ಪ್ರಧಾನ ಸುದ್ದಿ

ಕೆಪಿಎಸ್ಸಿ ಪರೀಕ್ಷೆ ಅಕ್ರಮ; ತನಿಖೆಗೆ ಸಿಎಂ ಆದೇಶ

ಕೆಪಿಎಸ್ಸಿ ಪರೀಕ್ಷೆ ಅಕ್ರಮ; ತನಿಖೆಗೆ ಸಿಎಂ ಆದೇಶ
Published On :

ವಿಧಾನಸಭೆ: ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚೆಗೆ ನಡೆಸಿದ ಸಂದರ್ಶನ ಪರೀಕ್ಷೆಯ ಅಕ್ರಮಗಳ ಕುರಿತು ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದೆ. ಯಾವ ಸಂಸ್ಥೆಯಿಂದ ತನಿಖೆ ನಡೆಸಲಾಗುತ್ತದೆ ಎಂಬ ಕುರಿತು ಒಂದೆರಡು ದಿನಗಳಲ್ಲಿ ಆದೇಶ ಹೊರಡಿಸಲಿದೆ.
ಜತೆಗೆ ಈ ಪರೀಕ್ಷೆ ಮೂಲಕ ಸಿದ್ಧಪಡಿಸಿದ ಆಯ್ಕೆ ಪಟ್ಟಿಯನ್ನೂ ತಡೆಹಿಡಿಯಲು ಆದೇಶ ಹೊರಡಿಸಿದೆ. ಅಲ್ಲದೆ, ಕೆಪಿಎಸ್ಸಿಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಮಾದರಿಯಲ್ಲಿ ಪರೀಕ್ಷಾ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದೆ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಇತ್ತೀಚೆಗೆ ನಡೆದ ಮೌಖಿಕ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಈ ವಿಷಯ ಪ್ರಕಟಿಸಿದ್ದಾರೆ.
ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ ವಿಷಯದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಇತ್ತೀಚೆಗೆ ನಡೆದ 362 ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ನಡೆದ ಸಂದರ್ಶನದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸರ್ಕಾರದ ಗಮನಕ್ಕೂ ಬಂದಿದೆ. ಅದರಲ್ಲೂ ಮುಖ್ಯವಾಗಿ ಡಾ. ಮೈತ್ರಿ ಎಂಬುವರು ತಮಗೆ ನೇರವಾಗಿ ದೂರು ನೀಡಿದ್ದಾರೆ ಎಂಬುದನ್ನು ಸದನದ ಗಮನಕ್ಕೆ ತಂದರು.

