ಪ್ರಧಾನ ಸುದ್ದಿ

ನರೇಂದ್ರ ಮೋದಿ ಮೋಡಿಗೆ ಕ್ಷಣಗಣನೆ

ನರೇಂದ್ರ ಮೋದಿ ಮೋಡಿಗೆ ಕ್ಷಣಗಣನೆ
Published On :

ಕನ್ನಡಪ್ರಭ ವಾರ್ತೆ,  ಬೆಂಗಳೂರು,  ನ.15-
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಭಾರತ ಗೆಲ್ಲಿಸಿ' ರ್ಯಾಲಿಗೆ ಕ್ಷಣಗಣನೆ ಆರಂಭವಾಗಿದೆ.
ಮೋದಿ ಭಾಷಣ ಕೇಳುವುದಕ್ಕೆ ರಾಜ್ಯದ ಮೂಲೆ, ಮೂಲೆಗಳಿಂದ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಹರಿದು ಬರಲು ಸಿದ್ದರಾಗಿದ್ದು, ಇದಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಾರ್ಯಕ್ರಮಕ್ಕೆ ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ 15 ದಿನಗಳಿಂದ ಅರಮನೆ ಮೈದಾನದಲ್ಲಿ  ತಪಾಸಣಾ ಕಾರ್ಯ ನಡೆಸಲಾಗುತ್ತಿದ್ದು, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹಾಗೂ ಹಿರಿಯ ಅಧಿಕಾರಿಗಳು ಶುಕ್ರವಾರ ಅಂತಿಮ ಸುತ್ತಿನ ಪರಿಶೀಲನೆ ನಡೆಸಿದರು. ಕಾರ್ಯಕ್ರಮ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.
ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಮೋದಿ ರ್ಯಾಲಿ ಬಗೆಗಿನ ಕೆಲ ಕುತೂಹಲಕಾರಿ ವಿವರಗಳು ಹೀಗಿವೆ...

1. ವೇದಿಕೆಯಲ್ಲಿ ಯಾರ್ಯಾರು ಇರ್ತಾರೆ?
ಕಾರ್ಯಕ್ರಮದ ವೇದಿಕೆಯಲ್ಲಿ ಯಾರ್ಯಾರು ಇರುತ್ತಾರೆ ಎಂಬ ಗುಟ್ಟನ್ನು ಬಿಜೆಪಿ ನಾಯಕರು ಇನ್ನು ಬಿಟ್ಟುಕೊಟ್ಟಿಲ್ಲ. ಆದರೆ ಮೋದಿ ಜೊತೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್ ಇರಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಹಾಗೂ ಆರ್.ಅಶೋಕ ಅವರಿಗೆ ಸ್ಥಾನ ಕಲ್ಪಿಸಬೇಕೇ? ಬೇಡವೇ ? ಎಂಬುದು ಇನ್ನು ನಿಗದಿಯಾಗಿಲ್ಲ.

2. ಮೋದಿ ಎಷ್ಟು ಗಂಟೆಗೆ  ಬರ್ತಾರೆ?
ಬಿಜೆಪಿ ರಾಜ್ಯಾಧ್ಯಕ್ಷರ ಪ್ರಕಾರ, ನರೇಂದ್ರ ಮೋದಿ ಭಾನುವಾರ ಅಹ್ಮದಾಬಾದ್‌ನಿಂದ ವಿಶೇಷ ವಿಮಾನದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ಬಂದಿಳಿಯುತ್ತಾರೆ. 11 ಗಂಟೆಗೆ ಅರಮನೆ ಮೈದಾನದಲ್ಲಿರುವ ಹ್ಯೆಲಿಪ್ಯಾಡ್‌ನಲ್ಲಿ ಅವರ ಹೆಲಿಕಾಪ್ಟರ್ ಇಳಿಯುತ್ತದೆ. ನಂತರ ವೇದಿಕೆ ಕಾರ್ಯಕ್ರಮ. ಆದರೆ ಬೆಳಗ್ಗೆ 10ರಿಂದ 11ಗಂಟೆಯವರೆಗೆ ನರೇಂದ್ರ ಮೋದಿ ಅವರ ಕಾರ್ಯಕ್ರಮ ಏನು? ಎಂಬ ಗುಟ್ಟು ಬಿಟ್ಟುಕೊಡಲು ಬಿಜೆಪಿ ಮುಖಂಡರು ಸಿದ್ಧರಿಲ್ಲ. ಒಂದು ಮೂಲದ ಪ್ರಕಾರ ಮೋದಿ ಮಧ್ಯಾಹ್ನ 1 ಗಂಟೆಗೆ ವೇದಿಕೆ ಪ್ರವೇಶಿಸುತ್ತಾರೆ. ಸುಮಾರು ಒಂದು ಗಂಟೆ ಕಾಲ ಅವರು ಭಾಷಣ ಮಾಡಲಿದ್ದಾರೆ.

