ಪ್ರಮುಖ ಖಾತೆಗಳು ರಾಜ್ಯಕ್ಕೆ; ಬದಲಾಗುವುದೇ ಅಭಿವೃದ್ಧಿ ದಿಕ್ಕು?
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಪುಟ ವಿಸ್ತರಣೆ ಮತ್ತು ಖಾತೆ ಪುನರ್ ಹಂಚಿಕೆಯೊಂದಿಗೆ ಕೇಂದ್ರ ಸಂಪುಟದಲ್ಲಿ ಕರ್ನಾಟಕಕ್ಕೆ ದೊಡ್ಡ ಪಾಲೇ ಸಿಕ್ಕಿದೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೈಲು, ಆಸ್ಕರ್ ಫರ್ನಾಂಡಿಸ್ ಅವರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಈಗಾಗಲೇ ವೀರಪ್ಪ ಮೊಯ್ಲಿ ಅವರು ಪೆಟ್ರೋಲಿಯಂ ಖಾತೆ ಸಚಿವರಾಗಿದ್ದಾರೆ. ಮುನಿಯಪ್ಪ ಅವರು ಸಣ್ಣ ಕೈಗಾರಿಕೆ ರಾಜ್ಯ ಖಾತೆ ಸಚಿವರು.
ಸಂಪುಟದಲ್ಲಿ ಸಿಕ್ಕಿರುವ ದೊಡ್ಡಪಾಲು ನಿಜವಾದ ಅರ್ಥದಲ್ಲಿ ದೊಡ್ಡಪಾಲು ಆಗುವುದು ಕರ್ನಾಟಕಕ್ಕೆ ಅದರಿಂದ ಅಭಿವೃದ್ಧಿ ರೂಪದ ಲಾಭ ದಕ್ಕಿದಾಗ ಮಾತ್ರ.
ಕಾಂಗ್ರೆಸ್ನ ಚುನಾವಣಾ ಲೆಕ್ಕಾಚಾರ ಏನೇ ಇರಲಿ. ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ ಮೂವರು ಒಂದು ಗಂಟೆ ಕುಳಿತು ರಾಜ್ಯದ ಒಳಿತು ಕುರಿತು ಚರ್ಚಿಸಿದರೆ ಮುಂದಿನ ಒಂದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಬಹುದು. ಮೂಲಭೂತ ಸೌಲಭ್ಯಗಳ ಮೂಲ ಆಧಾರವಾಗಿರುವ ರಸ್ತೆ, ರೈಲು ಮತ್ತು ಪೆಟ್ರೋಲಿಯಂ ಖಾತೆಗಳು ಈ ನಾಯಕರ ಬಳಿ ಇವೆ.
ಏನಾಗಬೇಕು?: ರಿಲಯನ್ಸ್ ಅನಿಲ ದರ ಏರಿಕೆ ವಿವಾದ ಏನೇ ಇರಲಿ. ಕರ್ನಾಟಕ ಅನಿಲಾಧಾರಿತ ವಿದ್ಯುತ್ ಯೋಜನೆಗೆ ಅಗತ್ಯವಾದಷ್ಟು ಅನಿಲ ಪೂರೈಕೆ ಮಾಡಲು ಮೊಯ್ಲಿಯವರು ಒಂದಷ್ಟು ಉದಾರತೆ ತೋರಿಸಬೇಕಿದೆ. ಜತೆಗೆ ಪೈಪ್ಗಳ ಮೂಲಕ ಅನಿಲ ಸರಬರಾಜು ಯೋಜನೆಯನ್ನು ತ್ವರಿತ ಮತ್ತು ವ್ಯಾಪಕಗೊಳಿಸಬೇಕಿದೆ.
ಉತ್ತರ ಕರ್ನಾಟಕದ ಅಭಿವೃದ್ದಿ ಕುಂಠಿತಗೊಳ್ಳಲು ಸಾರಿಗೆ ಸಂಪರ್ಕದ ಕೊರತೆ ಮುಖ್ಯ ಕಾರಣ ಎಂಬುದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಗೊತ್ತಿದೆ. ರೈಲು ಸಂಪರ್ಕವೂ ಅಲ್ಲಿಗೆ ವಿರಳ.