ಕಡಿಮೆ ಅಂಕ: ಡಾ. ಮೈತ್ರಿ ಎಂಬ ಪರಿಶಿಷ್ಟ ಪಂಗಡದ ಮಹಿಳೆ ಕೆಪಿಎಸ್ಸಿ ನಡೆಸಿದ ಲಿಖಿತ ಪರೀಕ್ಷೆಯಲ್ಲಿ 1009 ಅಂಕ ಪಡೆದಿದ್ದರು. ಆದರೆ, ಅವರಿಗಿಂತ ಕಡಿಮೆ ಅಂಕ ಪಡೆದ (937.5) ಮಹಿಳೆ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು. ಇದರಿಂದ ಮೈತ್ರಿ ಅವರಿಗೆ ಉಪವಿಭಾಗಾಧಿಕಾರಿ ಹುದ್ದೆ ಕೈತಪ್ಪಿತು. ಹೀಗೆ ಹಲವು ಅಂಶಗಳನ್ನು ಅವರು ತಮ್ಮ ಗಮನಕ್ಕೆ ತಂದಿದ್ದಾರೆ.
ಮೂವರು ಅಧಿಕಾರಿಗಳು ಏಜೆಂಟರ ರೀತಿ ಕೆಲಸ ಮಾಡಿ ಕೆಪಿಎಸ್ಸಿ ಗೌರವ ಹಾಳು ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತಂತೆ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಕೆಪಿಎಸ್ಸಿ ನಡೆಸಿದ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಯ ಪರೀಕ್ಷೆ ಕುರಿತಂತೆ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ತನಿಖೆ ಆರಂಭವಾದ ಬಳಿಕ 2-3 ವಾರದಲ್ಲಿ ವರದಿ ನೀಡುವಂತೆ ಸೂಚಿಸಲಾಗುವುದು. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಂತಿಮ ಪಟ್ಟಿಗೆ ತಡೆ: ಕೆಪಿಎಸ್ಸಿ ಆಯ್ಕೆ ಮಾಡಿರುವ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳ ಅಭ್ಯರ್ಥಿಗಳ ಅಂತಿಮ ಪಟ್ಟಿ ಇನ್ನೂ ಸರ್ಕಾರದ ಕೈಸೇರಿಲ್ಲ. ಆದರೆ, ತನಿಖೆ ಪೂರ್ಣಗೊಂಡು ವರದಿ ಕೈಸೇರುವವರೆಗೆ ಅಂತಿಮ ಪಟ್ಟಿಯನ್ನು ತಡೆಹಿಡಿಯಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದರ ಜತೆಗೆ ಯುಪಿಎಸ್ಸಿಯಲ್ಲಿ ನಡೆಯುವ ಪರೀಕ್ಷಾ ಪದ್ಧತಿಯನ್ನು ಕೆಪಿಎಸ್ಸಿಯಲ್ಲೂ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ. ಯುಪಿಎಸ್ಸಿಯಲ್ಲಿ ಸಂದರ್ಶನ ಮುಗಿಯುವವರೆಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪ್ರಕಟಿಸುವುದಿಲ್ಲ. ಈ ಎಲ್ಲಾ ನಿಯಮಾವಳಿಗಳನ್ನು ಪರಿಶೀಲಿಸಿ ಕೆಪಿಎಸ್ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲಾಗುವುದು ಎಂದರು.

ಅಂತಿಮ ನಿರ್ಧಾರ ಕಾರ್ಯದರ್ಶಿಯವರದ್ದು: ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಸಂದರ್ಶನ ಅಂಕಗಳನ್ನು ಎಷ್ಟು ಹಾಕಬೇಕು ಎಂಬುದು ಕೆಪಿಎಸ್ಸಿ ಸದಸ್ಯರ ಪರಮಾಧಿಕಾರ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹೀಗಿರುವಾಗ ಅದರಲ್ಲಿ ಲೋಪ ಕಂಡುಹುಡುಕಿ ಸದಸ್ಯರನ್ನು ತಪ್ಪಿತಸ್ಥರು ಎಂದು ಹೇಳುವುದು ಸರಿಯಲ್ಲ. ಏಕೆಂದರೆ, ಕೆಪಿಎಸ್ಸಿ ನೇಮಕಾತಿಯಲ್ಲಿ ಸದಸ್ಯರು ಏನೇ ತೀರ್ಮಾನ ಕೈಗೊಂಡರೂ ಅಂತಿಮ ನಿರ್ಧಾರ ಕಾರ್ಯದರ್ಶಿ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.
ಈ ಕುರಿತು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲಿಖಿತ ಪರೀಕ್ಷೆ ನಡೆಸುವುದು ಕಾರ್ಯದರ್ಶಿಗಳ ವ್ಯಾಪ್ತಿಗೆ ಬರುತ್ತದೆ. ಆದರೆ, ಸಂದರ್ಶನ ನಡೆಸುವುದು ಮತ್ತು ಅಂಕ ನೀಡುವುದು ಸದಸ್ಯರ ವ್ಯಾಪ್ತಿಗೆ ಬರುತ್ತದೆ. ಪ್ರಸ್ತುತ ಸಂದರ್ಶನ ಅಂಕ ನೀಡುವ ವಿಚಾರದಲ್ಲೇ ಆರೋಪವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.