3. ಬೇರೆ ಎಲ್ಲಿಗೆ ಹೋಗುತ್ತಾರೆ?
ಮೂಲಗಳ ಪ್ರಕಾರ ಬೆಳಗ್ಗೆ 10ರಿಂದ 11 ಗಂಟೆಯ ಅವಧಿಯಲ್ಲಿ ನರೇಂದ್ರ ಮೋದಿ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮ, ವಿದ್ಯಾಪೀಠ ವೃತ್ತದ ಪೇಜಾವರ ಶಾಖಾ ಮಠ, ವಿಜಯನಗರ ಆದಿಚುಂಚನಗಿರಿ ಶಾಖಾ ಮಠ ಹಾಗೂ ರೇಸ್‌ಕೋರ್ಸ್ ರಸ್ತೆ ಭಾರತೀಯ ವಿದ್ಯಾಭವನಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಈ ಸುದ್ದಿಯನ್ನು ಬಿಜೆಪಿ ನಾಯಕರು ನಿರಾಕರಿಸುವುದೂ ಇಲ್ಲ, ದೃಢಪಡಿಸುವುದೂ ಇಲ್ಲ.

4. ಎಷ್ಟು ಜನ ಬರ್ತಾರೆ?
ಮೋದಿ ರ್ಯಾಲಿಗಾಗಿ ಈಗಾಗಲೇ 3.5 ಲಕ್ಷ ಕೂಪನ್‌ಗಳು ಮಾರಾಟವಾಗಿವೆ. ಹೀಗಾಗಿ ಇಷ್ಟೇ ಸಂಖ್ಯೆ ಅಭಿಮಾನಿಗಳು ಬರುವುದಂತೂ ಖಚಿತ. ಕಾರ್ಯಕ್ರಮದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಮುಖಂಡರು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ.

5. ವಾಹನಗಳು ಎಷ್ಟು?
ಅಭಿಮಾನಿಗಳಿಗಾಗಿ 10 ವಿಶೇಷ ರೈಲು, 2500 ಬಸ್, 2000 ಲಘು ಸಾರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಉಡುಪಿ, ಕೋಲಾರ, ದಕ್ಷಿಣ ಕನ್ನಡದಿಂದ ಬೈಕ್ ರ್ಯಾಲಿ. ಮೈಸೂರಿನಿಂದ ಮಾಜಿ ಸಚಿವ ರಾಮದಾಸ್ ನೇತೃತ್ವದಲ್ಲಿ ಕಾರ್ಯಕರ್ತರ ಪಾದಯಾತ್ರೆ ಇದೆ.

6. ವ್ಯವಸ್ಥೆ ಹೇಗೆ?
ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳ ನಿರ್ವಹಣೆಗೆ ಬಿಜೆಪಿಯ 5 ಸಾವಿರ ಕಾರ್ಯಕರ್ತರು ಸಿದ್ದರಾಗಿದ್ದಾರೆ. ಮೈದಾನವನ್ನು 28 ಬ್ಲಾಕ್‌ಗಳಲ್ಲಿ ವಿಭಜಿಸಲಾಗಿದ್ದು, ವೀಕ್ಷಣೆಗೆ 40 ಎಲ್‌ಸಿಡಿ ಸ್ಕ್ರೀನ್ ಅಳವಡಿಸಲಾಗಿದೆ. 6 ಭೋಜನಶಾಲೆ ಹಾಗೂ ಊಟಕ್ಕೆ 300 ಕೌಂಟರ್ ತೆರೆಯಲಾಗಿದೆ.

7. ವೇದಿಕೆ ಏನು, ಎತ್ತ?
40-80 ಅಡಿ ವಿಸ್ತಾರದ 16 ಅಡಿ ಎತ್ತರದ ಬೃಹತ್ ವೇದಿಕೆಯನ್ನು ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ರ್ಯಾಲಿಗೆ ನಿರ್ಮಿಸಲಾಗಿದೆ. ವೇದಿಕೆ ಸುತ್ತ ಐದು ಸೆಕ್ಟರ್‌ಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ. ಇಲ್ಲಿ ಮೋದಿಯವರ ಖಾಸಗಿ ಭದ್ರತಾ ಸಿಬ್ಬಂದಿ, ಎನ್‌ಎಸ್‌ಜಿ ಕಮಾಂಡೋಗಳು, ರಾಜ್ಯದ ಆಯ್ದ ಭದ್ರತಾ ಸಿಬ್ಬಂದಿ, ಈಗಾಗಲೇ ನೀಡಿರುವ ಪಟ್ಟಿಯಲ್ಲಿರುವ ಬಿಜೆಪಿ ನಾಯಕರಿಗೆ ಮಾತ್ರ ಪ್ರವೇಶ.

