ಪ್ರಧಾನ ಸುದ್ದಿ

ಬೆಂಗಳೂರಿಗೆ ನಾಲ್ವರು ವಾಪಸ್

Published On :

ಮದ್ದೂರು: ಉತ್ತರ ಭಾರತದ ಕೇದಾರನಾಥದಲ್ಲಿ ಗಂಗಾನದಿ ಪ್ರವಾಹಕ್ಕೆ ಸಿಲುಕಿದ್ದ ಮದ್ದೂರು ಪಟ್ಟಣದ ಒಂದೇ ಕುಟುಂಬದ 12 ಮಂದಿ ಇದುವರೆಗೂ ಪತ್ತೆಯಾಗಿಲ್ಲ. ಆದರೆ, ಅಪಾಯದಿಂದ ಪಾರಾಗಿದ್ದ ಐವರಲ್ಲಿ ನಾಲ್ಕು ಮಂದಿ ಸೋಮವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಹಿರಿಯ ಪತ್ರಕರ್ತ ಸೀತಾರಾಮರಾವ್, ಕೃತಿ, ನವ್ಯಶ್ರೀ ಹಾಗೂ ಅನಂತು ಬೆಂಗಳೂರಿಗೆ ಆಗಮಿಸಿದ್ದು, ರವಿಚಂದ್ರ ಅವರನ್ನು ನಾಪತ್ತೆಯಾದವರನ್ನು ಗುರುತಿಸುವ ಸಲುವಾಗಿ ಡೆಹರಾಡೂನ್‌ನಲ್ಲಿಯೇ ಉಳಿಸಿಕೊಳ್ಳಲಾಗಿದೆ. ಆರೋಗ್ಯ ಹದಗೆಟ್ಟಿದ್ದ ಕಾರಣ ಈ ಐದು ಮಂದಿಗೆ ದೆಹಲಿಯ ಕರ್ನಾಟಕ  ಭವನದಲ್ಲಿ ಆಶ್ರಯ ನೀಡಿ ಚಿಕಿತ್ಸೆ ನೀಡಲಾಗಿತ್ತು. ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದವರ ಪತ್ತೆಗಾಗಿ ಹಾಸನ ಶಿರಸ್ತೇದಾರ್ ನಟೇಶ್ ಹಾಗೂ ಮದ್ದೂರು ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು ನೇತೃತ್ವದ ಅಧಿಕಾರಿಗಳ ತಂಡವನ್ನು ಡೆಹರಾಡೂನ್‌ಗೆ ಕಳುಹಿಸಲಾಗಿದೆ. ಅಲ್ಲದೆ, ಪತ್ರಕರ್ತ ಸೀತಾರಾಮರಾವ್ ಅವರ ಸಹೋದರ ಸಂಬಂಧಿಗಳೂ ಬೆಂಗಳೂರಿನಿಂದ ಡೆಹರಾಡೂನ್‌ಗೆ ಪ್ರಯಾಣ ಬೆಳೆಸಿದ್ದು, ನಾಪತ್ತೆಯಾದವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರವಾಹಕ್ಕೆ ಸಿಲುಕಿ ಬೇರ್ಪಟ್ಟ 12 ಮಂದಿ ಎಲ್ಲಿ ಹೋದರು, ಏನಾಗಿದ್ದಾರೆ, ಎಲ್ಲಿ ಆಶ್ರಯ ಪಡೆದಿದ್ದಾರೆಯೇ ಎಂಬ ಬಗ್ಗೆ ಕೊಂಚವೂ ಮಾಹಿತಿ ಸಿಗದಿರುವುದು ಕುಟುಂಬದ ಸದಸ್ಯರಲ್ಲಿ ಆತಂಕ ಮೂಡಿಸಿದೆ. ಅಪಾಯದಿಂದ ಪಾರಾಗಿರುವ ಎಂ.ಜಿ. ಸೀತಾರಾಮರಾವ್, ಅನಂತು, ಕೃತಿ, ರವಿಚಂದ್ರ, ನವ್ಯಶ್ರೀ ಅವರು ಕರ್ನಾಟಕ ಭವನದಲ್ಲಿ ಸುರಕ್ಷಿತವಾಗಿದ್ದರು. ಇದೀಗ ನಾಲ್ಕು ಮಂದಿ ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಡಿಸಿ, ಎಸ್ಪಿ ಭೇಟಿ: ಕೇದಾರನಾಥ ಯಾತ್ರೆ ಕೈಗೊಂಡ ವೇಳೆ ಎಂ.ಜಿ. ಸೀತಾರಾಮರಾವ್ ಕುಟುಂಬ ವರ್ಗದ 12 ಮಂದಿ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಜಿಪಂ ಉಪ ಕಾರ್ಯದರ್ಶಿ ಪೂರ್ಣಿಮಾ ಮದ್ದೂರು ಪಟ್ಟಣದಲ್ಲಿರುವ ಸೀತಾರಾಮರಾವ್ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಸೀತಾರಾಮರಾವ್ ಅವರ ಮಾವ ಭರತ್‌ರಾಜ್, ಡಾ.ನರಸಿಂಹಮೂರ್ತಿ, ಸುಜಯ್‌ಸಿಂಹ ಅವರಿಂದ ಜಿಲ್ಲಾಧಿಕಾರಿ ಕೃಷ್ಣಯ್ಯ ಮಾಹಿತಿ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.