ಬರಲಿವೆ ಬೈಕ್ ಆ್ಯಂಬುಲೆನ್ಸ್
ಕ.ಪ್ರ.ವಾರ್ತೆ, ಬೆಂಗಳೂರು, ನ. 1-
ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ಸೂಕ್ತ ಸಮಯದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸಲು ಬೈಕ್ ಆ್ಯಂಬುಲೆನ್ಸ್ ಪ್ರಾರಂಭಿಸಲು ಆರೋಗ್ಯ ಇಲಾಖೆ ಚಿಂತಿಸುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಜಿವಿಕೆ ಇಎಂಆರ್‌ಐಯು 108 ಆ್ಯಂಬುಲೆನ್ಸ್ ಸೇವೆಯ ಐದನೇ ವರ್ಷಾಚರಣೆ ಪ್ರಯುಕ್ತ ಶುಕ್ರವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ರೋಗಿಗಳನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗಳಿಗೆ ಸೇರಿಸಲು ಕಷ್ಟವಾಗುತ್ತಿರುವುದರಿಂದ ದ್ವಿಚಕ್ರ ವಾಹನ ಆ್ಯಂಬುಲೆನ್ಸ್ ತರಲು ಚಿಂತಿಸಲಾಗುತ್ತಿದೆ ಎಂದರು.
ಆರೋಗ್ಯ ಕವಚ 108 ತುರ್ತು ಸೇವೆಯು ಯಶಸ್ವಿಯಾಗಿ ಐದು ವರ್ಷ ಪೂರೈಸಿ ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 108ಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿದೆ. ಆದರೆ, ನೂತನ 104 ಸೇವೆಗಳ ಬಗ್ಗೆ ಹೆಚ್ಚಿನ ಪ್ರಚಾರ ಅವಶ್ಯವಿದೆ. 157 ಹಳೆಯ ಆ್ಯಂಬುಲೆನ್ಸ್‌ಗಳ ಸೇರ್ಪಡೆ ಮತ್ತು ಹೊಸದಾಗಿ 94 ಆ್ಯಂಬುಲೆನ್ಸ್‌ಗಳ ನೀಡಲಿದ್ದೇವೆ ಎಂದರು.
ಆ್ಯಂಬುಲೆನ್ಸ್‌ಗಳ ಟ್ರಾಕಿಂಗ್‌ಗಾಗಿ ಜಿಪಿಎಸ್ ತಂತ್ರಜ್ಞಾನ ಮತ್ತು ಗೂಗಲ್ ಮ್ಯಾಪ್ ಬಳಕೆ ಮಾಡಲು ಇಎಂಆರ್‌ಐ ಗೂಗಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ತುರ್ತು ಸೇವೆ ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ಕ್ಷಿಪ್ರವಾಗಿ ಆ್ಯಂಬುಲೆನ್ಸ್‌ಗಳನ್ನು ಕಳುಹಿಸುವ ಉದ್ದೇಶದಿಂದ ತುರ್ತು ಪ್ರತಿಸ್ಪಂದನ ಕೇಂದ್ರದಲ್ಲಿ ತಂತ್ರಜ್ಞಾನ ಬಳಕೆ ಮಾಡುತ್ತಿದ್ದೇವೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ಗೋಪಾಲ್ ಮಾತನಾಡಿ, ಜಿವಿಕೆ ನೌಕರರು ಸಮಸ್ಯೆಗಳ ನಡುವೆಯೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾರ್ಮಿಕ ಇಲಾಖೆ ಆಯುಕ್ತರು ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ಸದ್ಯದಲ್ಲೇ ಚರ್ಚಿಸಿ ನ್ಯಾಯ ಬದ್ಧವಾದ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಈ ಸಮಾರಂಭದಲ್ಲಿ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ವಿ.ಬಿ.ಪಾಟೀಲ್, ನಿರ್ದೇಶಕಿ ಗೀತಾ, ಜಿವಿಕೆ ನಿರ್ದೇಶಕ ಕೃಷ್ಣಂ ರಾಜು, ಜಗದೀಶ್ ಪಾಟೀಲ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

