ಬಹುಸಂಖ್ಯಾತರಿಗಾಗಿ ಮತ್ತೊಬ್ಬ ಗೃಹಮಂತ್ರಿ ಮಾಡ್ತಿರಾ?: ಬಿಎಸ್ವೈ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜೂ.2
ಅಲ್ಪಸಂಖ್ಯಾತರಿಗಾಗಿ ಒಬ್ಬ ಗೃಹಮಂತ್ರಿಯನ್ನು ಮಾಡಿದ್ದೀರಿ. ಬಹುಸಂಖ್ಯಾತರಿಗೆ ಇನ್ನೊಬ್ಬ ಗೃಹಮಂತ್ರಿಯನ್ನು ಮಾಡುತ್ತೀರಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯವನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಅವರ ಈ ಕಟು ಟೀಕೆಗೆ ಕಾರಣವೆಂದರೆ- ಇತ್ತೀಚೆಗೆ ಕೆಪಿಸಿಸಿ ಸಭೆಯಲ್ಲಿ ಸಿದ್ದರಾಮಯ್ಯ ಅವರು ಆಡಿದ ಮಾತುಗಳು.
ನಗರದಲ್ಲಿ ಭಾನುವಾರ ಮಾತನಾಡಿದ ಅವರು, 'ಹಿಂದಿನ ಸರ್ಕಾರವಿದ್ದಾಗ ಚರ್ಚ್ಗಳ ಮೇಲೆ ದಾಳಿ ನಡೆದ 3-4 ದಿನದಲ್ಲಿಯೇ ನಿಯಂತ್ರಣಕ್ಕೆ ತಂದಿದ್ದೆವು. ಒಂದೇ ಒಂದು ಕೋಮು ಗಲಭೆಯಾಗಿಲ್ಲ. ಅಲ್ಪಸಂಖ್ಯಾತರಿಗೆ ಆತಂಕ ತರುವ ಘಟನೆ ಯಾವಾಗ ಸೃಷ್ಟಿಯಾಗಿತ್ತು? ಅಂತಹ ವಾತಾವರಣ ಯಾವಾಗ ಇತ್ತು? ಅಂಥ ಒಂದೇ ಒಂದು ಘಟನೆ ಹೇಳಲಿ' ಎಂದು ಸವಾಲೆಸೆದರು.
ಈ ರೀತಿ ಜಾತಿ ವಿಷಬೀಜ ಬಿತ್ತುವುದು ಎಷ್ಟು ಸರಿ. ಇದೊಂದು ಬೇಜವಾಬ್ದಾರಿ ಹೇಳಿಕೆ ಎಂದ ಅವರು, 'ಅಲ್ಪಸಂಖ್ಯಾತರಿಗಾಗಿ ಅವರನ್ನು ಗೃಹಸಚಿವರನ್ನಾಗಿ ಮಾಡಿದ್ದರೆ ಬಹುಸಂಖ್ಯಾತರಿಗೆ ಇನ್ನೊಬ್ಬ ಗೃಹಸಚಿವರನ್ನು ಮಾಡ್ತೀರಾ?' ಎಂದು ಪ್ರಶ್ನಿಸಿದರು.
ಶ್ವೇತಪತ್ರ ಹೊರಡಿಸಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎನ್ನುತ್ತೀರಿ. ಮತ್ತೊಂದೆಡೆ ಹೊಸ ಯೋಜನೆಗಳನ್ನು ಘೋಷಿಸುತ್ತೀರಿ. ಏಕೆ ಈ ದ್ವಂದ್ವ? ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದಾದರೆ, ಈ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಸರ್ವಾಧಿಕಾರ ತೀರ್ಮಾನ ಬೇಡ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ತೆಗೆದುಕೊಂಡ ಕೆಲವು ತೀರ್ಮಾನಗಳು ಸರ್ವಾಧಿಕಾರದಿಂದ ಕೂಡಿವೆ ಎಂದು ಯಡಿಯೂರಪ್ಪ ಚಿಕ್ಕಮಗಳೂರಲ್ಲಿ ಹೇಳಿದ್ದಾರೆ.
ಅಧಿಕಾರಕ್ಕೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ನಾಯಕರು ಚಿಂತನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಹೇಳಿದ್ದೇನು?
ಇತ್ತೀಚೆಗೆ ಕೆಪಿಸಿಸಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಕೋಮುವಾದಿ ರಾಜಕಾರಣದ ಹಾದಿ ಹಿಡಿದ ಕಾರಣ ಅಲ್ಪಸಂಖ್ಯಾತರು ನಿರಂತರವಾಗಿ ಆತಂಕದಲ್ಲಿ ಬದುಕುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಅಂತಹ ಪರಿಸ್ಥಿತಿ ಇರಬಾರದು. ಅಲ್ಪಸಂಖ್ಯಾತರಿಗೆ ಧೈರ್ಯ ತುಂಬುವುದಕ್ಕೋಸ್ಕರ ಅದೇ ಸಮುದಾಯದ ಗೃಹಸಚಿವರನ್ನು ಮಾಡಿದ್ದೇವೆ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

