ಪ್ರಧಾನ ಸುದ್ದಿ

ಸಿಎಂ ಅಂಕಲ್, ದಯವಿಟ್ಟು ನಮ್ಮನಮ್ಮಲ್ಲಿ ಈ ರೀತಿ ಜಾತಿ ವೈಷಮ್ಯದ ಕೊಳ್ಳಿ ಇಡಬೇಡಿ!

ಸಿಎಂ ಅಂಕಲ್, ದಯವಿಟ್ಟು ನಮ್ಮನಮ್ಮಲ್ಲಿ ಈ ರೀತಿ ಜಾತಿ ವೈಷಮ್ಯದ ಕೊಳ್ಳಿ ಇಡಬೇಡಿ!
Published On :

ಸರ್ಕಾರಿ ಪ್ರೌಢಶಾಲೆಯ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಇದು 'ಮುಗ್ಧ ಮನಸ್ಸುಗಳಲ್ಲಿ ಜಾತಿ ವಿಷ ಬೀಜ ಬಿತ್ತುವ ಬೆಳವಣಿಗೆ'ಎಂದು ಕನ್ನಡಪ್ರಭ ವರದಿ ಮಾಡಿತ್ತು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿರುವ ವಿದ್ಯಾರ್ಥಿ ಸಮುದಾಯ ನಮ್ಮಲ್ಲೇಕೆ ಜಾತಿ ಹುಡುಕುತ್ತೀರಿ? ನಾವೆಲ್ಲರೂ ಒಂದೇ ಅಲ್ಲವೇ? ನಮ್ಮಲ್ಲಿ ಜಾತಿ ವಿಷ ಬೀಜ ಬಿತ್ತಬೇಡಿ, ನಮಗೇಕೆ ಪ್ರವಾಸದ ಸೌಲಭ್ಯ ಇಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ತನ್ನ ನಡೆಯನ್ನು ಪುಟಾಣಿ ಮಕ್ಕಳು ಸಹ ಗಮನಿಸುತ್ತಾರೆಂಬ ವಿವೇಕ ಹಾಗೂ ಎಚ್ಚರ ಸರ್ಕಾರಕ್ಕೆ ಇರಲಿ. ಇಂಥ ಮೂರ್ಖ ನಿರ್ಧಾರಗಳಿಗೆ ತೆರೆ ಬೀಳಲಿ.


ಸಿಎಂ ಅಂಕಲ್, ದಯವಿಟ್ಟು ನಮ್ಮನಮ್ಮಲ್ಲಿ ಈ ರೀತಿ ಜಾತಿ ವೈಷಮ್ಯದ ಕೊಳ್ಳಿ ಇಡಬೇಡಿ!
- ಎಂ. ಮೈತ್ರಿ, ವಿದ್ಯಾರ್ಥಿನಿ, ಚಾಮರಾಜನಗರ


ಒಂದೇ ಕ್ಲಾಸ್‌ನಲ್ಲಿ ಕಲಿಯುತ್ತಿರುವ ನನ್ನ ಗೆಳೆಯರು ನನ್ನನ್ನು ಬಿಟ್ಟು ಪ್ರವಾಸ ಹೋದರೆ ತುಂಬಾ ಬೇಜಾರಾಗುತ್ತದೆ. ನಾವೆಲ್ಲಾ ಒಂದೇ ಸ್ಕೂಲಲ್ಲಿದ್ರೂ ಯಾಕೆ ಹಿಂಗೆ ಬೇರೆ ಬೇರೆ ಮಾಡ್ತಿದಾರೆ? ಇಲ್ಲದಿದ್ದರೆ ನಮ್ಮ ಅಪ್ಪ- ಅಮ್ಮನಿಗೆ  ಕರೆದುಕೊಂಡು ಹೋಗಿ ಅಂತ ಕೇಳ್ತಿನಿ.
- ಎಸ್.ಎಸ್. ಮಂಜುನಾಥ, ಶಿವಮೊಗ್ಗ

ಕೆಲವರನ್ನು ಕರೆದುಕೊಂಡು ಹೋಗಿ ಕೆಲವರನ್ನು ಬಿಟ್ಟು ಹೋಗುವುದು ಮಾಡಬಾರದು. ಯಾರಿಗೆ ಪ್ರವಾಸಕ್ಕೆ ತೆರಳಲು ಹಣವಿಲ್ಲವೋ ಅಂಥವರನ್ನು 'ಕರ್ನಾಟಕ ದರ್ಶನ'ಕ್ಕೆ ಕಳಿಸಬೇಕು. ಅಹಿಂದ ಮಕ್ಕಳನ್ನಷ್ಟೇ ಪ್ರವಾಸಕ್ಕೆ ಕರೆದೊಯ್ದರೆ ನಾವು ಏನು ಮಾಡಬೇಕು? ನಮಗೂ ಆಸೆಯಾಗುತ್ತದೆ. ಎಲ್ಲರನ್ನೂ ಪ್ರವಾಸಕ್ಕೆ ಕಳಿಸುವುದಾದರೆ ಕಳಿಸಲಿ. ಯಾರನ್ನೂ ಕಳಿಸುವುದು ಬೇಡ.
 - ರಕ್ಷಿತಾ ಮರಾಠೆ, ಶಿರಸಿಮಕ್ಕಿ

ಅಹಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಬೇಡ ಎಂದು ಸರ್ಕಾರಕ್ಕೆ ಸಲಹೆ ನೀಡುವಷ್ಟು ನಾನು ದೊಡ್ಡವನಲ್ಲ. ಆದರೆ ಸರ್ಕಾರ ಇತರೆ ವಿದ್ಯಾರ್ಥಿಗಳನ್ನೂ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು. ಸರ್ಕಾರದ ಇಬ್ಬಗೆ ನೀತಿ ಸರಿ ಕಾಣುತ್ತಿಲ್ಲ. ಇತರೆ ಮಕ್ಕಳಿಂದ ಸರ್ಕಾರಕ್ಕೆ ಏನು ಅನ್ಯಾಯವಾಗಿದೆ?
-  ನಾಗಾರ್ಜುನ, ವಿದ್ಯಾರ್ಥಿ, ಕೊಳ್ಳೇಗಾಲ

ಸರ್ಕಾರವೇ ಮಕ್ಕಳ ಮನಸ್ಸಿನಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ನಾವೆಲ್ಲ ಒಂದೇ ಎಂಬ ಭಾವನೆ ನಮ್ಮಲ್ಲಿರುತ್ತದೆ. ಶಾಲಾ ಹಂತದಲ್ಲೇ ಮೀಸಲಾತಿ ನೀಡಿದರೆ ನಮ್ಮ ಮನಸ್ಸಿನಲ್ಲಿ ಸಂಕುಚಿತ ಭಾವನೆ ಮೂಡುವಂತೆ ಮಾಡುತ್ತದೆ. ಇದೀಗ ಅಹಿಂದ ಮಕ್ಕಳಿಗೆ ಪ್ರವಾಸ ಸೌಲಭ್ಯ ಕಲ್ಪಿಸುವ ಮೂಲಕ ಸರ್ಕಾರ ಅಸಮಾನತೆ ಮೂಡಿಸಲು ಹೊರಟಿದೆ.
- ಎಂ. ಮೈತ್ರಿ, ವಿದ್ಯಾರ್ಥಿನಿ, ಚಾಮರಾಜನಗರ

ಶಾಲೆಯಲ್ಲಿ ಒಂದೇ ತಾಯಿ ಮಕ್ಕಳಂತೆ ಜೀವಿಸುತ್ತಿರುವ ನಮಗೆ ಈ ಯೋಜನೆ ಜಾತಿ ಮನೋಭಾವನೆ ತಿಳಿಸಿದೆ. ಯೋಜನೆ ಎಲ್ಲರಿಗೂ ಅನ್ವಯವಾಗುವಂತಿದ್ದರೆ ಜಾರಿಗೆ ತರುವುದು ಸೂಕ್ತ. ಇಲ್ಲದಿದ್ದರೆ, ಮಕ್ಕಳಲ್ಲಿಯೂ ಮೇಲು ಕೀಳು ಭಾವನೆ ಮೂಡಲಾರಂಭಿಸುತ್ತದೆ.
- ಮಂಜುಳಾ ಬೂದಿಹಾಳ, ಧಾರವಾಡ

ರಾಜ್ಯ ಸರ್ಕಾರ ಕೆಲವು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ ಕಲ್ಪಿಸಲು ಮುಂದಾಗಿದೆ. ಆದರೆ, ಇನ್ನುಳಿದ ವರ್ಗದ ವಿದ್ಯಾರ್ಥಿಗಳಾದ ನಾವೇನು ತಪ್ಪು ಮಾಡಿದ್ದೇವೆ? ತರಗತಿಯಲ್ಲಿ ಎಲ್ಲರೊಂದಿಗೆ ಇರುವ ನಾವು ಪ್ರವಾಸ ತೆರಳುವಾಗ ಸ್ನೇಹಿತರೊಂದಿಗೆ ಬೇರೆ ಬೇರೆಯಾಗಬೇಕೆ? ಸರ್ಕಾರ ಎಲ್ಲ ವಿದ್ಯಾರ್ಥಿಗಳಿಗೂ ಪ್ರವಾಸಕ್ಕೆ ಅವಕಾಶ ಮಾಡಿಕೊಡಬೇಕು.
 - ಗಂಗಮ್ಮ ಕುಕನೂರು, ವಿದ್ಯಾರ್ಥಿನಿ

 ನಮಗೆ ಜಾತಿ ಬಗ್ಗೆ ಅಷ್ಟು ತಿಳಿದಿಲ್ಲ. ಪತ್ರಿಕೆಗಳಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಸರ್ಕಾರ ಕಳುಹಿಸುತ್ತಿದೆ ಎಂಬದನ್ನು ಓದಿದ್ದೇವೆ. ಇದರಿಂದ ಜಾತಿ ಬಗ್ಗೆ ನಮಗೆ ಗೊತ್ತಾಗಿದೆ. ಜಾತಿ ಹೆಸರಿನಲ್ಲಿ ಪ್ರವಾಸ ಕಳಿಸುವುದು ಸರಿ ಅಲ್ಲ. ಸಹಪಾಠಿಗಳಲ್ಲಿ ಬೇಧ ಭಾವ ಮೂಡುವಂತೆ ಸರ್ಕಾರವೇ ಮಾಡಿದಂತಾಗಿದೆ. ಇದು ಸರಿ ಅಲ್ಲ. ಪ್ರವಾಸಕ್ಕೆ ಎಲ್ಲ ವಿದ್ಯಾರ್ಥಿಗಳನ್ನು  ಕಳುಹಿಸಬೇಕು.
- ಯಶಿಕಾ, 8ನೇ ತರಗತಿ ವಿದ್ಯಾರ್ಥಿನಿ,
ಪಿರಿಯಾಪಟ್ಟಣ

