ಪ್ರಧಾನ ಸುದ್ದಿ

ಎಲ್ಲೆಂದರಲ್ಲಿ ನಿದ್ರೆ ಬೇಡ

ಎಲ್ಲೆಂದರಲ್ಲಿ ನಿದ್ರೆ ಬೇಡ
Published On :

ಸಿದ್ದರಾಮಯ್ಯನವರಿಗೆ ತರಹೇವಾರಿ ಸಲಹೆಗಳು ಸಾಗರೋಪಾದಿಯಲ್ಲಿ ಹರಿದುಬರುತ್ತಿವೆ. ಅವುಗಳಲ್ಲಿ ಒಂದಷ್ಟು ನಿಮ್ಮ ಮುಂದೆ...

ನಿದ್ರಿಸದಿರು ಸಿದ್ರಾಮಣ್ಣ
ನೀವು ಸಿಎಂ ಆಗಿದ್ದು ತುಂಬಾನೇ ಖುಷಿ ಆಯ್ತು.
ಆದ್ರೆ ಏಕೋ ನಿಮ್ಮ ಒಂದು ಮನೋಭಾವ ಇಷ್ಟ
ಆಗ್ಲಿಲ್ಲ. ನೀವು ಎಲ್ಲಿದ್ದೀರಾ, ಏನ್ ಮಾಡ್ತಾ ಇದ್ದೀರಾ
ಎಂಬುದನ್ನೂ ನೋಡದೇ ನಿದ್ರಿಸುತ್ತೀರಿ. ಮೊನ್ನೆ ಕೂಡ ಹಾಗೇ ಆಯ್ತು.
ರವೀಂದ್ರ ಕಲಾಕ್ಷೇತ್ರದ ಕಾರ್ಯಕ್ರಮದಲ್ಲಿ
ಸುತ್ತೂರು ಶ್ರೀಗಳು ನಿಮ್ಮನ್ನು ಹೊಗಳುವ ವೇಳೆಯಲ್ಲೇ
ನೀವು ಗಡದ್ದಾಗಿ ನಿದ್ರಿಸುತ್ತಿದ್ದಿರಿ. ಅವರು ನಿಮ್ಮ ಬಗ್ಗೆ ತುಂಬಾನೇ
ಮಾತನಾಡಿದ್ರು. ಆದ್ರೆ ನೀವೇ ಕೇಳಿಸಿಕೊಳ್ಳಲಿಲ್ಲ.
ಮುಂದೆ ಹೀಗೆ ಮಾಡ್ಬೇಡಿ ಆಯ್ತಾ ಪ್ಲೀಸ್...
- ಶಿವಕುಮಾರ್, ಪದ್ಮನಾಭನಗರ

ಗೌಡ್ರಿಗೊಂದು ಬೊಕ್ಕೆ ಕೊಡಿ
ಸೋನಿಯಾ, ರಾಹುಲ್ ಗಾಂಧಿ ನನ್ನನ್ನು ಸಿಎಂ ಮಾಡಿದ್ರು ಅಂದ್ರಿ. ಅವರಿಗೆ ಥ್ಯಾಂಕ್ಸ್ ಹೇಳಿದ್ದೀರಾ. ಆದರೆ ನೆನಪಿರಲಿ,
ಇವರಿಬ್ಬರಿಗೂ ಮುನ್ನ ನಿಮ್ಮನ್ನು ಡಿಸಿಎಂ ಮಾಡಿದ್ದು
ದೇವೇಗೌಡರು. ನೀವು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಮೇಲೆ
ಸಾಹಿತಿಗಳ ಮನೆಗೆ ಹೋಗಿ ಬಂದ್ರಿ.
ಆದರೆ ಸೌಜನ್ಯಕ್ಕಾದರೂ ದೇವೇಗೌಡರ ಮನೆಗೆ ಹೋಗಲಿಲ್ಲ.
ಈಗಲೂ ಕಾಲ ಮಿಂಚಿಲ್ಲ. ಈಗಲಾದರೂ
ಹೋಗಿ ಒಂದು ಬೊಕ್ಕೆ ಕೊಟ್ಟು ಬನ್ನಿ...
- ಪ್ರಭಾಕರ್, ಮೈಸೂರು