8. ಭದ್ರತೆ ಹೇಗೆ?
ಕಳೆದ ಹದಿನೈದು ದಿನಗಳಿಂದಲೇ ಅರಮನೆ ಮೈದಾನವನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವ್ಯಾಪಕ ತಪಾಸಣೆ ನಡೆಸಿದ್ದಾರೆ. ಭದ್ರತೆಗೆ ಕೇವಲ ರಾಜ್ಯ ಪೊಲೀಸರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 3 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದನ್ನು ಹೊರತುಪಡಿಸಿ 10 ಡಿಸಿಪಿ, 25 ಎಸಿಪಿ, 100 ಇನ್‌ಸ್ಪೆಕ್ಟರ್‌ಗಳು, 250 ಪಿಎಸ್‌ಐ, 300 ಎಎಸ್‌ಐ, 800 ಗೃಹರಕ್ಷಕರು, 500 ಪೌರ ರಕ್ಷಕರನ್ನು ನಿಯೋಜಿಸಲಾಗಿದೆ.

9. ಪ್ರವೇಶ ಎಷ್ಟು ಗಂಟೆಗೆ?
ಮೊದಲು ಬಂದವರಿಗೆ ಮೊದಲು ಜಾಗ ಎಂಬಂತಿಲ್ಲ. ಭಾನುವಾರ ಬೆಳಗ್ಗೆ 9 ಗಂಟೆಗೆ ಸಾರ್ವಜನಿಕರನ್ನು ಅರಮನೆ ಮೈದಾನದ ಒಳಕ್ಕೆ ಬಿಡಲಾಗುತ್ತದೆ. ಐದು ಗೇಟ್‌ಗಳಲ್ಲಿ ಪ್ರವೇಶ. ಪ್ರತಿಯೊಬ್ಬರನ್ನು ಎರಡು ಹಂತದಲ್ಲಿ ತಪಾಸಣೆ ನಡೆಸಲಾಗುತ್ತದೆ. ಬೀಡಿ, ಸಿಗರೇಟು, ಧ್ವಜ, ಕೈಚೀಲ, ನೀರಿನ ಬಾಟಲಿ, ದೊಣ್ಣೆ ಇತ್ಯಾದಿಗಳನ್ನು ಜತೆಯಲ್ಲಿ ಕೊಂಡೊಯ್ಯುವಂತಿಲ್ಲ. ಇದರ ಜತೆಗೆ ಭಾನುವಾರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯಮಾರಾಟವನ್ನು ನಿಷೇಧಿಸಲಾಗಿದೆ.

10. ಬಳ್ಳಾರಿ ರಸ್ತೆ ಬಂದ್
ಬಾರಿಗೆ ಬಳ್ಳಾರಿ ರಸ್ತೆಯಲ್ಲಿನ ಕಾವೇರಿ ಜಂಕ್ಷನ್‌ನಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಬೆಳಗ್ಗೆ 6ರಿಂದ ಸಾಯಂಕಾಲ 6ರವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ.

11. ಯಡಿಯೂರಪ್ಪ ಬರುವರೇ?
ನರೇಂದ್ರ ಮೋದಿ ಅವರ ರ್ಯಾಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರುವರೇ? ರ್ಯಾಲಿಯಲ್ಲಿ ಭಾಗವಹಿಸುವುದಕ್ಕೆ ಖುದ್ದು ಯಡಿಯೂರಪ್ಪನವರಿಗೆ ಆಸಕ್ತಿ ಇದೆ. ಅದಕ್ಕೆ ಪೂರಕ ಎಂಬಂತೆ ಅರಮನೆ ಮೈದಾನದ ಸುತ್ತ ಮೋದಿಗೆ ಸ್ವಾಗತ ಕೋರುವ ಯಡಿಯೂರಪ್ಪ ಅವರ ಫ್ಲೆಕ್ಸ್‌ಗಳನ್ನು ಭಾರಿ ಪ್ರಮಾಣದಲ್ಲಿ ಹಾಕಲಾಗಿದೆ. ಬಿಜೆಪಿ ಮೂಲಗಳ ಪ್ರಕಾರ ಒಂದೊಮ್ಮೆ ಅವರು ರ್ಯಾಲಿಗೆ ಬಂದರೆ ವೇದಿಕೆಯಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ.

12. ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ
ಬಿಜೆಪಿ ಮೂಲಗಳ ಪ್ರಕಾರ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಲಿದ್ದಾರೆ. ಶಾದಿಭಾಗ್ಯ, ಮೂಡನಂಬಿಕೆ ಪ್ರತಿಬಂಧಕ ಕಾನೂನು ಸೇರಿದಂತೆ ಹಲವು ವಿಚಾರಗಳ ವಿರುದ್ಧ ಅವರು ಪ್ರಸ್ತಾಪಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.