ಪ್ರಧಾನ ಸುದ್ದಿ

ಪ್ರಥಮ ಪಿಯುಸಿ ಪ್ರವೇಶಕ್ಕೆ ಇಲಾಖೆ ಅರ್ಜಿಯನ್ನೇ ಸಲ್ಲಿಸಿ

Published On :

ಕನ್ನಡಪ್ರಭ ವಾರ್ತೆ  ಧಾರವಾಡ  ಮೇ 7
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಪಾಸಾದ ವಿದ್ಯಾರ್ಥಿಗಳಿಗೆ ಈಗ ಪ್ರಥಮ ಪಿಯುಸಿ ಪ್ರವೇಶದ ಚಿಂತೆ. ಯಾವ ಕಾಲೇಜುಗಳಿಗೆ ಅರ್ಜಿ ಸಲ್ಲಿಸಬೇಕೆಂಬ ಆಲೋಚನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಇದ್ದಾರೆ.
ಇಷ್ಟು ವರ್ಷ ಅನುದಾನಿತ ಹಾಗೂ ಖಾಸಗಿ ಕಾಲೇಜುಗಳು ಎಸ್ಸೆಸ್ಸೆಲ್ಸಿ ಫಲಿತಾಂಶ ಬರುವುದೇ ತಡ, ವಿದ್ಯಾರ್ಥಿ ಹಾಗೂ ಪಾಲಕರಿಗೆ ಪ್ರವೇಶದ ಅರ್ಜಿ ನಮೂನೆ ಮಾರಿ ಸಿಕ್ಕಾಪಟ್ಟೆ ದುಡ್ಡು ಮಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಕಳೆದ ವರ್ಷ ಮಹತ್ತರ ಕ್ರಮ ತೆಗೆದುಕೊಂಡಿತ್ತು. ವೆಬ್‌ಸೈಟ್ ಮೂಲಕ  ಪಿಯುಸಿ ಪ್ರವೇಶ ಅರ್ಜಿಗಳನ್ನು ವಿತರಿಸುವ ಕ್ರಮ ಯಶಸ್ವಿಯಾಗಿದ್ದು, ಈ ವರ್ಷವೂ ಮುಂದುವರಿಸಿದೆ.
ಯಾವುದೇ ಕಾಲೇಜು ಹಾಗೂ ಆಡಳಿತ ಮಂಡಳಿ ಪ್ರಾಸ್ಪೆಕ್ಟಸ್ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ನೂರಾರು ರುಪಾಯಿ ಕೀಳುವಂತಿಲ್ಲ. ಇಲಾಖೆ ನಿಗದಿ ಪಡಿಸಿದ ಅರ್ಜಿ ನಮೂನೆಯನ್ನು ಮಾತ್ರ ಪರಿಗಣಿಸಬೇಕೆಂದು ಈ ವರ್ಷವೂ ಇಲಾಖೆ ರಾಜ್ಯದ ಎಲ್ಲ ಉಪನಿರ್ದೇಶಕರಿಗೆ ಸೂಚಿಸಿದೆ. ಪಿಯುಸಿ ಪ್ರವೇಶ ಪಡೆಯಲು ಆಯಾ ಕಾಲೇಜುಗಳಿಗೆ ಸಲ್ಲಿಸುವ ಅರ್ಜಿಗಳು ಇಲಾಖೆ ವೆಬ್‌ಸೈಟ್‌ನಲ್ಲಿ (www.puc.kar.nic.in) ಉಚಿತವಾಗಿ ದೊರೆಯುತ್ತಿವೆ. ಡೌನ್‌ಲೋಡ್ ಮಾಡಿಕೊಂಡು ತಮ್ಮ ಮಾಹಿತಿಯೊಂದಿಗೆ ಕಾಲೇಜುಗಳಿಗೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಅರಿವು ಮೂಡಿಸಲು ಇಲಾಖೆ ಎಲ್ಲ ಉಪನಿರ್ದೇಶಕರಿಗೆ ತಿಳಿಸಿದೆ.
