ಅಧಿಕಾರಕ್ಕೇರಿ ತಿಂಗಳಿಲ್ಲ; ಘೋಷಣೆಗೆ ಬರವಿಲ್ಲ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ. 14-
ಅಧಿಕಾರ ಕಂಡು ತಿಂಗಳಾಗಿಲ್ಲ, ಇಲಾಖೆಯ ಸ್ವರೂಪ ಅರಿತಿಲ್ಲ. ಸಾಧಕ-ಬಾಧಕದ ಅರಿವಿಲ್ಲ. ಆದರೂ ಸಚಿವರಿಂದ ಹತ್ತಾರು ಘೋಷಣೆಗಳು ಮೊಳಗುತ್ತಲೇ ಇವೆ.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತರಾತುರಿಯ ನಿರ್ಧಾರಗಳ ಜಾಡ್ಯ ಸಚಿವರಿಗೂ ಅಂಟಿದೆ. ಅದಕ್ಕೆ ಹೋದ ಬಂದ ಕಡೆಯಲೆಲ್ಲ ಘೋಷಣೆಗಳದ್ದೇ ಸುರಿಮಳೆ. ಆ ಪ್ರಕಟಣೆಗಳಿಗೆ ಮುಂದಿನ ಎಡರು-ತೊಡರುಗಳ ಚಿಂತನೆಯೇ ಇಲ್ಲ. ಏಕೀ ಆತುರ ಸಚಿವರೇ? ನಿಧಾನಿಸಿ, ನಿಧಾನಿಸಿ...
'ನಿಧಾನವಾದರೆ ಆಮೆನಡೆ ಅಂತೀರಿ, ವೇಗವಾದರೆ ಆತುರ ಅಂತೀರಿ' ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರವೇ ಮರುಕಳಿಸುತ್ತದೆ. 'ಅತಿ ವೇಗ ಅಪಘಾತಕ್ಕೆ ಕಾರಣ' ಎಂದು ನಾಗರಿಕರಿಗೆ ಸರ್ಕಾರ ಹೇಳುತ್ತದೆ. ವೇಗವೂ ಬೇಡ, ನಿಧಾನವೂ ಬೇಡ. 'ಸ್ಟಡಿ'ಯಾಗಿ ಮುನ್ನುಗ್ಗಿದರೆ ಸಾಕು. ಇದನ್ನು ಸಚಿವರೂ ತಿಳಿದುಕೊಂಡರೆ ಒಳ್ಳೆಯದು. ಕನಿಷ್ಠ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡು ಕೆಲವೇ ಗಂಟೆಗಳಲ್ಲಿ ಘೋಷಿಸಿದ ಯೋಜನೆಗಳ ಸ್ಥಿತಿಯನ್ನಾದರೂ ಅರಿತುಕೊಂಡರೆ ಒಳಿತು.
ಕಾಂಗ್ರೆಸ್ ಸರ್ಕಾರದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು ಮೇ 18ರಂದು. ಅಂದರೆ 27 ದಿನಗಳು ಕಳೆದಿವೆ. ಇದರಲ್ಲಿ 11 ದಿನ ವಿಧಾನಸಭೆ ಅಧಿವೇಶನ. ಉಳಿದದ್ದು 16 ದಿನ. ಇಷ್ಟರಲ್ಲೇ ಸಚಿವರು ಇಲಾಖೆಯನ್ನು ಅಳೆದು-ತೂಗಲು ಸಾಧ್ಯವೇ? ಖಂಡಿತಾ ಸಾಧ್ಯ ಇಲ್ಲ. ಅದನ್ನೇ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಕೂಡ ಹೇಳಿದ್ದು. ಇಲಾಖೆಯನ್ನು ಅರಿತುಕೊಳ್ಳಿ, ನಂತರ ಮಾತನಾಡಿ ಎಂದು. ಆದರೆ ಸಚಿವರು ಇತ್ತ ಗಮನಹರಿಸಿಯೇ ಇಲ್ಲ. ಅವರಂತೆಯೇ ಸಾಗಿದ್ದಾರೆ.
