋಗುತ್ತಾರೆ. ಬಿಹಾರ, ಉತ್ತರ ಪ್ರದೇಶ ಹಾಗೂ ದೆಹಲಿಯ ಕೆಲ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಹುಡುಕಿ ರಾಜಸ್ಥಾನದ ಕೋಟಾ ಹಾಗೂ ದೆಹಲಿಯಲ್ಲಿ 3 ತಿಂಗಳ ಅವಧಿಗೆ ತರಬೇತಿ ನೀಡುತ್ತಾರೆ. ಈ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳ ಹೆಸರಲ್ಲಿ ಬೆಂಗಳೂರಿಗೆ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡುತ್ತಾರೆ.
ಪ್ರತಿ ವಿದ್ಯಾರ್ಥಿಯೂ 3-4 ಹೆಸರಲ್ಲಿ ನಕಲಿ ಗುರುತಿನ ಪತ್ರ ಹೊಂದಿರುತ್ತಾನೆ. ಶಿವಂಶಂಕರ ಹೆಸರಲ್ಲಿ ವಿಮಾನ ಟಿಕೆಟ್ ಬುಕ್ ಆಗಿದ್ದರೆ, ಆತನ ನೈಜ ಹೆಸರು ಮಲ್ಲನಗೌಡ ಎಂದಿರುತ್ತದೆ. ಆದರೆ ಗಂಗಾಧರ ಅಥವಾ ಶಶಿಲ್ ಎಂಬ ಹೆಸರಿನಲ್ಲಿ ಕಾಮೆಡ್-ಕೆ ಪರೀಕ್ಷೆಗೆ ಹಾಜರಾಗಿರುತ್ತಾನೆ.
ಕಾಮೆಡ್-ಕೆ ಪರೀಕ್ಷೆ ಬರೆದು ಈ ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ಗಳನ್ನು ಪಡೆಯುತ್ತಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಮೊದಲ ಅಥವಾ 2ನೇ ಹಂತದ ಕೌನ್ಸೆಲಿಂಗ್ನಲ್ಲಿ ಸೀಟು ಪಡೆಯುತ್ತಾರೆ. ಎಲ್ಲ ಹಂತದ ಕೌನ್ಸೆಲಿಂಗ್ ಮುಗಿದ ಬಳಿಕ ಸೀಟುಗಳನ್ನು ರದ್ದುಪಡಿಸಿ ತಮ್ಮ ತವರಿಗೆ ತೆರಳುತ್ತಾರೆ. ಕಾಮೆಡ್-ಕೆನಲ್ಲಿ ರದ್ದಾದ ಸೀಟುಗಳು ಆಡಳಿತ ಮಂಡಳಿ ಕೋಟಾಗೆ ಹೋಗುತ್ತವೆ. ಸೀಟುಗಳನ್ನು ಆಡಳಿತ ಮಂಡಳಿಗಳು ಮಾರಿಕೊಳ್ಳುತ್ತವೆ. ಈ ಪ್ರಕ್ರಿಯೆ ನಡೆಸಲು ಪ್ರತಿ ವಿದ್ಯಾರ್ಥಿಗೆ ಕಾಲೇಜು ಆಡಳಿತ ಮಂಡಳಿ ಮಧ್ಯವರ್ತಿಗಳ ಮೂಲಕ 5 ಲಕ್ಷ ಲಂಚ ನೀಡುತ್ತದೆ.
