ಶತಮಾನ ಕಂಡ ಕನ್ನಡ ಶಾಲೆ; ಕುಸಿಯುತ್ತಿದೆ ಅಕ್ಷರ ಮಾಲೆ!
- ಕನ್ನಡ ಚಳವಳಿಗಳ ನೆಲವಾಗಿರುವ ಧಾರವಾಡವನ್ನೂ ಬಿಟ್ಟಿಲ್ಲ ಇಂಗ್ಲಿಷ್ ವ್ಯಾಮೋಹ
ಕ.ಪ್ರ.ವಾರ್ತೆ, ಧಾರವಾಡ, ನ. 6-
ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕಾಲಘಟ್ಟದಲ್ಲಿ ರಾಜ್ಯದಲ್ಲಿ ನಡೆದ ಎಲ್ಲ ಮಹತ್ವದ ಕನ್ನಡ ಚಳವಳಿಗಳಿಗೆ ಹೋರಾಟದ ನೆಲವಾಗಿರುವ ಧಾರವಾಡದಲ್ಲಿಯೂ ಇಂಗ್ಲಿಷ್ ಪ್ರೀತಿ ಮಿತಿ ಮೀರಿದೆ. ಇದು ಕನ್ನಡ ಮಾಧ್ಯಮದ ಶಾಲೆಗಳಿಗೆ ಕುತ್ತು ತಂದಿದೆ.
2013ಕ್ಕೆ ಬರೋಬ್ಬರಿ 150 ವರ್ಷಗಳನ್ನು ಪೂರೈಸಿದ ಧಾರವಾಡದ ಮೊಟ್ಟ ಮೊದಲ ಬಾಸೆಲ್ ಮಿಷನ್ ಗಂಡು ಮಕ್ಕಳ ಕನ್ನಡ ಮಾಧ್ಯಮ ಶಾಲೆಯೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ ಕಾರ್ನಾಡ್, ಪರಿಸರವಾದಿ ಹಾಗೂ ಚಿತ್ರನಟ ಸುರೇಶ ಹೆಬ್ಳೀಕರ್, ರಂಗತಜ್ಞ ಸುಬ್ಬರಾಯ್ ಭಟ್, ವೆಂಕಟೇಶ ಗೋಡಖಿಂಡಿಯಂಥ ಮಹಾನ್ ವ್ಯಕ್ತಿಗಳನ್ನು ನೀಡಿದ ಈ ಶಾಲೆಗೆ ಪಾಲಕರಿಂದು ತಮ್ಮ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿರುವ 176 ಕನ್ನಡ ಮಾಧ್ಯಮ ಶಾಲೆಗಳು ಶತಮಾನ ಪೂರೈಸಿದರೂ ಇತ್ತೀಚೆಗಷ್ಟೇ ಆರಂಭವಾದ ಇಂಗ್ಲಿಷ್ ಮಾಧ್ಯಮ ಶಾಲೆಗಳಷ್ಟು ಸುಸಜ್ಜಿತವಾಗಿಲ್ಲ! ಇಂದು-ನಾಳೆ ಎನ್ನುತ್ತಿರುವ ಆ ಶಾಲಾ ಕಟ್ಟಡಗಳು, ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಕ್ಕಳ ಸಂಖ್ಯೆ ಕನ್ನಡ ಮಾಧ್ಯಮ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ ತಂದಿವೆ. ಕನ್ನಡ ಮಾಧ್ಯಮದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಇದ್ದರೂ ಇಂಗ್ಲಿಷ್ ವ್ಯಾಮೋಹದಿಂದ ಇಂಗ್ಲಿಷ್ ಶಾಲೆಗಳಿಗೆ ಧಾರವಾಡ ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶ ಜನರೂ ಮುಗಿ ಬೀಳುತ್ತಿದ್ದಾರೆ. ಸಾಲ ಮಾಡಿಯಾದರೂ ಚಿಂತೆಯಿಲ್ಲ ನಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೇ ಸೇರಿಸಬೇಕೆಂಬ ಹುಚ್ಚು ಪಾಲಕರಿಗಿದೆ.
ಕನ್ನಡದಿಂದ ಇಂಗ್ಲಿಷ್ಗೆ ಜಂಪ್!
