ಪ್ರಧಾನ ಸುದ್ದಿ

ರಾಜ್ಯಕ್ಕೆ ಅಕಾಲಿಕ ಚಳಿಯೇಟು!

Published On :

ಕ.ಪ್ರ.ವಾರ್ತೆ, ಬೆಂಗಳೂರು, ನ. 10-
ಸಂಜೆ ಮತ್ತು ಬೆಳಗ್ಗೆ ಚಳಿ, ಆಗಾಗ ಮಳೆ, ಜೊತೆಗೆ ಬಿಸಿಲು..!
ಹೌದು. ರಾಜ್ಯದಲ್ಲಿ ಈಗ ಚಳಿ, ಮಳೆಯ ಸಂಗಮ ಆಗಾಗ ಆಗುತ್ತಿದೆ. ಜೊತೆಗೆ ಬಿಸಿಲಿನ ಆಟವೂ ಇದೆ.  ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಚಳಿ ಶುರವಾಗಿದೆ. ಅದರಲ್ಲೂ ಸಂಜೆಯಾಗುತ್ತಿದ್ದಂತೆ ಚಳಿ ಪ್ರಮಾಣ ಏರತೊಡಗಿದೆ. ಏಕೆಂದರೆ ರಾಜ್ಯದಲ್ಲಿ ಅಕಾಲಿಕ ಚಳಿಗಾಲ ಶುರುವಾಗಿದೆ. ಮಳೆಗಾಲ ಮುಗಿಯುವ ಮುನ್ನವೇ ಚಳಿಗಾಲ ಕಾಣಿಸಿಕೊಂಡಿದೆ.
ಬಿಜಾಪುರ, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ಭಾನುವಾರ ಬೆಳಗ್ಗೆ ಕಡಿಮೆ ಉಷ್ಣಾಂಶ ದಾಖಲಾಗಿದ್ದು, ಈ ಪೈಕಿ ಅಂತ್ಯಂತ ಕಡಿಮೆ ಎಂದರೆ ಚಾಮರಾಜನಗರದಲ್ಲಿ 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಂದಮಾತ್ರಕ್ಕೆ ಇದನ್ನು ಚಳಿಗಾಲ ಎನ್ನುವುದಕ್ಕೆ ಆಗುವುದಿಲ್ಲ. ಏಕೆಂದರೆ, ಮಳೆಗಾಲ ಡಿಸೆಂಬರ್ವರೆಗೂ ಚಾಲ್ತಿಯಲ್ಲಿರುತ್ತದೆ. ಈ ಅವಧಿಯನ್ನು ಹವಾಮಾನ ಶಾಸ್ತ್ರದ ಪ್ರಕಾರ ಮುಂಗಾರೋತ್ತರ ಮಳೆಗಾಲ ಎನ್ನಲಾಗುತ್ತದೆ. ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತನಕ ಚಳಿಗಾಲ.
ಈಗ ಕಾಣಿಸಿಕೊಳ್ಳುತ್ತಿರುವುದು ಮಳೆಗಾಲದೊಳಗಿನ ಚಳಿ. ಇದಕ್ಕೆ ಕಾರಣ ಹಗಲು, ರಾತ್ರಿಗಳ ಅವಧಿಯಲ್ಲಿ ಆಗುತ್ತಿರುವ ಏರುಪೇರು. ಈಗ ಹಗಲಿಗಿಂತ ರಾತ್ರಿ ಅವಧಿ ಹೆಚ್ಚು. ಹೀಗಾಗಿ ಭೂಮಿ ಹೆಚ್ಚು ತಂಪಾಗಿ ಚಳಿ ಅನುಭವ ಉಂಟಾಗುತ್ತಿದೆ. ಇದೇ ವಾತಾವರಣ ಇನ್ನೂ ವಾರದವರೆಗೂ ಮುಂದುವರಿಯಲಿದ್ದು, ನಂತರ ಮಳೆಗಾಲಕ್ಕೆ ತಿರುಗುತ್ತದೆ ಎನ್ನುತ್ತಾರೆ ಹವಮಾನ ತಜ್ಞರು.