ಕೆಲವು ಸಚಿವರ ಘೋಷಣೆಗಳನ್ನು ಒಂದು ಬಾರಿ ಗಮನಿಸಿ: ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಗುಟ್ಕಾ ನಿಷೇಧಕ್ಕೆ ದೊರೆತ ಪ್ರೋತ್ಸಾಹದಿಂದ ಹಿರಿಹಿರಿಹಿಗ್ಗಿ ಹೋಗಿದ್ದಾರೆ. ಸಿಗರೇಟ್ ಕೂಡ ನಿಷೇಧ ಮಾಡುತ್ತೇನೆ ಎಂದು ಹೋದಲೆಲ್ಲಾ ಹೇಳುತ್ತಿದ್ದಾರೆ. ಇನ್ನೂ ಮುಂದಕ್ಕೆ ಹೋಗಿ ವೃದ್ಧರಿಗೆಲ್ಲ ಉಚಿತವಾಗಿ ಹಲ್ಲು ಸೆಟ್ ನೀಡುತ್ತೇನೆ ಎಂದಿದ್ದಾರೆ. ಇದಕ್ಕೆ ಎಷ್ಟು ಹಣ ಬೇಕು, ರಾಜ್ಯದಲ್ಲಿ ಎಷ್ಟು ವೃದ್ಧರಿದ್ದಾರೆ. ಎಷ್ಟು ಜನಕ್ಕೆ ಹಲ್ಲು ಸೆಟ್ ಅಗತ್ಯ ಇದೆ ಎಂಬುದನ್ನೇನಾದರೂ ಸಮೀಕ್ಷೆ ನಡೆಸಿದ್ದಾರಾ? ಇಲ್ಲ, ಅದೇನೂ ಇಲ್ಲ. ಘೋಷಣೆ ಮಾತ್ರ ಆಗಿಹೋಯಿತು.
ಇನ್ನು, ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ಅವರಂತೂ ಎಲ್ಲರಿಗಿಂತ ಒಂದೆರಡು ಹೆಜ್ಜೆ ಮುಂದೆ ಹೋಗಿ 1000 ಕೋಟಿ ರುಪಾಯಿಗಳ ಅಂತಾರಾಷ್ಟ್ರೀಯ ಜವಳಿ ಪಾರ್ಕ್ ಸ್ಥಾಪನೆಯನ್ನೇ ಘೋಷಿಸಿಬಿಟ್ಟಿದ್ದಾರೆ. ಒಂದು ಸಾವಿರ ಕೋಟಿ ರುಪಾಯಿ, ಒಂದು ಸಾವಿರ ಎಕರೆ ಭೂಮಿ ಎಂದರೆ ಸುಮ್ಮನೆಯೇ? ಸಚಿವ ಸಂಪುಟ ಸೇರಿದಂತೆ ಎಷ್ಟೆಲ್ಲ ಮಂಜೂರು ಬೇಕು. ಪ್ರಾಥಮಿಕ ಹಂತದ ಪ್ರಕ್ರಿಯೆಯೇ ಪ್ರಾರಂಭವಾಗದಿದ್ದರೂ ಘೋಷಣೆಗೆ ಹಿಂದೇಟೇ ಹಾಕಿಲ್ಲ.
ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ್ ಅವರು ಥೇಮ್ಸ್ ನದಿಯಂತೆಯೇ ಅರ್ಕಾವತಿ ನದಿ ಹರಿಸುವುದಾಗಿ ಹೇಳಿದ್ದಾರೆ. ಯಾವುದೋ ಒಂದೆರಡು ದೇಶಕ್ಕೆ ಹೋಗಿ ಒಂದು ಅಧ್ಯಯನ ಮಾಡಿ ಒಂದು ವರದಿ ಮಾಡಿಕೊಟ್ಟ ಅಧಿಕಾರಿಯ ಯೋಜನೆ ಇಲ್ಲಿ ಕಾರ್ಯಗತವಾಗುತ್ತದೆಯೇ? ಅಷ್ಟು ಹಣ ನೀಡಲು ಸಾಧ್ಯವೇ? ಒಂದು ಬಾರಿಯಾದರೂ ಅರ್ಕಾವತಿ ನದಿ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದಾರೆಯೇ? ಇಲ್ಲ, ಘೋಷಣೆಗಷ್ಟೇ ಪ್ರಾಶಸ್ತ್ಯ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ಅವರು ಎಸ್.ಎಂ. ಕೃಷ್ಣ ಕಾಲದ ಯೋಜನೆ ಒಂದು ವಾರದಲ್ಲಿ ಅನುಷ್ಠಾನ ಎಂದರು. ಕಡತಗಳು ಎಲ್ಲಿವೆ ಎಂಬುದು ಆನ್‌ಲೈನ್‌ನಲ್ಲಿ ಮಾಹಿತಿ ಸಿಗುತ್ತದೆ, ಅದನ್ನು ಪಾಲಿಸದಿದ್ದರೆ ಶಿಸ್ತು ಕ್ರಮ ಎಂದೂ ಎಚ್ಚರಿಸಿದ್ದರು. ಈವರೆಗೆ ಆ ಇಲಾಖೆಯ ವೆಬ್‌ಸೈಟ್‌ನಲ್ಲಿ ಕಡತದ ಬಗ್ಗೆ ಸಣ್ಣ ಅಕ್ಷರವೂ ನಮೂದಾಗಿಲ್ಲ.
ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು 30 ವರ್ಷ ದಲಿತರು ತಮಗೆ ಮಂಜೂರಾದ ಜಮೀನು ಮಾರಾಟ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದೇನೆ ಎಂದರು. ಇದಕ್ಕೆಲ್ಲ, ಕಾನೂನಿನಲ್ಲಿ ತಿದ್ದುಪಡಿಯಾಗಬೇಕು, ಇಲ್ಲದಿದ್ದರೆ ಏನೂ ಸಾಧ್ಯ ಇಲ್ಲ ಎಂಬುದು ಹಿರಿಯ ಸಚಿವರೂ ಮರೆತು ಘೋಷಣೆ ಮಾಡಿಬಿಟ್ಟಿದ್ದಾರೆ.
ಗೃಹ ಸಚಿವ ಕೆ.ಜೆ. ಜಾರ್ಜ್‌ಅವರಂತೂ ಪೊಲೀಸರನ್ನು ಹಿಂದಿನ ಕಾಲಕ್ಕೆ ಕೊಂಡೊಯ್ಯಲು ಸನ್ನದ್ಧರಾಗಿದ್ದಾರೆ. ಕನಿಷ್ಠ ವಾರದ ರಜೆಯೂ ಇಲ್ಲದೆ ಕಾರ್ಯನಿರ್ವಹಿಸುವ ಪೊಲೀಸ್ ಪೇದೆಗಳನ್ನು ಚೀತಾದಿಂದ ನೆಲದ ಮೇಲಕ್ಕೆ ಇಳಿಸಲು ಮುನ್ನುಗ್ಗುತ್ತಿದ್ದಾರೆ. ಚೀತಾ ಬದಲು ಸೈಕಲ್ ನೀಡುತ್ತೇವೆ. ನಡೆದುಕೊಂಡು ಬೀಟ್ ಮಾಡಲಿ ಎಂದಿದ್ದಾರೆ. ಬೈಕ್ ರೇಸ್‌ನಲ್ಲಿ ಓಡುವಂತೆ ಕಳ್ಳ ಓಡಿದರೆ, ಅವರ ಹಿಂದೆ ಪೊಲೀಸರು ಹೋಗುವುದಾದರೂ ಹೇಗೆ?
ಸಚಿವರು ವೇಗವಾಗಿ ಹೊರಟಿರುವುದು, ಘೋಷಣೆಗಳನ್ನು ಮಾಡುತ್ತಿರುವುದು ತಪ್ಪಲ್ಲ. ಆದರೆ, ಅದರ ಬಗ್ಗೆ ಸಮಗ್ರವಾಗಿ ಪರಿಶೀಲನೆ, ಚರ್ಚೆ ನಡೆಸಿ ಅದಕ್ಕೊಂದು ರೂಪ ಕೊಟ್ಟು ಜಾರಿ ಮಾಡಬೇಕಾಗುತ್ತದೆ. ಅದಕ್ಕೆ 'ಗ್ರೌಂಡ್ ವರ್ಕ್' ಆಗಬೇಕು. ಅದಿಲ್ಲದೆ ಘೋಷಣೆಯಾದರೆ, ಒಂದು ರುಪಾಯಿ ಅಕ್ಕಿಗಾದ ಪರಿಸ್ಥಿತಿಯೇ ಎಲ್ಲ ಯೋಜನೆಗಳಿಗೂ ಆಗುತ್ತದೆ.