ಪತ್ರಕರ್ತರನ್ನು ದೂರವಿಡಿ
ಪತ್ರಕರ್ತರ ಮುಂದೆ ಹೆಚ್ಚು ಮಾತು ಒಳ್ಳೇದಲ್ಲ.
ಇವರ ಮುಂದಿನ ಮಾತಿನಿಂದ
ಯಾವುದೇ ಪ್ರಯೋಜನವೂ ಇಲ್ಲ.
ಪತ್ರಕರ್ತರನ್ನು ನಂಬಿದವರು ಏನೇನೋ ಆಗಿದ್ದಾರೆ.
ಮಾತು ಕಡಿಮೆ ಮಾಡಿದ್ರೆ ನೀವು ಚೆನ್ನಾಗಿರ್ತೀರಿ...
- ಸೋಮಶೇಖರ್, ಚನ್ನರಾಯಪಟ್ಟಣ

ಕಚೇರಿ ವಾಸ್ತವ್ಯ ಮಾಡಿ...
ಅಧಿಕಾರ ಸಿಕ್ಕ ಖುಷಿಯಲ್ಲಿ ಕೆಜಿಗೆ 1 ರಂತೆ 30 ಕೆಜಿ ಅಕ್ಕಿ
ಘೋಷಣೆ ಮಾಡ್ಬಿಟ್ರಿ.
ನಿಮಗೆ ಒಂದು ವಿಷ್ಯ ಗೊತ್ತಾ ಸಿದ್ದರಾಮಯ್ಯನವರೇ
ನಮ್ಮಲ್ಲಿ ಪಡಿತರ ವ್ಯವಸ್ಥೆನೇ ಸರಿ
ಇಲ್ಲ. ಇದು ತಿಳೀಬೇಕಾದರೆ ಪಡಿತರ ಅಂಗಡಿಗೆ ಹೋಗಿ
ಖುದ್ದಾಗಿ ನೋಡಿ. ಇದಷ್ಟೇ ಅಲ್ಲ ಸರ್ಕಾರಿ ಕಚೇರಿಗಳ ಸ್ಥಿತಿಯೂ ಅಷ್ಟೇ,
ನಿಮ್ಮ ವಿಧಾನಸೌಧದ ಬಳಿ ಇರುವ ಕಚೇರಿಗೇ ಹೋಗಿ ಒಂದು
ದಿನ ವಾಸ್ತವ್ಯ ಮಾಡಿ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಷ್ಟ ಗೊತ್ತಾಗಿದ್ದು
ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದರಿಂದಲೇ ಅಲ್ಲವೇ...
- ರಶ್ಮಿ, ಮಂಗಳೂರು




