ಗರ್ಭಿಣಿ ಪತ್ನಿಯ ಹೊತ್ತು 40 ಕಿ.ಮೀ. ನಡೆದ ಅಯ್ಯಪ್ಪನ್!
ಕೊಟ್ಟಾಯಂ: ಅಪ್ಪ ಅಮ್ಮನನ್ನು ಹೊತ್ತುಕೊಂಡು ತೀರ್ಥಕ್ಷೇತ್ರಗಳಿಗೆ ಕರೆದೊಯ್ಯುವ ಮೂಲಕ ಹೆತ್ತವರ ಕೊನೆಯ ಆಸೆ ತೀರಿಸಿದ ಶ್ರವಣಕುಮಾರನ ಕಥೆ ಕೇಳಿದ್ದೀರಿ. ಅದೇ ರೀತಿ ಇಲ್ಲೊಬ್ಬ ಪತಿ ಗರ್ಭಿಣಿ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಗಾಳಿ, ಮಳೆ ಲೆಕ್ಕಿಸದೆ ಬರೋಬ್ಬರಿ 40 ಕಿ.ಮೀ. ನಡೆದು ಪ್ರೀತಿ ಮೆರೆದಿದ್ದಾನೆ.
ಪರಿವೆಯೇ ಇರಲಿಲ್ಲ: ಬುಡಕಟ್ಟು ಯುವಕ ಅಯ್ಯಪ್ಪನ್ ಹಾಗೂ ಪತ್ನಿ ಸುಧಾ ಕೊನ್ನಿ ಅರಣ್ಯದಲ್ಲಿ ವಾಸಿಸುತ್ತಿದ್ದರು. ಜೇನು ಹಾಗೂ ಇತರ ಅರಣ್ಯ ಉತ್ಪನ್ನಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಸುಧಾ 7 ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯನ್ನು ಅರಣ್ಯದಿಂದ ಆಸ್ಪತ್ರೆಗೆ ಸಾಗಿಸುವುದು ಹೇಗೆ ಎಂಬ ಚಿಂತೆ ಅಯ್ಯಪ್ಪನ್ನನ್ನು ಕಾಡತೊಡಗಿತು. ದೃಢ ನಿರ್ಧಾರಕ್ಕೆ ಬಂದ ಆತ ಪತ್ನಿ ಸುಧಾಳನ್ನು ಹೊತ್ತುಕೊಂಡು ನಡೆದೇ ಬಿಟ್ಟ. ಆತನ ಮನಸ್ಸಿನಲ್ಲಿ ಪತ್ನಿ, ಮಗುವನ್ನು ಉಳಿಸಿಕೊಳ್ಳಬೇಕು ಎಂಬ ಒಂದೇ ಒಂದು ಆಸೆ ಮನೆಮಾಡಿತ್ತು. ಕಳೆದ ಮಂಗಳವಾರ ಬೆಳಗ್ಗೆ ಕೊಕ್ಕತೋಡ್ ತಲುಪಿದ ಅಯ್ಯಪ್ಪನ್ ನಂತರ ಜೀಪೊಂದರಲ್ಲಿ ಪತ್ನಿಯನ್ನು ಪಟ್ಟಣಂತಿಟ್ಟದ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪತ್ನಿ ಸುಧಾಳಿಗೆ ಚಳಿಯಿಂದ ನಡುಕ ಜೋರಾಗಿದ್ದರಿಂದಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸುವಂತೆ ಪಟ್ಟಣಂತಿಟ್ಟ ಜಿಲ್ಲಾ ಆಸ್ಪತ್ರೆ ವೈದ್ಯರು ಸಲಹೆ ನೀಡಿದ್ದರು.
ಶಿಶುವನ್ನು ಉಳಿಸಿಕೊಳ್ಳಲಾಗಲಿಲ್ಲ: ವೈದ್ಯರ ಸಲಹೆಯಂತೆ ಸುಧಾಳನ್ನು ಕೊಟ್ಟಾಯಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಗೆ ಚಳಿ, ರಕ್ತದೊತ್ತಡ ಹೆಚ್ಚಾಗಿ ಜೀವಕೋಶಗಳಲ್ಲಿ ನೀರು ತುಂಬಿದ್ದರಿಂದಾಗಿ ಶಿಶು ಗರ್ಭದಲ್ಲೇ ಸಾವನ್ನಪ್ಪಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

