ಪ್ರಧಾನ ಸುದ್ದಿ

ಪ್ರಾಥಮಿಕ ಶಾಲಾ ಶಿಕ್ಷಕರಿಗೇ ಸೂಕ್ತ ತರಬೇತಿ ಇಲ್ಲ: ಡಾ. ಅಬೂಬಕ್ಕರ್

Published On :

ಬೆಂಗಳೂರು: ಸೂಕ್ತ ತರಬೇತಿ ಇರದ ಅಧ್ಯಾಪಕರಿಂದಾಗಿ ಪ್ರಾಥಮಿಕ ಶಿಕ್ಷಣ ಅಧ್ವಾನವಾಗಿದೆ ಎಂದು ಸಾಹಿತಿ ಡಾ. ಸಾರಾ ಅಬೂಬಕ್ಕರ್ ಅಭಿಪ್ರಾಯಪಟ್ಟಿದ್ದಾರೆ.
'ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಶಸ್ತಿ ಸಮಿತಿ' ಮತ್ತು 'ಡಾ.ಮಾಸ್ತಿ ಟ್ರಸ್ಟ್ ಕೋಲಾರ' ನಗರದಲ್ಲಿ ಭಾನುವಾರ ಜಂಟಿಯಾಗಿ ಏರ್ಪಡಿಸಿದ್ದ 'ಮಾಸ್ತಿ ಪ್ರಶಸ್ತಿ ಪ್ರದಾನ' ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ರಾಜ್ಯದಲ್ಲಿರುವ ಬಹುತೇಕ ಪ್ರಾಥಮಿಕ ಶಾಲಾ ಶಿಕ್ಷಕರು ಸೂಕ್ತ ತರಬೇತಿ ಹೊಂದಿಲ್ಲ. ಮತ್ತೆ ಕೆಲವರು ಮಕ್ಕಳಿಗೆ ಸರಿಯಾಗಿ ಕಾಪಿ ಬರೆಯುವುದನ್ನು, ಮಗ್ಗಿ ಹೇಳುವುದನ್ನು ಕಲಿಸುತ್ತಿಲ್ಲ. ಹಾಗಾಗಿ, ವರ್ಷಗಟ್ಟಲೆ ಕನ್ನಡ ಕಲಿತರೂ ಎಸ್‌ಎಸ್‌ಎಲ್‌ಸಿಯಲ್ಲಿ ಮಕ್ಕಳು ಕನ್ನಡ ಪಾಸು ಮಾಡುವುದೇ ಕಷ್ಟವಾಗಿದೆ. ಹಾಗಾಗಿಯೇ ಪ್ರತಿಸಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಅಗ್ರಸ್ಥಾನದಲ್ಲಿ ಇರುತ್ತಿದ್ದ ದಕ್ಷಿಣಕನ್ನಡ ಈ ಬಾರಿ 26ನೇ ಸ್ಥಾನ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜತೆಗೆ, ಕಾಸರಗೋಡು ಕೇರಳಕ್ಕೆ ಸೇರಿರುವುದರಿಂದ ಅಲ್ಲಿನ ಕನ್ನಡಿಗರಿಗೆ ತೊಂದರೆಯಾಗಿದೆ ಎಂದು ಹೇಳಿದರು. ಸಾಹಿತಿ ಕೋ. ಚನ್ನಬಸಪ್ಪ ಅವರು ಮಾತನಾಡಿ, ರಾಜಕಾರಣಿಗಳು ಸಾಹಿತ್ಯ ವೇದಿಕೆಯಲ್ಲಿ ಹಾಗೂ ಸಾಹಿತಿಗಳು ರಾಜಕೀಯ ಕಾರ್ಯಕ್ರಮಗಳಲ್ಲಿ ಸೇರಿದರೆ ಟೀಕಿಸುವುದು ಸರಿಯಲ್ಲ. ಏಕೆಂದರೆ ರಾಜಕಾರಣಿಗಳು ಮತ್ತು ಸಾಹಿತಿಗಳಿಬ್ಬರು ಮಾಡುವುದು ಸಮಾಜ ಸುಧಾರಣೆ ಕೆಲಸ. ಸಾಹಿತಿಗಳು ಚಿಂತನೆ ನಡೆಸಿದರೆ ಅದನ್ನು ಕಾರ್ಯರೂಪಕ್ಕೆ ತರುವುದು ರಾಜಕಾರಣಿಗಳ ಕೆಲಸ ಎಂದು ತಿಳಿಸಿದರು. ಡಾ.ಸಿ.ಎನ್. ರಾಮಚಂದ್ರನ್, ಡಾ. ಸಾರಾ ಅಬೂಬಕ್ಕರ್ ಮತ್ತು ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರಿಗೆ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು 'ಮಾಸ್ತಿ ಪ್ರಶಸ್ತಿ' ಪ್ರದಾನ ಮಾಡಿದರು. ರಾಮಚಂದ್ರ, ಅನುಪಮಾ ಪ್ರಸಾದ್, ಚಿಂತಾಮಣಿಕೊಡ್ಲಕೆರೆ ಅವರಿಗೆ ಹಾಗೂ ಸುಮುಖ, ಪಲ್ಲವ ಮತ್ತು ಅಂಕಿತ ಪ್ರಕಾಶನದವರಿಗೆ ಮಾಸ್ತಿ ಕಥಾಪುರಸ್ಕಾರ ನೀಡಿ ಗೌರವಿಸಲಾಯಿತು. ವಿಮರ್ಶಕ ಎಸ್.ಆರ್. ವಿಜಯಶಂಕರ್ ಅವರು ಅಭಿನಂದನಾ ನುಡಿಗಳನ್ನಾಡಿದರು. ಮಾಸ್ತಿ ಪ್ರಶಸ್ತಿ ಸಮಿತಿ- ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.