ಸಿದ್ದು ಸರ್ಕಾರಕ್ಕೆ ಚೊಚ್ಚಲ ಅಧಿವೇಶನದ ಸಡಗರ

ಕನ್ನಡಪ್ರಭ ವಾರ್ತೆ , ಬೆಂಗಳೂರು , ಮೇ 28
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ವಿಧಾನಸಭೆಯ ಚೊಚ್ಚಲ ಅಧಿವೇಶನ ಬುಧವಾರದಿಂದ ಆರಂಭವಾಗಲಿದೆ.
ಅಧಿವೇಶನದ ಮೊದಲ 2 ದಿನದ ಕಲಾಪ ನೂತನ ಸದಸ್ಯರ ಪ್ರಮಾಣವಚನಕ್ಕೆ ಮೀಸಲು. ಮೇ 31ರ ಶುಕ್ರವಾರ ವಿಧಾನಸಭಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೂ. 3ರ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನೊಳಗೊಂಡ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜೂ. 7ರವರೆಗೆ ಅಧಿವೇಶನ ನಡೆಯಲಿದೆ.
ಹಿಂದಿನ ಸರ್ಕಾರದ ಆಡಳಿತ ವೈಫಲ್ಯದ ಹಿನ್ನೆಲೆಯಲ್ಲಿ ಹೊಸ ಸರ್ಕಾರಕ್ಕೆ ಆರಂಭಿಕ ಸವಾಲುಗಳು ಎದುರಾಗಿವೆ. ಚೊಚ್ಚಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ಅನೇಕ ವಿಚಾರಗಳು ಪ್ರಸ್ತಾಪವಾಗಲಿದ್ದು, ಇದಕ್ಕೆ ಉತ್ತರಿಸಲು ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸದಸ್ಯರು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಬಹುತೇಕ ಎಲ್ಲಾ ಸಚಿವರು ಇಲಾಖಾ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಸಮಾಲೋಚನೆ ಪೂರ್ಣಗೊಳಿಸಿ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಅಲ್ಲಿದ್ದವರು ಇಲ್ಲಿ, ಇಲ್ಲಿದ್ದವರು ಅಲ್ಲಿ: ಕಳೆದ ಬಾರಿ ಪ್ರಮುಖ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಈ ಬಾರಿ ಆಡಳಿತ ಪಕ್ಷದಲ್ಲಿದ್ದರೆ, ಎರಡನೇ ಪ್ರತಿಪಕ್ಷವಾಗಿದ್ದ ಜೆಡಿಎಸ್ ಪ್ರಮುಖ ಪ್ರತಿಪಕ್ಷವಾಗಿದೆ.
ಆಡಳಿತ ಪಕ್ಷವಾಗಿದ್ದ ಬಿಜೆಪಿ ಎರಡನೇ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ.
ಪ್ರತಿಪಕ್ಷದ ಮೊದಲ ಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಬಿ. ಶ್ರೀರಾಮುಲು, ನೈಸ್ ಮುಖ್ಯಸ್ಥ ಅಶೋಕ್ ಖೇಣಿ, ರೈತ ಸಂಘದ ಪುಟ್ಟಣ್ಣಯ್ಯ ಅವರು ಇರುತ್ತಾರೆ.
ಅದೇ ರೀತಿ ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ವಿ. ಶ್ರೀನಿವಾಸಪ್ರಸಾದ್ ಮುಂತಾದವರಿದ್ದಾರೆ. ಇದರ ಜತೆಗೆ ಅಂಬರೀಷ್ ಮತ್ತು ಉಮಾಶ್ರೀ ಅವರೂ ಸಚಿವರಾಗಿರುವುದರಿಂದ ಆಡಳಿತ ಪಕ್ಷಕ್ಕೆ ತಾರಾ ಕಳೆಯೂ ಬಂದಿದೆ.