ಏಕೆ ಹೀಗಾಗುತ್ತಿದೆ?: ದಿನದ 24 ತಾಸುಗಳಲ್ಲಿ ರಾತ್ರಿ ಮತ್ತು ಹಗಲುಗಳ ಅವಧಿ ಸಮವಾಗಿರುತ್ತದೆ. ಆದರೆ, ಸೂರ್ಯನ ಚಲನೆಯನ್ನಾಧರಿಸಿ ಈ ಅವಧಿಯಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಈಗ ಸೂರ್ಯ ಭೂಮಿಗೆ ನೇರವಾಗಿ ತನ್ನ ಕಿರಣಗಳನ್ನು ಸೂಸದೇ ಇರುವುದರಿಂದ ಹಗಲಿನ ಅವಧಿ ಕಡಿಮೆಯಾಗಿ, ರಾತ್ರಿ ಅವಧಿ 25 ನಿಮಿಷಗಳಷ್ಟು ಹೆಚ್ಚಾಗಿದೆ. ಇದರಿಂದಾಗಿ ಭೂಮಿ ಸೂರ್ಯನಿಂದ ಕಾದು ತಾಪ ಹೆಚ್ಚಾಗುವ ಬದಲು ರಾತ್ರಿ ವೇಳೆ ತಂಪಾಗಿ ಚಳಿ ಉಂಟಾಗುವಂತೆ ಮಾಡುತ್ತದೆ.
ಈ ಮಧ್ಯೆ ಮೋಡಗಳೂ ಇಲ್ಲದ ಕಾರಣ ಭೂಮಿಯ ತಾಪ ಹೊರ ಹೋಗುತ್ತದೆ. ಅಂದರೆ ಮೊಡಗಳು ದಟ್ಟವಾಗಿದ್ದರೆ ಸೂರ್ಯನಿಂದ ಭೂಮಿಗೆ ಬಂದ ತಾಪ ಹೊರ ಹೋಗದಂತೆ ಮೋಡಗಳು ತಡೆಯುತ್ತಿದ್ದವು. ಮೋಡಗಳೇ ಇಲ್ಲದ ಕಾರಣ ತಾಪಕ್ಕೆ ತಡೆಯೇ ಇಲ್ಲದಂತಾಗಿ ಭೂಮಿ ಬಹುಬೇಗ ತಂಪಾಗುತ್ತಿದೆ.

ಇದು ಮಳೆ ಸೂಚನೆಯೂ ಹೌದು: ರಾಜ್ಯದತ್ತ ಯಾವುದೇ ಸಾಗರಗಳಿಂದಲೂ ಶೀತ ಮಾರುತಗಳು ಬರುತ್ತಿಲ್ಲ. ಹೀಗಾಗಿ ವಾಯುಭಾರದ ಕುಸಿತವಿಲ್ಲ. ಬಂಗಾಳ ಕೊಲ್ಲಿಯಲ್ಲಿ ಒಂದು ವಾಯುಭಾರ ಕುಸಿತ ಉಂಟಾಗುತ್ತಿದ್ದು, ಅದಿನ್ನೂ ದೂರದಲ್ಲಿದೆ. ಈ ಶೀತ ಮಾರುತ ಪಶ್ಚಿಮ ಕರಾವಳಿ ಮುಟ್ಟುವುದಕ್ಕೆ ಇನ್ನೂ ಒಂದು ವಾರ ಬೇಕಿದ್ದು, ಆನಂತರ ರಾಜ್ಯದಲ್ಲಿ ಮೋಡ ಮುಸುಕಿದ ವಾತಾರಣ ಉಂಟಾಗಲಿದೆ. ಪರಿಣಾಮ, ಒಳನಾಡಿನ ಅಲ್ಲಲ್ಲಿ ಮಳೆಯಾಗಲಿದೆ. ಅಲ್ಲಿವರೆಗೂ ಚಳಿ ವಾತರಣ ಮುಂದುವರಿಯಲಿದೆ. ಹಗಲಿನಲ್ಲಿ ಬಿಸಿಲು ಕಾಣಿಸಿಕೊಂಡರೂ ರಾತ್ರಿ ಚಳಿ ಹೆಚ್ಚಾಗಿರುತ್ತದೆ.

ಕಡಿಮೆ ಉಷ್ಣಾಂಶದ ಜಿಲ್ಲೆಗಳು
ಜಿಲ್ಲೆ    ಸದ್ಯದ ಉಷ್ಣಾಂಶ    ಸರಾಸರಿಗಿಂತ ಕಡಿಮೆ
ಬಿಜಾಪುರ    15 ಡಿಗ್ರಿ ಸೆಲ್ಸಿಯಸ್    5 ಡಿಗ್ರಿ ಸೆಲ್ಸಿಯಸ್
ಚಿಂತಾಮಣಿ    14    05
ಬೆಂಗಳೂರು    15    03
ಆಗುಂಬೆ    13    04
ಚಿತ್ರದುರ್ಗ    16    04

ರಾಜ್ಯದಲ್ಲಿ ಇನ್ನೂ ಮಳೆಗಾಲವೇ ಇದೆ. ಆದ್ದರಿಂದ ಇದು ಚಳಿಗಾಲವಲ್ಲ. ಆದರೂ ಚಳಿಯಾಗುತ್ತಿದೆ ಎಂದರೆ, ತಾತ್ಕಾಲಿಕ ಚಳಿಗಾಲ. ಈ ವಾತಾವರಣ ಹೆಚ್ಚು ದಿನ ಇರುವುದಿಲ್ಲ. ಸದ್ಯದಲ್ಲೇ ಮಳೆಯಾಗುವ ಸಾಧ್ಯತೆ ಇದೆ.
-ಬಿ. ಪುಟ್ಟಣ್ಣ, ಹವಾಮಾನ ಇಲಾಖೆ ನಿರ್ದೇಶಕ

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.