ಮತದಾರರಿಗೆ ಶಾಕ್
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 6-
ವಿದ್ಯುತ್ ಬಳಕೆದಾರರಿಗೆ ದರ ಏರಿಕೆಯ ಶಾಕ್ ಬಾಧಿಸಲಿದ್ದು, ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್ಗೆ ಸರಾಸರಿ 23 ಪೈಸೆಯಷ್ಟು ಏರಿಕೆ ಮಾಡಲಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲೇ ವಿದ್ಯುತ್ ದರ ಹೆಚ್ಚಿಸಲು ತೀರ್ಮಾನಿಸಲಾಗಿತ್ತಾದರೂ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ತಡೆಹಿಡಿಯಲಾಗಿತ್ತು. ಇದೀಗ ಮತದಾನ ಮುಗಿದ ಮಾರನೇ ದಿನವೇ ದರ ಏರಿಕೆ ಮಾಡಲಾಗಿದೆ.
ಮೇ 1ರ ಬಳಿಕ ಮೊದಲ ಮೀಟರ್ ಓದುವ ದಿನಾಂಕದಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿದೆ. ಅಂದರೆ, ಏಪ್ರಿಲ್ನಲ್ಲಿ ಬಿಲ್ ಬಂದ ದಿನದಿಂದ ಬಳಕೆಯಾದ ವಿದ್ಯುತ್ತಿಗೆ ಗ್ರಾಹಕರು ಹೊಸ ದರಗಳನ್ನು ಪಾವತಿಸಬೇಕಾಗುತ್ತದೆ.
ಈ ಬಾರಿ ನೀರು ಸರಬರಾಜು ಸಂಬಂಧಿತ ಗ್ರಾಮೀಣ ವಿದ್ಯುತ್ ಸ್ಥಾವರಗಳು ಮತ್ತು ಎಲ್ಟಿ ಪ್ರವರ್ಗಕ್ಕೆ ಸೇರಿದ ಖಾಸಗಿ ವಿದ್ಯಾಸಂಸ್ಥೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ವರ್ಗದ ವಿದ್ಯುತ್ ಬಳಕೆದಾರರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರು ಸೋಮವಾರ ಪರಿಷ್ಕೃತ ದರ ಕುರಿತು ಆದೇಶ ಹೊರಡಿಸಿದ್ದಾರೆ.
ಗೃಹಬಳಕೆ ವಿದ್ಯುತ್ತಿಗೆ ಮೊದಲ 100 ಯೂನಿಟ್ವರೆಗೆ ಪ್ರತಿ ಯೂನಿಟ್ಗೆ 20 ಪೈಸೆ ಹಾಗೂ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್ಗೆ 25 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಹೈಟೆನ್ಷನ್ (ಎಚ್ಟಿ) ಪ್ರವರ್ಗಕ್ಕೆ ಬರುವ ವಸತಿ ಸಂಕೀರ್ಣಗಳಿಗೆ (ರೆಸಿಡೆನ್ಷಿಯಲ್ ಅಪಾರ್ಟ್ಮೆಂಟ್ಸ್) ಸೇರಿದ ಬಳಕೆದಾರರಿಗೆ ಪ್ರತಿ ಯೂನಿಟ್ಗೆ ದರವನ್ನು 4.70ರಿಂದ 4.90ಕ್ಕೆ (20 ಪೈಸೆ) ಹೆಚ್ಚಿಸಲಾಗಿದೆ.
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆ ಹಾಗೂ 10 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಕೃಷಿ ಪಂಪ್ಸೆಟ್ಗಳಿಗೆ ಬಳಸುವ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 25 ಪೈಸೆಯಷ್ಟು ಹೆಚ್ಚಿಸಲಾಗಿದೆ.
ಆದರೆ, ಸರ್ಕಾರವೇ ಈ ಮೊತ್ತ ಪಾವತಿಸುವುದರಿಂದ ಗ್ರಾಹಕರಿಗೆ ಹೊರೆ ಇಲ್ಲ. ಇನ್ನೊಂದೆಡೆ 10 ಅಶ್ವಶಕ್ತಿಗಿಂತ ಹೆಚ್ಚು ಸಾಮರ್ಥ್ಯದ ಕೃಷಿ ಪಂಪ್ಸೆಟ್ಗಳಿಗೆ ಬಳಸುವ ವಿದ್ಯುತ್ ದರವನ್ನು ಏರಿಸದಿರಲು ತೀರ್ಮಾನಿಸಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆ: ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರ ಪ್ರವರ್ಗಗಳಿಗೆ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 25 ಪೈಸೆ ಹೆಚ್ಚಳ ಮಾಡಲಾಗಿದೆ.
