ಪ್ರಧಾನ ಸುದ್ದಿ

ಗಡಿ ಸರ್ವೆ: ಹೈದರಾಬಾದಲ್ಲಿ ಇಂದು ಅಧಿಕಾರಿಗಳ ಸಭೆ

Published On :

ಬಳ್ಳಾರಿ: ಗಣಿ ಗಡಿ ಗುರುತು ಸಮಸ್ಯೆಗೆ ಇತಿಶ್ರೀ ಹಾಡಲು ಆಂಧ್ರಪ್ರದೇಶ, ಕರ್ನಾಟಕ ಸರ್ಕಾರದ ಅಧಿಕಾರಿಗಳ ಮಹತ್ವದ ಸಭೆ ನ. 6ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೆ ಸರ್ವೆ ಆಫ್ ಇಂಡಿಯಾ ಸರ್ವೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಡೆಹ್ರಾಡೂನ್‌ನ ಸರ್ವೆ ಆಫ್ ಇಂಡಿಯಾದ ಸರ್ವೆಯರ್ ಜನರಲ್ ಆಫ್ ಇಂಡಿಯಾ ಅಧಿಕಾರಿ ಸ್ವರ್ಣ ಸುಬ್ಬರಾವ್ ನೇತೃತ್ವದಲ್ಲಿ ಎರಡು ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಸಭೆ ಕರೆಯಲಾಗಿದೆ.
ಬಳ್ಳಾರಿ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಅನಂತಪುರಕ್ಕೆ ಹೊಂದಿಕೊಂಡಿರುವ ಎರಡು ರಾಜ್ಯಗಳ ಗಡಿ ಗಣಿ ವಿಷಯಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಕಾರಣವಾಗಿತ್ತು. ಇದು ರಾಜ್ಯದಲ್ಲಿ ಸಾಕಷ್ಟು ಗೊಂದಲವನ್ನೂ ಸೃಷ್ಟಿಸಿತ್ತು. ಇಂಥ ವಿವಾದಕ್ಕೆ ಇತಿಶ್ರೀ ಹಾಡಲು ಸುಪ್ರೀಂ ಕೋರ್ಟ್ ಸರ್ವೆ ಆಫ್ ಇಂಡಿಯಾದ ನೇತೃತ್ವದಲ್ಲಿ ಸರ್ವೆ ಮಾಡಬೇಕೆಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿ ಸ್ವರ್ಣ ಸುಬ್ಬರಾವ್ ಸರ್ವೆಯನ್ನು ಯಾವ ರೀತಿ ನಡೆಸಲಾಗುವುದು ಎಂಬುದರ ಬಗ್ಗೆ ಅ.21ರಂದು ಸುಪ್ರೀಂ ಕೋರ್ಟ್‌ಗೆ 8 ಪುಟಗಳ ಅಫಿಡವಿಟ್ ಸಲ್ಲಿಸಿದ್ದರು.

ಸರ್ವೆಯ ರೂಪುರೇಷೆ ಸಿದ್ಧತೆ: ಸಭೆಯಲ್ಲಿ ಎರಡು ರಾಜ್ಯಗಳ ಕಾರ್ಯದರ್ಶಿಗಳು ಮಾತ್ರವಲ್ಲದೆ ಇಲಾಖೆಯ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಹಿರಿಯ ಅಧಿಕಾರಿಗಳೂ ಪಾಲ್ಗೊಳ್ಳಲ್ಲಿದ್ದಾರೆ. ಸರ್ವೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಲಿವೆ. ಆ ಮೂಲಕ ಹಲವು ವರ್ಷಗಳಿಂದ ಗಣಿ ವಿಷಯದಿಂದ ವಿವಾದಕ್ಕೆ ಕಾರಣವಾಗಿದ್ದ ಗಡಿ ಸರ್ವೆ ವಿವಾದ ಅಂತ್ಯ ಕಾಣಲಿದೆ.

ಗಡಿ ಒತ್ತುವರಿಯ ಪ್ರಭಾವ: ಸರ್ವೆಗೆ ಎರಡೂ ರಾಜ್ಯಗಳ ಸಹಕಾರ, ಯಾವ ಮಾಹಿತಿ ನೀಡಬೇಕಾಗುತ್ತದೆ ಎಂಬ ವಿಷಯ, ಅಗತ್ಯ ಮಾಹಿತಿ ಕುರಿತು ಚರ್ಚೆ ನಡೆಯಲಿದೆ. ಗಡಿ ಗುರುತಿನ ಬಗ್ಗೆ ಸರ್ಕಾರಗಳಲ್ಲಿರುವ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆಯೂ ಇದೆ.
ಎರಡೂ ರಾಜ್ಯದವರು ಅಂಗೀಕರಿಸಿರುವ 1976ರ ಸರ್ವೆಯ ನಕ್ಷೆಯನ್ನು ಮೂಲವಾಗಿಟ್ಟುಕೊಂಡು ಸರ್ವೆ ನಡೆಸಲಾಗುವುದು. ಸರ್ವೆಗೆ ಬೇಕಾಗುವ 1986ರಲ್ಲಿ ತಯಾರಾದ ಬಳ್ಳಾರಿ ರಿಸರ್ವ್ ಫಾರೆಸ್ಟ್ ಮ್ಯಾಪ್ ಅನ್ನು ತಂತ್ರಾಂಶ ರೂಪದಲ್ಲಿ ಕೊಡಬೇಕು, 1991ರ ಸರ್ವೆ ಮ್ಯಾಪ್, 1890ರ ಮದ್ರಾಸ್ ಪ್ರೆಸಿಡೆನ್ಸಿ ಅವರು ಬಳ್ಳಾರಿ ರಿಸರ್ವ್ ಫಾರೆಸ್ಟ್ ಬಗ್ಗೆ ಹೊರಡಿಸಿರುವ ನೋಟಿಫಿಕೇಷನ್, 1979ರ ಪೂರ್ವದಲ್ಲಿನ ಟೋಪೋ ಶೀಟ್‌ಗಳು, ಅಂತಾರಾಜ್ಯ ಗಡಿಗೆ ಹೊಂದಿಕೊಂಡಿರುವ ಗ್ರಾಮ ನಕಾಶೆಗಳು, ಅಂತಾರಾಜ್ಯ ಗಡಿಗೆ ಹೊಂದಿಕೊಂಡಿರುವ ಗಣಿ ಗುತ್ತಿಗೆ ಬರುವ ಜಿಪಿಎಫ್ ದತ್ತಾಂಶಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸುವ ಸಾಧ್ಯತೆ ಇದೆ.  

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.