ಬಿಎಸ್ವೈ, ನಿರಾಣಿಗೆ ತಪ್ಪಿದ್ದಲ್ಲ ಕಷ್ಟ
ಕ.ಪ್ರ.ವಾರ್ತೆ, ಬೆಂಗಳೂರು, ಮೇ 21-
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ಲೋಕಾಯುಕ್ತ ಕೋರ್ಟ್ ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ತಮ್ಮ ವಿರುದ್ಧದ ಖಾಸಗಿ ದೂರುಗಳನ್ನು ರದ್ದುಗೊಳಿಸಬೇಕು ಎಂದು ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಖಾಸಗಿ ದೂರಿಗೆ ಸಂಬಂಧಿಸಿ ಲೋಕಾಯುಕ್ತ ಕೋರ್ಟ್ ತನ್ನ ವಿಚಾರಣೆ ಮುಂದುವರಿಸಲಿ. ಜನಪ್ರತಿನಿಧಿಗಳು ತೆಗೆದುಕೊಂಡ ನಿರ್ಧಾರ ಕಾನೂನು ಬದ್ಧವಾಗಿದೆಯೇ ಎಂಬ ಕುರಿತಂತೆ ಲೋಕಾಯುಕ್ತ ಕೋರ್ಟ್ ತನ್ನ ತೀರ್ಪು ನೀಡಲಿದೆ. ಲೋಕಾಯುಕ್ತ ವಿಶೇಷ ಕೋರ್ಟ್ನ ವಿಚಾರಣೆಯಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾ. ಆನಂದ ಬೈರಾರೆಡ್ಡಿ ಅವರ ಏಕಸದಸ್ಯ ಪೀಠವು ಮಂಗಳವಾರ ಆದೇಶಿಸಿದೆ.
ಸಿರಾಜಿನ್ ಭಾಷ ಹಾಗೂ ಆಲಂ ಪಾಷಾ ಅವರು ಸಲ್ಲಿಸಿದ್ದ ಖಾಸಗಿ ದೂರುಗಳನ್ನು ರದ್ದು ಕೋರಿ ಬಿಎಸ್ವೈ ಹಾಗೂ ನಿರಾಣಿ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಆನಂದ ಬೈರಾರೆಡ್ಡಿ ಅವರು ತೀರ್ಪು ಕಾಯ್ದಿರಿಸಿದ್ದರು.
ವಿಚಾರಣೆಗೆ ಪ್ರತ್ಯೇಕ ಅನುಮತಿ ಅಗತ್ಯವಿಲ್ಲ: ಯಡಿಯೂರಪ್ಪ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರಿಂದ ಅನುಮತಿ ಪಡೆಯುವಾಗ ಎಲ್ಲ 15 ಪ್ರಕರಣಗಳನ್ನು ಸೇರಿಸಿ ಅನುಮತಿ ಪಡೆಯಲಾಗಿತ್ತು. ಆದರೆ ಲೋಕಾಯುಕ್ತ ಕೋರ್ಟ್ನಲ್ಲಿ ದೂರು ದಾಖಲಿಸುವಾಗ 5 ಪ್ರಕರಣವನ್ನಾಗಿ ಪ್ರತ್ಯೇಕಿಸಲಾಗಿದೆ. ಇದರಿಂದ ರಾಜ್ಯಪಾಲರ ಅನುಮತಿ ಪತ್ರವನ್ನು ಎಲ್ಲ 5 ದೂರುಗಳಿಗೆ ಅನ್ವಯಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಬಿಎಸ್ವೈ ಪರ ವಕೀಲರು ನ್ಯಾಯಪೀಠದೆದುರು ಮಂಡಿಸಿದ್ದರು.
ಆದರೆ ಇದಕ್ಕೆ ಒಪ್ಪಿಗೆ ಸೂಚಿಸದ ಹೈಕೋರ್ಟ್ ಏಕಸದಸ್ಯ ಪೀಠ, 15 ಪ್ರಕರಣವನ್ನು 5 ಪ್ರತ್ಯೇಕ ದೂರುಗಳನ್ನಾಗಿ ವಿಂಗಡಿಸಿರುವುದನ್ನು ಆಕ್ಷೇಪಣೆ ಎಂದು ಸ್ವೀಕರಿಸಲು ಸಾಧ್ಯವಿಲ್ಲ. ಆರೋಪಿ ವಿರುದ್ಧದ ಪ್ರಕರಣವನ್ನು ಈ ಮಾನದಂಡವನ್ನಾಧರಿಸಿ ರದ್ದುಗೊಳಿಬೇಕೆಂಬ ವಾದ ಮಾನ್ಯವಲ್ಲ. ಇದಲ್ಲದೇ ಇವೆಲ್ಲ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಲೋಕಾಯುಕ್ತ ಕೋರ್ಟ್ ತನ್ನ ಅಭಿಪ್ರಾಯವನ್ನು ತಿಳಿಸಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಸಾರ್ವಜನಿಕ ಹಿತಾಸಕ್ತಿ ಆದೇಶವನ್ನು ಮಾಡಿದ್ದಾರೆ. ಇದನ್ನು ಅಕ್ರಮ ಎನ್ನಲು ಸಾಧ್ಯವಿಲ್ಲ ಎಂಬ ವಾದವನ್ನು ವಕೀಲರು ಮಂಡಿಸಿದ್ದರು. ಇದನ್ನು ಪುರಸ್ಕರಿಸದ ಹೈಕೋರ್ಟ್, ಈ ವಿಚಾರವನ್ನು ಅಧೀನ ಕೋರ್ಟ್ನಲ್ಲಿ ಪ್ರಸ್ತಾಪಿಸಿ ವಿಚಾರಣೆ ಎದುರಿಸಿ, ಪ್ರಕರಣ ರದ್ದು ಮಾಡಲು ಈ ವಿಚಾರ ಸಮರ್ಪಕವಾಗಿಲ್ಲ ಎಂದು ಆದೇಶದಲ್ಲಿ ಹೇಳಿದೆ.
