ಪ್ರಧಾನ ಸುದ್ದಿ

ಅಂತರ್‌ಶಿಸ್ತೀಯ ಎಂಜಿನಿಯರಿಂಗ್ ಓದ್ಕೊಂಡೋರ ಕಥೆ ದಿಕ್ಕಾಪಾಲು!

Published On :

ಮೈಸೂರು: ಅಂತರ್‌ಶಿಸ್ತೀಯ ಎಂಜಿನಿಯರಿಂಗ್ ಪದವಿ ಪಡೆದವರಿಗೆ ಉದ್ಯೋಗದಲ್ಲಿ ಕಿಮ್ಮತ್ತೇ ಸಿಗುತ್ತಿಲ್ಲ.
ಮೊದಲೆಲ್ಲಾ ಎಂಜಿನಿಯರಿಂಗ್ ಪದವೀಧರರು ಸ್ನಾತಕೋತ್ತರ ಪದವಿಯಲ್ಲಿ ಯಾವುದೇ ವಿಷಯ ಅಧ್ಯಯನ ಮಾಡಿದ್ದರೂ ಉದ್ಯೋಗ ಸಿಗುತ್ತಿತ್ತು. ಆದರೆ ಈಗ ಪರಿಸರ ಎಂಜಿನಿಯರಿಂಗ್, ಜೈವಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಿಗೆ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಇದ್ದರೂ ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಸಿಗುತ್ತಿಲ್ಲ.
ಪರಿಸರ ಎಂಜಿನಿಯರಿಂಗ್ ಕೋರ್ಸ್‌ಗೆ ಬೇಡಿಕೆ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ್ದರಿಂದ ಈ ಕೋರ್ಸ್‌ಗಳನ್ನು ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು, ಮಂಡ್ಯ ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಚಿಕ್ಕಮಗಳೂರಿನ ಆದಿಚುಂಚನಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಂದ್ ಮಾಡಲಾಗಿದೆ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಾತ್ರ ಪರಿಸರ ಎಂಜಿನಿಯರಿಂಗ್ ಕೋರ್ಸ್ ಈಗಲೂ ಇದೆ.

ಅಲ್ಲೂ ಇಲ್ಲ, ಇಲ್ಲೂ ಇಲ್ಲ: ಪರಿಸರ ಎಂಜಿನಿಯರಿಂಗ್ ಕೋರ್ಸ್‌ಗೆ ಬೇಡಿಕೆ ಇಲ್ಲದಿರುವುದರಿಂದ ಈಗಾಗಲೇ ಈ ಕೋರ್ಸ್ ಮಾಡಿರುವವರು ಸ್ನಾತಕೋತ್ತರ ಪದವಿಯಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತಿತರ ಕೋರ್ಸ್‌ಗಳನ್ನು ಮಾಡಿದ್ದಾರೆ. ಆದರೆ ಪದವಿಯಲ್ಲಿ ಇವರು ಪರಿಸರ ಎಂಜಿನಿಯರಿಂಗ್ ಓದಿರುವುದರಿಂದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಪರಿಗಣಿಸುತ್ತಿಲ್ಲ. ಪರಿಸರ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿಗೆ ಮೀಸಲಾದ ಹುದ್ದೆಗಳಿಗೂ ಇವರು ಸ್ನಾತಕೋತ್ತರ ಪದವಿಯಲ್ಲಿ ಬೇರೆ ಕೋರ್ಸ್ ಮಾಡಿದ್ದಾರೆ ಎಂಬ ಕಾರಣಕ್ಕೆ ಪರಿಗಣಿಸುತ್ತಿಲ್ಲ.

ಹೆಚ್ಚಿನ ವಿದ್ಯಾರ್ಹತೆಯೇ ಅನರ್ಹತೆ!: ಸರ್ಕಾರಿ ಹುದ್ದೆಗಳಲ್ಲಿ ಪರಿಸರ ಎಂಜಿನಿಯರಿಂಗ್ ಪದವೀಧರರನ್ನು ಹೊರಗಿಡಲೆಂದೇ ಶುದ್ಧೀಕರಣ ಘಟಕ ಮತ್ತಿತರ ಕಡೆ ಶೇ.80 ಕ್ಕಿಂತ ಹೆಚ್ಚು ಅಂಕಗಳನ್ನು ನಿಗದಿ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಪರಿಸರ ಎಂಜಿನಿಯರ್ ಹುದ್ದೆಗೆ ನೇಮಕ ಮಾಡಿಕೊಂಡರೂ ತೀರಾ ಕಡಿಮೆ ವೇತನ ನೀಡಲಾಗುತ್ತಿದೆ. ಕಡಿಮೆ ದರ್ಜೆಯ ಹುದ್ದೆಗಳಿಗೆ ಅರ್ಜಿ ಹಾಕಿದರೂ ಎಂಜಿನಿಯರಿಂಗ್ ಪದವಿ, ಸ್ನಾತಕ ಪದವಿ ಇರುವುದರಿಂದ ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಇದೆ ಎಂಬ ಕಾರಣಕ್ಕಾಗಿ ಪರಿಗಣಿಸುತ್ತಿಲ್ಲ.

ಸಾಲ ತೀರಿಸಲಾಗುತ್ತಿಲ್ಲ: ಹೀಗಾಗಿ ಪರಿಸರ ಎಂಜಿನಿಯರಿಂಗ್, ಜೈವಿಕ ತಂತ್ರಜ್ಞಾನ ಕೋರ್ಸ್ ಮಾಡಿರುವವರು ಅತಂತ್ರರಾಗಿದ್ದಾರೆ. ಹಲವು ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಮಾಡಿಕೊಂಡು ಓದಿದ್ದು, ಸ್ನಾತಕೋತ್ತರ ಪದವಿ ಮುಗಿಯುತ್ತಲೇ ಸಾಲ ಮರುಪಾವತಿ ಆರಂಭವಾಗಿರುವುದರಿಂದ ಕಟ್ಟಲಾಗದೇ ಕಂಗಲಾಗಿದ್ದಾರೆ. ಕೆಲವರು ಪಿಯುಸಿ ಅಂಕಪಟ್ಟಿ ನೀಡಿ, ಬಿಪಿಒಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಬರುವ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ.
ಸರ್ಕಾರ ಈ ಬಗ್ಗೆ ಗಮನಹರಿಸಿ, ಪದವಿಯಲ್ಲಿ ಪರಿಸರ ಎಂಜಿನಿಯರಿಂಗ್, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಿಕಲ್ ಕೋರ್ಸ್ ಮಾಡಿ, ಸ್ನಾತಕೋತ್ತರ ಪದವಿಯಲ್ಲಿ ಮಾಹಿತಿ ತಂತ್ರಜ್ಞಾನ ಕೋರ್ಸ್ ಮಾಡಿರುವವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ನಿರುದ್ಯೋಗಿಗಳ ಮನವಿ.

- ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.