ದುಡಿವ 'ಕೈ'ಗೆ ಕೆಲ್ಸ ಕೊಡಿ: ಆಪ್ತರನ್ನು ದೂರವಿಡಿ


ಆದರ್ಶಪ್ರಾಯವಾಗರಲಿ
ಸಿಎಂ ಎಂದರೆ ಕಾಮನ್ ಮ್ಯಾನ್ ELECTED BY THE PEOPLEಎಂಬ ಸಾಮಾನ್ಯ ಜ್ಞಾನ ಸದಾ ಇರಬೇಕು. ಅವರ ನಡೆನುಡಿಗಳು ಇತರರಿಗಿಂತ ಭಿನ್ನವಾಗಿರಬೇಕು. ಆದರ್ಶಪ್ರಾಯವಾಗಿರಬೇಕು. ಪೊಳ್ಳು ಆಶ್ವಾಸನೆ ಕೊಡುವ ಬದಲು ನುಡಿದಂತೆ ನಡೆಯಬೇಕು.  ಸಿದ್ದರಾಮಯ್ಯನವರು ಪಾರದರ್ಶಕ ಆಡಳಿತ ಕೊಟ್ಟರೆ ಅಷ್ಟೇ ಸಾಕು. ಲಂಚಗುಳಿತನ ಸಂಪೂರ್ಣವಾಗಿ ನಿರ್ಮೂಲನೆಯಾಗಲಿ, ಅಧಿಕಾರಿಗಳನ್ನೇ ಭ್ರಷ್ಟ ನಿರ್ಮೂಲನಾ ಅಸ್ತ್ರವನ್ನಾಗಿ ಮಾಡಿಕೊಂಡರೆ ಒಳ್ಳೆಯದು. ಯೋಚನೆಯಲ್ಲಿದೂರದೃಷ್ಟಿತ್ವ ಇರಲಿ. ಕೋಟ್ಯಂತರ ರುಪಾಯಿಗಳ ವೃಥಾ ಖರ್ಚು ಬೇಡ. ನಿರುಪಯುಕ್ತ ಕೆಲಸಕ್ಕಾಗಿ ಹಣ ವ್ಯಯಿಸಬೇಡಿ.  ಬಡವರಿಗೆ 1 ಗೆ ಅಕ್ಕಿ ಕೊಡುವುದಕ್ಕಿಂತ ಹೆಚ್ಚಾಗಿ, ಅವರು ಮಾಡುವ ಕೆಲಸಕ್ಕೆ ಸರಿಯಾಗಿ ಮನ್ನಣೆ ನೀಡಿ. ಅಷ್ಟೇ ಅಲ್ಲ, ಅವರ ಕೆಲಸಕ್ಕೆ ತಕ್ಕ ಕೂಲಿ ನೀಡಿ. ಬಾಯಿ ಬಡುಕರಿಗೆ ಆಸ್ಪದ ನೀಡಲೇಬೇಡಿ.
ಟಿ ಭಾಗ್ಯ ನಂಜುಂಡಸ್ವಾಮಿ, ಎನ್.ಆರ್. ಪುರ, ಚಿಕ್ಕಮಗಳೂರು

ವೀಕ್‌ನೆಸ್ ಬಿಡಿ
ನೆಚ್ಚಿನ ಸಿದ್ದರಾಮಯ್ಯನವರೇ, ನಿಮ್ಮ ಕೆಲವು ವೀಕ್‌ನೆಸ್‌ಗಳನ್ನು ಬಿಡಿ. ಒಂದು ಡೈಲಾಗ್ ಹೇಳಿ 30 ಸೆಕೆಂಡ್‌ಗಳ ಕಾಲ ಸುತ್ತಲಿನ ಭಟ್ಟಂಗಿಗಳ ಕಡೆ ನೋಡಬೇಡಿ. ಅಹಿಂದ ನೆಪದಲ್ಲಿ ಮುಂದುವರೆದವರಿಗೆ ಅನ್ಯಾಯ ಮಾಡಬೇಡಿ. ಇತ್ತೀಚೆಗೆ ನಿಮ್ಮನ್ನು ಕರ್ನಾಟಕದ ಮೋದಿ ಎಂಬಂತೆ ಬಿಂಬಿಸಬೇಕೆಂದಿದ್ದಾರಂತೆ. ದಯವಿಟ್ಟು ನೀವು ಮೋದಿಯಾಗುವುದು ಬೇಡ. ನೀವು ನಮ್ಮ ಪ್ರೀತಿ ಪಾತ್ರ ಸಿದ್ದರಾಮಯ್ಯನವರಾಗಿಯೇ ಇರಿ.
ಟಿ ಕೆ. ಶ್ರೀನಿವಾಸರಾವ್, ಹರಪನಹಳ್ಳಿ

