ಬೋಗಸ್ ಕಾರ್ಡ್ ರದ್ದು ಬೇಡ

ಕನ್ನಡಪ್ರಭ ವಾರ್ತೆ, ಬೆಂಗಳೂರು, ನ. 18-
ಈಗಾಗಲೇ ಆರ್ಥಿಕವಾಗಿ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಯೋಜನೆ ಮತ್ತೊಂದು ಸಮಸ್ಯೆ ತಂದೊಡ್ಡಲಿದೆ.
ಹೊಸದಾಗಿ 15 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ವಿತರಿಸಲು ಆಹಾರ ಇಲಾಖೆ ಮುಂದಾಗಿರುವುದು ಒಂದೆಡೆಯಾದರೆ ನಕಲಿ ಕಾರ್ಡ್ಗಳನ್ನು ರದ್ದುಗೊಳಿಸದಂತೆ ಸಚಿವರ ಜೊತೆಗೆ ಶಾಸಕರೂ ಪಕ್ಷಭೇದ ಮರೆತು ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದು ಸಮಸ್ಯೆ ಸೃಷ್ಟಿಸಿದೆ.
ಹೊಸದಾಗಿ 15 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ವಿತರಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ತಿಂಗಳಿಗೆ ಸುಮಾರು 150 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.
ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕಾರ್ಡ್ ವಿತರಿಸುವ ಕಾರ್ಯ ಚುರುಕುಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಜತೆಗೆ ಬೋಗಸ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆರಂಭಿಸಿದೆಯಾದರೂ ಎಲ್ಲ ಶಾಸಕರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1.35 ಕೋಟಿ ಕುಟುಂಬಗಳಿವೆ. ಈ ಪೈಕಿ 95 ಲಕ್ಷ ಕುಟುಂಬಗಳಿಗೆ ಈಗಾಗಲೇ ಬಿಪಿಎಲ್ ಅಥವಾ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ವಿತರಿಸಲಾಗಿದೆ. ಆದರೆ, ಈ 95 ಲಕ್ಷ ಕಾರ್ಡ್ಗಳಲ್ಲಿ 10 ಲಕ್ಷ ಬೋಗಸ್ ಎಂದು ಅಂದಾಜು. ಈ ಕಾರ್ಡ್ಗಳನ್ನು ರದ್ದುಗೊಳಿಸಿ ಹೊಸದಾಗಿ 15 ಲಕ್ಷ ಕಾರ್ಡ್ ವಿತರಿಸಿದರೆ ಆಗ ಬಿಪಿಎಲ್ ಕಾರ್ಡ್ಗಳ ಸಂಖ್ಯೆ 1 ಕೋಟಿಯಾಗುತ್ತದೆ.
ಈ ರೀತಿ ಮಾಡಿದರೆ ಸರ್ಕಾರದ ಮೇಲಿನ ಹೊರೆ ತಕ್ಕಮಟ್ಟಿಗೆ ತಗ್ಗಿಸಬಹುದು ಎಂಬುದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಿಂತನೆ.
ಬೋಗಸ್ ಕಾರ್ಡ್ ರದ್ದತಿಗೆ ಇಲಾಖೆ ಈಗಾಗಲೇ ಪ್ರಕ್ರಿಯೆ ಆರಂಭಿಸಿದ್ದು, ಜಿಲ್ಲಾ ಮಟ್ಟದಲ್ಲಿ ಸಚಿವರು ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಇನ್ನೊಂದೆಡೆ ಬೋಗಸ್ ಪಡಿತರ ಚೀಟಿ ಪತ್ತೆಗೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಸಿಬ್ಬಂದಿ ನೇಮಿಸಲಾಗಿದ್ದು, ಅವರು ಕೂಡ ಕಾರ್ಯಪ್ರವೃತ್ತರಾಗಿದ್ದಾರೆ.
ಆದರೆ, ಸಚಿವರು, ಶಾಸಕರಿಂದ ಬೋಗಸ್ ಪಡಿತರ ಚೀಟಿ ರದ್ದತಿಗೆ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ರಾಜಕೀಯ ಪಕ್ಷಗಳ ಮುಖಂಡರೂ ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪ್ರಕ್ರಿಯೆ ಮುಂದುವರಿಸದಂತೆ ಒತ್ತಡ ಹೇರುತ್ತಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಂತಹ ಕಠಿಣ ಕ್ರಮಕ್ಕೆ ಮುಂದಾದರೆ ಮತದಾರರು ತಿರುಗಿಬೀಳುತ್ತಾರೆ ಎಂಬ ಆತಂಕ ಅವರದ್ದು. ಹೀಗಾಗಿ ಬೋಗಸ್ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸುವ ಕಾರ್ಯ ತೀರಾ ವಿಳಂಬಗತಿಯಲ್ಲಿ ನಡೆಯುತ್ತಿದೆ.
ಸರ್ಕಾರಕ್ಕೆ ಹೆಚ್ಚುವರಿ 150 ಕೋಟಿ ಹೊರೆ: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ಕಾರ್ಡ್ಗೆ ಕೆ.ಜಿ.ಗೆ 1ರಂತೆ 10ರಿಂದ 30 ಕೆ.ಜಿ.ಯಷ್ಟು ಅಕ್ಕಿ ವಿತರಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 75 ಸಾವಿರ ಟನ್ ಅಕ್ಕಿಯನ್ನು ಬೇರೆ ಕಡೆಯಿಂದ ಖರೀದಿಸಲಾಗುತ್ತಿದ್ದು, ಇದಕ್ಕೆ ಪ್ರತಿ ತಿಂಗಳು 450 ಕೋಟಿ ಪಾವತಿಸಬೇಕಾಗುತ್ತದೆ.
