ಪ್ರಧಾನ ಸುದ್ದಿ

ಕಬ್ಬು ದರ ನಿಗದಿಗೆ ಸಚಿವರಿಂದಲೇ ಹುಳಿ ಇಂದು ಬೆಂಗಳೂರಿನಲ್ಲಿ ಮತ್ತೊಂದು ಸಭೆ

Published On :

ಕನ್ನಡಪ್ರಭ ವಾರ್ತೆ  ಬೆಂಗಳೂರು  ನ.9
ವೈಜ್ಞಾನಿಕ ಬೆಲೆ ನಿಗದಿಗೆ ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಹಾಗೂ ರಾಜ್ಯ ಸಚಿವ ಸಂಪುಟದ ಮೂವರು ಸಚಿವರೇ ಅಡ್ಡಿಯಾಗಿದ್ದಾರೆ.
ಹೀಗಾಗಿ ಈ ಬಾರಿ ಬೆಲೆ ನಿಗದಿ ಸಂದರ್ಭದಲ್ಲಿ ರೈತರ ಪರವಾಗಿಯೇ ನಿರ್ಧಾರ ತೆಗೆದುಕೊಂಡರೆ ಉದ್ಯಮ ಉಳಿಯುವುದು ಕಷ್ಟ ಎಂದು ಸಕ್ಕರೆ ಲಾಬಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಅವರ ಮೇಲೆ ಒತ್ತಡ ಹೇರಿದೆ.
ಹೀಗಾಗಿ ಬೆಲೆ ನಿಗದಿಗಾಗಿ ನಡೆದ ಕಬ್ಬು ಖರೀದಿ ನಿಯಂತ್ರಣ ಮಂಡಳಿ ಎರಡು ಬಾರಿ ಕರೆದ ಸಭೆಯಲ್ಲೂ ಯಾವುದೇ ನಿರ್ಧಾರ ಪ್ರಕಟವಾಗಿಲ್ಲ. ಮಾತ್ರವಲ್ಲ ಸರ್ಕಾರದ ಮೇಲೆ ಸಕ್ಕರೆ ಲಾಬಿ ಬಲವಾದ ಪ್ರಭಾವ ಹೇರಿದೆ. ಖುದ್ದು ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರೇ ಸಕ್ಕರೆ ಮಾಲೀಕರ ಪರ ನಿಂತಿರುವುದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜಂಜಾಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಖರೀದಿ ನಿಯಂತ್ರಣ ಮಂಡಳಿಯೇ ಈ ವಿಚಾರ ಇತ್ಯರ್ಥಗೊಳಿಸಲಿ ಎಂಬ ನಿರ್ಧಾರಕ್ಕೆ ಅವರು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಮಂಡಳಿ ಸಭೆ ಕರೆಯಲಾಗಿದೆ.
ಏಕೆ ವಿರೋಧ?: ಕಬ್ಬು ಬೆಲೆಯನ್ನು ಇಳುವರಿ ಆಧಾರದ ಮೇಲೆ ನಿರ್ಧಾರ ಮಾಡುವಂತೆ ರೈತರು ಪಟ್ಟು ಹಿಡಿದಿದ್ದಾರೆ.          