ಸರ್ಕಾರವೇ ಐದು ದಿನ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದು ಸಂತಸದ ಸಂಗತಿ. ಈ ಕರ್ನಾಟಕ ದರ್ಶನ ಪ್ರವಾಸವು ಹಿಂದುಳಿದ ವರ್ಗದವರಿಗೆ ಮಾತ್ರ ಜಾರಿಗೊಳಿಸುವುದು ಎಷ್ಟು ಸೂಕ್ತ? ಸರ್ಕಾರಿ ಶಾಲೆಯಲ್ಲಿ ಕಲಿಯುವ ಎಲ್ಲ ವರ್ಗದ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿರುತ್ತಾರೆ ಹೊರತು ಶ್ರೀಮಂತರಲ್ಲ. ನಾವೇನು ತಪ್ಪು ಮಾಡಿದ್ದೇವೆ?
- ಸಂತೋಷ ಮಳೆಗೂಳಿ, ವಿದ್ಯಾರ್ಥಿ

ನಮ್ಮ ಸ್ನೇಹಿತರು ಪ್ರವಾಸಕ್ಕೆ ತೆರಳುವ ವೇಳೆ ನಾವು ಶಾಲೆ ಮುಂದೆ ನಿಂತು ಅವರಿಗೆ ಟಾಟಾ ಮಾಡ್ಬೇಕಾ? ನಾವೂ ಹೋಗೋಕೆ ಏಕೆ ಅವಕಾಶ ಮಾಡಿಲ್ಲ? ನಾವು ಅದೇ ಶಾಲೆ ವಿದ್ಯಾರ್ಥಿಗಳು ತಾನೇ? ಅವರಂತೆ ನಮಗೂ ಅವಕಾಶ ಕಲ್ಪಿಸಲಿ.
- ರಾಕೇಶ ಹನುಮಂತಗೌಡರ, ವಿದ್ಯಾರ್ಥಿ

ಚಿಕ್ಕ ಮಕ್ಕಳಲ್ಲಿ ಜಾತಿಭೇದ ಮಾಡಬಾರದು. ಸರ್ಕಾರಿ ಶಾಲೆಗೆ ಸೇರಿದ ಎಲ್ಲ ಮಕ್ಕಳೂ ಬಡವರೇ. ಅವರನ್ನೆಲ್ಲಾ ಒಂದೇ ರೀತಿ ಕಂಡು ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಮಕ್ಕಳನ್ನು ಪ್ರವಾಸ  ಕರೆದೊಯ್ಯಬೇಕು.ಅದರಲ್ಲಿ ತಾರತಮ್ಯ ಸರಿಯಲ್ಲ
 - ಎನ್.ಬಿ.ಭುವನ, ಮಧುಗಿರಿ

ಗೆಳೆಯರೆಲ್ಲರೂ ಕೂಡಿಯೇ ಶಾಲೆಗೆ ಹೋಗುತ್ತೇವೆ. ಮನೆಪಾಠ ಮಾಡುತ್ತೇವೆ. ಒಟ್ಟಿಗೆ ಅಭ್ಯಾಸ ಮಾಡುತ್ತೇವೆ. ಒಂದು ವರ್ಗಕ್ಕಾಗಿ ಪ್ರವಾಸ ಯೋಜನೆ ಜಾರಿಗೊಳಿಸುತ್ತಿರುವುದು ಎಷ್ಟು ಸರಿ? ಎಲ್ಲ ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗುವುದಕ್ಕೆ ರಾಜ್ಯ ಸರ್ಕಾರವೇ ಅವಕಾಶ ಮಾಡಬೇಕೇ ಹೊರತು ಇಬ್ಬಗೆ ನೀತಿ ಸೂಕ್ತವೇ?
- ಶುಭಂ ಹೇರೆಕರ, ಬೆಳಗಾವಿ

ಸರ್ ನಮ್ಗೆ ಜಾತಿ ಬಗ್ಗೆ ಗೊತ್ತೇ ಇಲ್ಲ. ಪೇಪರ್ ಓದಿ ಭಾಳ ಬೇಸರ ಆಗ್ಯದ. ನಮ್ ಸ್ಕೂಲ್‌ನಲ್ಲಿ ಜಾತಿ ಬಗ್ಗೆ ಮಾತಾಡೋದೇ ಇಲ್ಲ. ಅಂಥ ಟೈಮೇ ಬಂದಿಲ್ಲ. ಆದ್ರ ಶಾಲಾ ಪ್ರವಾಸ ಭಾರಿ ಖುಷಿ ಕೊಡೋ ವಿಷ್ಯ. ಅಂಥದ್ರಾಗ ನಾವ್ ಬ್ಯಾಡ, ಅವ್ರು ಬೇಕು ಎಂದು ಹೇಳಿ ನೀವ ನಮ್ಮನ್ನ ಬ್ಯಾರೆ ಬ್ಯಾರೆ ಮಾಡೋದು ಯಾಕ? ಪ್ಲೀಸ್ ಸರ್ಕಾರ ನಿರ್ಧಾರ ಬದಲಿಸಬೇಕು ಇಲ್ಲಾಂದ್ರ ಪ್ರವಾಸದ ಮೇಲೆ ನಮ್ಮನ್ನು ಒಡೀಬಾರ್ದು.
-  ಪೂಜಾ ಧನ್ನು, ಬೀದರ್

ಉಚಿತ ಸೈಕಲ್, ಬಿಸಿಯೂಟ ಇತರೆ ಸೌಲಭ್ಯಕ್ಕೆ ಇಲ್ಲದ ಜಾತಿ ಈ ಪ್ರವಾಸಕ್ಕೆ ಮಾತ್ರವೇ ಏಕೆ? ಒಂದು ಜಿಲ್ಲೆಗೆ ಮುನ್ನೂರು ಮಕ್ಕಳು ಸೀಮಿತವಾಗಬಾರದು. ಸಂಖ್ಯೆಯನ್ನು ಕನಿಷ್ಠ 3 ಸಾವಿರಕ್ಕೆ ಹೆಚ್ಚಿಸಿ. ಎಲ್ಲ ವರ್ಗದ ಬಡ ಮಕ್ಕಳಿಗೂ ವಿಸ್ತರಿಸಿ. ಇಲ್ಲದಿದ್ದರೆ ಈ ಯೋಜನೆಯೇ ಬೇಡ.
- ಆರ್.ಎಚ್.ಸಹನಾ, ರಾಮನಗರ