ಹೊಸದಾಗಿ 15 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಿದರೆ ಹೆಚ್ಚುವರಿ 25 ಸಾವಿರ ಟನ್ ಅಕ್ಕಿ ಬೇಕಾಗುತ್ತಿದ್ದು, ಇದನ್ನು ಖರೀದಿಸಲು ತಿಂಗಳಿಗೆ 150 ಕೋಟಿ ಹೆಚ್ಚುವರಿ ಮೊತ್ತ ಬೇಕಾಗುತ್ತದೆ. ಹೀಗಾಗಿ ಹೊಸ ಕಾರ್ಡ್ಗಳನ್ನು ವಿತರಿಸುವುದರ ಜತೆಗೆ ಬೋಗಸ್ ಕಾರ್ಡ್ಗಳನ್ನು ರದ್ದುಗೊಳಿಸುವುದು ಸೂಕ್ತ ಎನ್ನುವುದು ಆಹಾರ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಆದರೆ, ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳು ಇದನ್ನು ಒಪ್ಪಲು ಸಿದ್ಧರಿಲ್ಲ. ಅನೇಕ ಜನಪ್ರೀಯ ಯೋಜನೆಗಳಿಂದಾಗಿ ಈಗಾಗಲೇ ಆರ್ಥಿಕ ಇಕ್ಕಟ್ಟಿಗೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಮತ್ತೆ ಪ್ರತಿ ತಿಂಗಳು 150 ಕೋಟಿ ಹೊರೆಯಾಗಲಿದ್ದು, ಪರಿಸ್ಥಿತಿ ಮತ್ತಷ್ಟು ಸಮಸ್ಯಾತ್ಮಕವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಗಡುವು ತಂದ ಸಮಸ್ಯೆ
ಈ ಮಧ್ಯೆ ಬಿಪಿಎಲ್ ಕಾರ್ಡ್ಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಈ ತಿಂಗಳ ಅಂತ್ಯದೊಳಗೆ ಇತ್ಯರ್ಥಗೊಳಿಸಿ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ವಿಧಿಸಿದ್ದ ಗಡುವು ಕಾರ್ಡ್ ವಿತರಣೆಯಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆ ಸೃಷ್ಟಿಸಿದೆ. 2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ನಿರ್ದೇಶನದಂತೆ ಸ್ಪರ್ಧೆಗೆ ಬಿದ್ದು ನೆಮ್ಮದಿ ಕೇಂದ್ರಗಳ ಮೂಲಕ ತಾತ್ಕಾಲಿಕ ಬಿಪಿಎಲ್ ಕಾರ್ಡ್ಗಳನ್ನು ಹಂಚಲಾಗಿತ್ತು. ನಂತರದಲ್ಲಿ ಇದು ಭಾರೀ ವಿವಾದಕ್ಕೆ ಕಾರಣವಾಗಿ ಈ ಕಾರ್ಡ್ಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಹೊಸದಾಗಿ ಬಿಪಿಎಲ್ ಕಾರ್ಡ್ಗೆ 30 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪೈಕಿ 15 ಲಕ್ಷ ಕಾರ್ಡ್ಗಳನ್ನು ವಿತರಿಸಲು ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದ್ದಾರೆ. ಆದರೆ, ಫಲಾನುಭವಿಗಳ ಆಯ್ಕೆಗೆ ಕಾಲಮಿತಿ ತೀರಾ ಕಡಿಮೆ ಇರುವುದರಿಂದ ಕಾರ್ಡ್ ವಿತರಣೆಯಲ್ಲಿ ಮತ್ತೆ ಅಕ್ರಮಗಳು ನಡೆಯಬಹುದು ಎಂಬ ಅನುಮಾನ ಹುಟ್ಟುಹಾಕಿದೆ.
ಸಮಸ್ಯೆ ಏನಾಗಲಿದೆ?
- ರು. 150 ಕೋಟಿ ಬೊಕ್ಕಸಕ್ಕೆ ಹೆಚ್ಚುವರಿ ವೆಚ್ಚ
- 75000 ಟನ್ ಅನ್ನಭಾಗ್ಯ ಯೋಜನೆಗೆ ಖರೀದಿಸುತ್ತಿರುವ ಅಕ್ಕಿ
- 25000 ಟನ್ ಹೊಸದಾಗಿ 15ಲಕ್ಷ ಕಾರ್ಡ್ ವಿತರಿಸಿದರೆ ಬೇಕಾಗುವ ಅಕ್ಕಿ
- ರು. 450 ಕೋಟಿ ಸದ್ಯ ಅಕ್ಕಿ ಖರೀದಿಗೆ ವೆಚ್ಚವಾಗುತ್ತಿರುವ ಮೊತ್ತ
- ರಾಜಕಾರಣಿಗಳ ಆತಂಕ ಏನು?
- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಡಿತರ ಚೀಟಿ ರದ್ದುಗೊಳಿಸಿದರೆ
- ಮತದಾರರು ಕೋಪಗೊಳ್ಳುವ ಆತಂಕ
- ಹೊಸ ಕಾರ್ಡ್ ವಿತರಿಸುವುದರ ಜತೆಗೆ ಬೋಗಸ್ ಕಾರ್ಡ್ ರದ್ದು
- ನಕಲಿ ರೇಷನ್ ಕಾರ್ಡ್ ಪತ್ತಗೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಸಿಬ್ಬಂದಿ ನೇಮಕ
- ಜಿಲ್ಲಾ ಮಟ್ಟದಲ್ಲಿ ಸಚಿವರ, ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಸಮಿತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