ನಾವಿನ್ನೂ ಜಾಫರ್ ಷರೀಫರು ಕೊಟ್ಟ ಅರ್ಧ ಡಜನ್ ಮಾರ್ಗಗಳ ಬಗ್ಗೆಯೇ ಮಾತನಾಡುತ್ತಿದ್ದೇವೆ. ರಾಜ್ಯದ ಡಜನ್ನುಗಟ್ಟಲೆ ರೇಲ್ವೆ ಯೋಜನೆಗಳಿಗೆ ಪ್ರತಿವರ್ಷ ಶೇ.1ಕ್ಕಿಂತಲೂ ಕಡಮೆ ಅನುದಾನ ಒದಗಿಸುವ ಶಾಸ್ತ್ರಪೂರೈಸುವ ಸಂಪ್ರದಾಯ ಮುಂದುವರೆದೇ ಇದೆ.
ನಿಜ. ಖರ್ಗೆ ಅವರಿಗೆ ಮಂಡಿಸಲು ಸಿಗುವುದೊಂದೇ ಬಜೆಟ್ಟು. ಅದು ಮುಂದಿನ ಫೆಬ್ರವರಿಗೆ. ಅದು ಚುನಾವಣಾ ವರ್ಷ. ಈಗಾಗಲೇ ಬಜೆಟ್ ಮಂಡನೆಯಾಗಿದೆ. ಆದರೂ ಈ ಹಂತದಲ್ಲಿ ಸಚಿವರಾಗಿ ಖರ್ಗೆ ಅವರು ಒಂದಷ್ಟು ದಿಟ್ಟತನ ತೋರಿದರೆ ರಾಜ್ಯದ ಕನಿಷ್ಠ ಅರ್ಧ ಡಜನ್ ಯೋಜನೆಗಳಿಗೆ ಪೂರ್ಣ ಅನುದಾನ ಒದಗಿಸಲು ಸಾಧ್ಯ.
ರಾಷ್ಟ್ರೀಯ ಹೆದ್ದಾರಿಗಳು ರಾಜ್ಯದಲ್ಲೆಡೆ ಹರಿದು ಹೋಗಿವೆ ಎಂಬುದು ಬಿಟ್ಟರೆ, ಹೆಚ್ಚಿನ ಅಭಿವೃದ್ಧಿಯಾಗಿಲ್ಲ. ಇನ್ನೂ ರಾಜ್ಯ ಹೆದ್ದಾರಿಗಿಂತಲೂ ಚಿಕ್ಕದಾದ ಹಾಳಾದ ರಾಷ್ಟ್ರೀಯ ಹೆದ್ದಾರಿಗಳು ರಾಜ್ಯದಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಸ್ಥಾನ ಮಾನ ನೀಡಿದ ಈ ರಸ್ತೆಗಳ ಗುಂಡಿ ತುಂಬುವುದಷ್ಟಕ್ಕೆ ಹೆದ್ದಾರಿ ಪ್ರಾಧಿಕಾರ ಸೀಮಿತವಾಗಿದೆ. ಆಸ್ಕರ್ ಫರ್ನಾಂಡಿಸ್ ಮನಸ್ಸು ಮಾಡಿದರೆ ರಾಜ್ಯದಲ್ಲಿ ಹಾದು ಹೋಗಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಷಟ್ಪಥವಾಗಿ ಪರಿವರ್ತಿಸಬಹುದು.
ಭೂಸಾರಿಗೆ ಮತ್ತು ಹೆದ್ದಾರಿ ಖಾತೆಯಲ್ಲಿ ಹಣದ ಕೊರತೆಯಂತೂ ಇಲ್ಲ. ಫರ್ನಾಂಡಿಸ್ ಅವರು ಮನಸ್ಸು ಮಾಡಬೇಕಷ್ಟೆ.
ಖರ್ಗೆ, ಮೊಯ್ಲಿ ಹಾಗೂ ಆಸ್ಕರ್ ಅವರು ತಮ್ಮ ಖಾತೆಯನ್ನು ರಾಜ್ಯದ ಪಾಲಿಗೆ ಸದ್ಭಳಕೆ ಮಾಡಲಿಕ್ಕೆ ಯಾರ ಅಡ್ಡಿಯೂ ಇಲ್ಲ. ಅಷ್ಟಕ್ಕೂ ಚುನಾವಣಾ ಬರ್ತಾ ಇದೆ. ಮನಸ್ಸು ಮಾಡಬೇಕಷ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