ಬೆಂಗಳೂರು ನಗರ ಪ್ರದೇಶದ ಲೋ ಟೆನ್ಷನ್ (ಎಲ್ಟಿ) ಕೈಗಾರಿಕಾ ವಿದ್ಯುತ್ ಬಳಕೆದಾರರು ಮೊದಲ 500 ಯೂನಿಟ್ ಬಳಕೆಗೆ ಪ್ರತಿ ಯೂನಿಟ್ಗೆ 4.45, 500ಕ್ಕಿಂತ ಹೆಚ್ಚು ಯೂನಿಟ್ ಬಳಸುವವರು ಪ್ರತಿ ಯೂನಿಟ್ಗೆ 5.45 ಪಾವತಿಸಬೇಕು. ಇತರೆ ಪ್ರದೇಶದ ಎಲ್ಟಿ ಕೈಗಾರಿಕಾ ಬಳಕೆದಾರರು ಮೊದಲ 500 ಯೂನಿಟ್ ಬಳಕೆಗೆ ಪ್ರತಿ ಯೂನಿಟ್ಗೆ 4.25, 501ರಿಂದ 1000 ಯೂನಿಟ್ ಬಳಕೆದಾರರು ಪ್ರತಿ ಯೂನಿಟ್ಗೆ 4.95 ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯುತ್ಗೆ ಪ್ರತಿ ಯೂನಿಟ್ಗೆ 5.25 ಪಾವತಿಸಬೇಕು.ಅದೇ ರೀತಿ ಬೆಂಗಳೂರು ನಗರ ಮತ್ತು ಇತರೆ ಮಹಾನಗರ ಪ್ರದೇಶಗಳ ವಾಣಿಜ್ಯ ಬಳಕೆದಾರರು ಮೊದಲ 50 ಯೂನಿಟ್ಗಳಿಗೆ ಪ್ರತಿ ಯೂನಿಟ್ಗೆ 6.45, ನಂತರದ ಬಳಕೆಗೆ 7.45 ದರ ನಿಗದಿಪಡಿಸಲಾಗಿದೆ. ಗ್ರಾಮೀಣ ವಾಣಿಜ್ಯ ಬಳಕೆದಾರರು ಮೊದಲ 50 ಯೂನಿಟ್ಗೆ 5.95 ಹಾಗೂ ನಂತರದ ವಿದ್ಯುತ್ತಿಗೆ 695 ನೀಡಬೇಕಾಗುತ್ತದೆ.
ಬಿಬಿಎಂಪಿ ಹಾಗೂ ಇತರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಎಚ್ಟಿ ಕೈಗಾರಿಕಾ ಬಳಕೆದಾರರು ಮೊದಲ ಒಂದು ಲಕ್ಷ ಯೂನಿಟ್ ಬಳಕೆಗೆ ಪ್ರತಿ ಯೂನಿಟ್ಗೆ 5.35, ಅದಕ್ಕಿಂತ ಹೆಚ್ಚು ವಿದ್ಯುತ್ ಬಳಕೆಗೆ ಪ್ರತಿ ಯೂನಿಟ್ಗೆ 5.75 ಪಾವತಿಸಬೇಕು. ಇತರೆ ಪ್ರದೇಶದ ಬಳಕೆದಾರರು ಕ್ರಮವಾಗಿ ಪ್ರತಿ ಯೂನಿಟ್ಗೆ 5.35 ಹಾಗೂ 5.65 ಪಾವತಿಸಬೇಕು.
ಅದೇ ರೀತಿ ಬಿಬಿಎಂಪಿ ಮತ್ತು ಇತರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಎಚ್ಟಿ ವಾಣಿಜ್ಯ ಬಳಕೆದಾರರು ಮೊದಲ 2 ಲಕ್ಷ ಯೂನಿಟ್ ಬಳಕೆಗೆ 6.95, ನಂತರದ ಬಳಕೆಗೆ ಪ್ರತಿ ಯೂನಿಟ್ಗೆ 7.25 ಪಾವತಿಸಬೇಕು. ಇತರೆ ಪ್ರದೇಶಗಳಲ್ಲಿ ಕ್ರಮವಾಗಿ 6.75 ಮತ್ತು 7.05 ಪಾವತಿಸಬೇಕು.
