ಹೊಸ ರೈಲಿಗೂ ರಾಹು ಅಡ್ಡಿ!
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ನ. 8
ಮೂಢನಂಬಿಕೆ ಪ್ರತಿಬಂಧಕ ವಿಧೇಯಕ ಮಂಡನೆಗೆ ಪರ-ವಿರೋಧ ಚರ್ಚೆಗಳು ಏರುಗತಿಯಲ್ಲಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಿಕ್ಕಬಳ್ಳಾಪುರದಲ್ಲಿ ನೂತನ ರೈಲು ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲು 'ರಾಹು ಕಾಲ' ಅಡ್ಡಿಯಾಯಿತು!
ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದಲ್ಲಿ ಸಂಚರಿಸುವ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ನಂದಿರಂಗಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಔಪಚಾರಿಕ ಪ್ರಕ್ರಿಯೆಗಳು ಮುಗಿದ ಬಳಿಕ ನೂತನ ರೈಲಿಗೆ ಚಾಲನೆ ನೀಡಬೇಕಿತ್ತು. ಆದರೆ, ಮಧ್ಯಾಹ್ನ 12 ಗಂಟೆ ಆಗೋವರೆಗೂ ರೈಲಿಗೆ ಹಸಿರು ನಿಶಾನೆ ತೋರಿಸಲೇ ಇಲ್ಲ. ಯಾಕೆಂದರೆ, 10.30ರಿಂದ 12 ಗಂಟೆವರೆಗೂ ರಾಹುಕಾಲವಿತ್ತು. ಬಳಿಕವಷ್ಟೇ ಚಾಲನೆ ನೀಡಲಾಯಿತು.
ಏನೇನು ಆಯಿತು: ಕಾರ್ಯಕ್ರಮದ ನಿಗದಿತ ಸಮಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆಯ ಉಪಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ, ಸ್ಥಳೀಯ ಶಾಸಕರು ಸೇರಿದಂತೆ ಹಲವರು ಆಗಮಿಸಿದ್ದರು.
ಎಂದಿನಂತೆ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಾರ್ಥನೆ, ಸ್ವಾಗತ, ಉದ್ಘಾಟನೆ ನಡೆಯಿತು. ಆದರೆ, ಹೊಸದಾಗಿ ಸಂಚರಿಸುವ ರೈಲು ಸಂಚಾರಕ್ಕೆ ಮಾತ್ರ ತಕ್ಷಣವೇ ಚಾಲನೆ ನೀಡಲಿಲ್ಲ. ಮೊದಲಿಗೆ ಸ್ಥಳೀಯ ಶಾಸಕರು, ಕೇಂದ್ರ ಸಚಿವರು ಭಾಷಣ ಮುಗಿಸಿದರು. ಈ ನಡುವೆ ರೈಲು ಸಂಚಾರಕ್ಕೆ ಚಾಲನೆ ನೀಡುವುದನ್ನು ಅಧಿಕಾರಿಗಳು ಮರೆತಿದ್ದಾರೆ ಎಂದು ಸಮಾರಂಭದಲ್ಲಿ ಗುಸು ಗುಸು ಆರಂಭವಾಯಿತು. ಈ ಸಂಬಂಧವಾಗಿ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆಯಲೂ ಯತ್ನಿಸಲಾಯಿತು. ಹಾಗೂ ಹೀಗೂ ಮಧ್ಯಾಹ್ನ 12 ಗಂಟೆ ಕಳೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಸೇರಿ ಎಲ್ಲ ಗಣ್ಯರು ವೇದಿಕೆಲ್ಲಿಯೇ ನಿಂತುಕೊಂಡು ನಗರದ ರೇಲ್ವೆ ನಿಲ್ದಾಣದಲ್ಲಿ ಹೊರಡಲು ಸಿದ್ಧವಾಗಿದ್ದ ನೂತನ ರೈಲಿಗೆ ಹಸಿರು ನಿಶಾನೆ ತೋರಿದರು. ರಾಹುಕಾಲ ಇದ್ದುದ್ದರಿಂದ 12 ಗಂಟೆ ಆಗುವ ತನಕ ಸಮಯ ಕಳೆಯಲೆಂದೇ ಕೆಲವು ಗಣ್ಯರ ಭಾಷಣಕ್ಕೆ ಅವಕಾಶ ನೀಡಲಾಗಿತ್ತು.
ವಿಪರ್ಯಾಸ: ಜಾತಕ ಫಲ, ಜ್ಯೋತಿಷ್ಯ, ವಾಸ್ತುಫಲ, ಶಕುನ, ಕಾಲನಿರ್ಣಯ, ಸಂಖ್ಯಾಶಾಸ್ತ್ರವನ್ನೂ ನಿಷೇಧಿಸಲು ರಾಷ್ಟ್ರೀಯ ಕಾನೂನು ಶಾಲೆ ಹಾಗೂ ಸಾಮಾಜಿಕ ಅಧ್ಯಯನ ಕೇಂದ್ರ 'ಮೂಢನಂಬಿಕೆ ಪ್ರತಿಬಂಧಕ' ಕರಡು ಸಿದ್ಧಪಡಿಸಿದೆ. ಇದನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಲು ಮುಖ್ಯಮಂತ್ರಿ ಉತ್ಸುಕರಾಗಿದ್ದಾರೆ. ಆದರೆ, ಅವರೇ ರಾಹುಕಾಲವೆಂದು ರೈಲು ಸಂಚಾರಕ್ಕೆ ಚಾಲನೆ ನೀಡುವುದನ್ನು ಮುಂದೆ ಹಾಕಿದ್ದು ಮಾತ್ರ ವಿಪರ್ಯಾಸ ಎಂದು ಸಮಾರಂಭದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರು.
ಆಜಾನ್ ಕೇಳಿ ಭಾಷಣ ನಿಲ್ಲಿಸಿದ ಸಿಎಂ!
ರಾಹುಕಾಲ ಮುಗಿಯುತ್ತಿದ್ದಂತೆ ರೈಲಿಗೆ ಚಾಲನೆ ನೀಡಿ, ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರು. ಅರ್ಧ ಗಂಟೆಯಾಗುತ್ತಿದ್ದಂತೆ ಅವರು ತಮ್ಮ ಭಾಷಣವನ್ನು ನಿಲ್ಲಿಸಿ, ಪ್ರೇಕ್ಷಕರನ್ನು ನೋಡುತ್ತಾ ಹಾಗೇ ನಿಂತುಬಿಟ್ಟರು. ಇದಕ್ಕೂ ಕಾರಣವಿತ್ತು. ಅದೆನೆಂದರೆ, ಕಾರ್ಯಕ್ರಮ ನಡೆಯುತ್ತಿದ್ದ ರಂಗಮಂದಿರದ ಪಕ್ಕದಲ್ಲಿಯೇ ಮಸೀದಿ ಇದ್ದು ಶುಕ್ರವಾರವಾದ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30ಕ್ಕೆ ಆಜಾನ್ ಪ್ರಾರಂಭವಾಗಿತ್ತು. ಅದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ, 'ಅಲ್ಲಾನಿಗೆ ಪ್ರಾರ್ಥಿಸುವಾಗ ಭಾಷಣ ಮಾಡಿ ತೊಂದರೆಯನ್ನುಂಟು ಮಾಡುವುದು ಬೇಡ' ಎಂದು ಹೇಳಿ, ಸುಮ್ಮನೆ ನಿಂತು ಬಿಟ್ಟರು. ನಂತರ ತಮ್ಮ ಭಾಷಣವನ್ನು ಮುಂದುವರಿಸಿದರು.
ಎನ್.ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