ನನಗೊಬ್ಬ ಸ್ನೇಹಿತನಿದ್ದಾನೆ. ನಾವು ಬೇರೆ ಬೇರೆ ಜಾತಿಯವರಾಗಿದ್ದರೂ ಹಾಸ್ಟೆಲ್‌ನಲ್ಲಿ ಒಟ್ಟಾಗಿದ್ದೇವೆ. ನಾವಿಬ್ಬರೂ ಬೇರೆ ಬೇರೆ ಶಾಲೆಗೆ ಹೋಗಲು ಬೇಸರವಾಗುತ್ತದೆ. ಅಂದ ಮೇಲೆ ಒಂದೇ ಶಾಲೆಯಲ್ಲಿ ಓದುತ್ತಿರುವ ಸ್ನೇಹಿತರನ್ನು ಬಿಟ್ಟು ಪ್ರವಾಸಕ್ಕೆ ಹೋಗಲು ಹೇಗೆ ಸಾಧ್ಯ? ಸಿಎಂ ಅಂಕಲ್ ದಯವಿಟ್ಟು ಎಲ್ಲರಿಗೂ ಕರ್ನಾಟಕ ದರ್ಶನ ಭಾಗ್ಯ ಕಲ್ಪಿಸಿಕೊಡಿ.
- ಹರ್ಷ, ಆಲೂರು

ಪ್ರಾಥಮಿಕ ಶಾಲೆಯಲ್ಲಿರುವ ಎಲ್ಲಾ ಬಡವರಿಗೆ ಜಾರಿಗೊಳಿಸಬೇಕು. ಕೇವಲ ಹಿಂದುಳಿದ ವರ್ಗದವರಿಗೆ ಮಾತ್ರ ಯೋಜನೆ ಜಾರಿಗೆ ತರುತ್ತಿರುವುದು ಸರಿಯಾದ ಕ್ರಮವಲ್ಲ. ಇದು ನಮ್ಮನಮ್ಮಲ್ಲೆ ಒಡಕನ್ನುಂಟು ಮಾಡಿದಂತಾಗುತ್ತದೆ. ಇಲ್ಲವಾದರೆ ಈ ಯೋಜನೆಯನ್ನು ಎಲ್ಲ ಶಾಲಾ ಮಕ್ಕಳಿಗೂ ವಿಸ್ತರಿಸಿ. ಇಲ್ಲವಾದರೆ ಕೈಬಿಡಿ.
 -  ವೀಣಾ ಕಣವಿ, ಗದಗ

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮೇಲ್ವರ್ಗದ ಮಕ್ಕಳ ಬಗ್ಗೆ ತಾತ್ಸಾರ ಭಾವನೆ ಏಕೆ ದೊರೆಯೆ? ಇನ್ನೊಮ್ಮೆ ಯೋಚಿಸಿ ನಿರ್ಣಯಿಸಿ. ಇಲ್ಲದಿದ್ದರೆ ನಮಗೆ ಯೋಜನೆಯೇ ಬೇಡ.
-  ಪೂಜಾ ಮಲ್ಲಿಕಾರ್ಜುನ, ಯಾದಗಿರಿ

ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಲ್ಲಿ ಯಾವುದೇ ಜಾತಿಯ ಭಾವನೆ ಇರುವುದಿಲ್ಲ, ಇಂತಹ ಸಂದರ್ಭದಲ್ಲಿ ಕೆಲವು ಮಕ್ಕಳನ್ನು ಬಿಟ್ಟು, ಕೆಲವು ಮಕ್ಕಳು ಪ್ರವಾಸ ಹೊರಟಾಗ, ಬಿಟ್ಟಿರುವ ಆ ಎಳೆಯ ಮಕ್ಕಳ ಮನಸ್ಸಿನಲ್ಲಾಗುವ ನೋವು ಹೇಳತೀರದು.
- ಚಿಕ್ಕಬಸವಯ್ಯ, ಶಿಕ್ಷಕ, ಚಾಮರಾಜನಗರ

ಮಕ್ಕಳು ದೇವರಿಗೆ ಸಮಾನ. ಮಕ್ಕಳ ವಿಷಯದಲ್ಲಿ ತಾರತಮ್ಯ ತೋರುವುದು ಒಳ್ಳೆಯ ಬೆಳವಣಿಗೆಯಲ್ಲ. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ಶಾಲಾ ಮಕ್ಕಳಿಗಷ್ಟೇ ಸೀಮಿತಗೊಳಿಸದೇ ಎಲ್ಲರಿಗೂ ವಿಸ್ತರಿಸಬೇಕು.
- ಮಹೇಶ ಹಿರೇಮಠ, ಶಿಕ್ಷಕರು ಬೆಳಗಾವಿ

ಎಳವೆಯಲ್ಲೇ ಮಕ್ಕಳ ಮುಗ್ಧಮನಸ್ಸಿನ ಮೇಲೆ ಜಾತೀಯತೆ, ಗುಂಪುಗಾರಿಕೆ ಪ್ರಭಾವಕ್ಕೆ ಕಾರಣವಾಗುವ ಈ ನೀತಿಯನ್ನು ಜಾರಿಗೊಳಿಸುವ ಮುನ್ನ ಮತ್ತೊಮ್ಮೆ ಪರಾಮರ್ಶಿಸಬೇಕು. ಶಿಕ್ಷಣ ಚಟುವಟಿಕೆಯಲ್ಲಿ ಭೇದಭಾವ ಸಲ್ಲದು.
- ರಾಜು ನಾಯ್ಕ, ಪ್ರಶಸ್ತಿ ವಿಜೇತ ಶಿಕ್ಷಕರು ಕಾರವಾರ

