ಪ್ರಧಾನ ಸುದ್ದಿ

ನಲ್ಲಿ ನೀರಿನಂತೆ ಬೀಳುತ್ತಿತ್ತು ಮಳೆ!

Published On :

ಕೆ.ಎನ್. ರವಿ
ಮಂಡ್ಯ:
ತುಂಗಾನಾಥನ ದಯೆಯಿಂದ ನಾವು ಬದುಕಿ ಬಂದಿದ್ದೇವೆ. ತುಂಗಾನಾಥ ಪ್ರದೇಶ ಸುತ್ತಮುತ್ತ ಸುರಿದ ಮಳೆಯನ್ನು ನಾವು ಈ ಜನ್ಮದಲ್ಲಿ ನೋಡಿಲ್ಲ. ಮುಂದೆ ನೋಡುವುದೂ ಇಲ್ಲ. ಮೋಡಗಳೇ ಸ್ಫೋಟಗೊಂಡು ಸುರಿದ ಮಳೆ, ನಲ್ಲಿ ನೀರಿನ ರೀತಿಯಲ್ಲಿ ಬಂದ ಹಾಗೆ ಬರುತ್ತಿತ್ತು. ಭಾರಿ ಬಿರುಗಾಳಿ, ತುಂಬಾ ಚಳಿ. ಹೊರಗಿನ ವಾತಾವರಣ ನೋಡಿದರೆ ನಾವು ಜೀವಂತವಾಗಿ ಮಂಡ್ಯಕ್ಕೆ ಹೋಗುತ್ತೇವೆ ಎನ್ನುವುದೇ ಗ್ಯಾರಂಟಿ ಇಲ್ಲ ಎನ್ನುವ ಸ್ಥಿತಿಯಿಂದ ನಾವೆಲ್ಲರೂ ದಿಗ್ಭ್ರಾಂತರಾಗಿದ್ದೆವು!
- ಮಂಡ್ಯದ ಹೊಟೇಲ್ ಉದ್ಯಮಿ ರಮೇಶ್ ಆಚಾರ್ಯ ಅವರ ಸಹೋದರ ರವಿ ಆಚಾರ್ಯ ಮತ್ತು ಕುಟುಂಬದವರು ಕೇದಾರನಾಥ, ತುಂಗಾನಾಥ ಪ್ರದೇಶದಲ್ಲಿ ಕಳೆದ ತಮ್ಮ ಜೀವನದ ಭೀಕರ ಕ್ಷಣಗಳನ್ನು ವಿವರಿಸಿದ ರವಿ ಆಚಾರ್ಯ ಅವರು ಭೀಕರತೆಯನ್ನು ವಿವರಿಸಿದ್ದು ಹೀಗೆ. ನಾವು ಬಾಡಿಗೆ ಕಾರು ಮಾಡಿಕೊಂಡು ಹೋಗಿದ್ದ ಚಾಲಕ ಜೋರಾಗಿ ಕುಡಿದಿದ್ದ. ಆತನ ಸ್ಥಿತಿ ಕಂಡು ನಾವು ಬೈದೆವು. ಕೂಡಲೆ ಆತನೇ, ಸಾರ್ ಮುಂದೆ ಹೋಗುವುದು ತನ್ನಿಂದ ಕಷ್ಟ. ಇಲ್ಲಿ ವಾಸ್ತವ್ಯ ಮಾಡೋಣ ಎಂದು ಹೇಳಿದನು. ಅದು ನಮಗೆ ದೇವರ ಆಜ್ಞೆ ಎಂದೇ ಭಾವಿಸಿ ಆ ನಿರ್ಧಾರಕ್ಕೆ ಬದ್ಧರಾದೆವು.
ತುಂಗಾನಾಥ ತಾಣದಲ್ಲಿ: ಕೇದಾರನಾಥದಿಂದಲೂ 1 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ತುಂಗಾನಾಥ ಎಂಬ ಪವಿತ್ರ ಸ್ಥಳವಿದೆ. ಸಮುದ್ರ ಮಟ್ಟದಿಂದ 3886 ಮೀಟರ್ (ಅಂದರೆ 12750 ಅಡಿ) ಎತ್ತರದಲ್ಲಿರುವ ಈ ಬೆಟ್ಟಕ್ಕೆ ತುಂಬಾ ಕಿರಿದಾದ ದಾರಿ ಇದೆ. ಕುದುರೆ ಬಿಟ್ಟರೆ ಬೇರೆ ವಾಹನಗಳು ಹೋಗಲು ಸಾಧ್ಯವೇ ಇಲ್ಲ. ಭಾರಿ ಅರಣ್ಯ ಪ್ರದೇಶ. ಹೀಗಾಗಿ ಈ ಮೇಲಿನ ಪ್ರದೇಶಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ. ಯಾವುದೇ ಮೊಬೈಲ್ ಕಂಪನಿ ಟವರ್‌ಗಳ ಸಂಪರ್ಕವೂ ಆ ಪ್ರದೇಶಕ್ಕೆ ಇಲ್ಲ. ಆ ಪ್ರದೇಶಗಳಲ್ಲಿ ಜೂನ್‌ನಲ್ಲಿ ಯಾವತ್ತೂ ಮಳೆಯೇ ಬಂದಿಲ್ಲವಂತೆ. ಆದರೆ ಈಗ ಸುರಿದ ಮಳೆಯ ಭೀಕರತೆಯನ್ನು ವಿವರಿಸುವುದೇ ಅಸಾಧ್ಯ. ತುಂಬಾ ಕಿರಿದಾದ ರಸ್ತೆ. ಒಂದೇ ಒಂದು ಅಂಗುಲ ಕಾರಿನ ಟೈರ್ ಕೆಳಗೆ ಇಳಿದರೂ ಹೋಗಿ ಬೀಳುವುದು ಪ್ರಪಾತಕ್ಕೆ. ಅಂತಹ ಭೀಕರ ಅನುಭವ ಎನ್ನುತ್ತಾರೆ ಅವರು.
ಅಲ್ಕಾನಂದ ಮತ್ತು ನಂದಾಕಿಣಿ ನದಿಗಳ ಸಂಗಮದ ಪ್ರದೇಶದಲ್ಲಿ ನೀರು ಭಾರಿ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತಿತ್ತು. ಕಿರಿದಾದ ರಸ್ತೆಗಳ ಕೆಳ ಭಾಗವು ಕೊಚ್ಚಿ ಹೋಗುತ್ತಲೇ ಇತ್ತು. ಮತ್ತೊಂದು ಕಡೆ ಪರ್ವತದ ಮೇಲಿಂದ ಆಗಾಗ್ಗೆ ಕಲ್ಲು ಮತ್ತು ಮಣ್ಣು ಬೀಳುತ್ತಲೇ ಇದೆ. ಇಂತಹ ದೃಶ್ಯ ನೋಡಿದ ಕೂಡಲೇ ನಾವು ಸಾಯುವ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಒಂದೇ ಬಾಕಿ. ದೇವರ ದಯೆ ಯಾವುದೇ ಅನಾಹುತಗಳು ಸಂಭವಿಸಲಿಲ್ಲ. ಕೇವಲ 40 ಕಿ.ಮೀ. ದಾರಿಯನ್ನು ಕಾರಿನಲ್ಲಿ ಸವೆಸಲು ಸುಮಾರು 9 ಗಂಟೆಗಳ ಕಾಲ ತೆಗೆದುಕೊಂಡಿದ್ದೇವೆ ಎಂದರೆ ಈ ಪ್ರದೇಶದಲ್ಲಿ ಚಾಲಕ ಎಷ್ಟು ಜಾಗರೂಕತೆಯಿಂದ ಕಾರು ಚಾಲನೆ ಮಾಡಿದ್ದಾನೆ ಎಂಬುದುನ್ನು ಊಹಿಸಬಹುದು ಎಂದು ರವಿ, ಸುಜಾತ ಅವರು ತಮ್ಮ ಅನುಭವ ಹೇಳಿಕೊಂಡರು.

