ರಾಜೀವ್ಗಾಂಧಿ ಆರೋಗ್ಯ ಶ್ರೀ
ಬೆಂಗಳೂರು: ಎಪಿಎಲ್ ಕಾರ್ಡ್ದಾರರಿಗೆ ಸರ್ಕಾರ ಆರಂಭಿಸುತ್ತಿರುವ ಹೊಸ ಆರೋಗ್ಯ ಸೇವೆಯ ಹೆಸರು ರಾಜೀವ್ಗಾಂಧಿ ಆರೋಗ್ಯಶ್ರೀ.
ಎಪಿಎಲ್ ಕಾರ್ಡ್ದಾರರಿಗೂ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ವಿಸ್ತರಿಸುತ್ತಿಲ್ಲ. ಬದಲಾಗಿ ರಾಜೀವ್ಗಾಂಧಿ ಆರೋಗ್ಯಶ್ರೀ ಯೋಜನೆಯನ್ನು ಹೊಸದಾಗಿ ಜಾರಿಗೆ ತರಲಾಗುತ್ತಿದೆ.
ಬಿಪಿಎಲ್ ಕಾರ್ಡ್ದಾರರಿಗೆ ಇರುವ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಎಪಿಎಲ್ ಕಾರ್ಡ್ದಾರರಿಗೂ ವಿಸ್ತರಿಸಲಾಗುವುದು ಎಂದು ಬುಧವಾರ ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದರು. ಅಷ್ಟೇ ಅಲ್ಲ, ಅದು ರಾಜೀವ್ಗಾಂಧಿ ಆರೋಗ್ಯ ಶ್ರೀ ಅಲ್ಲವೇ ಎಂಬ ಪ್ರಶ್ನೆಗೆ ಇಲ್ಲವೇ ಇಲ್ಲ. ವಾಜಪೇಯಿ ಆರೋಗ್ಯಶ್ರೀ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಯು.ಟಿ. ಖಾದರ್, ಎಪಿಎಲ್ ಕಾರ್ಡ್ದಾರರಿಗೆ ರಾಜೀವ್ಗಾಂಧಿ ಆರೋಗ್ಯ ಶ್ರೀ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು. ಬುಧವಾರ ಸಂಪುಟಸಭೆಯಲ್ಲಿ ಅದು ವಾಜಪೇಯಿ ಆರೋಗ್ಯ ಶ್ರೀ ಆಗಿತ್ತಂತೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ಇಲ್ಲ ರಾಜೀವ್ಗಾಂಧಿ ಆರೋಗ್ಯ ಶ್ರೀ ಎಂದೇ ಸಂಪುಟ ಒಪ್ಪಿಗೆ ನೀಡಿದೆ ಎಂದು ಸ್ಪಷ್ಟನೆ ನೀಡಿದರು.
ಶೇ. 10ರಷ್ಟು ಹಣ ಭರಿಸಬೇಕು: ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ, ರಾಜೀವ್ಗಾಂಧಿ ಆರೋಗ್ಯ ಶ್ರೀ ಯೋಜನೆಯಡಿ ಎಪಿಎಲ್ ಕಾರ್ಡ್ದಾರರು ಚಿಕಿತ್ಸಾ ಪ್ಯಾಕೇಜ್ನ ಶೇ. 10ರ ಮೊತ್ತ ಭರಿಸಬೇಕು. ಚಿಕಿತ್ಸೆಗೆ ಪ್ಯಾಕೇಜ್ಗಿಂತ ಹೆಚ್ಚು ಮೊತ್ತವಾದಲ್ಲಿ ಆ ಮೊತ್ತವನ್ನು ರೋಗಿಯ ಕುಟುಂಬದವರು ಪಾವತಿಸಬೇಕು. ಈ ಯೋಜನೆಯಡಿಯೂ ಚಿಕಿತ್ಸೆಯ ಗರಿಷ್ಠ ಮಿತಿ 1.5 ಲಕ್ಷ. ತೀರಾ ಅಗತ್ಯ ಸಂದರ್ಭದಲ್ಲಿ 2 ಲಕ್ಷದವರೆಗೆ ಪಾವತಿಸಲು ಅವಕಾಶವಿದೆ ಎಂದು ಅವರು ವಿವರಿಸಿದರು.
ರಾಜೀವ್ಗಾಂಧಿ ಆರೋಗ್ಯ ಶ್ರೀ ಜಾರಿ ಕುರಿತಂತೆ ಶೀಘ್ರವೇ ಸರ್ಕಾರಿ ಆದೇಶ ಹೊರಡಿಸಲಾಗುವುದು. ಫಲಾನುಭವಿಗಳು ಯೋಜನೆಯಡಿ ನಿಗದಿಪಡಿಸಿದ ಚಿಕಿತ್ಸೆ ಪಡೆದುಕೊಳ್ಳಲು ರಾಜ್ಯ ಮತ್ತು ಹೊರರಾಜ್ಯದ 152 ಆಸ್ಪತ್ರೆಗಳನ್ನು ನಿಗದಿಪಡಿಸಲಾಗಿದೆ ಎಂದರು.
ದೇಶದಲ್ಲೇ ಪ್ರಥಮ: ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ದಾರರೆಲ್ಲರಿಗೂ ಉಚಿತ ಆರೋಗ್ಯ ಸೇವೆ ಒದಗಿಸುವ ಮೂಲಕ ಟರ್ಷಿಯರಿ ಕಾಯಿಲೆಗಳಿಗೆ ಸಂಬಂಧಿಸಿದಂತೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಪ್ರಥಮ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಲಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

