ಪ್ರಧಾನ ಸುದ್ದಿ

8 ವರ್ಷ ಕಾಡಿಸಿ 7 ಹೆಜ್ಜೆ ಇಟ್ಟ

Published On :

ಕ.ಪ್ರ.ವಾರ್ತೆ,  ಗಜೇಂದ್ರಗಡ,  ನ. 12-
ಪ್ರೀತಿ ಪ್ರೇಮದ ನಾಟಕವಾಡಿ, ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿ ಪ್ರೇಯಸಿಗೆ 8 ವರ್ಷದಿಂದ ಸತಾಯಿಸುತ್ತಿದ್ದ ಪ್ರೇಮಿಗೆ ಕೊನೆಗೂ ಹಿರಿಯರ ಸಮ್ಮುಖದಲ್ಲಿ ಮದುವೆ ಜರುಗಿ ಸುಖಾಂತ್ಯಗೊಂಡಿದೆ.
ಪಟ್ಟಣದ ನಿವೃತ್ತ ವೈದ್ಯಾಧಿಕಾರಿ ಶಿವಪುತ್ರಪ್ಪ ಕುಂಬಾರ ಅವರ ಮಗನಾದ ಚಂದ್ರು ಕುಂಬಾರ (25) ಎಂಬ ಯುವಕ ಮನೆಯ ಪಕ್ಕದ ಮರಾಠ ಸಮುದಾಯಕ್ಕೆ ಸೇರಿದ ಮಂಜುಳಾ ಘೋರ್ಪಡೆ (21) ಎನ್ನುವ ಯುವತಿಯನ್ನು ಪ್ರೀತಿಸಿ, ಬಳಿಕ ಅವಳನ್ನು ದೈಹಿಕ ಸಂಪರ್ಕಕ್ಕೂ ಬಳಸಿಕೊಂಡಿದ್ದ. ಯುವತಿ ಮದುವೆಯಾಗಲು ಒತ್ತಾಯಿಸಿದಾಗಲೆಲ್ಲ ಕುಂಟುನೆಪ ಹೇಳಿ ಜಾರಿಕೊಳ್ಳುತ್ತಿದ್ದ.
ಇವರಿಬ್ಬರು ಪ್ರೀತಿಸಿದ ವಿಷಯ ಯುವತಿಯ ಪೋಷಕರಿಗೆ ಗೊತ್ತಾದ ನಂತರ ಯುವಕ ಚಂದ್ರುವಿನ ನಡತೆ ಸರಿಯಿಲ್ಲ. ಅವನು ಇದೇ ರೀತಿ ಹಲವಾರು ಯುವತಿಯರಿಗೆ ಮೋಸ ಮಾಡಿದ್ದಾನೆ. ಕೂಡಲೇ ಅವನನ್ನು ಮರೆತು ಬಿಡು ಎಂದು ಪೋಷಕರು ಮಂಜುಳಾಗೆ ಬುದ್ಧಿವಾದ ಹೇಳಿ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣನ ಬಳಿ ಅವಳನ್ನು ಬಿಟ್ಟಿದ್ದರು. ಪ್ರೇಯಸಿ ಮಂಗಳೂರಿಗೆ ತೆರಳಿದ ವಿಷಯ ತಿಳಿದ ಪ್ರೇಮಿ ಚಂದ್ರು ಅಲ್ಲಿಯೂ ಅವಳನ್ನು ಪೀಡಿಸತೊಡಗಿದ್ದ.
ಕಳೆದ ಭಾನುವಾರ ಯುವತಿ ಕೆಲಸಕ್ಕೆಂದು ಅತ್ತಿಗೆ ಜತೆಗೆ ಬೆಳಗ್ಗೆ ಹೊಲಕ್ಕೆ ತೆರಳುವಾಗ ಚಂದ್ರು ತನ್ನ ಕಾರಿನಲ್ಲಿ ಪ್ರೇಯಸಿ ಮಂಜುಳಾನನ್ನು ಎತ್ತಿ ಹಾಕಿಕೊಂಡು ಹೋಗಿ, ಬಳಿಕ ಮಧ್ಯಾಹ್ನದ ಹೊತ್ತಿಗೆ ಮರಳಿ ಮನೆಗೆ ತಂದು ಬಿಟ್ಟಿದ್ದ. ಈ ವಿಷಯ ಅರಿತ ಪೋಷಕರು ಯುವಕನನ್ನು ವಿಚಾರಿಸಿದಾಗ, ಚಂದ್ರು ಯುವತಿ ಪೋಷಕರಿಗೆ ಬೆದರಿಕೆ ಹಾಕಿದ್ದಲ್ಲದೆ ಅವರನ್ನು ಥಳಿಸಿ, ಪೊಲೀಸ್ ಠಾಣೆಯಲ್ಲಿ ಯುವತಿ ಪೋಷಕರ ವಿರುದ್ಧ ದೂರು ನೀಡಲೂ ಮುಂದಾಗಿದ್ದ. ಕೂಡಲೇ ಯುವತಿಯ ಪೋಷಕರು ಸ್ಥಳೀಯ ಠಾಣೆಯಲ್ಲಿ ಪ್ರತಿದೂರು ನೀಡಿದರು.