ಒಂದು ರುಪಾಯಿಗೆ ಅರ್ಜಿ: ಯಾವುದೇ ವಿದ್ಯಾರ್ಥಿ ಎಷ್ಟೇ ಅಂಕಗಳನ್ನು ಪಡೆದರೂ ಕನಿಷ್ಠ 2-3 ಕಾಲೇಜುಗಳಿಗೆ ಅರ್ಜಿ ಹಾಕುವ ಸ್ಪರ್ಧೆ ಎಲ್ಲೆಡೆ ಇದೆ. ಖಾಸಗಿ ಕಾಲೇಜುಗಳು ಇದನ್ನೇ ಬಂಡವಾಳ ಮಾಡಿಕೊಂಡು ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಸ್ಪೆಕ್ಟಸ್ ಹೆಸರಿನಲ್ಲಿ ತಮ್ಮ ಕಾಲೇಜಿನ ಸಂಪೂರ್ಣ ಮಾಹಿತಿಯೊಂದಿಗೆ 200ರಿಂದ 500ರವರೆಗೂ ಅರ್ಜಿಗಳನ್ನು ಮಾರುತ್ತಿದ್ದವು. ಒಬ್ಬ ವಿದ್ಯಾರ್ಥಿ ಅರ್ಜಿ ಸಲ್ಲಿಸುವುದಕ್ಕಾಗಿ ಒಂದೆರಡು ಸಾವಿರ ಖರ್ಚು ಮಾಡಬೇಕಾಗಿತ್ತು. ಈ ಎಲ್ಲ ಕಾರಣಗಳಿಂದ ಇಲಾಖೆಯ ನಿಗದಿತ ಅರ್ಜಿ ಬರೀ 1ಕ್ಕೆ ದರೆಯುವಂತೆ ಕಳೆದ ವರ್ಷದಿಂದ ವ್ಯವಸ್ಥೆ ಮಾಡಿದೆ. ಅದನ್ನು ಪಡೆದು ಜೆರಾಕ್ಸ್ ಮಾಡಿಸಿ ಹತ್ತು ಕಾಲೇಜುಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ನಿಯಮ ಮಾಡಿತ್ತು. ಈ ಕ್ರಮ ಯಶಸ್ವಿಯಾಗಿದ್ದು, ಈ ವರ್ಷವೂ ಮುಂದುವರೆಯಲಿದೆ.
ತಪ್ಪಿದರೆ ತಕ್ಕ ಕ್ರಮ: ಕೆಲವೊಂದು ಕಾಲೇಜುಗಳು ಇಲಾಖೆ ನಿಯಮ ಮೀರಿ ತಮ್ಮ ಕಾಲೇಜಿನ ಪ್ರಾಸ್ಪೆಕ್ಟಸ್ ಪಡೆಯಬೇಕೆಂದು ಒತ್ತಾಯ ಮಾಡಿದ್ದಲ್ಲಿ ದೂರು ನೀಡಬಹುದು. ಅಂಥ ಕಾಲೇಜಿನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕೆಲವು ಕಾಲೇಜುಗಳು ಅರ್ಜಿ ವಿತರಣೆಯಲ್ಲಿ ಇಲಾಖೆ ನಿಯಮ ಮೀರುವ ಹಿನ್ನೆಲೆಯಲ್ಲಿ ಮೂವರ ತಂಡ ಎಲ್ಲ ಕಾಲೇಜುಗಳ ಮೇಲೆ ಕಣ್ಣಿಟ್ಟಿರುತ್ತದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರವೀಂದ್ರ ರಿತ್ತಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿಯೇ ಜೀವನವಿಡೀ ದುಡಿಯಬೇಕಾದ ಸ್ಥಿತಿ ಬಂದಿದೆ. ಕಾಲೇಜಿನ ಪ್ರಾಸ್ಪೆಕ್ಟಸ್‌ವಿಷಯದಲ್ಲಿ ಇಲಾಖೆ ಉತ್ತಮ ಕ್ರಮ ತೆಗೆದುಕೊಂಡಿದ್ದು, ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಂದ ಹಾಗೂ ಪಾಲಕರಿಂದ ಸುಖಾಸುಮ್ಮನೆ ಹಣ  ಕೀಳುವುದನ್ನು ತಪ್ಪಿಸಿದಂತಾಗಿದೆ.
- ಹ.ವೆಂ. ಕಾಖಂಡಕಿ, ಪೋಷಕರು


ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.