ಪ್ರಧಾನ ಸುದ್ದಿ

ಬಾಯಾರಿದವರಿಗೆ ಅಗ್ಗದಲ್ಲಿ ಶುದ್ಧ ನೀರು!

Published On :

ಕ.ಪ್ರ. ವಾರ್ತೆ  ಬೆಂಗಳೂರು  ಜೂ.16-
ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ನೀರು ಪೂರೈಕೆಗೆ ಸರ್ಕಾರ ಪ್ರತಿ ವರ್ಷ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದ್ದರೂ ವರ್ಷ ಕಳೆದಂತೆ ಸಮಸ್ಯೆ ಬಿಗಡಾಯಿಸುತ್ತಿದೆಯೇ ಹೊರತು ಪರಿಹಾರ ಕಾಣುತ್ತಿಲ್ಲ.
ಈ ನಿಟ್ಟಿನಲ್ಲಿ ಹೊಸ ಸರ್ಕಾರ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಹಮ್ಮಿಕೊಂಡಿದೆ. ಇದಕ್ಕೆ ಈ ವರ್ಷವೇ ಚಾಲನೆ ನೀಡಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ ಸಾವಿರ ಹಳ್ಳಿಗಳಲ್ಲಿ ಈ ಶುದ್ಧ ಕುಡಿಯುವ ನೀರು ಪೂರೈಸುವ ಘಟಕಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ. ಈ ಯೋಜನೆ ಜಾರಿಯಾದರೆ ಹಳ್ಳಿಗಳಲ್ಲಿ 1ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರು ಸಾರ್ವಜನಿಕರಿಗೆ ಲಭ್ಯವಾಗಲಿದೆ.
ಆಗಸ್ಟ್ 15ರಂದು ಈ ಯೋಜನೆ ಜಾರಿಗೆ ಬರುವುದು ಬಹುತೇಕ ಖಚಿತ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಪ್ಪಿದ್ದು, ಜುಲೈ ತಿಂಗಳಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಾಗಿಯೂ ಭರವಸೆ ನೀಡಿದ್ದಾರೆ.
ಈ ಹಿಂದೆ ಗದಗನಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿರುವ ಕೆ.ಎಚ್. ಪಾಟೀಲ್ ಫೌಂಡೇಶನ್‌ನ ಸಹಕಾರದೊಂದಿಗೆ ಅಥವಾ ಸರ್ಕಾರದ ನೆರವಿನೊಂದಿಗೆ ಫೌಂಡೇಶನ್ ಮೂಲಕ ಯೋಜನೆ ಜಾರಿಗೊಳಿಸಬೇಕೆ ಎಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹಳ್ಳಿಗಳನ್ನು ಗುರುತಿಸುವ ಕಾರ್ಯ ಆರಂಭ: ಈ ಯೋಜನೆಯಡಿ ಹಳ್ಳಿಗಳನ್ನು ಗುರುತಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಎಲ್ಲಾ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ಕುರಿತಂತೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಕೆಲವು ಮಾನದಂಡಗಳನ್ನೂ ನಿಗದಿಪಡಿಸಲಾಗಿದ್ದು, ಹಳ್ಳಿಗಳನ್ನು ಗುರುತಿಸುವ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ.
 ಶುದ್ಧ ಕುಡಿಯುವ ನೀರಿನ ಘಟಕವನ್ನು ಹಳ್ಳಿಯ ಕೇಂದ್ರ ಭಾಗದಲ್ಲಿ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಆಯಾ ಗ್ರಾಮ ಪಂಚಾಯ್ತಿಯವರು ಇಲ್ಲವೇ ಸ್ಥಳೀಯರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಬೇಕು. ಈ ಸಂದರ್ಭದಲ್ಲಿ ಸರ್ಕಾರಿ ಕಟ್ಟಡವಿದ್ದರೆ ಅಲ್ಲಿ ಅಳವಡಿಸಲಾಗುತ್ತದೆ. ಇಲ್ಲದೇ ಇದ್ದರೆ ಖಾಸಗಿಯವರಿಗೆ ಸೇರಿದ ಕಟ್ಟಡದಲ್ಲಿ ಘಟಕ ಸ್ಥಾಪಿಸುವ ಬಗ್ಗೆ ಕಟ್ಟಡ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡು ಒಪ್ಪಂದ ಪತ್ರವನ್ನು ಪ್ರಸ್ತಾವದ ಜತೆ ಸಲ್ಲಿಸಬೇಕಾಗುತ್ತದೆ. ಪ್ರಸ್ತಾವಗಳು ಬಂದ ಬಳಿಕ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಳ್ಳಿಯ ಜನಸಂಖ್ಯೆ ಆಧರಿಸಿ ಹೆಚ್ಚು ಜನಸಂಖ್ಯೆ ಇರುವ ಹಳ್ಳಿಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡುತ್ತಾರೆ.
ಇನ್ನೊಂದೆಡೆ ಕುಡಿಯುವ ನೀರು ಅಶುದ್ಧವಾಗಿ ಜನ ತೊಂದರೆ ಅನುಭವಿಸುತ್ತಿರುವ ಹಳ್ಳಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರೇ ಖುದ್ದಾಗಿ ಭೇಟಿ ನೀಡುತ್ತಿದ್ದಾರೆ. ಹಳ್ಳಿಗಳನ್ನು ಆಯ್ಕೆ ಮಾಡುವಾಗ ಇಂತಹುದ್ದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.

