ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮೇ 7
ಈ ಚುನಾವಣೆ ಫಲಿತಾಂಶವೂ 'ರಾಜಕೀಯ ಸೇಡಿಗೆ' ಅವಕಾಶ ಮಾಡಿ ಕೊಡುವ ಸಾಧ್ಯತೆ ಇದೆ. ಯಾಕೆಂದರೆ, ಈ ಬಾರಿಯೂ ಮತಗಳು ಮಿಶ್ರಣವಾಗುತ್ತಿಲ್ಲ. ಮತ ಎಣಿಕೆ ಸಂದರ್ಭದಲ್ಲಿ ಮತಗಟ್ಟೆವಾರು ಮತಗಳನ್ನು ಎಣಿಕೆ ಮಾಡಿ, ಹಾಗೆಯೇ ನಮೂದಿಸಲಾಗುತ್ತಿದೆ.
ಹಾಗಾಗಿಯೇ, ಅಭ್ಯರ್ಥಿಗೆ ಯಾವ ಮತಗಟ್ಟೆಯಿಂದ ಎಷ್ಟು ಮತ ಬಂದಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯ. ಇದು ರಾಜಕೀಯ ದ್ವೇಷಕ್ಕೆ ದಾರಿ ಮಾಡಿಕೊಡಲಿದೆ ಎಂಬುದಂತೂ ಸತ್ಯ. ಅಭ್ಯರ್ಥಿಯೊಬ್ಬ ಒಂದೇ ಒಂದು ಮತದ ಅಂತರದಿಂದ ಆಯ್ಕೆಯಾಗಿದ್ದರೂ ಕ್ಷೇತ್ರದ ಎಲ್ಲರ ಪ್ರತಿನಿಧಿ ಎಂಬ ಭಾವನೆ ದೂರವಾಗುತ್ತಿರುವ ಸಂದರ್ಭದಲ್ಲಿ ಈ ಪದ್ಧತಿ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಬಹುದು.
ಸ್ಪಷ್ಟ ಮಾಹಿತಿ ಲಭ್ಯ: ಒಂದು ಮತಗಟ್ಟೆಯ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ದಾಖಲಾಗಿರುವ ಮತಗಳನ್ನು ಎಣಿಸಿ ಅವುಗಳನ್ನು ವಾರ್ಡ್ವಾರು ನಮೂದಿಸುವುದರಿಂದ ಅಭ್ಯರ್ಥಿಗೆ ಈ ಮತಗಟ್ಟೆಯಲ್ಲಿ ತನಗೆ ಬಂದಿರುವ ಮತಗಳೆಷ್ಟು ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ತನಗೆ ಹೆಚ್ಚು ಮತ ಬಾರದಿದ್ದರೆ ಮುಂದಿನ ಐದು ವರ್ಷಗಳ ಕಾಲ ಈ ಮತಗಟ್ಟೆ ವ್ಯಾಪ್ತಿಯ ಪ್ರದೇಶವನ್ನು ನಿರ್ಲಕ್ಷಿಸುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.
ರಾಜಕಾರಣಿಗಳ ಈ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಈ ಬಾರಿ ವಿಧಾನಸಭೆ ಚುನಾವಣೆಯ ಪ್ರಚಾರ ಭಾಷಣದಲ್ಲಿ ಹಲವು ರಾಜಕಾರಣಿಗಳು ಇದನ್ನು ಬಹಿರಂಗವಾಗಿ ಹೇಳಿದ್ದಾರೆ. ನಿಮ್ಮ ಊರಿನ ಮತಗಳಿಂದ ನಾನು ಗೆದ್ದೆ. ನೀವು ಏನು ಕೇಳಿದರೂ ನಾನು ಮಾಡಿಕೊಡಲು ಸಿದ್ಧ ಎಂದು ಹೇಳಿದ್ದಾರೆ. ಇನ್ನು ಕೆಲವು ಪ್ರದೇಶಗಳಲ್ಲಿ, ಕಳೆದ ಚುನಾವಣೆಯಲ್ಲಿ ನೀವು ಮತ ಹಾಕಲಿಲ್ಲ. ಈ ಬಾರಿಯಾದರೂ ಮತ ಹಾಕಿ ಎಂದು ಕೋರಿದ್ದಾರೆ. ಇಲ್ಲಿ ಉದ್ಭವಿಸಿರುವ ಪ್ರಶ್ನೆ ಎಂದರೆ- ಪ್ರಜಾಪ್ರಭುತ್ವದಲ್ಲಿ ರಹಸ್ಯ ಮತದಾನ ಪ್ರಮುಖವಾದ ಅಂಶ. ಒಬ್ಬ ಮತದಾರ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆಂಬುದು ಗೊತ್ತಾಗುತ್ತಿಲ್ಲವೆಂಬುದೇನೋ ಸತ್ಯ. ಆದರೆ, 500ರಿಂದ ಒಂದೂವರೆ ಸಾವಿರದಷ್ಟು ಮತದಾರರಿರುವ ಒಂದು ಮತಗಟ್ಟೆ ವ್ಯಾಪ್ತಿಯ ಪ್ರದೇಶದ ಮತದಾರರು ಯಾರಿಗೆ ಒಲವು ತೋರಿಸಿದ್ದಾರೆಂಬುದು ರಹಸ್ಯವಾಗಿ ಉಳಿಯುವುದಿಲ್ಲ. ಇದು ಎಷ್ಟು ಸರಿ?