ಎಲ್ಲರನ್ನೂ ಸಮಾನವಾಗಿ ಕಾಣಿ ಅಂತ ಹೇಳೋ ಸರ್ಕಾರವೇ ಈ ರೀತಿ ಭೇದಭಾವ ಮಾಡಿದರೆ ಸರ್ವರಿಗೂ ನ್ಯಾಯ ಸರ್ವರಿಗೂ ಸಮಪಾಲು ಎಂಬುದು ಹೇಗೆ ಸಾಧ್ಯವಾಗುತ್ತೆ? ಮಕ್ಕಳಲ್ಲೇ ದುರಾಲೋಚನೆ ಮೂಡಿದ ಹಾಗೆ ಆಗುತ್ತದೆ.
 - ರಾಮಕೃಷ್ಣಯ್ಯ, ನಿವೃತ್ತ ಶಿಕ್ಷಕರು. ತುರುವೇಕೆರೆ


ನಮಗಂತೂ ಬೇಧ- ಭಾವಾನೇ ಗೊತ್ತಿಲ್ಲ. ಸರ್ಕಾರವೇ ನಮ್ಮನ್ನು ಬ್ಯಾರೆ ಬ್ಯಾರೆ ನೋಡಂಗ ಮಾಡಿದ್ರ ಸಣ್ಣ ವಯಸ್ಸಿನಲ್ಲಿ ದೋಸ್ತಿ ಕಳೆದೋಗೋಗ್ತದ. ಕೇವಲ ಅಹಿಂದ ಅವರನ್ನು ಕ್ಲಾಸ್‌ನಲ್ಲಿ ಎಬ್ಬಿಸಿ ನಿಲ್ಲಿಸಿ ನೀವು ಪ್ರವಾಸ ಹೋಗೋರು, ಕುಳಿತವ್ರು ಹೋಗದವರು ಅಂತ ಹೇಳಿದ್ರ ನಮಗಂತೂ ಬೇಸರ ಆಗ್ತದ್ರಿ. ಹೀಂಗ್ ಮಾಡೋದ್ಕಿಂತ ಎಲ್ಲರನ್ನೂ ಕಳಿಸಿ ಸೌಹಾರ್ದತೆ ಮೂಡಿಸೋ ಕೆಲಸ ಮಾಡಲಿ.
- ಶ್ರದ್ಧಾ ಭಗವಾನ ಸಿಂಗ್, 9ನೇ ತರಗತಿ, ಬೀದರ್

ಜಾತಿ ಅಂದರೇನು ಅಂತಾನೇ ಗೊತ್ತಿಲ್ಲ. ಯಾರ್ಯಾರನ್ನು ಟೂರ್ ಕರಕೊಂಡು ಹೋಗ್ತಾರೋ ಗೊತ್ತಾಗಲ್ಲ. ಎಲ್ಲರನ್ನೂ ಕರ್ಕೊಂಡು ಹೋಗಬೇಕು. ಎಲ್ಲರಿಗೂ ಸಂತೋಷ ಆಗುತ್ತೆ. ಇಲ್ಲದಿದ್ದರೆ ನಮ್ಮ ಗೆಳೆಯರನ್ನು ಕರೆದುಕೊಂಡು ಹೋಗಿ ನಮ್ಮನ್ನು ಬಿಟ್ಟರೆ ಬೇಸರ ಆಗುತ್ತದೆ.
- ಟಿ. ರೇಣುಕಾ, 1ನೇ ತರಗತಿ, ಏಣಿಮೇಗಳಹಟ್ಟಿ, ಮೊಳಕಾಲ್ಮುರು ತಾಲೂಕು

ಶಿಕ್ಷಕರು ದೇಶ ಸುತ್ತಿ, ಕೋಶ ಓದಿ ಇತಿಹಾಸ ತಿಳಿಯಬೇಕು. ಪ್ರಸಿದ್ಧ ಸ್ಥಳ ನೋಡಬೇಕು ಎಂದು ಹೇಳುತ್ತಾರೆ. ಆದರೆ, ಪ್ರವಾಸ ಮಾಡುವಾಗ ಕೆಲವೇ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿದರೆ ನಾವು ಇತಿಹಾಸದ ಸ್ಥಳ ನೋಡೋದು ಯಾವಾಗ? ಸರ್ಕಾರ ಎಲ್ಲರಿಗೂ ಪ್ರವಾಸಕ್ಕೆ ಅವಕಾಶ ಕಲ್ಪಿಸಬೇಕು.
- ರೇಣುಕಾ ಗೆಜ್ಜಿ, 9ನೇ ತರಗತಿ ವಿದ್ಯಾರ್ಥಿನಿ, ಕೊಪ್ಪಳ