ವೈಯಕ್ತಿಕ ಛಾಪು ಒತ್ತಿ
ನಿಜ, ನ್ಯಾಯ, ನಿಷ್ಠೆ ಹಾಗೂ ನೀತಿಗಳಿಗೆ ಮಹತ್ವ ಕೊಡುವ ಮೂಲಕ ನೀವೊಬ್ಬ ಅತ್ಯಂತ ಉತ್ತಮ ಮುಖ್ಯಮಂತ್ರಿ ಎಂಬುದನ್ನು ಸಾಬೀತುಪಡಿಸಿ. ಶಿಸ್ತು, ಸಂಯಮ, ಶ್ರದ್ಧೆ ಸಮರ್ಪಣೆ ಇವುಗಳಿಗೆ ಒತ್ತು ಕೊಡಿ. ನೇರನಡೆ, ಸವಿನುಡಿ ನಿಮ್ಮ ಮಂತ್ರವಾಗಿರಲಿ, ಕರ್ನಾಟಕದ ಉದ್ಧಾರ ನಿಮ್ಮ ಜಪವಾಗಲಿ. ದಿನವೂ ಪತ್ರಿಕೆಗಳಲ್ಲಿ ಬರುವ ಸುದ್ದಿಗಳಿಗೆ ಸ್ಪಂದಿಸಿ. ಲೋಕಾಯುಕ್ತಕ್ಕೆ ಪೂರ್ಣ ಅಧಿಕಾರ ಕೊಡಿ. ಇವೆಲ್ಲವೂ ಅಸಾಧ್ಯವಾದ ಕೆಲಸಗಳೇನಲ್ಲ. ನಿಮ್ಮಲ್ಲಿ ನಾಯಕತ್ವದ ಗುಣ ಇದ್ದರೆ ಸಾಕು, ಇಂಥ ಕಷ್ಟಸಾಧ್ಯವಾದವುಗಳನ್ನೂ ಸಾಧಿಸಬಹುದು. ಇದಕ್ಕೆ ಉದಾಹರಣೆ, ಜರ್ಮನಿ. ಆ ದೇಶ ಸುಟ್ಟು ಕರಕಲಾಗಿದ್ದರೂ, ಈಗ ಬೇಕಾದ್ದನ್ನು ಸಾಧಿಸಿಲ್ಲವೇ. ಕಸದ ತೊಟ್ಟಿಯಾಗಿದ್ದ ಸಿಂಗಾಪುರ ಈಗ ಸುಂದರವಾದ ನಗರವಾಗಿಲ್ಲವೇ. ಹೀಗಾಗಿ ನಿಮ್ಮ ವೈಯಕ್ತಿಕ ಛಾಪನ್ನು ಕೆಲಸದಲ್ಲಿ ಒತ್ತಿ. ಯಾರಿಗೂ ಹೆದರಬೇಡಿ.
- ಪಿ.ವಿ. ಗೋಪಾಲಕೃಷ್ಣ, ಮೈಸೂರು

ತರಬೇತಿ ಅಗತ್ಯ
ಒಂದು ಕ್ಷೇತ್ರದಿಂದ ಆಯ್ಕೆಯಾದ ಶಾಸಕ ತನ್ನ ಕ್ಷೇತ್ರದ ಹಿತರಕ್ಷಣೆ ಮಾಡುವ ಜವಾಬ್ದಾರಿಯನ್ನು ಅಧಿಕಾರ ಎಂದು ತಪ್ಪುತಿಳಿದುಕೊಂಡಿರುವುದರಿಂದ ಆತನ ಮಾತಿನಲ್ಲಿ, ಕೃತಿಯಲ್ಲಿ, ನಡೆನುಡಿಯಲ್ಲಿ ಸೇವಾ ಭಾವನೆಯ ಬದಲಾಗಿ ದರ್ಪ ಎದ್ದು ಕಾಣುತ್ತದೆ. ಮಾತಿನಲ್ಲಂತೂ ಹಿಡಿತವೇ ಕಾಣುವುದಿಲ್ಲ.  ಐಎಎಸ್, ಕೆಎಎಸ್‌ನಂಥ ಪರೀಕ್ಷೆ ತೇರ್ಗಡೆಯಾಗಿದ್ದರೂ ಆಯ್ಕೆಯಾದ ಮೇಲೆ ಅಧಿಕಾರಿಗಳಿಗೆ ಕೆಲಸ ನಿರ್ವಹಿಸುವ ಬಗ್ಗೆ ತರಬೇತಿ ಕೊಡಲಾಗುತ್ತದೆ. ಅಷ್ಟೇ ಏಕೆ ಒಬ್ಬ ಡಾಕ್ಟರ್ ವ್ಯಾಸಂಗ ಮುಗಿಸಿದ ಮೇಲೆ, ಅನುಭವಿ ಡಾಕ್ಟರ್ ಅಡಿಯಲ್ಲಿ, ಅವರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸಿ ಸಾಮರ್ಥ್ಯ ಪಡೆಯಬೇಕಾಗುತ್ತದೆ. ಆದರೆ ಶಾಸಕರಾಗಿ ಒಂದು ಕ್ಷೇತ್ರ ಮತ್ತು ಸಚಿವರಾಗಿ ಒಂದು ರಾಜ್ಯದ ಜವಾಬ್ದಾರಿಯನ್ನು ಹೊರಬೇಕಾದವರಿಗೆ ಅವರ ಜವಾಬ್ದಾರಿ ಏನು ಎಂಬುದರ ಬಗ್ಗೆ ಗೊತ್ತಿರಬೇಕಲ್ಲವೇ. ಹೀಗಾಗಿ ಇವರಿಗೆ ತರಬೇತಿ ಕೊಡಿಸಿ. ಇದಷ್ಟೇ ಅಲ್ಲ, ಸಚಿವರು ಪ್ರಾಮಾಣಿಕರಾದರೆ ಅಧಿಕಾರಿಗಳನ್ನು ನಿಯಂತ್ರಣದಲ್ಲಿಡುವುದು ಸುಲಭ.
- ಸತ್ಯಬೋಧ, ಬೆಂಗಳೂರು

