ಆಂಧ್ರ ಹೋಳು

ಪಿಟಿಐ , ನವದೆಹಲಿ , ಜು.30
ತೆಲಂಗಾಣ ರಾಜ್ಯ ಬೇಕೇ ಬೇಕು ಎಂಬ ಐದು ದಶಕಗಳ ಹೋರಾಟಕ್ಕೆ ಮಂಗಳವಾರ ತೆರೆ ಬಿದ್ದಿದೆ. ದೇಶದ 29ನೇ ರಾಜ್ಯಕ್ಕೆ ಯುಪಿಎ ಸಮನ್ವಯ ಸಮಿತಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಹಸಿರು ನಿಶಾನೆ ತೋರಿವೆ. ಎರಡು ಸಭೆಗಳ ಬಳಿಕ ಆಂಧ್ರಪ್ರದೇಶದಲ್ಲಿನ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯಸಿಂಗ್ ಹೊಸ ರಾಜ್ಯದ ರಚನೆ ಬಗ್ಗೆ ಒಅಧಿಕೃತವಾಗಿ ಪ್ರಕಟಿಸಿದರು. ಬರೋಬ್ಬರಿ 4 ವರ್ಷಗಳ ಕಾಲ ಪ್ರತ್ಯೇಕ ರಾಜ್ಯ ಬೇಕು, ಬೇಡಗಳ ತಿಕ್ಕಾಟದ ನಂತರ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಹೊಸ ರಾಜ್ಯ ರಚನೆಗೆ ಧೈರ್ಯ ಮಾಡಿದೆ.
ಅವಿರೋಧ ನಿರ್ಣಯ: ಪ್ರಧಾನಿ ಮನಮೋಹನ್ ಸಿಂಗ್ ನಿವಾಸದಲ್ಲಿ ನಡೆದ ಯುಪಿಎ ಸಮನ್ವಯ ಸಮಿತಿ ಸಭೆಯಲ್ಲಿ ಹೊಸ ರಾಜ್ಯ ರಚನೆ ಬಗ್ಗೆ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಆರ್ಎಲ್ಡಿ ಮುಖ್ಯಸ್ಥ ಅಜಿತ್ ಸಿಂಗ್, ಎನ್ಸಿಪಿಯ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ನ ಡಾ.ಫಾರೂಕ್ ಅಬ್ದುಲ್ಲಾ, ಹಣಕಾಸು ಸಚಿವ ಚಿದಂಬರಂ, ಆಂಧ್ರ ಮುಖ್ಯಮಂತ್ರಿ ಕಿರಣ್ರೆಡ್ಡಿ ಇದ್ದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ಯುಪಿಎ ಸಮನ್ವಯ ಸಮಿತಿ ಸಭೆ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಅದರಲ್ಲೂ ಕೂಡ ಹೊಸ ರಾಜ್ಯದ ಬಗ್ಗೆ ಅವಿರೋಧವಾಗಿಯೇ ನಿರ್ಣಯ ಕೈಗೊಳ್ಳಲಾಯಿತು. 2009ರ ಡಿ.9ರಂದು ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಪ್ರತಿಭಟನೆ ತೀವ್ರಗೊಂಡ ಸಂದರ್ಭದಲ್ಲಿ ಅಂದಿನ ಗೃಹ ಸಚಿವ ಚಿದಂಬರಂ ಹೊಸ ರಾಜ್ಯ ರಚನೆಯ ಘೋಷಣೆ ಮಾಡಿದ್ದರು.
ಇಂದು ವಿಶೇಷ ಸಂಪುಟ ಸಭೆ
ಕೇಂದ್ರ ಸಚಿವ ಸಂಪುಟದ ವಿಶೇಷ ಸಭೆ ಬುಧವಾರ ನಡೆಯಲಿದೆ. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಗುರುವಾರ ಕೇಂದ್ರ ಸಂಪುಟದ ಸಾಮಾನ್ಯ ಸಭೆ ನಡೆಯಲಿದೆ.