ಕುಡಿಯುವ ನೀರು, ಬೀದಿದೀಪ: ಎಲ್ಟಿ ಮತ್ತು ಎಚ್ಟಿ ಪ್ರವರ್ಗಗಳಿಗೆ ಸೇರಿದ ಕುಡಿಯುವ ನೀರು ಸರಬರಾಜು ಬಳಕೆಗೆ ಸಂಬಂಧಿಸಿದ ನಗರ ಮತ್ತು ಗ್ರಾಮೀಣ ಸ್ಥಾವರಗಳು ಈಗಿರುವಂತೆ ಪ್ರತಿ ಯೂನಿಟ್ಗೆ 3.20 (ಎಲ್ಟಿ) ಹಾಗೂ 3.80 (ಎಚ್ಟಿ) ಪಾವತಿಸಬೇಕು. ಆದರೆ, ನಗರ ಪ್ರತ್ತು ಗ್ರಾಮೀಣ ಪ್ರದೇಶಗಳ ಬೀದಿ ದೀಪ ಸ್ಥಾವರಗಳಿಗೆ ಅನ್ವಯವಾಗುವ ದರವನ್ನು ಪ್ರತಿ ಯೂನಿಟ್ಗೆ ಕ್ರಮವಾಗಿ 4.20 ಮತ್ತು 4.50ಕ್ಕೆ ಹೆಚ್ಚಿಸಲಾಗಿದೆ.
ಸರ್ಕಾರಕ್ಕೂ ಹೊರೆ
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆ ಹಾಗೂ 10 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಕೃಷಿ ಪಂಪ್ಸೆಟ್ಗಳಿಗೆ ಬಳಸುವ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 25 ಪೈಸೆಯಷ್ಟು ಹೆಚ್ಚಿಸಲಾಗಿದೆ. ಆದರೆ, ಈ ಹೊರೆ ಸರ್ಕಾರದ ಮೇಲೆ ಬೀಳುತ್ತದೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆ ಹಾಗೂ 10 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಕೃಷಿ ಪಂಪ್ಸೆಟ್ಗಳಿಗೆ ನಿಗದಿಪಡಿಸಿರುವ ವಿದ್ಯುತ್ ದರ ಹೊರತುಪಡಿಸಿ ಉಳಿದ ವಿದ್ಯುತ್ ಬಳಕೆದಾರರಿಗೆ ನಿಗದಿಪಡಿಸುವ ದರ ಏರಿಸುವಂತೆ ಎಸ್ಕಾಂಗಳು ಕೋರಿದ್ದರೂ ಕೆಇಆರ್ಸಿ ಇದೇ ಮೊದಲ ಬಾರಿಕೆ ಈ ವರ್ಗದ ವಿದ್ಯುತ್ ದರ ಏರಿಕೆ ಮಾಡಿದೆ. ಏಕೆಂದರೆ, 10 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಕೃಷಿ ಪಂಪ್ಸೆಟ್ಗಳಿಗೆ ಸರ್ಕಾರ ಉಚಿತವಾಗಿ ವಿದ್ಯುತ್ ಪೂರೈಸುತ್ತಿದೆ. ಅದೇ ರೀತಿ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಫಲಾನುಭವಿಗಳಿಗೂ ಸರ್ಕಾರವೇ ಉಚಿತ ವಿದ್ಯುತ್ ನೀಡುತ್ತಿದೆ. ಈ ಗ್ರಾಹಕರು ಪಾವತಿಸಬೇಕಾದ ವಿದ್ಯುತ್ ಬಿಲ್ಗಳನ್ನು ಸರ್ಕಾರ ನೇರವಾಗಿ ಎಸ್ಕಾಂಗಳಿಗೆ ನೀಡುತ್ತದೆ. ಇದೀಗ ಈ ಮೂರೂ ಯೋಜನೆಗಳ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 25 ಪೈಸೆಯಷ್ಟು ಹೆಚ್ಚಿಸಿರುವುದರಿಂದ ಗ್ರಾಹಕರ ಜತೆಗೆ ಸರ್ಕಾರದ ಮೇಲೂ ಹೆಚ್ಚುವರಿ ಹೊರೆ ಬಿದ್ದಂತಾಗಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಪರಿಗಣಿಸಿ 2013-14ನೇ ಸಾಲಿನಲ್ಲಿ ಸರ್ಕಾರವು ಎಸ್ಕಾಂಗಳಿಗೆ ನೀಡಬೇಕಾಗಿದ್ದ ಸಹಾಯಧನದ ಮೊತ್ತವನ್ನು 5361 ಕೋಟಿಗೆ ಹೆಚ್ಚಿಸಲಾಗಿದೆ.