ಸಂಬಂಧಿಕರ ದೂರ ಇಡಿ
ಸಿದ್ದರಾಮಯ್ಯನವರೇ, ನೀವು ಸಿಎಂ ಆಗಿದ್ದು ಖುಷಿಯಾಯ್ತು. ನಿಮ್ಮ ಪುತ್ರ ರಾಕೇಶ್  ಅವರನ್ನು ರಾಜಕೀಯದಿಂದ ದೂರವೇ ಇಡಿ. ಇಲ್ಲದಿದ್ದರೆ ಬಿಜೆಪಿಯವರು ಅನುಭವಿಸಿದ ರೀತಿಯಲ್ಲೇ ನೀವು ಕೂಡ ಮುಜುಗರ ಅನುಭವಿಸಬೇಕಾದೀತು. ರೈತರು ಈ ದೇಶದ ಬೆನ್ನೆಲುಬಾಗಿದ್ದು, ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಿ. ಬಿಪಿಎಲ್ ಕಾರ್ಡ್‌ಗಳನ್ನು ಅನರ್ಹರಿಂದ ವಾಪಸ್ ತೆಗೆದುಕೊಳ್ಳಿ.  ದಯಮಾಡಿ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಿ.
ಟಿ ಪ್ರಶಾಂತ್, ಬೆಂಗಳೂರು ಗ್ರಾಮೀಣ


ಸಿದ್ದುಗೆ ಸಲಹೆ

... ಪ್ರೀತಿಯ ಸಿದ್ದರಾಮಯ್ಯನವರೇ,



ಮತ್ತೊಬ್ಬ ದೇವರಾಜ್ ಅರಸ್ ಆಗಿ
ಹಿಂದೆ ದೇವರಾಜ್ ಅರಸ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಕಾಂಗ್ರೆಸ್‌ನಲ್ಲಿದ್ದ ಬಹಳಷ್ಟು ಬಲಿಷ್ಠರು, ಹಿಂದುಳಿದ ವರ್ಗದ ಈ ವ್ಯಕ್ತಿ ಎಷ್ಟು ದಿನ ಬಂದಾನೆಂದು ಹಾಸ್ಯ ಮಾಡಿದ್ದರು. ಆದರೆ ಅರಸ್ ಅವರು ಬಲಿಷ್ಠರಿಗಿಂತಲೂ ಬಲಿಷ್ಠವಾಗಿ ಬೆಳಗಿದ್ದು, ದಲಿತರಿಗೆ ಧ್ವನಿಯಾಗಿ ನಿಂತದ್ದು ಇತಿಹಾಸವಾಗಿದೆ. ಅದೇ ಕಾಂಗ್ರೆಸ್ ಪಕ್ಷ ಇದೀಗ ನಿಮ್ಮನ್ನು ಸಿಎಂ ಮಾಡಲು ಮೂಲಕ ಮತ್ತೊಬ್ಬ ಹಿಂದುಳಿದ ನಾಯಕನಿಗೆ ಅವಕಾಶ ಕೊಟ್ಟಿದೆ. ನೀವು ಎರಡನೇ ದೇವರಾಜ್ ಅರಸ್ ಆಗಿ, ದೇವರಾಜ ಅರಸರು ನಿಮಗೆ ಆ ಶಕ್ತಿ ಕೊಡಲಿ ಎಂಬುದೇ ನನ್ನ ಆಶಯ.
-ಬಿ.ಕೆ. ರಾಮಲಿಂಗಯ್ಯ, ಮದ್ದೂರು.