ಮಕ್ಕಳು ಎಂದರೆ ದೇವರೆಂದು ಮಾತನಾಡುವ ಹಿರಿಯರೇ ಜಾತಿ ಆಧಾರದ ಮೇಲೆ ಯೋಜನೆ ರೂಪಿಸುವುದು ಸರಿಯಲ್ಲ. ಏನು ಅರಿಯದ ನಮ್ಮಲ್ಲಿ ಶೈಕ್ಷಣಿಕ ಪ್ರವಾಸ ಯೋಜನೆ ಜಾತಿ-ಭೇದ ಬಿತ್ತಲಿದೆ. ಈ ಹಿಂದೆ ಇರುವಂತೆ ಎಲ್ಲರಿಗೂ ಪ್ರವಾಸ ಮಾಡಿಸಲಿ. ಇಲ್ಲದಿದ್ದರೆ ಯಾರಿಗೂ ಬೇಡ. ನಮ್ಮ ಸಂಭ್ರಮಕ್ಕೆ ಕಲ್ಲು ಹಾಕಬೇಡಿ.
- ಎಂ. ವಿನೋದಕುಮಾರ, 9ನೇ ತರಗತಿ, ಧಾರವಾಡ

ರಾಜ್ಯ ಸರ್ಕಾರ 'ಕರ್ನಾಟಕ ದರ್ಶನ' ಪ್ರವಾಸವನ್ನು ಎಲ್ಲ ವರ್ಗದ ಮಕ್ಕಳಿಗೂ ವಿಸ್ತರಿಸಬೇಕು. ಇದರಿಂದ ಶಾಲೆಯ ಮಕ್ಕಳಲ್ಲಿ ಅನ್ಯೋನ್ಯತೆ ವೃದ್ಧಿಸುತ್ತದೆ. ಸದ್ಯ ಸರ್ಕಾರವು ಬರೀ ಅಹಿಂದ ಮಕ್ಕಳಿಗಾಗಿಯೇ ಈ ಯೋಜನೆ ಘೋಷಣೆ ಮಾಡಿರುವುದು ಸರಿಯಲ್ಲ. ಇದರಿಂದ ಇತರ ಮಕ್ಕಳನ್ನು ಒಡೆದು ಆಳಿದಂತಾಗಲಿದೆ. ಒಟ್ಟಿಗೆ ಆಡುವ ನಮ್ಮನ್ನು ಜಾತಿ ವಿಷಯ ಮುಂದಿಟ್ಟುಕೊಂಡು ಬೇರ್ಪಡಿಸಬೇಡಿ.
- ಭೂಮಿಕಾ ಎಸ್.ಜಿ., 6ನೇ ತರಗತಿ ವಿದ್ಯಾರ್ಥಿನಿ, ಬೆಳಗಾವಿ

ನಾವು ವಿದ್ಯೆ ಕಲಿಯುವ ಮಕ್ಕಳು. ವಿದ್ಯೆಯೇ ನಮ್ಮ ಗುರಿ. ನಮ್ಮಲ್ಲಿ ಯಾವುದೇ ಜಾತಿ ಭೇದ ಇಲ್ಲ. ಸರ್ಕಾರದವರು ಅಹಿಂದ ಎಂದು ಹುಟ್ಟುಹಾಕಿ ನಮ್ಮಲ್ಲಿ ಜಾತಿ ಭೇದ ಉಂಟು ಮಾಡಿ ನಮ್ಮ ಮನಸ್ಸು ಒಡೆಯುವ ಕೆಲಸ ಸರ್ಕಾರ ನಿಲ್ಲಿಸಬೇಕು.
- ಮುತ್ತಣ್ಣ ಮಲ್ಲಿನಾಥ ದಂಡೋತಿ, 10ನೇ ತರಗತಿ ವಿದ್ಯಾರ್ಥಿ, ಚಿತ್ತಾಪುರ

ಮಕ್ಕಳೇ ದೇವರು ಎಂಬ ನಾಣ್ಣುಡಿಯಂತೆ ಬದುಕುತ್ತಿರುವ ಭಾರತ ದೇಶದಲ್ಲಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿಯೇ ಇಂಥ ಗೊಂದಲಕಾರಿ ವಾತಾವರಣ ನಿರ್ಮಾಣ ಮಾಡುವುದು ಸರಿಯಲ್ಲ. ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸವನ್ನು ಎಲ್ಲಾ ಬಡವರಿಗೂ ನೀಡಬೇಕು.
- ಶಾಜೀದಾ ದ್ಯೋಟ್ಯಾಳ, ವಿದ್ಯಾರ್ಥಿ,  ಗದಗ

ಮುಖ್ಯಮಂತ್ರಿಗಳು ಸರ್ವರನ್ನೂ ಸಾಮಾನವಾಗಿ ನೋಡಬೇಕೇ ಹೊರತು ಒಬ್ಬೊಬ್ಬರನ್ನು ಒಂದೊಂದು ರೀತಿ  ನೋಡುವುದು ತಪ್ಪು. ಪ್ರವಾಸ ಸೌಲಭ್ಯವನ್ನು ಎಲ್ಲಾ ಮಕ್ಕಳಿಗೂ ಕಲ್ಪಿಸಲಿ. ಅದು ಬಿಟ್ಟು ಕೇವಲ ಅಹಿಂದ ಮಕ್ಕಳಿಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ.
- ಮರಿತಿಬ್ಬೇಗೌಡ, ವಿಧಾನ ಪರಿಷತ್ ಸದಸ್ಯ

ಶಾಲಾ ಹಂತದಲ್ಲೇ ಜಾತಿವಾರು ಭೇದ- ಭಾವ ಮಾಡಬಾರದು. ಓರಗೆಯ ಮಕ್ಕಳು ಪ್ರವಾಸ ಹೋದಾಗ ಉಳಿದ ಮಕ್ಕಳಿಗೆ ನೋವಾಗುತ್ತದೆ. ಇದರಿಂದ ಶಾಲೆಯಿಂದಲೇ ನಾವು ಭೇದಭಾವ ಶುರು ಮಾಡಿದಂತೆ ಆಗುವುದಿಲ್ಲವೇ?
- ಪರಮೇಶ್ವರ ಪಾಟೀಲ್, ಶಿಕ್ಷಕರು, ಗುಲ್ಬರ್ಗ