ಘಟಕ ವೆಚ್ಚ: ಸ್ವಂತ ಕಟ್ಟಡ ಹೊಂದಿದ್ದರೆ ಶುದ್ಧ ಕುಡಿಯುವ ನೀರಿನ ಒಂದು ಘಟಕ ಸ್ಥಾಪಿಸಲು 3ರಿಂದ 4 ಲಕ್ಷ ವೆಚ್ಚ ಅಂದಾಜು ಮಾಡಲಾಗಿದೆ. ಘಟಕವನ್ನು ಎಟಿಎಂ ರೀತಿ ಆಧುನಿಕವಾಗಿ ನಿರ್ಮಿಸುವುದಾದರೆ ಅದಕ್ಕೆ 5ರಿಂದ 6 ಲಕ್ಷ ವೆಚ್ಚ ಅಂದಾಜು ಮಾಡಲಾಗಿದೆ. ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ನಿಗದಿಪಡಿಸುವ ಅನುದಾನ ಪರಿಗಣಿಸಿ ಯಾವ ಮಾದರಿಯಲ್ಲಿ ಘಟಕ ನಿರ್ಮಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

ಏನಿದು ಶುದ್ಧ ಕುಡಿಯುವ ನೀರಿನ ಯೋಜನೆ?
ಹಾಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಕಳೆದ ಬೇಸಿಗೆಯಲ್ಲಿ ಗದಗ ಜಿಲ್ಲೆಯಲ್ಲಿ ಕೆ.ಎಚ್. ಪಾಟೀಲ್ ಫೌಂಡೇಶನ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರು. ಇದು ದೇಶಾದ್ಯಂತ ತೀವ್ರ ಪ್ರಶಂಸೆಗೆ ಕಾರಣವಾಗಿತ್ತು. ಈ ಘಟಕವನ್ನು ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸ್ಥಾಪಿಸುವ ಬಗ್ಗೆ ಯೋಚಿಸಿದ ಎಐಸಿಸಿ ತಂಡ ಗದುಗಿಗೆ ಭೇಟಿ ನೀಡಿ ಘಟಕವನ್ನು ಪರಿಶೀಲಿಸಿತ್ತು. ಅಲ್ಲದೆ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಿಗೆ ಈ ಕುರಿತು ಸಲಹೆ ಮಾಡಿತ್ತು.
ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಅಧಿಕಾರಕ್ಕೆ ಬಂದ ವರ್ಷವೇ ವಿಶೇಷ ಯೋಜನೆ ರೂಪಿಸಿ ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಆದರೆ, ರಾಜ್ಯಾದ್ಯಂತ ಒಂದೇ ಬಾರಿ ಯೋಜನೆ ಜಾರಿಗೊಳಿಸಲು ಹೆಚ್ಚಿನ ಹಣ ಬೇಕಾಗಿರುವುದರಿಂದ ಮೊದಲ ವರ್ಷ ಒಂದು ಸಾವಿರ ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ರಾಜ್ಯಾದ್ಯಂತ ಇತರೆ ಪ್ರದೇಶಗಳಿಗೂ ಅದನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ.

- ಪ್ರದೀಪ್ ಕುಮಾರ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.