ಪಿರಿಯಾಪಟ್ಟಣ, ಕಾಂಗ್ರೆಸ್ ಔತಣ!
ಕನ್ನಡಪ್ರಭ ವಾರ್ತೆ , ಮೈಸೂರು , ಮೇ 31
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತಿಷ್ಠೆಯ ಕಣವಾಗಿದ್ದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಅವರು ಜಯಭೇರಿ ಬಾರಿಸಿದ್ದಾರೆ. ವೆಂಕಟೇಶ್ಗೆ ಇದು ಹ್ಯಾಟ್ರಿಕ್ ಜಯವಾಗಿದ್ದು, 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ. ವೆಂಕಟೇಶ್ಗೆ ನೇರ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಕೆ.ಮಹದೇವ್ 2ನೇ ಸ್ಥಾನ ಪಡೆದು ಸೋಲು ಅನುಭವಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ 62,045 ಮತಗಳನ್ನು ಪಡೆದು, ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಅವರನ್ನು 2088 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕೆ. ಮಹದೇವ್ ಅವರು 59,957 ಮತಗಳನ್ನು ಗಳಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ಗಣೇಶ್- 5,669, ಬಿಜೆಪಿ ಅಭ್ಯರ್ಥಿ ಆರ್.ಟಿ. ಸತೀಶ್- 3,731, ಬಿಎಸ್ಪಿ ಅಭ್ಯರ್ಥಿ ಕೃಷ್ಣ- 2,087, ಪಕ್ಷೇತರ ಅಭ್ಯರ್ಥಿ ಕೆ.ಎಸ್. ಶಶಿಕುಮಾರ್- 1,335 ಮತ ಗಳಿಸಿದ್ದಾರೆ. ಇನ್ನೂ ಚುನಾವಣಾ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಕೆಜೆಪಿ ಅಭ್ಯರ್ಥಿ ಎಚ್.ಸಿ. ಬಸವರಾಜು 827 ಮತ್ತು ಸಮಾಜವಾದಿ ಜನತಾ ಪಕ್ಷದ ನಾರಾಯಣ 656 ಮತ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.
ವೆಂಕಟೇಶ್ಗೆ ಐದನೇ ಗೆಲವು: ಕೆ. ವೆಂಕಟೇಶ್ ಇದೇ ಕ್ಷೇತ್ರದಿಂದ 1985, 1994, 2004 ರಲ್ಲಿ ಜನತಾ ಪರಿವಾರದ ಅಭ್ಯರ್ಥಿಯಾಗಿ ಗೆದ್ದಿದ್ದರು. 1989, 1999 ರಲ್ಲಿ ಸೋತಿದ್ದರು. 2008 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. ಮೊದಲೆಲ್ಲಾ ಒಮ್ಮೆ ಗೆದ್ದು, ಮತ್ತೊಮ್ಮೆ ಸೋತರೆ 2004, 2008 ಹಾಗೂ 2013- ಹೀಗೆ ಸತತ ಮೂರು ಗೆಲವು ದಾಖಲಿಸಿದ್ದಾರೆ.
ಕೈ ಬಲ ಹೆಚ್ಚಳ: ಬಿಜೆಪಿ ಅಭ್ಯರ್ಥಿ ಸಣ್ಣಮೊಗೇಗೌಡ ಅವರ ನಿಧನದಿಂದ ಪಿರಿಯಾಪಟ್ಟಣ ಕ್ಷೇತ್ರ ಚುನಾವಣೆ ಮುಂದೂಡಲಾಗಿತ್ತು. ಪಿರಿಯಾಪಟ್ಟಣ ಹೊರತುಪಡಿಸಿ ರಾಜ್ಯದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 121 ಸ್ಥಾನ ಗಳಿಸಿ ಸರ್ಕಾರ ರಚಿಸುವಲ್ಲಿ ಸಫಲವಾಗಿತ್ತು. ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿಯಾದರು.
ಈ ಎಲ್ಲದರ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿರುವ ಪಿರಿಯಾಪಟ್ಟಣ ಕ್ಷೇತ್ರದ ಚುನಾವಣೆಯು ಪ್ರತಿಷ್ಠೆಯ ಕಣವಾಗಿತ್ತು. ಇದು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೇ ಕಾರಣಕ್ಕಾಗಿ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳು ಈ ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರ ನಡೆಸಿದ್ದರು. ಆದರೆ, ಅಂತಿಮವಾಗಿ ಗೆಲವು ಆಡಳಿತ ಪಕ್ಷಕ್ಕೆ ಸಿಕ್ಕಿದೆ. ಇದರಿಂದ 224 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ 122ಕ್ಕೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