ಮತ ಮಿಶ್ರಣ ಕಷ್ಟಸಾಧ್ಯ: ಮತಗಳ ಮಿಶ್ರಣ ಕಷ್ಟಸಾಧ್ಯ ಎಂದು ಚುನಾವಣೆ ಜವಾಬ್ದಾರಿ ಹೊತ್ತಿರುವ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
ಮತಯಂತ್ರಗಳ ಮೇಲೆ ಇರುವ ಮತಗಟ್ಟೆ ಗುರುತು ಸೂಚಿಸುವ ಲೇಬಲ್ ತೆಗೆದು ಎಣಿಕೆಗೆ ನೀಡಬಹುದು. ಆದರೆ ಕೋರ್ಟ್ ವ್ಯಾಜ್ಯಗಳಾದಾಗ ಸಮಸ್ಯೆಯಾಗುತ್ತದೆ. ಪರೀಕ್ಷೆ ಮೌಲ್ಯಮಾಪನ ಸಂದರ್ಭದಲ್ಲಿ ಕೋಡಿಂಗ್-ಡಿಕೋಡಿಂಗ್ ಮಾಡಿ ಮತಯಂತ್ರದ ಗುರುತು ಚುನಾವಣಾಧಿಕಾರಿಗೆ ಮಾತ್ರ ಗೊತ್ತಾಗುವಂತೆ ಮಾಡಬಹುದು. ಇವತ್ತಿನ ವ್ಯವಸ್ಥೆಯಲ್ಲಿ ಇದನ್ನು ರಹಸ್ಯವಾಗಿಡುವುದು ಅಸಾಧ್ಯ. ಅಲ್ಲದೇ ನಿರ್ದಿಷ್ಠ ಮತಗಟ್ಟೆಯಲ್ಲಿ ಎಷ್ಟು ಮತದಾನವಾಗಿದೆ ಎಂಬ ಮಾಹಿತಿ ಬಹಿರಂಗವಾಗಿರುವಾಗ ಎಣಿಕೆ ಸಂದರ್ಭದಲ್ಲಿ ಗುರುತು ರಹಸ್ಯವಾಗಿಡುವುದು ಕಷ್ಟ ಎನ್ನುತ್ತಾರೆ. ಸೇಡಿನ ರಾಜಕಾರಣ ತೊಡೆಯಲು ಒಂದು ದಾರಿ ಇದೆ. ಕನಿಷ್ಠ 10-15 ಮತಯಂತ್ರಗಳನ್ನು ಪರಸ್ಪರ ಸಂಪರ್ಕಿಸಿ ಅವುಗಳ ಒಟ್ಟುಗೂಡಿದ ಮತ ಎಣಿಕೆ ಮಾಡುವಂತಾದರೆ ಸ್ವಲ್ಪವಾದರೂ ರಹಸ್ಯ ಕಾಪಾಡಬಹುದು ಎಂದು ಪ್ರಜ್ಞಾವಂತ ನಾಗರಿಕರೊಬ್ಬರು ಅಭಿಪ್ರಾಯಪಡುತ್ತಾರೆ. ಎಲೆಕ್ಟ್ರಾನಿಕ್ ಮತಯಂತ್ರ ಬಳಕೆ ಪದ್ಧತಿ ಬಂದಾಗಿನಿಂದ ಸೇಡಿನ ರಾಜಕಾರಣ ಹೆಚ್ಚಾಗುತ್ತಿದೆ. ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುತ್ತಾರೆ ಅವರು.
ಹೊನ್ನಾಳಿ ಚಂದ್ರಶೇಖರ್