ಜತೆಯಲ್ಲಿಯೇ ಶಾಲಾ ಪ್ರವಾಸ ಹೋಗಿ ಬಂದಾಗ ನಮ್ಮಲ್ಲಿ ಒಗ್ಗಟ್ಟು ಬರುತ್ತದೆ. ಆದರೆ, ಕೆಲವರಿಗೆ ಮಾತ್ರ ಕರೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದರೆ ಇನ್ನೂ ಬಿರುಕು ಜಾಸ್ತಿಯಾಗುತ್ತದೆ.
- ಲೋಕೇಶ್, ವಿದ್ಯಾರ್ಥಿ, ಚಿಕ್ಕಬಳ್ಳಾಪುರ

ಶೈಕ್ಷಣಿಕ ಪ್ರವಾಸ ಕೇವಲ ಅಹಿಂದ ಮಕ್ಕಳಿಗೆ ಮಾತ್ರ ಸೀಮಿತಗೊಳಿಸಿದರೆ ತಾರತಮ್ಯ ಮಾಡಿದಂತಾಗುತ್ತದೆ. ಮುಖ್ಯಮಂತ್ರಿ ಕೂಡಲೇ ಶಿಕ್ಷಣ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಪರಿಷ್ಕರಿಸಬೇಕು.
- ಅನಿಲ್‌ಕುಮಾರ್, ಶಿಕ್ಷಕರು, ಕೋಲಾರ

ಮಕ್ಕಳಲ್ಲಿ ಪ್ರತ್ಯೇಕತೆಯ ಭಾವ ಬಿತ್ತುವುದು ಖಂಡನೀಯ. ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕತೆ ಮತ್ತು ಭಾವೈಕ್ಯತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿಯಾದವರು ಹೇಳುತ್ತಾರೆ. ಆದರೆ, ಇದೀಗ ಮಾಡುತ್ತಿರುವುದೇನು? ಎಲ್ಲಾ ಮಕ್ಕಳಿಗೂ ಪ್ರವಾಸ ಸೌಲಭ್ಯ ಜಾರಿ ಮಾಡಿದ್ದರೆ, ಅದನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತಿದ್ದೆ. ಆದರೆ, ಈ ಯೋಜನೆ ಸಂವಿಧಾನ ಬಾಹಿರ.
- ಗಣೇಶ್ ಕಾರ್ನಿಕ್, ವಿಧಾನ ಪರಿಷತ್ ಸದಸ್ಯ

ನಾನು ಶಿಕ್ಷಕನಾಗಿ ಒಂದೇ ಗುಂಪಿನ ವಿದ್ಯಾರ್ಥಿಗಳನ್ನು ಪ್ರವಾಸ ಕರೆದುಕೊಂಡು ಹೋಗುವುದು ಸರಿ ಕಾಣುವುದಿಲ್ಲ. ಮಕ್ಕಳು ಈ ಬಗ್ಗೆ ಶಾಲೆಯಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸುವುದು ಕಷ್ಟವಾಗುತ್ತಿದೆ. ಇದರಲ್ಲಿ ಜಾತಿ ಬೇಧ ಮಾಡುವುದು ಏಕೆ? ಮಕ್ಕಳು ಎಂದರೆ ಎಲ್ಲರೂ ಒಂದೇ ತಾನೇ? ನಾವು ಪಾಠ ಮಾಡುವಾಗ ಎಲ್ಲಾ ಮಕ್ಕಳಿಗೂ ಒಂದೇ ರೀತಿ ಪಾಠ ಮಾಡುತ್ತೇವೆ. ಕಲಿಕೆಯಲ್ಲಿ ಹಿಂದುಳಿದಿದ್ದರೆ ಮಾತ್ರ ಹೆಚ್ಚು ಗಮನ ನೀಡುತ್ತೇವೆ. ಪ್ರವಾಸ ಮಾತ್ರ ಏಕೆ ಹೀಗೆ?
- ಅಣ್ಣಪ್ಪ ಎಚ್. ಒಂಟಮಾಳಗಿ, ಶಿವಮೊಗ್ಗ ಸಿಆರ್‌ಪಿ

ಎಲ್ಲರನ್ನೂ ಸಮಾನವಾಗಿ ಕಾಣಿ ಅಂತ ಹೇಳೋ ಸರ್ಕಾರವೇ ಈ ರೀತಿ ಭೇದಭಾವ ಮಾಡಿದರೆ ಸರ್ವರಿಗೂ ನ್ಯಾಯ ಸರ್ವರಿಗೂ ಸಮಪಾಲು ಎಂಬುದು ಹೇಗೆ ಸಾಧ್ಯವಾಗುತ್ತೆ? ಮಕ್ಕಳಲ್ಲೇ ದುರಾಲೋಚನೆ ಮೂಡಿದ ಹಾಗೆ ಆಗುತ್ತದೆ. ಸರ್ಕಾರ ಕೂಡಲೇ ಇಂಥ ಸಮಾಜ ಒಡೆಯುವ ಕಾನೂನನ್ನು ಜಾರಿ ಮಾಡದೇ ಸುಮ್ಮನಿರುವುದು ಒಳಿತು.
- ರಾಮಕೃಷ್ಣಯ್ಯ, ನಿವೃತ್ತ ಶಿಕ್ಷಕರು. ತುರುವೇಕೆರೆ