ನಗರದ ಶ್ರೀರಾಂಪುರ, ಆರ್ಎಂವಿ ಬಡಾವಣೆ ಹಾಗೂ ಕೆಂಪಾಪುರದಲ್ಲಿ ಕ್ರಮವಾಗಿ 33 ಗುಂಟೆ, 11 ಎಕರೆ 25 ಗುಂಟೆ ಹಾಗೂ ನಿವೇಶನವನ್ನು ಅಕ್ರಮವಾಗಿ ಡಿನೋಟಿಫೈ ಮಾಡಿ ತಮ್ಮ ಕುಟುಂಬ ಸದಸ್ಯರಿಗೆ ಯಡಿಯೂರಪ್ಪ ನೀಡಿದ್ದಾರೆ ಎಂದು ಸಿರಾಜಿನ್ ಬಾಷ 5ನೇ ಖಾಸಗಿ ದೂರಿನಲ್ಲಿ ಹೇಳಿದ್ದರು.
ಎಚ್ಎಸ್ಆರ್ ಬಡಾವಣೆಯಲ್ಲಿ ಸೋಹನ್ ಕುಮಾರ್ ಹಾಗೂ ಸಂಬಂಧಿಗಳಿಗಾಗಿ ಡಿನೋಟಿಫೈ ಮಾಡಿ ಅಕ್ರಮವಾಗಿ ನಿವೇಶನ ಹಂಚಲಾಗಿದೆ ಹಾಗೂ ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ನಾಗರಬಾವಿಯಲ್ಲಿ 5 ಎಕರೆ 13 ಗುಂಟೆ ಡಿನೋಟಿಫಿಕೇಷನ್ ಮಾಡಲಾಗಿದೆ ಎಂದು ಬಾಷ ಆರೋಪಿಸಿದ್ದರು.
ನಿರಾಣಿ ವಿರುದ್ಧದ ಪ್ರಕರಣ: ಕೆಐಎಡಿಬಿಯಿಂದ ಅಕ್ರಮವಾಗಿ ಭೂಮಿ ಪಡೆದ ಆರೋಪದ ಮೇಲೆ ಮಾಜಿ ಸಚಿವ ಮುರುಗೇಶ್ ನಿರಾಣಿ ವಿರುದ್ಧದ ಖಾಸಗಿ ದೂರನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಲೋಕಾಯುಕ್ತ ಕೋರ್ಟ್ನಲ್ಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ದೋಷಾರೋಪ ಪಟ್ಟಿಯನ್ನು ಈವರೆಗೆ ಕೋರ್ಟ್ ಪುರಸ್ಕಾರ ಅಥವಾ ತಿರಸ್ಕಾರ ಮಾಡಿಲ್ಲ. ಲೋಕಾಯುಕ್ತ ಕೋರ್ಟ್ ಯಾವ ಆದೇಶ ನೀಡುತ್ತದೆ ಎಂದು ಕಾದು ನೋಡಿ. ದೋಷಾರೋಪ ಪಟ್ಟಿ ಬಗ್ಗೆ ಈವರೆಗೆ ಯಾವುದೇ ಆದೇಶ ಬರದ ಕಾರಣ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ ಕೆಐಎಡಿಬಿ ಮೂಲಕ ನಕಲಿ ದಾಖಲೆ ಸೃಷ್ಟಿಸಿ 26 ಎಕರೆ ಭೂಮಿಯನ್ನು ತಮ್ಮ ಕಂಪನಿಗೆ ಪಡೆದಿದ್ದಾರೆ. ಇದಕ್ಕೂ ಮೊದಲು 26 ಎಕರೆ ಭೂಮಿಯನ್ನು ಹಾರ್ಡ್ವೇರ್ ಪಾರ್ಕ್ಗಾಗಿ ಮೀಸಲಿಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