ವೇಗ ಇರಬಾರದು, ಆತುರ ಇರಬಾರದು ಎಂದೇನೂ ಇಲ್ಲ. ಅದಕ್ಕೊಂದು ನಿರ್ದಿಷ್ಟ ರೂಪ ಇರಬೇಕಷ್ಟೇ. ಎಲ್ಲ ರೂಪು-ರೇಷೆಗಳನ್ನು ಮುಗಿಸಿ, ಅಡೆತಡೆಗಳಿಗೆಲ್ಲ ನಿವಾರಣೆ ರೂಢಿಸಿಕೊಂಡು ಯೋಜನೆಯೊಂದರ ಪ್ರಕಟಣೆಯಾದರೆ ಶಹಭಾಷ್‌ಗಿರಿ ಕೇಳಬೇಕಾಗುವುದಿಲ್ಲ. ಘೋಷಣೆ ಕಾರ್ಯಗತ ಸ್ವಲ್ಪ ನಿಧಾನವಾದರೆ ಮಾತ್ರ ಎಲ್ಲ ದಿಕ್ಕುಗಳಿಂದಲೂ ಮೂದಲಿಕೆ ಪ್ರಾರಂಭವಾಗುತ್ತದೆ. ಹೀಗಾಗಿ, ಎಚ್ಚರಿಕೆ ನಡೆಯೇ ಸೂಕ್ತ.
ಸಚಿವರ ಘೋಷಣೆ
ಪೊಲೀಸರು ಇನ್ನು ಮುಂದೆ ನೈಟ್ ಬೀಟ್ ಅನ್ನು ನಡೆದುಕೊಂಡು ಹಾಗೂ ಸೈಕಲ್ ಮೂಲಕ ಮಾಡಬೇಕು. ಚೀತಾ ಬೈಕ್ ಬದಲು ಅವರಿಗೆ ಸೈಕಲ್ ನೀಡಲಿದ್ದೇವೆ.
- ಕೆ.ಜೆ.ಜಾರ್ಜ್, ಗೃಹ ಸಚಿವ
ರಾಜ್ಯದಲ್ಲಿ ಬೀಡಿ ಸಿಗರೇಟು ನಿಷೇಧದ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ. 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಸರ್ಕಾರದಿಂದ ಉಚಿತ ಹಲ್ಲು ಸೆಟ್ ಕೊಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.
- ಯು.ಟಿ.ಖಾದರ್, ಆರೋಗ್ಯ ಸಚಿವ
ಯಾದಗಿರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಮಾಡಲಾಗುತ್ತದೆ. ಅದಕ್ಕೆ 1 ಸಾವಿರ ಕೋಟಿ ವೆಚ್ಚವಾಗಲಿದೆ. ಜತೆಗೆ ಒಂದು ಸಾವಿರ ಎಕರೆ ಭೂಮಿಯೂ ಅಗತ್ಯವಿದೆ.
-ಬಾಬು ರಾವ್ ಚಿಂಚನಸೂರ್, ಜವಳಿ ಸಚಿವ
ಅರ್ಕಾವತಿ ನದಿಯನ್ನು ಮತ್ತೆ ಪುನರುಜ್ಜೀವನ ಮಾಡುವುದು ಸರ್ಕಾರದ ಪ್ರಥಮ ಆದ್ಯತೆ. ಲಂಡನ್‌ನಲ್ಲಿ ಹರಿಯುವ ಥೇಮ್ಸ್ ನದಿಯಂತೆ ನದಿಯನ್ನು ಅಭಿವೃದ್ಧಿ ಮಾಡುತ್ತೇವೆ.
- ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ
30 ವರ್ಷ ದಲಿತರು ತಮಗೆ ಮಂಜೂರಾದ ಜಮೀನು ಮಾರಾಟ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದ್ದೇನೆ.
-ಶ್ರೀನಿವಾಸಪ್ರಸಾದ್, ಕಂದಾಯ ಸಚಿವ
- ಕೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