ಈ ಪದ್ಧತಿ ಅನುಸರಿಸಿದರೆ ರೈತರ ಹೊಲದಲ್ಲೇ ಬೆಲೆ ನಿರ್ಧಾರವಾಗುತ್ತದೆ. ಅಂದರೆ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆ ಮಾಲೀಕರ ಮೇಲೆ ಹಾಕಬೇಕಾಗುತ್ತದೆ. ಮಾತ್ರವಲ್ಲ ಪ್ರತಿ ಟನ್ ಕಬ್ಬಿನಿಂದ ತಯಾರಿಯಾಗುವ ಸಕ್ಕರೆ ಇಳುವರಿ ಆಧರಿಸಿ ರೈತರಿಗೆ ಲಾಭ ನೀಡಬೇಕಾಗುತ್ತದೆ. ಸರಾಸರಿ ಶೇ.9.5ರ ಇಳುವರಿ ದರವನ್ನು ಇಟ್ಟುಕೊಂಡು ಟನ್‌ಗೆ ರು. 2800 ದರ ನಿಗದಿ ಮಾಡಬೇಕು. ಜತೆಗೆ ಇಳುವರಿ ಪ್ರಮಾಣ ಹೆಚ್ಚಿದಂತೆ ಪ್ರತಿ ಯುನಿಟ್‌ಗೆ ಹೆಚ್ಚುವರಿ ರು. 220 ನೀಡಬೇಕು ಎಂದು ರೈತ ನಾಯಕರು ಪಟ್ಟು ಹಿಡಿದಿದ್ದಾರೆ. ಆದರೆ ಈ ಪದ್ಧತಿ ಸಕ್ಕರೆ ಉದ್ಯಮದವರಿಗೆ ಇಷ್ಟವಾಗಿಲ್ಲ. ಇದರಿಂದ ಮಾಲೀಕರಿಗೆ ನಷ್ಟವಾಗುತ್ತದೆ. ಕಳೆದ ಬಾರಿಯೂ ರೈತ ಪರವಾಗಿಯೇ ನಿರ್ಧಾರ ತೆಗೆದುಕೊಂಡಿರುವುದರಿಂದ ಈ ಬಾರಿ ಅವರ ಬೇಡಿಕೆಗೆ ಮಣಿಯಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಯಾರ್ಯಾರು ಭಾಗಿ?: ಈ ಹಿನ್ನೆಲೆಯಲ್ಲಿ ಭಾನುವಾರ ಮಹತ್ವದ ಸಭೆ ನಡೆಯಲಿದೆ. ಈ ಮಂಡಳಿಗೆ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಅಧ್ಯಕ್ಷರಾಗಿದ್ದು, ಕೃಷಿ ಸಚಿವ ಕೃಷ್ಣ ಭೈರೇಗೌಡ ಸಹಾಧ್ಯಕ್ಷರು. ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ್, ಹಣಕಾಸು ಇಲಾಖೆ, ಕೃಷಿ ಇಲಾಖೆ ಹಾಗೂ ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿದ್ದು, ಮಂಡಳಿ ಆಯುಕ್ತರು ಕಾರ್ಯದರ್ಶಿಯಾಗಿದ್ದಾರೆ.
ರೈತರ ಪರವಾಗಿ ಕೋಡಿಹಳ್ಳಿ ಚಂದ್ರಶೇಖರ್, ಕೆ.ಎಸ್. ಪುಟ್ಟಣ್ಣಯ್ಯ, ರಾಮನಗೌಡ ಪಾಟೀಲ್, ಮೋಹನ್ ಶ್ಯಾ, ತೇಜಸ್ವಿ ಪಟೇಲ್, ಉದ್ದಿಮೆ ಪರವಾಗಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ, ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ಸೋದರ, ಭೀಮಣ್ಣ ಖಂಡ್ರೆ ಅವರ ಪುತ್ರ, ಬಣ್ಣಾರಿಯಮ್ಮ ಸಕ್ಕರೆ ಕಾರ್ಖಾನೆಯ ಸರವಣ ಹಾಗೂ ಜಗದೀಶ್ ಗುರಗುಂಟೆ ಭಾಗವಹಿಸಲಿದ್ದಾರೆ. ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ರೈತ ಮುಖಂಡ ಕುರಬೂರು ಶಾಂತಕುಮಾರ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಕರೆಯಲಾಗಿದೆ.


ಯಾರ್ಯಾರ ಪಟ್ಟು?

ಪಟ್ಟು ಹಿಡಿದಿರುವವರಲ್ಲಿ ಖುದ್ದು ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರು ಸೇರಿದ್ದಾರೆ. ಏಕೆಂದರೆ ರಾಜ್ಯದಲ್ಲಿ ಅವರ ಮಗನ ಒಡೆತನಕ್ಕೆ ಸೇರಿದ ವಿಜಯನಗರ ಸಕ್ಕರೆ ಕಾರ್ಖಾನೆ ಅಸ್ತಿತ್ವದಲ್ಲಿದೆ. ಜತೆಗೆ ರಾಜ್ಯ ಸರ್ಕಾರದ ಸಚಿವರಾದ ಸತೀಶ್ ಜಾರಕಿಹೊಳಿ, ಎಸ್.ಆರ್. ಪಾಟೀಲ್ ಹಾಗೂ ಶ್ಯಾಮನೂರು ಶಿವಶಂಕರಪ್ಪ ಅವರು ಸಕ್ಕರೆ ಮಾಲೀಕರ ಪರವಾಗಿದ್ದಾರೆ.

ಇಳುವರಿ ಆಧಾರದ ಮೇಲೆ ಪಂಜಾಬ್‌ನಲ್ಲಿ ಟನ್‌ಗೆ 3005, ಹರ್ಯಾಣದಲ್ಲಿ 3003 ದರ ನಿಗದಿ ಮಾಡಲಾಗಿದೆ. ಸರ್ಕಾರ ಈ ಇಚ್ಛಾಶಕ್ತಿ ಪ್ರಕಟಿಸಬೇಕು. ದುರಂತವೆಂದರೆ ರೈತರಿಗೆ ಲಾಬಿ ಮಾಡುವ ಮಾರ್ಗ ಗೊತ್ತಿಲ್ಲ. ಕಾರ್ಖಾನೆ ಮಾಲೀಕರಿಗೆ ಅದು ಗೊತ್ತು.
-ಕುರುಬೂರು ಶಾಂತಕುಮಾರ್ ರೈತ ಮುಖಂಡ


 ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.