ಇಂದು ಕಾಂಗ್ರೆಸ್ ಶಾಸಕರ ಸಭೆ: ಹೊಸ ರಾಜ್ಯ ರಚನೆಗೆ ಕಾಂಗ್ರೆಸ್ ಕೋರ್ ಕಮಿಟಿ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಯಲಸೀಮಾ ಪ್ರದೇಶದ ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಸಚಿವ ಟಿ.ಜಿ.ವೆಂಕಟೇಶ್ ತಿಳಿಸಿದ್ದಾರೆ.
ದಿಗ್ವಿಜಯ ಹೇಳಿದ್ದೇನು?
- ತೆಲಂಗಾಣ ರಾಜ್ಯ ರಚನೆ ಪ್ರಸ್ತಾಪ ಉಳಿದ ರಾಜ್ಯಗಳ ರಚನೆಗೆ ಪೂರಕ ಅಲ್ಲ. ಏಕೆಂದರೆ ತೆಲಂಗಾಣ ವಿಚಾರವೇ ಪ್ರತ್ಯೇಕ.
- ರಾಜಕೀಯ ಒತ್ತಡದಿಂದ ಹೊಸ ರಾಜ್ಯಕ್ಕೆ ಒಪ್ಪಿದ್ದಲ್ಲ. ಈ ನಿರ್ಣಯ ಕೈಗೊಳ್ಳಲು ಬಹಳ ಕಷ್ಟವಾಗಿತ್ತು.
- 10 ವರ್ಷ ಕಾಲ ಹೈದರಾಬಾದ್ನಲ್ಲಿಯೇ ಎರಡೂ ರಾಜ್ಯಗಳ ವಿಧಾನಸಭೆ ಕಲಾಪ ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ
- ಸೀಮಾಂಧ್ರಕ್ಕೆ ಮತ್ತು ಹೊಸ ರಾಜ್ಯದ ನಡುವೆ ನೀರು ಮತ್ತು ಇತರ ಸಂಪನ್ಮೂಲಗಳ ಹಂಚಿಕೆ, ರಕ್ಷಣೆಯ ವಿಚಾರದ ಬಗ್ಗೆ ಶೀಘ್ರವೇ ಸಮಾಲೋಚನೆ ನಡೆಸುತ್ತೇವೆ.
ಪ್ರಕ್ರಿಯೆ ಹೇಗೆ?
- ಭಾರತೀಯ ಸಂವಿಧಾನದ 3ನೇ ವಿಧಿಯ ಪ್ರಕಾರ ಹೊಸ ರಾಜ್ಯ ಘೋಷಣೆಗೆ ಅವಕಾಶ ಉಂಟು.
- ಕೇಂದ್ರ ಸಚಿವ ಸಂಪುಟ ಹೊಸ ರಾಜ್ಯ ರಚನೆಯ ಪ್ರಸ್ತಾಪವನ್ನು ರಾಷ್ಟ್ರಪತಿ ಮತ್ತು ಆಯಾ ವಿಧಾನಸಭೆಗೆ ನೀಡಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
- ಯಾವ ರಾಜ್ಯವನ್ನು ವಿಭಜನೆ ಮಾಡಿ ಹೊಸ ರಾಜ್ಯ ರಚನೆ ಮಾಡಲಾಗುತ್ತದೋ ಆ ಭಾಗದ ಶಾಸಕರ ಜತೆ ಚರ್ಚೆ ನಡೆಸಲಾಗುತ್ತದೆ.
- ರಾಷ್ಟ್ರಪತಿ ಅನುಮೋದನೆ ಪಡೆದ ಬಳಿಕ ಅದಕ್ಕೆ ಸಂಬಂಧಿಸಿದ ಮಸೂದೆಯನ್ನು ಸಂಸತ್ನಲ್ಲಿ ಮಂಡಿಸಲಾಗುತ್ತದೆ.
-ರಾಜ್ಯ ರಚನೆ ಪ್ರಕ್ರಿಯೆ ಮುಕ್ತಾಯವಾಗಲು ಇನ್ನೂ 6 ತಿಂಗಳು ಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