ಸಂತ್ರಸ್ತರ ರಕ್ಷಣೆಗೆ ಕಾಪ್ಟರ್
ಬೆಂಗಳೂರು:
ಭೀಕರ ಪ್ರವಾಹದಿಂದ ತತ್ತರಿಸಿರುವ ಉತ್ತರಾಖಂಡದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ರಾಜ್ಯ ಸರ್ಕಾರದಿಂದ ಒಂದು ಹೆಲಿಕಾಪ್ಟರ್ ಕಳುಹಿಸಿಕೊಡಲಾಗಿದೆ. ಹೈದರಾಬಾದ್ ಮೂಲಕ ಈ ಹೆಲಿಕಾಪ್ಟರ್ ಡೆಹ್ರಾಡೂನ್‌ಗೆ ತೆರಳಲಿದೆ. ಇದರಲ್ಲಿ ಆರು ಆಸನಗಳಿದ್ದು, ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲೆಟ್ ಮತ್ತು ಒಬ್ಬ ಎಂಜಿನಿಯರ್ ತೆರಳಿದ್ದಾರೆ. ಸೋಮವಾರ ಮಧ್ಯಾಹ್ನದಿಂದ ಇದು ಸಂತ್ರಸ್ತರ ರಕ್ಷಣಾ ಕಾರ್ಯವನ್ನು ಆರಂಭಿಸಲಿದೆ.

ಪತ್ರಕರ್ತ ಸೀತಾರಾಮ್ ಕುಟುಂಬದ 12 ಸದಸ್ಯರ ಬಗ್ಗೆ ಇನ್ನೂ ಸುಳಿವಿಲ್ಲ
ಮದ್ದೂರು:
ಗಂಗಾ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿರುವ ಹಿರಿಯ ಪತ್ರಕರ್ತ ಎಂ.ಜಿ. ಸೀತಾರಾಮರಾವ್ ಕುಟುಂಬದ 12 ಮಂದಿಯ ಸುಳಿವು ಭಾನುವಾರವೂ ಲಭ್ಯವಾಗಿಲ್ಲ. ಪಟ್ಟಣದಿಂದ ಉತ್ತರ ಭಾರತದ ಕೇದಾರನಾಥ ಪ್ರವಾಹಕ್ಕೆ ತೆರಳಿದ್ದ 17 ಮಂದಿಯ ಪೈಕಿ ಎಂ.ಜಿ.ಸೀತರಾಮರಾವ್ ಸೇರಿದಂತೆ ಐವರು ಪತ್ತೆಯಾಗಿದ್ದು, ಉಳಿದ 12 ಮಂದಿಯ ಸುಳಿವು ಸಿಕ್ಕಿಲ್ಲ. ಈಗ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸೀತಾರಾಮ್ ಸೇರಿದಂತೆ 5 ಮಂದಿಯನ್ನು ರಾಜ್ಯಕ್ಕೆ ವಾಪಸ್ ಕರೆಸಲು ಅಗತ್ಯ ನೆರವು ನೀಡುವಂತೆ ಸೀತರಾಮ್ ಅವರ ಸಂಬಂಧಿ ಎನ್.ಕೆ.ಸುದಯಸಿಂಹ ಜಿಲ್ಲಾ ಎಸ್ಪಿ ಅವರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ 12 ಯಾತ್ರಾರ್ಥಿಗಳ ಪತ್ತೆಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.