2012-13ನೇ ಸಾಲಿನ ಎರಡೇ ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ 13 ಪ್ರಾಥಮಿಕ ಹಾಗೂ 16 ಇಂಗ್ಲಿಷ್ ಮಾಧ್ಯಮ ಶಾಲೆಗಳು ಆರಂಭವಾಗಿವೆ. ಈ ಪೈಕಿ ಶೇ.40ರಷ್ಟು ಗ್ರಾಮೀಣ ಪ್ರದೇಶದಲ್ಲಿ. ಇನ್ನು ಅದೆಷ್ಟೋ ಶಾಲೆಗಳು ಕನ್ನಡ ಮಾಧ್ಯಮದ ಹೆಸರಿನಲ್ಲಿ ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿವೆ. ಇದೂ ಕನ್ನಡ ಮಾಧ್ಯಮದ ಶಾಲೆಗಳಿಗೆ ಪೆಟ್ಟು ನೀಡಿದೆ. ಅಲ್ಲದೇ, ಜಿಲ್ಲೆಯ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿನ ಕೊಳಚೆ ಪ್ರದೇಶಗಳ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ವಿಭಿನ್ನವಾಗಿಲ್ಲ. ಅದೃಷ್ಟವಶಾತ್ ಧಾರವಾಡ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದ ಯಾವ ಶಾಲೆಯೂ ಮುಚ್ಚದಿದ್ದರೂ ಕಳೆದೊಂದು ವರ್ಷದಲ್ಲಿ ಒಟ್ಟು 414 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ 200ಕ್ಕೂ ಹೆಚ್ಚು ಮಕ್ಕಳು ಕನ್ನಡ ಶಾಲೆಯಿಂದ ಇಂಗ್ಲಿಷ್ ಮಾಧ್ಯಮ ಶಾಲೆಗೆ ವರ್ಗವಾಗಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು 2 ವರ್ಷಗಳ ಹಿಂದೆ ಪಂಚಸೌಲಭ್ಯ ಯೋಜನೆ ಅಡಿ ಜಿಲ್ಲೆಯ 10 ಕನ್ನಡ ಮಾಧ್ಯಮದ ಶಾಲೆಗೆ 2.5 ಕೋಟಿ ಅನುದಾನ ಒದಗಿಸಿ ಮೂಲ ಸೌಕರ್ಯ ನೀಡಿದ್ದಾರೆ. ಬೇರೆ ಜನಪ್ರತಿನಿಧಿಗಳು ಕನ್ನಡ ಮಾಧ್ಯಮದ ಶಾಲೆಗಳ ಬಗ್ಗೆ ಪ್ರೀತಿ ತೋರಿಸಿಲ್ಲ.
ಧಾರವಾಡ ಜಿಲ್ಲೆಯಲ್ಲಿ ಒಟ್ಟೂ 1,499 ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಿದ್ದು, ಈ ಪೈಕಿ ಕನ್ನಡ ಮಾಧ್ಯಮದ 718 ಸರ್ಕಾರಿ, 180 ಅನುದಾನಿತ ಹಾಗೂ 272 ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿವೆ. ಹೀಗೆ ಒಟ್ಟು 1170 ಕನ್ನಡ ಮಾಧ್ಯಮದ ಶಾಲೆಗಳಿದ್ದು, 329 ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ. ಬಿಸಿಯೂಟ, ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ, ಸೈಕಲ್ ವಿತರಣೆ ಹಾಗೂ ಇತ್ತೀಚೆಗೆ ಕ್ಷೀರಭಾಗ್ಯ ಯೋಜನೆ ಜಾರಿಗೊಂಡರೂ ಸರ್ಕಾರಿ ಶಾಲೆಗಳು ಮಕ್ಕಳನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿವೆ. ಅಲ್ಲದೆ, ಉತ್ತಮ ಶಿಕ್ಷಕರನ್ನು ಸರ್ಕಾರ ನೇಮಿಸಿಕೊಳ್ಳುವ ಮೂಲಕ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನೂ ಒದಗಿಸುತ್ತಿದೆ. ಆದರೂ ಪ್ರತಿ ವರ್ಷ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