ಈ ಬಾರಿಯ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳಲ್ಲಿ ಸ್ಪರ್ಧಾತ್ಮಕ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಸದನದ ನಡವಳಿಕೆಗಳು ಕುತೂಹಲಕ್ಕೆ ಕಾರಣವಾಗಿವೆ.
ಮಾಲಿಕಯ್ಯ ಗುತ್ತೇದಾರ್ ನಿಯೋಜಿತ ಸ್ಪೀಕರ್: ಅಧಿವೇಶನದ ಮೊದಲ ಎರಡು ದಿನ ನೂತನ ಸದಸ್ಯರ ಪ್ರಮಾಣವಚನ ಸ್ವೀಕಾರ ಕಾರ್ಯವಿರುತ್ತದೆ. ಇದನ್ನು ನಡೆಸಿಕೊಡಲು ಕಾಂಗ್ರೆಸ್ ಸದಸ್ಯ ಮಾಲಿಕಯ್ಯ ಗುತ್ತೇದಾರ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನಿಯೋಜನೆ ಮಾಡಲಾಗಿದೆ. ಅವರು ಸದಸ್ಯರಿಗೆ ಪ್ರಮಾಣವಚನ ಬೋಧಿಸುವರು. ಎಲ್ಲಾ ಸದಸ್ಯರು ಪ್ರತ್ಯೇಕವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದಾದ ಬಳಿಕ ಮೇ 31ರಂದು ಸಭಾಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಸಭಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಹೆಸರು ಅಂತಿಮಗೊಂಡಿದ್ದು, ಉಪಾಧ್ಯಕ್ಷರ ಸ್ಥಾನಕ್ಕೆ ಸಿ.ಎಸ್. ನಾಡಗೌಡ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಸದನದಲ್ಲಿ ಕಾಂಗ್ರೆಸ್ ಬಹುಮತ ಹೊಂದಿರುವುದರಿಂದ ಈ ಎರಡೂ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತ.
67 ಮಂದಿ ಹೊಸಬರು
ಬುಧವಾರ ವಿಧಾನಸಭೆ ಪ್ರವೇಶಿಸಲಿರುವ ಒಟ್ಟು ಎಂಟು ರಾಜಕೀಯ ಪಕ್ಷಗಳ 223 ಸದಸ್ಯರ ಪೈಕಿ 67 ಮಂದಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ನಾಲ್ವರು ಮಾಜಿ ಸ್ಪೀಕರ್ಗಳು, ಮೂವರು ಮಾಜಿ ಸಿಎಂ, 50ಕ್ಕೂ ಹೆಚ್ಚು ಮಾಜಿ ಸಚಿವರಿದ್ದಾರೆ. ಈ ಪೈಕಿ ಶೆಟ್ಟರ್ ಮಾಜಿ ಸಿಎಂ ಹಾಗೂ ಮಾಜಿ ಸ್ಪೀಕರ್ ಆಗಿರುವುದು ವಿಶೇಷ.
ಪರಿಷತ್ ಕಲಾಪ ಜೂ. 3ರಿಂದ
ಆದರೆ, ವಿಧಾನ ಪರಿಷತ್ ಕಲಾಪಗಳು ಜೂ. 3ರಿಂದ ಆರಂಭವಾಗಲಿವೆ. ಜೂ.3ರಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ನಂತರ ಜೂ.4ರಿಂದ 7ರವರೆಗೆ ಸರ್ಕಾರಿ ಕಲಾಪಗಳು ವಿಧಾನ ಪರಿಷತ್ ಸಭಾಂಗಣದಲ್ಲಿ ನಡೆಯಲಿವೆ.
ಮೇ 29, 30
ನೂತನ ಸದಸ್ಯರ ಪ್ರಮಾಣವಚನ
ಮೇ 31
ವಿಧಾನಸಭೆ ಅಧ್ಯಕ್ಷರ ಚುನಾವಣೆ
ಜೂ. 3
ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರ ಭಾಷಣ
ಜೂ.4 ರಿಂದ 7
ಸರ್ಕಾರಿ ಕಾರ್ಯಕಲಾಪಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