ಕನ್ನಡ ಮಾಧ್ಯಮಕ್ಕೆ ಒತ್ತು ನೀಡಿ...

ಸಿಎಂ ಆಗಿ ನೀವು ಮಾಡಬೇಕಿರುವ ಮೊದಲ ಕೆಲಸ ಕನ್ನಡ ಶಾಲೆಗಳ ರಕ್ಷಣೆ. ಕನ್ನಡಿಗರಿಂದಲೇ ಮುಖ್ಯಮಂತ್ರಿಯಾಗಿರುವ ನೀವು ಕನ್ನಡ ಶಾಲೆಗಳಿಗೆ ಬೀಗ ಹಾಕುವ ಅನಿಷ್ಠ ಪದ್ಧತಿಯನ್ನು ನಿಲ್ಲಿಸಿ. ಈ ಮೂಲಕ ತಾಯಿ ಭುವನೇಶ್ವರಿಯ ಪ್ರೀತಿಗೆ ಪಾತ್ರರಾಗಿ.  ಗೋಹತ್ಯಾ ನಿಷೇಧ ಮಾಡಿ, ಪಾರದರ್ಶಕ ಮತ್ತು ಸ್ವಚ್ಛ ಆಡಳಿತ ನೀಡಿ. ಪಕ್ಷಪಾತಿ ರಾಜಕಾರಣ ಬೇಡವೇ ಬೇಡ.
- ದೀಪಕ್ ಕಾಂಚನ್, ದಾವಣಗೆರೆ


ಪರಿಸರ ಅಭಿವೃದ್ಧಿ ಮಾಡಿ


ನಾಡಿನಲ್ಲಿ ಅನಾವೃಷ್ಠಿ, ಅತಿವೃಷ್ಟಿ ವೈಪರೀತ್ಯ ಇರಬಹುದು. ಬೆಲೆ ಏರಿಕೆ, ಅಶಾಂತಿ ಸೇರಿದಂತೆ ನಾವು ಎದುರಿಸುವ ಬಹುತೇಕ ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಆಗುವ ಏಕೈಕ ಕಾರಣ ಪರಿಸರ ನಾಶವೇ. ಇದುವರೆಗೆ ನಾವು ಅಭಿವೃದ್ಧಿಯ ಕನಸು ಕಂಡಿದ್ದೇವೆಯೇ ಹೊರತು, ನಿಜವಾಗಿ ಅನುಭವಿಸಿಲ್ಲ. ಇಂದು ನಾವು ಅಭಿವೃದ್ಧಿ ಎಂದರೆ ನಗರೀಕರಣ, ಕೈಗಾರಿಕೀಕರಣ, ಐಷರಾಮಿ ಜೀವನ ನಡೆಸುವುದೇ ಆಗಿದೆ ಎಂದೇ ತಿಳಿದುಕೊಂಡಿದ್ದಾರೆ. ಆದ್ದರಿಂದ ಸಿದ್ದರಾಮಯ್ಯನವರು ಪರಿಸರ ಸಂರಕ್ಷಣೆ ಮತ್ತು ಕೃಷಿ ರಕ್ಷಣೆಗೆ ಮುಂದಾಗಬೇಕು. ಪರಿಸರ ಅಭಿವೃದ್ಧಿಯಿಂದಲೇ ನಾಡಿನ ಅಭಿವೃದ್ಧಿ ಎಂಬುದನ್ನು ಮನಗಾಣಬೇಕು.
- ಮಂಜುನಾಥ ಬ ಹಿರೇಮಠ, ಮಸ್ಕಿ



ನಿಮ್ಮ ಅನಿಸಿಕೆಗಳನ್ನು ಈ ವಿಳಾಸಕ್ಕೆ ಕಳುಹಿಸಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.: email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.