ಜುಲೈ 1ರಿಂದ ಮತ್ತೆ ದರ ಪರಿಷ್ಕರಣೆ
ಇಂಧನ ವೆಚ್ಚಗಳ ಮರುಹೊಂದಾಣಿಕೆ ದರವನ್ನು ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್ಸಿ ಎಸ್ಕಾಂಗಳಿಗೆ ಸೂಚನೆ ನೀಡಿರುವುದರಿಂದ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆಯಾಗಲಿದೆ. ಅಂದರೆ, ಜುಲೈ 1ರಿಂದ ಮತ್ತೆ ದರ ಪರಿಷ್ಕರಣೆ ಮಾಡಲು ಎಸ್ಕಾಂಗಳಿಗೆ ಕೆಇಆರ್ಸಿ ಒಪ್ಪಿಗೆ ನೀಡಿದೆ. ಪ್ರತಿ ಬಾರಿ ವರ್ಷಕ್ಕೊಮ್ಮೆ ವಿದ್ಯುತ್ ದರ ಹೆಚ್ಚಳ ಮಾಡಿದಾಗ ಒಂದೇ ಬಾರಿ ಜನರ ಮೇಲೆ ಹೊರೆ ಬೀಳುತ್ತದೆ. ಇದನ್ನು ತಪ್ಪಿಸಲು ವಿದ್ಯುತ್ ಉತ್ಪಾದನೆಗೆ ಬೇಕಾದ ಇಂಧನ, ಗ್ಯಾಸ್ ಬೆಲೆ ಹೆಚ್ಚಾದರೆ ಅದಕ್ಕೆ ಪೂರಕವಾಗಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡಲು ಆಯೋಗ ಆದೇಶ ಹೊರಡಿಸಿದೆ. ಅದರಂತೆ ಗ್ರಾಹಕರಿಂದ ವಿದ್ಯುತ್ ದರದಲ್ಲಿ ಇಂಧನ ವೆಚ್ಚಗಳ ಮರುಹೊಂದಾಣಿಕೆ ದರವನ್ನು ಸಂಗ್ರಹಿಸಲು ಒಂದು ವ್ಯವಸ್ಥೆ ಸಿದ್ಧಪಡಿಸಿದೆ. ಅದರಂತೆ ಜುಲೈ 1ರಿಂದ ಮತ್ತೆ ವಿದ್ಯುತ್ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ಸರಾಸರಿ ದರ ಏರಿಕೆ
23 ಪೈಸೆ
ಗೃಹಬಳಕೆ ವಿದ್ಯುತ್
20-25 ಪೈಸೆ
ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ
25 ಪೈಸೆ
ಬೀದಿದೀಪ ಸ್ಥಾವರಗಳಿಗೆ
25 ಪೈಸೆ
ನಗರ ಪ್ರದೇಶ
ವಿದ್ಯುತ್ ಬಳಕೆ ಹಾಲಿ ದರ ಪರಿಷ್ಕೃತ ದರ
ಮೊದಲ 30 ಯೂನಿಟ್ 2.30 2.50
31ರಿಂದ 100 ಯೂನಿಟ್ 3.50 3.70
101ರಿಂದ 200 ಯೂನಿಟ್ 4.60 4.85
200 ಯೂನಿಟ್ಗಿಂತಲೂ ಹೆಚ್ಚು 5.60 5.85
ಗ್ರಾಮಾಂತರ ಪ್ರದೇಶ
ವಿದ್ಯುತ್ ಬಳಕೆ ಹಾಲಿ ದರ ಪರಿಷ್ಕೃತ ದರ
ಮೊದಲ 30 ಯೂನಿಟ್ 2.20 2.40
31ರಿಂದ 100 ಯೂನಿಟ್ 3.20 3.40
101ರಿಂದ 200 ಯೂನಿಟ್ 4.30 4.55
200 ಯೂನಿಟ್ಗಿಂತಲೂ ಹೆಚ್ಚು 5.10 5.35
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

