ಪ್ರಧಾನ ಸುದ್ದಿ

ಆರ್ಸೆನಿಕ್ ಗ್ರಾಮಗಳಿಗೆ ಶುದ್ಧನೀರು ಪೂರೈಸಲು 24 ಕೋಟಿ

Published On :

ಕ.ಪ್ರ.ವಾರ್ತೆ ,  ಯಾದಗಿರಿ ,  ಜೂ. 28-
ಜಿಲ್ಲೆಯ ಅರ್ಸೆನಿಕ್ ರಾಸಾಯನಿಕ ಅಂಶದ ನೀರು ಹೊಂದಿರುವ 9 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಿಲ್ಲಾ ಪಂಚಾಯಿತಿಗೆ 24.96 ಕೋಟಿ ಬಿಡುಗಡೆ ಮಾಡಿದೆ.
2008-09ರಲ್ಲಿ ಯನಿಸೆಫ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಯಚೂರು ಜಿಲ್ಲೆಯ 44 ಮತ್ತು ಯಾದಗಿರಿ ಜಿಲ್ಲೆಯ 19 ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲದಲ್ಲಿ ಆರ್ಸೆನಿಕ್ ಅಂಶ ಇರುವ ಬಗ್ಗೆ ವರದಿ ಮಾಡಿತ್ತು. ಆದರೆ ಸರ್ಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇತ್ತೀಚೆಗೆ ಮಾಧ್ಯಮಗಳು ಜಿಲ್ಲೆಯ ಕಿರದಳ್ಳಿ ತಾಂಡಾದಲ್ಲಿ ಆರ್ಸೆನಿಕ್‌ಯುಕ್ತ ನೀರು ಸೇವನೆಯಿಂದ ಜನತೆ ಅನುಭವಿಸುತ್ತಿರುವ ಹಿಂಸೆಯನ್ನು, ಚರ್ಮ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಈ ವರದಿಯನ್ನು ಗಂಭೀರವಾಗಿ ಪರಿಗಣಸಿ ರಾಯಚೂರು ಜಿಲ್ಲೆಗೆ ಭೇಟಿ ನೀಡಿ, ಪರಿಶೀಲಿಸಿದ್ದರು. ಅಲ್ಲದೇ ತಕ್ಷಣ ಅಂಥ ನೀರಿನ ಮೂಲಗಳನ್ನು ಸೀಜ್ ಮಾಡಿ ಶುದ್ಧ ನೀರು ಕೊಡುವ ಬಗ್ಗೆ ಯೋಜನೆ ತಯಾರಿಸುವಂತೆಯೂ ಸೂಚಿಸಿದ್ದರು.
ಕೂಡಲೆ ಕಾರ್ಯಪ್ರವೃತ್ತರಾದ ಸಚಿವರು ಆರ್ಸೆನಿಕ್ ಅಂಶವಿರುವ ಎಲ್ಲ ಜಲಮೂಲಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದ್ದರು. ಆ 19 ಗ್ರಾಮಗಳಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಒದಗಿಸಲು ತಕ್ಷಣ 1 ಕೋಟಿ ಅನುದಾನ ಒದಗಿಸಿದರು.

ಘಟಕಕ್ಕೆ ನಿವೇಷನ: ಗೌಡಗೇರಾ, ಚಿಗರಿಹಳ್ಳಿ, ಗೋಡ್ರಿಹಾಳ, ಮಾವಿನಮಟ್ಟಿ, ಜೈನಾಪುರ ಮತ್ತು ಮಂಗಳೂರು ಗ್ರಾಮಗಳಲ್ಲಿ ಘಟಕ ಸ್ಥಾಪನೆಯಾಗಿದ್ದು ಅನುಷ್ಠಾನಗೊಳ್ಳಬೇಕಿದೆ. ಇನ್ನು ರಾಮಪುರ, ಹಳೆ ಅಮ್ಮಾಪುರ, ನಾಗರಾಳ, ಅರಕೇರಾ(ಕೆ) ಮತ್ತು ಬಿಜಾಸ್ಪುರ ಗ್ರಾಮಗಳಲ್ಲಿ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. ಮಾರನಾಳ, ಮಂಗಿಹಾಳ, ಹೆಗ್ಗಣದೊಡ್ಡಿ, ಕರಡ್ಡಲ್, ಪರಸನಹಳ್ಳಿ, ಕೆ.ಶೆಳ್ಳಳ್ಳಿ ಮತ್ತು ಗೋಡಿಹಾಳ(ಜೆ) ಗ್ರಾಮಗಳಲ್ಲಿ ಘಟಕ ಸ್ಥಾಪನೆಗೆ ನಿವೇಶನ ಹುಡುಕಾಟ ನಡೆದಿದೆ.
ಸರ್ಕಾರ ನೀಡಿದ ಅನುದಾನವನ್ನು ಜಿಲ್ಲಾ ಪಂಚಾಯಿತಿ ಸದ್ಬಳಕೆ ಮಾಡಿಕೊಂಡು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು. ಆ ಮೂಲಕ ವಿಷ ನೀರು ಸೇವಿಸಿ ತೊಂದರೆ ಅನುಭವಿಸುತ್ತಿರುವ ಜನತೆಗೆ ಮುಕ್ತಿ ಒದಗಿಸಲು ಪ್ರಮಾಣಿಕ ಕೆಲಸ ಮಾಡಬೇಕಿದೆ.
ಸರ್ಕಾರದ ಸೂಚನೆಯಂತೆ ಆರ್ಸೆನಿಕ್ ರಾಸಾಯನಿಕ ಅಂಶವಿರುವ 19 ಗ್ರಾಮಗಳ ಜಲಮೂಲಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಆದರೆ ಪರ್ಯಾಯ ವ್ಯವಸ್ಥೆ ಆಗದ ಕೆಲವು ಗ್ರಾಮಗಳಲ್ಲಿನ ಬೋರ್‌ವೆಲ್‌ಗಳನ್ನು ಹಾಗೇ ಬಿಡಲಾಗಿದೆ. ಅಲ್ಲಿ ಶೀಘ್ರವೇ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು.
- ಎಫ್.ಆರ್.ಜಮಾದಾರ, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.