ಶಾಲೆಯಲ್ಲಿ ಪಾಠ ಕೇಳಿದ್ದಕ್ಕಿಂತ ಇಂಥ ಪ್ರವಾಸಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಕಲಿಸಬಹುದು. ಆದರೆ, ಸದ್ಯ ಸರ್ಕಾರ ಜಾರಿ ಮಾಡಿರುವ ಈ ಯೋಜನೆ ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಅನ್ವಯಯಾಗಬೇಕು. ಇಲ್ಲದಿದ್ದರೆ ಯೋಜನೆಯನ್ನೇ ಕೈ ಬಿಡಲಿ. ವಿನಾ ಕಾರಣ ವಿದ್ಯಾರ್ಥಿಗಳ ನಡುವೆ ಕಂದಕ ಸೃಷ್ಟಿಸಬೇಡಿ.
- ರಾಜೇಶ್ವರಿ ರೇಶ್ಮಿ, 10ನೇ ತರಗತಿ, ಧಾರವಾಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ಮಕ್ಕಳಲ್ಲಿ ಭೇದಭಾವ ಮಾಡುತ್ತಿದ್ದಾರೆ. ಶಾಲೆಯಲ್ಲಿ ಎಲ್ಲಾ ಮಕ್ಕಳು ಪ್ರೀತಿ ವಿಶ್ವಾಸದಿಂದ ಇದ್ದೇವೆ. ಆದರೆ ಟೂರ್ ಬಗ್ಗೆ ಮೊನ್ನೆ ತಿಳಿಯಿತು. ಹಿಂಗ್ ಮಾಡಬಾರದಾಗಿತ್ತು. ಎಲ್ಲ ಗೆಳೆಯರೂ ಒಟ್ಟಿಗೆ ಪ್ರವಾಸಕ್ಕೆ ಹೋಗುವ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಯೋಜನೆಯೇ ಬೇಕಾಗಿಲ್ಲ.
- ಸೌಜನ್ಯಾ, ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾದರ್ಲಿ (ಸಿಂಧನೂರು)

ಯೋಜನೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮೂಡಿಸುವುದು ತರವಲ್ಲ. ಸಮಾಜದ ಪಿಡುಗನ್ನು ಶಿಕ್ಷಣ ರಂಗಕ್ಕೆ ಹೇರುವುದು ಒಂದು ರೀತಿಯ ವಿಷಾದನೀಯ. ಬಾಲ್ಯದಲ್ಲಿಯೇ ಈ ರೀತಿಯಾದರೆ ಮುಂದೆ ದುಷ್ಪರಿಣಾಮ ಬೀರಲಿದೆ.
- ಸಬಲಂ ಬೋಜಣ್ಣ ರೆಡ್ಡಿ, ಉಪನ್ಯಾಸಕರು, ಕುಶಾಲನಗರ

ವಿದ್ಯಾ ದೇಗುಲದಲ್ಲಿ ಮಕ್ಕಳ ಮೇಲೆ ತಾರತಮ್ಯ ಜಾತಿ- ಭೇದ ಬೇಡ. ಶಾಲೆಯು ಮಕ್ಕಳು ಎಲ್ಲಾರು ಒಂದಾಗಿ  ಶಿಕ್ಷಣ ಪಡೆಯುವ ಜ್ಞಾನ ದೇಗುಲವಾಗಿದ್ದು, ಮಕ್ಕಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗಲಿದೆ. ಯೋಜನೆಯನ್ನು ರೂಪಿಸುವ ಮುನ್ನ ಸಮಾನತೆಯನ್ನು ಕಾಣಲಿ.
- ರಾಯಿಡನ್ ಬೋನಿಪಾಸ್, ವಿದ್ಯಾರ್ಥಿ, ಸರ್ಕಾರಿ ಶಾಲೆ ಸುಂಟಿಕೊಪ್ಪ

ಪ್ರವಾಸದ ವಿಷಯದಲ್ಲೂ ಕರ್ನಾಟಕ ಸರ್ಕಾರ ಜಾತಿಬೇಧ ಮಾಡಿರುವುದು ಅಚ್ಚರಿಯ ಸಂಗತಿ. ರಾಜಕೀಯ ದೊಡ್ಡವರನ್ನು ಮಾತ್ರ ವಿಭಜಿಸುತ್ತದೆ ಎಂದುಕೊಂಡಿದ್ದೆವು. ಆದರೆ ಇವರು ಶಾಲಾ - ಕಾಲೇಜುಗಳಲ್ಲಿನ ಮಕ್ಕಳನ್ನೂ ವಿಭಜಿಸಲು ಹೊರಟಿದ್ದಾರೆ. ಶಾದಿ ಭಾಗ್ಯ ಎಂಬ ಹೆಸರಿನಲ್ಲಿ ಮುಸ್ಲಿಂ ಯುವತಿಯರಿಗೆ ಮಾತ್ರ ಯೋಜನೆ ಜಾರಿಗೊಳಿಸಿತು. ಆದರೆ ಇತರ ಸಮುದಾಯದ ಬಡ ಯುವತಿಯರನ್ನು ಮರೆತೇ ಬಿಟ್ಟಿತು. ಇದಾದ ಬಳಿಕ ಮೂಢನಂಬಿಕೆ ತಡೆ ಹೆಸರಿನಲ್ಲಿ ಒಂದೇ ಧರ್ಮದಲ್ಲಿರುವ ನಂಬಿಕೆಗಳ ಮೇಲೆ ತಡೆ ಹಾಕುವ ಪ್ರಯತ್ನಕ್ಕೆ ಮುಂದಾಯಿತು. ಇದು ನಿಜಕ್ಕೂ ಒಡೆದು ಆಳುವ ರಾಜಕೀಯ.
- ರಾಜೀವ್ ಚಂದ್ರಶೇಖರ್, ರಾಜ್ಯಸಭೆ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.