ಪ್ರೇಮಿಗಳ ಮದುವೆ: ದೂರು ದಾಖಲಿಸಿಕೊಂಡ ಪಿಎಸ್ಐ ಎಚ್.ಆರ್. ನಡಗಡ್ಡಿಯವರು ವಿಚಾರಣೆಗೆ ಮುಂದಾದರು. ಈ ಮಧ್ಯೆ ಹಿರಿಯರು ಎರಡು ಕುಟುಂಬಗಳ ಮನವೊಲಿಕೆಗೆ ಮುಂದಾದರು. ಅಂತಿಮವಾಗಿ ಹಿರಿಯರ ಸಮ್ಮುಖದಲ್ಲಿ ಸಂಧಾನ ಜರುಗಿ, ಭಾನುವಾರ ರಾತ್ರಿ 10 ಗಂಟೆಗೆ ಠಾಣೆಯ ಪಕ್ಕದಲ್ಲಿನ ಈಶ್ವರ ದೇಗುಲದಲ್ಲಿ ಚಂದ್ರು ಹಾಗೂ ಮಂಜುಳಾರ ಮದುವೆ ನಡೆಯಿತು.
ಮದುವೆ ಬಳಿಕ ಹೆಂಡತಿ ಮಂಜುಳಾಳನ್ನು ಪತಿ ಚಂದ್ರು ತನ್ನ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ಮಾರ್ಗಮಧ್ಯೆಯೇಬಿಟ್ಟು ಹೋದನೆನ್ನಲಾಗಿದೆ. ಆ ಕ್ಷಣದಲ್ಲಿ ಏನು ತೋಚದಂತಾದ ಮಂಜುಳಾ ಮರಳಿ ಠಾಣೆಗೆ ಬಂದು ನನ್ನ ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸರಲ್ಲಿ ತನ್ನ ಗೋಳು ತೋಡಿಕೊಂಡಳು. ಪೊಲೀಸರು ಚಂದ್ರುವಿನ ಹುಡುಕಾಟಕ್ಕೆ ಮುಂದಾದರು. ಸೋಮವಾರ ಸಂಜೆ ಮಂಜುಳಾಳ ಪತಿ ಚಂದ್ರು ಹಾಗೂ ಅವರ ಪೋಷಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ನ.15ರಂದು ಚಂದ್ರು ಮಂಜುಳಾರ ಮದುವೆ ಕುರಿತು ಸ್ಥಳೀಯ ಸಬ್ರಜಿಸ್ಟಾರ್ ಕಚೇರಿಯಲ್ಲಿ ವಿವಾಹ ನೋಂದಾಯಿಸುವ ಕುರಿತು ನಿರ್ಧರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.