ಕ.ಪ್ರ. ವಾರ್ತೆ ಗದಗ ಮೇ 11
ಒಬ್ಬರಿಗೆ ಗೊತ್ತಿಲ್ಲದಂತೆ ಇನ್ನೊಬ್ಬರನ್ನು ಮದುವೆಯಾಗಿ, ಇಬ್ಬರಿಗೂ ಕೈಕೊಟ್ಟು ಪರಾರಿಯಾಗಿದ್ದ ಆಸಾಮಿಯೊಬ್ಬ ಶನಿವಾರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವನನ್ನು ಸಾರ್ವಜನಿಕರೇ ಹಿಡಿದು ಪೊರಕೆ ಸೇವೆ ಮಾಡಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮದಲ್ಲಿ ಶನಿವಾರ ನಡೆದಿದೆ.
ಎರಡು ಮದುವೆ ಮಾಡಿಕೊಂಡು ಸಿಕ್ಕಿಬಿದ್ದ ವ್ಯಕ್ತಿ ಹೆಸರು ಪರಮೇಶ್. ಈತ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದವನು. ಈತ ಇದಕ್ಕೂ ಮುನ್ನ ದಾವಣಗೆರೆ ಜಿಲ್ಲೆಯ ಆನಗೋಡಿಯ ತನ್ನ ಮಾವನ ಮಗಳಾದ ಉಮಾ ಎಂಬವಳನ್ನು ವಿವಾಹವಾಗಿದ್ದ.
ಆದರೆ, ಅವಳೊಂದಿಗೆ ಸರಿಯಾದ ಸಂಸಾರ ಮಾಡದ ಪರಮೇಶ್ ಅಲ್ಲಿಂದ ಕೆಲಸ ಹುಡುಕುವ ನೆಪದಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮಕ್ಕೆ ಬಂದು ನೆಲೆಸಿದ್ದ. ನಾನು ಅನಾಥ, ನನಗೆ ಯಾರೂ ಇಲ್ಲ ಎಂದು ನಂಬಿಸಿ ಅದೇ ಗ್ರಾಮದ ದೇವಕ್ಕ ಎಂಬವಳನ್ನೂ ಒಂದು ವರ್ಷದ ಹಿಂದೆ ವಿವಾಹವಾಗಿ, 8 ದಿನಗಳ ಕಾಲ ಅವಳ ಜತೆಗಿದ್ದ. ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ವರ್ಷ ಕಳೆದರೂ ಮರಳಿ ಬಂದಿರಲಿಲ್ಲ. ಶುಕ್ರವಾರ ರಾತ್ರಿ ಏಕಾಏಕಿ ಪ್ರತ್ಯಕ್ಷವಾಗಿದ್ದು, ಸಂಬಂಧಿಗಳು ಹಾಗೂ ಗ್ರಾಮಸ್ಥರಲ್ಲಿ ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿತ್ತು.
ದೇವಕ್ಕ ಬಳಿ ಇರುವ ಹಣ, ಬಂಗಾರವನ್ನು ದೋಚಲು ಈತ ನಟಿಸುತ್ತಿದ್ದಾನೆಂದು ಶಂಕಿಸಿದ ಗ್ರಾಮಸ್ಥರು ಶುಕ್ರವಾರ ರಾತ್ರಿ ಆತನಿಗೆ ಪೊರಕೆ ಸೇವೆ ಮಾಡಿ, ಕೂಡಿ ಹಾಕಿದ್ದರು. ನಂತರ ಶಿರಹಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.