ಹೊರಬಿದ್ದ ಸತ್ಯ: ಪ್ರಸಕ್ತ ಸಾಲಿನ ಕಾಮೆಡ್-ಕೆ ಪರೀಕ್ಷೆ ಮುಗಿಸಿ 16 ವಿದ್ಯಾರ್ಥಿಗಳು ಇಂಡಿಗೋ ಏರ್ಲೈನ್ಸ್ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದರು. ನಕುಲ್ ಕುಮಾರ್ ಹಾಗೂ ಅಫ್ತಾಬ್ ಅಲಮ್ ಎಂಬ ಹೆಸರಿನಲ್ಲಿ 2 ಟಿಕೆಟ್ ಹಂಚಿಕೆಯಾಗಿತ್ತು. ಈ ವಿಚಾರ ವಿಮಾನದ ಸಿಬ್ಬಂದಿಗೆ ತಿಳಿದು ತಪಾಸಣೆ ನಡೆಸಿದ್ದಾರೆ. ಈ ಇಬ್ಬರ ಗುರುತಿನ ಚೀಟಿ ಹಾಗೂ ಟಿಕೇಟ್ನಲ್ಲಿನ ಹೆಸರು, ಭಾವಚಿತ್ರಗಳಲ್ಲಿ ಗೊಂದಲ ಕಾಣಿಸಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತಪಾಸಣೆ ನಡೆಸಿದಾಗ ಇದೇ ರೀತಿಯ 16 ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ಈ 16 ವಿದ್ಯಾರ್ಥಿಗಳು ವೈದ್ಯನಾಥ ಎಂಬ ಮಧ್ಯವರ್ತಿಗಾಗಿ ಪರೀಕ್ಷೆ ಬರೆಯಲು ಬಂದಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಹೆಚ್ಚಿನ ವಿಚಾರಣೆ ನಡೆಸಿದಾಗ ರೇಖಾ ಏರ್ ಟ್ರಾವೆಲ್ಸ್ ಮೂಲಕ ಸುಮಾರು 81 ಟಿಕೇಟ್ಗಳನ್ನು ಒಂದೇ ಏಜೆಂಟ್ ಮೂಲಕ ಖರೀದಿ ಮಾಡಿರುವುದು ತಿಳಿದುಬಂದಿದೆ.
ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸುವ ಶಾಸ್ತ್ರ ಮಾಡಿದ ದೇವನಹಳ್ಳಿ ಪೊಲೀಸರು ರಾಜಕೀಯ ಪ್ರಭಾವದ ಕಾರಣದಿಂದ ಸುಮ್ಮನಾಗಿದ್ದಾರೆ. ಇದೇ ಏಜೆಂಟ್ಗಳ ಮೂಲಕ ಪರೀಕ್ಷೆ ಬರೆದ ಉಳಿದ 65 ವಿದ್ಯಾರ್ಥಿಗಳ ವಿಚಾರಣೆ ನಡೆಸಿಲ್ಲ. ಮತ್ತೊಂದೆಡೆ ಇನ್ನುಳಿದ 7 ಏಜೆಂಟ್ಗಳ ಮೂಲಕ ಎಷ್ಟು ಬ್ಲಾಕರ್ಸ್ಗಳು ನಿಖರವಾಗಿ ರಾಜ್ಯಕ್ಕೆ ಪ್ರವೇಶಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗಿಲ್ಲ.
ಈ ಪ್ರಕರಣದಲ್ಲಿ ಬಿಹಾರ್ ಕಾಂಗ್ರೆಸ್ನ ಮುಖಂಡ ಸಂಜೀವ್ ಸಿಂಗ್ ಬಾಗಿಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಪ್ರಕರಣದ ಪ್ರಮುಖ ಆರೋಪಿಗಳಾದ ಸಾಕೇತ್ಕುಮಾರ್, ಸಂಜಯ್ ಬಿಸ್ವಾಲ್ ಹಾಗೂ ರಾಜೀವ್ ಸಿಂಗ್ ಅವರು ಸಂಜೀವ್ ಸಿಂಗ್ನ ಸಿಬ್ಬಂದಿ ಎನ್ನುವುದು ಅವರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಸಾಬೀತಾಗಿದೆ.
ಸೀಟ್ ಬ್ಲಾಕಿಂಗ್ ಮಾಡುತ್ತಿರುವವರು ಹೊರ ರಾಜ್ಯದ ವಿದ್ಯಾರ್ಥಿಗಳೇ ಆಗಿರುವುದರಿಂದ ರಾಜ್ಯದ ಪೊಲೀಸರು ವಿಚಾರಣೆ ನಡೆಸುವುದು ಕಷ್ಟಸಾಧ್ಯ ಎನ್ನುವುದನ್ನು ರಾಜ್ಯ ಸರ್ಕಾರ ತಿಳಿದುಕೊಳ್ಳಲಿ. ಸಿಬಿಐ ತನಿಖೆ ಹಾಗೂ ಕಾಮೆಡ್-ಕೆ ಪರೀಕ್ಷೆ ಮತ್ತು ಪ್ರವೇಶ ಕ್ರಮಗಳಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡುವುದರಿಂದ ಮಾತ್ರ ನಿಯಂತ್ರಣ ಸಾಧ್ಯವಿದೆ.
ಆಗುತ್ತಿರುವ ನಷ್ಟವೇನು?
- ರಾಜ್ಯದ ವಿದ್ಯಾರ್ಥಿಗಳಿಗೆ ಸಿಗಬೇಕಿರುವ ಸೀಟುಗಳು ಪಕ್ಕದ ರಾಜ್ಯದ ಅನರ್ಹ ವಿದ್ಯಾರ್ಥಿಗಳ ಪಾಲಾಗುತ್ತಿದೆ.
- ಸೀಟ್ ಬ್ಲಾಕಿಂಗ್ ಮೂಲಕ ಖಾಸಗಿ ಆಡಳಿತ ಮಂಡಳಿ ಸೀಟುಗಳ ಮಾರಾಟ ದಂಧೆಗೆ ನಿಂತಿವೆ.
- ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಾಮೆಡ್-ಕೆ ಮೂಲಕ ಸೀಟು ಪಡೆಯುವುದು ಕಷ್ಟ ಎನ್ನುವ ಮಟ್ಟಿಗೆ ಪರಿಸ್ಥಿತಿ ನಿರ್ಮಾಣವಾಗಿದೆ.
- ಕಾಮೆಡ್-ಕೆನಲ್ಲಿ ಸರೆಂಡರ್ ಆಗುವ ಸೀಟುಗಳು ನೇರವಾಗಿ ಆಡಳಿತ ಮಂಡಳಿ ಕೋಟಾಕ್ಕೆ ಹೋಗುತ್ತಿರುವುದು ಈ ಅವಾಂತರಕ್ಕೆ ಕಾರಣ.
ಸಂಜೀವ್ ಯಾರು?
ಕಳೆದ 2010ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ಪಾಟ್ನಾ ಜಿಲ್ಲೆಯ ಬಿಕ್ರಮ್(ವಿಕ್ರಮ್) ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ. ಆ ಚುನಾವಣೆಯಲ್ಲಿ ಕೇವಲ 3256 ಮತಗಳನ್ನು ಪಡೆದು ಭಾರಿ ಸೋಲು ಅನುಭವಿಸಿದ್ದ. ಇತ್ತೀಚೆಗೆ ಬಿಹಾರ ಕಾಂಗ್ರೆಸ್ನ ಯುವ ಘಟಕದ ಅಧ್ಯಕ್ಷನಾಗಿ ನೇಮಕಗೊಂಡಿದ್ದ. 1996ರಲ್ಲಿ ಇದೇ ರೀತಿ ಅಕ್ರಮವಾಗಿ ಸೀಟು ಪಡೆದ ವಿಚಾರದಲ್ಲಿ ಸಿಬಿಐ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಸೀಟ್ ಬ್ಲಾಕಿಂಗ್ ಉದ್ದೇಶಕ್ಕಾಗಿಯೆ ಈತ ಕಚೇರಿ ಹೊಂದಿದ್ದಾನೆ ಎನ್ನುವುದು 16 ವಿದ್ಯಾರ್ಥಿಗಳು ನೀಡಿರುವ ಹೇಳಿಕೆಯಲ್ಲಿ ತಿಳಿದುಬರುತ್ತದೆ.
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


